ಒಂಟಿ ಹಕ್ಕಿಯ ಪಯಣ

ಒಂಟಿ ಹಕ್ಕಿಯ ಪಯಣ
ವಿನುತಾ ಹಂಚಿನಮನಿಯವರ
ಕಾದಂಬರಿಯ ತರುವಾಯ ಸಣ್ಣ ಕಥೆಯೇ ಅತ್ಯಂತ ಜನಪ್ರಿಯವಾದ ಪ್ರಕಾರ. ಕನ್ನಡದಲ್ಲಿ ಸಣ್ಣಕಥೆ ಒಂದು ವಿಶಿಷ್ಟ ರೂಪವಾಗಿ ಜನ್ಮ ತಾಳಿದುದು ಸುಮಾರು ನೂರು ವರ್ಷಗಳ ಹಿಂದೆ. ಕನ್ನಡದಲ್ಲಿ ಸಣ್ಣಕಥೆಗಳು ಕೇವಲ ಪತ್ರಿಕೆಗಳಲ್ಲಿ ಕಾಣುತ್ತಿದ್ದ ಕಾಲವೊಂದಿತ್ತು. ಕಾಲವು ಸರಿದಂತೆ ಸಣ್ಣಕತೆಗಳೂ ಕೂಡ ಕಾದಂಬರಿ, ನಾಟಕ, ಕಾವ್ಯಗಳಂತೆಯೇ ಪುಸ್ತಕ ರೂಪದಲ್ಲಿ ಬರತೊಡಗಿದವು. ಆದರೆ ಪುರುಷ ಕತೆಗಾರರೇ ಸಮಾಜದ ಓರೆಕೋರೆಗಳನ್ನು ತಮ್ಮದೆ ದೃಷ್ಟಿಯಿಂದ ನೋಡಿ ಕೃತಿರಚನೆ ಮಾಡಿದರು. ಸತಿ ಸಾವಿತ್ರಿ, ಗಾಂಧಾರಿ, ಸೀತೆ, ಮಾದ್ರಿ ಹೀಗೆ ಹಲವಾರು ಉದಾಹರಣೆಗಳೊಳಗೆ ಪುರುಷಾನುಸಾರಿಯಾಗಿ ಅವಳ ಬದುಕನ್ನು ವೈಭವಿಕರಿಸಲಾಯಿತು. ಪುರಾಣ, ಇತಿಹಾಸ, ವರ್ತಮಾನ ಎಲ್ಲಾ ಕಾಲದ ಸಾಹಿತಿಗಳು ಪ್ರಮುಖ ಸ್ತ್ರೀ ಪಾತ್ರಗಳಲ್ಲಿ ಹುಡುಕಿದ್ದು ಸಾಂಪ್ರದಾಯಿಕ ಕಟ್ಟುಕಟ್ಟಲೆಯ ನೀತಿ ನಿಯಮಗಳಲ್ಲಿ ಬಂಧಿತವಾದ ಮಹಿಳೆಯನ್ನೇ. ಪಠ್ಯಪುಸ್ತಕಗಳಲ್ಲಿಯೂ ಇದೇ ಮಾದರಿಯ ಸ್ತ್ರೀತ್ವವನ್ನು ಬೋಧಿಸಲಾಯಿತು.
ಸಮಾಜದ ಯಾವುದೇ ಸಾಮಾಜಿಕ ಮತ್ತು ಸಂಸ್ಕೃತಿಯನ್ನು ತಿಳಿಸುವಲ್ಲಿ ಮಹಿಳೆಯರ ಕೊಡುಗೆ ಅಪಾರ. ಸಂಕಷ್ಟ ಪರಿಸ್ಥಿತಿಯಲ್ಲಿ ಪುರುಷರ ಪಲಾಯನವಾದ, ಸ್ವಾರ್ಥ, ಅವಿಶ್ವಾಸಗಳನ್ನು ಗಮನಕ್ಕೆ ತರುವ ಈ ಕಾರ್ಯದಲ್ಲಿ ಮಾಧ್ಯಮವಾಗಿ ಸಣ್ಣ ಕಥೆಗಳು ಸಾಕಷ್ಟು ಶ್ರಮಿಸಿವೆ ಎಂದು ಹೇಳಬಹುದು.
ಪ್ರಾಕೃತಿಕವಾಗಿ ಮಹಿಳೆಯ ಶಕ್ತಿ ಅಪಾರವೆಂಬುದಕ್ಕೆ ಪಾಲನೆ, ಪೋಷಣೆ ಇತ್ಯಾದಿ ಹೊಣೆಗಾರಿಕೆಯ ಜವಾಬ್ದಾರಿಯನ್ನು ನಿರ್ವಹಿಸಿಯೂ ಕಡೆಗಣನೆಗೆ ಒಳಗಾದ ಜೀವ ಮಹಿಳೆ. ಎಲ್ಲ ಧರ್ಮಗಳಲ್ಲಿಯೂ ಕುಟುಂಬ, ಸಮಾಜ, ಶಿಕ್ಷಣ, ಧರ್ಮ, ಸಂಸ್ಕೃತಿ ಈ ಎಲ್ಲ ವಿಚಾರಗಳಲ್ಲೂ ಆಕೆಯೆ ಪುರುಷ ಪ್ರಧಾನತೆಯ ಹಲ್ಲೆಗೆ ಒಳಗಾದವಳು. ಹೀಗೆ ವಿವಿಧ ರೀತಿಗಳಲ್ಲಿ ಅನ್ಯಾಯಕ್ಕೊಳಗಾದಂಥ, ಅದರಿಂದ ಫೀನಿಕ್ಸಿನಂತೆ ಮತ್ತೆ ಆವಿರ್ಭವಿಸಿ ಬಂದಂಥ ಹೆಂಗಳೆಯರ ಬದುಕಿಗೆ ಕನ್ನಡಿ ಹಿಡಿದಿದ್ದಾರೆ ಶ್ರೀಮತಿ ವಿನುತಾ ಹಂಚಿನಮನಿಯವರು. “ಒಂಟಿ ಹಕ್ಕಿಯ ಪಯಣ” ಇದು ಹತ್ತು ಕಥೆಗಳ ಸಂಕಲನ. ಹತ್ತೂ ಕತೆಗಳ ಕಥಾವಸ್ತುವಿನಲ್ಲಿ ವೈವಿಧ್ಯತೆಯಿದೆಯಾದರೂ ಮುಖ್ಯ ಉದ್ದೇಶವು ಮಾತ್ರ ಒಂದೇ ಆಗಿದೆ.
ಮೊದಲನೆಯ ಕಥೆ ‘ಒಂಟಿ ಹಕ್ಕಿಯ ಪಯಣ’ವು ಹೆಸರೇ ಹೇಳುವಂತೆ ಹೆಣ್ಣು ಸಂಸಾರದ ನೊಗವನ್ನು ಅನಿವಾರ್ಯವಾಗಿ ಹೊತ್ತು ತಂಗಿ, ತಮ್ಮಂದಿರನ್ನು ದಡಕ್ಕೆ ಹಚ್ಚಲು ದುಡಿಯುತ್ತಾಳೆ. ಆದರೆ ಕೊನೆಯ ದಿನಗಳಲ್ಲಿ ಆಕೆ ಒಬ್ಬಂಟಿಯಾಗುತ್ತಾಳೆ. ದಡ ಸೇರಿದ
ಎಲ್ಲರೂ ತಂತಮ್ಮ ದಾರಿ ಕಂಡುಕೊಳ್ಳುತ್ತಾರೆ. ತಾಯಿಯೂ ಕೂಡ ಮಗಳ ಮದುವೆಯ ಯೋಚನೆಯನ್ನೇ ಮಾಡದೆ ಸ್ವಾರ್ಥಿಯಾಗುತ್ತಾಳೆ.
ಎರಡನೆಯ ಕಥೆ, ‘ದಮಯಂತಿ’. ಇದು ಉತ್ತಮ ಪುರುಷದಲ್ಲಿ ನಿರೂಪಿತಗೊಂಡ ಕಥೆ. ಇಂಥ ಕಥೆಗಳಲ್ಲಿ ಕಥೆಗಾರನು ಓದುಗನಿಗೆ ಆತ್ಮೀಯವಾಗಿಬಿಡುತ್ತಾನೆ. ಅಲ್ಲದೆ, ಕಥೆಗಾರನಲ್ಲಿ ತಾದಾತ್ಮ್ಯತೆಯನ್ನು ಹೊಂದಬಹುದಾದ ವಿಶೇಷತೆಯನ್ನೂ ಕೂಡ ನಾವು ಇಂಥ ಕಥೆಗಳಲ್ಲಿ ಸಹಜವಾಗಿ ಕಾಣುತ್ತೇವೆ.
ಇದರಲ್ಲಿ ಕಥಾನಾಯಕಿ ದಮಯಂತಿಯೇ. ಅವಳು ಈಗ ಮಧ್ಯಮ ವಯಸ್ಸಿನವಳು. ಸುಂದರಿಯಾದ ಅವಳ ಭಾಗ್ಯವು ಅವಳನ್ನು ಕುರುಡನಾದರೂ ಅತ್ಯಂತ ದೊಡ್ಡ ಶ್ರೀಮಂತನೊಂದಿಗೆ ಜೊತೆಗೂಡಿಸುತ್ತದೆ. ಈ ಕಥೆಯು ನಾಯಕಿಯೇ ಹೇಳುವಂತೆ ಮೂವತ್ತು ವರ್ಷಗಳ ಹಿಂದೆ ನಡೆದಂಥ ಸಂಗತಿಯಾದ್ದರಿಂದಲೂ ಬಡ ಮನೆತನದವಳಾಗಿದ್ದುದರಿಂದಲೂ, ಆ ಕಾಲದಲ್ಲಿ ಹೆಣ್ಣಿಗೆ ಆಯ್ಕೆಯ ಸ್ವಾತಂತ್ರ್ಯವು ಕಡಿಮೆಯಾಗಿದ್ದುದರಿಂದಲೂ ದಮಯಂತಿಯು ಪಾಲಿಗೆ ಬಂದದ್ದನ್ನು ಅನಿವಾರ್ಯವಾಗಿ ಸ್ವೀಕರಿಸುತ್ತಾಳೆ. ಮುಂದೆ ಅವಳ ನಾಲ್ವರು ಗಂಡುಮಕ್ಕಳು ತಂದೆಯ ಸರಿಯಾದ ಮೇಲ್ವಿಚಾರಣೆಯ ಅಭಾವದಿಂದಾಗಿ ಉಡಾಳರಾಗುತ್ತಾರೆ. ಕೊನೆಗೆ ದುರಂತದಲ್ಲಿ ಕೊನೆಯಾಗುತ್ತದೆ. ದಮಯಂತಿಯು ಇದಕ್ಕಾಗಿ ಕಣ್ಣು ಕಾಣದ ಗಂಡನ ಬೇಜವಾಬ್ದಾರಿತನದೊಂದಿಗೆ ತಾಯಿಯಾಗಿ ತಾನೂ ಕೂಡ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಮಾಡದೆಹೋದ ತನ್ನನ್ನೂ ಹೊಣೆಯಾಗಿಸುತ್ತಾಳೆ. ಮಕ್ಕಳನ್ನು ಕೇವಲ ಹೆತ್ತರಾಗಲಿಲ್ಲ, ಒಳ್ಳೆಯ ವಾತಾವರಣವನ್ನೂ ಒದಗಿಸಬೇಕು, ಅದೊಂದು ದೀರ್ಘ ತಪಸ್ಸು ಎಂದು ಆತ್ಮಾವಲೋಕನ ಮಾಡಿಕೊಳ್ಳುತ್ತಾಳೆ.
ಮೂರನೆಯ ಕಥೆ ‘ರಾಧಾಮಾಧವವಿಲಾಸ’. ಇಲ್ಲಿಯ ಕಥಾನಾಯಕಿ ರಾಧಾ. ಓದಿನಲ್ಲಿ ಜಾಣೆ. ನೌಕರಿ ಮಾಡುವ ಇರಾದೆ ಅವಳದಾಗಿದ್ದರೂ ಶೇರ್ ಬಿಜಿನೆಸ್ಸಿನಲ್ಲಿ ಒಳ್ಳೆಯ ಗಳಿಕೆಯಿರುವ ಮಾಧವನೊಂದಿಗೆ ಹಿರಿಯರು ಮದುವೆ ಮಾಡುತ್ತಾರೆ. ಸುಲಲಿತವಾಗಿ ನಡೆದ ಸಂಸಾರದಲ್ಲಿ ಶೇರ್ ಮಾರ್ಕೆಟ್ಟಿನ ಏರಿಳಿತದಿಂದಾಗಿ ಅಲ್ಲೋಲ ಕಲ್ಲೋಲಗಳುಂಟಾಗುತ್ತವೆ. ಕಾರು, ಬಂಗಲೆ ಎಲ್ಲವನ್ನೂ ಮಾರಾಟ ಮಾಡಿ ಶೇರುದಾರರ ಹಣವನ್ನು ಹಿಂದಿರುಗಿಸುವ ಪ್ರಸಂಗ ಬರುತ್ತದೆ. ಆದರೆ ಆಗ ರಾಧಾ ಧೈರ್ಯಗೆಡದೆ ಜೀವವಿಮಾ ನಿಗಮದ ಪ್ರತಿನಿಧಿಯಾಗಿ ಕೆಲಸ ಪ್ರಾರಂಭಿಸಿ ತನ್ನ ಪ್ರತಿಭೆ ಹಾಗೂ ಕಾರ್ಯ ಚಾತುರ್ಯದಿಂದ ಬೆಳೆಯುತ್ತಾಳೆ. ಹೆಣ್ಣು ಮನಸ್ಸು ಮಾಡಿದರೆ ಏನನ್ನೂ ಸಾಧಿಸಬಹುದು ಎನ್ನುವುದಕ್ಕೆ ಒಳ್ಳೆಯ ನಿದರ್ಶನವಾಗುತ್ತಾಳೆ ಎಂದು ಲೇಖಕಿ ಹೆಮ್ಮೆಯಿಂದ ‌ಹೇಳುತ್ತಾರೆ. ಲೇಖಕಿ ಸ್ವತಃ ಜೀವವಿಮಾ ನಿಗಮದ ಅಧಿಕಾರಿಗಳಾಗಿದ್ದುದರಿಂದ ಅದರ ಒಳಹೊರಗುಗಳನ್ನು ಚೆನ್ನಾಗಿ ವಿಶ್ಲೇಷಿಸಿದ್ದಾರೆ.
ಇನ್ನು ನಾಲ್ಕನೆಯ ಕಥೆ ‘ಕಲಿಯುಗದ ಅಹಲ್ಯೆ’. ಹೆಸರೇ ಹೇಳುವಂತೆ ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಗಿ ಬಂದ ಜಾನಕಿ ಇಲ್ಲಿ ಅಹಲ್ಯೆ ಯಾಗಿದ್ದಾಳೆ. ಒಂದು ದಿನ ಅಹಲ್ಯೆಯೂ ಕೂಡ ರಾಮನ ಪಾದಸ್ಪರ್ಶದಿಂದಾಗಿ ಶಾಪವಿಮೋಚನೆ ಹೊಂದಿದಂತೆ ಜಾನಕಿಯೂ ಪರಿಶುದ್ಧತೆಯ ಅಗ್ನಿದಿವ್ಯದಲ್ಲಿ ಶುದ್ಧಳಾಗಿ ಹೊರಹೊಮ್ಮುತ್ತಾಳೆ. ಇಲ್ಲಿ ಸಹನೆಗೆ ಇನ್ನೊಂದು ಹೆಸರೇ ಹೆಣ್ಣು ಎಂದು ಲೇಖಕಿ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
ಐದನೆಯ ಕಥೆ,’ಸಂಸಾರ ಸಾಗರ’. ಇದು ಒಂದು ಕೌಟುಂಬಿಕ ಹಿನ್ನೆಲೆಯ ಕಥೆ. ಸಂಸಾರವು ಆನಂದ ಸಾಗರವಾಗುವುದು ನಮ್ಮ ಕೈಯಲ್ಲಿಯೇ ಇದೆ ಎಂದು ಹೇಳುವ ಲೇಖಕಿ ಸಾಗರದಲ್ಲಿ ಮುತ್ತು ಗಳಿರುವಂತೆಯೇ ಪ್ರಾಣಾಪಾಯವೊಡ್ಡುವ ಪ್ರಾಣಿಗಳೂ ಕೂಡ ಇದ್ದು, ತಿಳುವಳಿಕೆಯನ್ನು ಹೊಂದಿದ್ದಲ್ಲಿ ಎಲ್ಲವೂ ಸುಲಲಿತ ಎಂದು ಹೇಳುತ್ತಾರೆ.
ಆರನೆಯ ಕಥೆ, ‘ನಿರೀಕ್ಷೆಯಲ್ಲಿ…’. ಇಲ್ಲಿ, ಭಾವನಾ ಹಾಗೂ ಜಾನಕಿ ಇಬ್ಬರೂ ಪ್ರಾಣಸ್ನೇಹಿತೆಯರು. ಒಬ್ಬರಿನ್ನೊಬ್ಬರ ಜೀವನವನ್ನು ಒಪ್ಪಗೊಳಿಸುತ್ತಾರೆ. ಎಂಥದೆ ಕಷ್ಟಗಳಿದ್ದರೂ ಸ್ನೇಹ ಹಾಗೂ ಪ್ರೀತಿಗಳಲ್ಲಿ ವಿಶ್ವಾಸವಿದ್ದಲ್ಲಿ ಜೀವನವು ಎಂದಾದರೊಮ್ಮೆ ಸುಖಾಂತ್ಯವನ್ನು ಪಡೆದೇ ತೀರುತ್ತದೆ, ಕಾಯುವಿಕೆಯು ಮಿಲನಸಂಭ್ರಮವನ್ನು ಹೊಂದುತ್ತದೆ ಎಂಬ ಧನಾತ್ಮಕ ಯೋಚನೆಗೆ ಕಥಾರೂಪವನ್ನು ಕೊಟ್ಟಿರುವ ಲೇಖಕಿ ತ್ಯಾಗ, ಸಹನೆಗಳಿಗೆ ಫಲ ಸಿಗಲೇಬೇಕು ಎಂದು ಹೇಳುತ್ತಾರೆ.
ಏಳನೆಯ ಕಥೆ,’ನನ್ನ ಬದುಕೇ ನನ್ನ ಸಂದೇಶ’. ಇಲ್ಲಿ ಮಾತ್ರ ಮಹಿಳೆ ಬಲಿಷ್ಠವಾದಂಥ ಆತ್ಮಶಕ್ತಿಯನ್ನು ಹೊಂದಿ ಹೊರಹೊಮ್ಮಿದ್ದಾಳೆ. ಕಥಾನಾಯಕಿ ಮಾನಸಿಯ ಪತಿ ಕಿರಣನಿಗೆ ಪ್ರೀತಿ ಎನ್ನುವುದು ಮಾರಾಟ ದ ವಸ್ತುವಿದ್ದಂತೆ. ಮಾನಸಿಯನ್ನು ಕೇವಲ ತನ್ನ ಉನ್ನತಿಗಾಗಿ ಮೆಟ್ಟಿಲಾಗಿ ಉಪಯೋಗಿಸಿಕೊಂಡು ಮುಂದೆ ತನ್ನ ವಿಷಯ ವಾಸನೆಯ ತೃಪ್ತಿಗಾಗಿ ಹಾಗೂ ತನ್ನ ಸ್ವಾರ್ಥಕ್ಕಾಗಿ ಹೆಣ್ಣುಗಳನ್ನು ಬದಲಾಯಿಸುತ್ತ ಹೋಗುತ್ತಾನೆ. ಮಾನಸಿ ಅವನಿಂದ ಬೇರೆಯಾಗಿ ಒಬ್ಬ ಯಶಸ್ವಿ ವಕೀಲಳಾಗಿ ನಂತರ ಬಡ್ತಿ ಹೊಂದಿ ನ್ಯಾಯಾಧೀಶಳಾಗುತ್ತಾಳೆ. ತನ್ನ ಗಂಡನದೇ ವಿಚ್ಛೇದನಕ್ಕೆ ಶರಾ ಬರೆಯುತ್ತಾಳೆ! ಚೆಲುವು ಹಾಗೂ ಹಣದ ಹಿಂದೆ ಬೆಂಬತ್ತಿದವರಿಗೆ ದುರಂತವೇ ಕಟ್ಟಿಟ್ಟದ್ದು ಎಂದು ಲೇಖಕಿ ಹೇಳುವುದರಲ್ಲಿ ತಥ್ಯವಿದೆ.
ಎಂಟನೆಯ ಕಥೆ ‘ಸ್ತ್ರೀ ಸ್ವಾತಂತ್ರ್ಯಮ್ ಅರ್ಹತಿ’. ಇದರಲ್ಲಿ ತೇಜಸ್ವಿನಿ ಒಬ್ಬ ಆಧುನಿಕ ವಿಚಾರ ಧಾರೆಯ ಮಹಿಳೆ. ಆದರೆ ಅದು ತೋರಿಕೆಯ ಆಧುನಿಕತೆ. ಮನದಾಳದಲ್ಲಿ ಅವಳು ತನ್ನ ಬಾಲ್ಯದಲ್ಲಿ ತನಗಾದ ಅತೃಪ್ತಿಯಿಂದಾಗಿ ತೊಳಲುತ್ತಿದ್ದರೂ ಜಾಗೃತ ಮನಸ್ಸಿನಲ್ಲಿ ಸಾಧನೆಯ ಸಂತೋಷವನ್ನು ಹೊಂದಿದ್ದಾಳೆ. ಮದುವೆಯ ವಿಷಯದ ಬಗ್ಗೆ ಅವಳು ತನ್ನ ಮಗಳು ತಮ್ಮ ಸಂಪ್ರದಾಯವನ್ನೆ ಅನುಸರಿಸಲಿ ಎಂಬ ಆಶೆಯನ್ನು ಹೊಂದಿದ್ದಾಳೆ. ಇಲ್ಲಿ ಲೇಖಕಿಗೆ ಕಥೆಯ ಮೇಲಿನ ಹಿಡಿತ ತಪ್ಪಿದೆ ಎಂದು ಹೇಳಬಹುದು. ವ್ಯಕ್ತಿತ್ವಗಳಲ್ಲಿ ಸ್ಪಷ್ಟತೆಯಿಲ್ಲ.
ಒಂಬತ್ತನೆಯ ಕಥೆ ‘ಬಡತನದ ಶಾಪ’. ಬಡತನದಲ್ಲಿ ಬೇಯುತ್ತಿದ್ದರೂ ಕಥಾನಾಯಕಿ ಪುಟ್ಟವ್ವ ಪ್ರಾಮಾಣಿಕಳು. ಗುಡಿಯ ಕಸ, ಮುಸುರೆ ಮುಂತಾದ ಎಲ್ಲ ಕೆಲಸಗಳನ್ನು ಮಾಡುತ್ತಿರುತ್ತಾಳೆ. ಒಂದು ಸಮಾರಂಭದಲ್ಲಿ ಗುಡಿಯ ಬೆಳ್ಳಿಯ ಸಾಮಾನುಗಳು ಕಳುವಾದಾಗ ಇವಳ ಮೇಲೆ ಕಳುವಿನ ಅಪವಾದವು ಬರುತ್ತದೆ. ಪುಟ್ಟವ್ವ ತಾನು ಕದ್ದಿಲ್ಲವೆಂದು ಹೇಳಿದರೂ ನಂಬದ ಪೂಜಾರಿಗಳು ಪೋಲೀಸರ ವಶಕ್ಕೆ ಅವಳನ್ನು ಹಾಗೂ ಅವಳ ಮಕ್ಕಳನ್ನು ಒಪ್ಪಿಸಿದಾಗ ಅವಮಾನಿತಳಾದ ಅವಳು ನೊಂದು ಅವರ ವಂಶ ಅಳಿದು ಹೋಗಲಿ ಎಂದು ಶಾಪವನ್ನು ಕೊಡುತ್ತಾಳೆ. ಅದು ನಿಜವಾಗುತ್ತದೆ. ಲೇಖಕಿ, ‘ಬಡತನ ಸುಡುವ ಬೆಂಕಿ… ಪ್ರಾಮಾಣಿಕತೆ ಮನುಷ್ಯನನ್ನು ಶುದ್ಧ ಚಿನ್ನವಾಗಿಸುತ್ತದೆ. ಅಂತೆಯೇ ಬಡತನದ ಶಾಪವೂ ತೀಕ್ಷ್ಣವಾಗಿರುತ್ತದೆ’ ,ಎಂದು ಹೇಳಿ ಕಥೆಯನ್ನು ಮುಗಿಸುತ್ತಾರೆ. ಇಲ್ಲಿ ಲೇಖಕಿ ತನ್ನ ಒಂದು ನೈತಿಕವಾದ ದೃಢ ವಿಶ್ವಾಸವನ್ನು ಓದುಗರೆದುರು ಕಥೆಯ ಮೂಲಕ ಹೇಳಲು ಪ್ರಯತ್ನ ಮಾಡಿದ್ದಾರೆ. ಯಾರೂ ಕೆಟ್ಟವರಲ್ಲವಾದರೂ ಪರಿಸ್ಥಿತಿಯ ಕೈಗೊಂಬೆಗಳು ಎಂದು ಹೇಳುತ್ತಲೇ ಶಾಪದ ತೀವ್ರ ಪರಿಣಾಮವನ್ನೂ ವ್ಯಕ್ತಗೊಳಿಸಿದ್ದಾರೆ. ಒಮ್ಮೊಮ್ಮೆ ಜೀವನದಲ್ಲಿ ನೊಂದವರ ಮಾತುಗಳು ನಿಜವಾಗುವುದೂ ಉಂಟೇನೋ!
ಕೊನೆಯದಾಗಿ ಹತ್ತನೆಯ ಕಥೆ ‘ಕಟ್ಟೆಯ ಕಲ್ಲು ಕಟ್ಟೆಗೆ’. ಇದೂ ಕೂಡ ವಿಧಿಯಾಟದ ಕಥೆ. ಈ ಜಗತ್ತಿನಲ್ಲಿ ದುಡ್ಡಿದ್ದವನೇ ದೊಡ್ಡಪ್ಫ. ಆದರೂ ಅನ್ಯಾಯ ಮಾಡಿದವರಿಗೆ ಕಾಣದ ಕೋಲಿನ ಹೊಡೆತವೂ ಇಲ್ಲಿದೆ ಎಂಬುದನ್ನು ಭೋಯಿ ಮಾಸ್ತರರ ಕೊನೆಯ ದಿನಗಳನ್ನು ಕಂಡಾಗ ಪಾರ್ವತೆವ್ವನ ಜೀವನದಲ್ಲಿ ಬಂದಂತಹ ಬದಲಾವಣೆ ಗಳನ್ನು ಕಂಡಾಗ ಅರಿವಾಗುತ್ತದೆ. ಬೇರೆಯವರ ಜೀವನದ ಬಗ್ಗೆ ಹೀಗಳೆದು ಮಾತನಾಡುವವರಿಗೆ ತಾವು ಇತರರಿಗೆ ಮಾಡಿದ ಅನ್ಯಾಯದ ಬಗ್ಗೆ ಅರಿವಿರುವುದಿಲ್ಲ ಎಂಬುದು ಇಲ್ಲಿ ಲೇಖಕಿಯ ಮನದ ಮಾತು. ಅದನ್ನು ಗಂಗಾ, ಗೌರಿ ಮುಂತಾದ ಪಾತ್ರಗಳ ಮೂಲಕ ನಿಜವಾಗಿಸಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೆ ಇವರಲ್ಲಿ ಉತ್ತಮ ಕಥೆಗಾರ್ತಿಯ ಎಲ್ಲ ಲಕ್ಷಣಗಳೂ ಇವೆ. ಶೈಲಿಯಲ್ಲಿ ಸ್ವಲ್ಪ ಮಟ್ಟಿನ ಹಿಡಿತವನ್ನು ಇನ್ನೂ ಸಾಧಿಸಬೇಕಿದೆ. ಅನೇಕ ಪ್ರೌಢ ಕೃತಿಗಳನ್ನು ಓದಿದಾಗ ಈ ಕೊರತೆಯೂ ನೀಗಬಹುದಾಗಿದೆ.

Leave a Reply