ಆಸ್ತಿಕ – ನಾಸ್ತಿಕ

ಆಸ್ತಿಕ – ನಾಸ್ತಿಕ

ದೇವರಿದ್ದಾನೆ ಎಂಬ ನಂಬಿಕೆ, ವಿಶ್ವಾಸ, ಭಕ್ತಿ ಇರುವವರನ್ನು ಆಸ್ತಿಕರು ಎಂದು, ದೇವರು ಇಲ್ಲ, ಅದು ಬರೀ ಮನುಷ್ಯನ ಕಲ್ಪನೆ, ಎಲ್ಲವೂ ಯಾವುದೋ ಒಂದು ಪ್ರಕೃತಿ ನಿಯಮದಂತೆ ನಡೆಯುತ್ತದೆ, ವಿಧಿ-ದೇವರ ಇಚ್ಛೆ-ಎಂದು ತಿಳಿಯುವುದು ಪುರುಷ ಪ್ರಯತ್ನಕ್ಕೆ – ಪುರುಷ ಸಂಕಲ್ಪಕ್ಕೆ ಅಪಚಾರ ಎನ್ನುವವರನ್ನು ನಾಸ್ತಿಕರು ಎನ್ನುತ್ತೇವೆ.
ಆ ಧರ್ಮದವರು ಈ ಧರ್ಮದವರು, ಬಡವರು, ಸಿರಿವಂತರು, ಪುರುಷರು, ಮಹಿಳೆಯರು ಎಂಬ ಯಾವ ಭೇದವಿಲ್ಲದೆ ಮನುಷ್ಯರನ್ನು ಆಸ್ತಿಕರು, ನಾಸ್ತಿಕರು ಎಂದು ವಿಂಗಡಿಸಬಹುದು. ಆಸ್ತಿಕರ ಮನೋಧರ್ಮ, ಆಲೋಚನೆ ರೀತಿಯೇ ಬೇರೆ. ನಾಸ್ತಿಕರದೇ ಬೇರೆ, ಆಸ್ತಿಕರು ಭಾವನಾಶೀಲರು, ನಾಸ್ತಿಕರು ವಿಚಾರವಂತರು ಎನ್ನುವುದು ವಾಡಿಕೆ. ಆದರೆ ನಾಸ್ತಿಕರದು ಹೃದಯರಹಿತ, ಶುಷ್ಕ ವೈಚಾರಿಕತೆ ಎಂದು ಹೇಳುವುದಾಗಲಿ, ಆಸ್ತಿಕರಲ್ಲಿ ವೈಚಾರಿಕತೆಯೆ ಇರುವುದಿಲ್ಲ ಎಂದು ಹೇಳುವುದಾಗಲಿ ಸರಿಯಲ್ಲ.
ಈಗ ಆಸ್ತಿಕರ ಆಲೋಚನೆಗಳನ್ನು ಮಾತ್ರ ಗಮನಿಸೋಣ. ಕಷ್ಟ – ಸಂಕಟಗಳು ಬಂದಾಗ, ದುಃಖದ ಸನ್ನಿವೇಶ ಬಂದಾಗ, ಆಸ್ತಿಕರಾದವರು ದೇವರಿಗೆ ಕಣ್ಣಿಲ್ಲ – ದೇವರು ಹೀಗೆ ಮಾಡಬಾರದಿತ್ತು, ದೇವರು ಕಲ್ಲು ಎಂದೆಲ್ಲ ಹೇಳುತ್ತ ದೇವರನ್ನು (ಆತನನ್ನು ನೋಡಿಲ್ಲದಿದ್ದರೂ) ದೂರುತ್ತಾರೆ. ಈ ಕಷ್ಟವೂ ದೇವರ ಇಚ್ಛೆ – ದೇವರ ಸಂಕಲ್ಪದಿಂದಲೇ ಆದುದು- ಇದೂ ಸಹ ನಮ್ಮ ಒಳ್ಳೆಯದಕ್ಕೆ ಎಂದು ತಿಳಿದು ಆಕ್ರೋಶಕ್ಕೆ, ಉದ್ವೇಗಕ್ಕೆ, ಹತಾಶೆಗೆ, ಒಳಗಾಗದ ಚಿತ್ತ ಸಮತೆಯಿಂದಿರುವವರು ಎಲ್ಲೋ ಕೆಲವರು. ದೇವರಲ್ಲಿ ಸಂಪೂರ್ಣ ಶರಣಾಗತರಾದವರು, ಪರಮಭಕ್ತರು. ಅಂಥವರನ್ನು ಜ್ಞಾನಿಗಳು, ಸಂತರು, ಭಕ್ತ ಶ್ರೇಷ್ಠರು ಎಂದು ಕರೆಯುತ್ತೇವೆ. ವಿದ್ಯಾ, ಬುದ್ಧಿ, ಆರೋಗ್ಯ, ಆರ್ಥಿಕ ಸಂಪತ್ತು ಕೊಡು ಎಂದು ದೇವರಲ್ಲಿ ಬೇಡುವವರಿಗೆ ದೇವರಲ್ಲಿ ಪೂರ್ಣ ನಂಬಿಕೆ ವಿಶ್ವಾಸ ಇದ್ದೇ ಇರುತ್ತದೆ. ಬದುಕಿನಲ್ಲಿ ವಿದ್ಯೆ, ಆರೋಗ್ಯ, ಸಂಪತ್ತು, ಕೀರ್ತಿ, ಯಶಸ್ಸು ಇತ್ಯಾದಿ ಪಡೆದವರು ಅವೆಲ್ಲಾ ದೇವರ ಕೃಪೆ ಎಂದು ವಿನಯದಿಂದ ಹೇಳುತ್ತಾರೆ.
ನಮ್ಮ ಎಲ್ಲ ಸ್ಥಿತಿ-ಗತಿಗೂ ಕಾಣದ ಆ ದೇವರೇ ಕಾರಣ –ಆ ದೇವರೇ ಹೊಣೆಗಾರ ಎಂದು ತಿಳಿಯುವುದು ಸಂಪೂರ್ಣ ಶರಣಾಗತಿಯ ಸೂಚಕವಾಗಿರುವುದಿಲ್ಲ. ಆದದ್ದೆಲ್ಲ ತಮ್ಮ ತಪ್ಪಿನಿಂದಲ್ಲ- ಅದಕ್ಕೆ ತಾವು ಹೊಣೆ ಅಲ್ಲ- ಎಂದು ಅನ್ಯರ ಮೇಲೆ ಆರೋಪ ಮಾಡುವ – ತಮ್ಮ ತಪ್ಪಿನಿಂದಾದುದು ಎಂದು ಒಪ್ಪಿಕೊಳ್ಳದೆ ಅನ್ಯರನ್ನೇ ದೂರುವುದು ಮನುಷ್ಯ ಸಹಜವಾದ ದೌರ್ಬಲ್ಯ, ಅವರಿವರ ಮೇಲೆ ತಪ್ಪು ಹೊರಿಸಿ ತಾವು ನಿರ್ದೋಷಿಗಳಾಗಿ ಉಳಿಯುವ ಪ್ರಯತ್ನ.
ದೇವರನ್ನು ಕರುಣಾಮಯ ಎಂದು ಸ್ತುತಿಸುತ್ತೇವೆ. ಆತನಿಗೆ ಎಲ್ಲರ ಮೇಲೆ ಪ್ರೀತಿಯಿದೆ- ಪಕ್ಷಪಾತವಿಲ್ಲ, ಎಂದೆಲ್ಲ ಹೇಳುತ್ತೇವೆ. ಸರ್ವಗುಣ ಸಂಪನ್ನ ಎಂದು ಕರೆಯುತ್ತೇವೆ. ನಮ್ಮೊಳಗಿನ ಆತ್ಮ, ಪರಮಾತ್ಮನ ಅಂಶ ಎಂದು ಜ್ಞಾನಿಗಳು ಹೇಳುವುದನ್ನು ಕೇಳುತ್ತೇವೆ. ಆದರೆ ಪರಮಾತ್ಮನ ಆ ಗುಣಗಳೆಲ್ಲ ಆತ್ಮನಲ್ಲೂ ಇರಬೇಕಲ್ಲ – P್ಪಡೆಯ ಪಕ್ಷ ಸ್ವಲ್ಪ ಮಟ್ಟಿಗಾದರೂ ಇರಬೇಕಲ್ಲ. ಯಾರ ಬಗ್ಗೆಯೂ ಕರುಣೆ ತೋರದೆ, ಪ್ರೀತಿ ತೋರದೆ ನಮ್ಮ ಮೇಲೆ ಮಾತ್ರ ದೇವರು ಕರುಣೆ ತೋರಬೇಕು. ಒಲಿದು ಕೃಪೆ ಮಾಡಬೇಕು ಎಂದು ಆಶಿಸುವುದು, ನಿರೀಕ್ಷಿಸುವುದು ಎಷ್ಟು ಸರಿ?
ಆಸ್ತಿಕರೇನೂ ಆದದ್ದಕ್ಕೆಲ್ಲ ದೇವರನ್ನು ಹೊಣೆ ಮಾಡಿ ದೇವರನ್ನು ಬೈದು ತೃಪ್ತಿಪಡಬಹುದು. ನಾಸ್ತಿಕರಿಗೆ ಈ ಅನುಕೂಲ ಇಲ್ಲ. ಅವರೂ ತಮ್ಮದೇ ತಪ್ಪು, ತಾವೆ ಹೊಣೆಗಾರರು ಎಂದು ಹೇಳದೆ ಬೇರೆ ಯಾರೊ ಬಂದುಗಳೊ, ಮಿತ್ರರೊ, ಅಸೂಯಾಪರರೊ, ಇತರರೊ ಅವರ ಮೇಲೆ ತಪ್ಪು ಹೊರಿಸಿ ಸಮಾಧಾನಪಟ್ಟುಕೊಳ್ಳುತ್ತಾರೆ.
ತಾವು ಮಾಡಿದುದಕ್ಕೆ – ಮಾತನಾಡಿದುದಕ್ಕೆ ತಾವೇ ಜವಾಬ್ದಾರರು. ಅದರ ಪರಿಣಾಮ – ಫಲ ಏನೇ ಇರಲಿ ಅದನ್ನು ತಾವೇ ಅನುಭವಿಸಬೇಕು ಎಂಬುದನ್ನು ತಿಳಿದುಕೊಂಡಿದ್ದರೆ ಸಾಕು.
ನಮ್ಮನ್ನು ರಕ್ಷಿಸುವವನೊಬ್ಬನಿದ್ದಾನೆ. ಎಲ್ಲವೂ ಅವನಿಚ್ಛೆಯಂತೆ ನಡೆಯುತ್ತದೆ. ಅವನು ಸರ್ವಶಕ್ತ- ಸರ್ವಾಂತರ್ಯಾಮಿ ಎಲ್ಲವನ್ನೂ ಬಲ್ಲವನು ಎಂಬೊಂದು ನಂಬಿಕೆ- ವಿಶ್ವಾಸ ಇದ್ದರೆ ಮನಸ್ಸಿಗೆಷ್ಟು ಹಗುರ! ಎಷ್ಟು ನಿಶ್ಚಿಂತರಾಗಬಹುದು! ಇಡೀ ವಿಶ್ವವನ್ನೇ ರಕ್ಷಿಸುವ ಆತನಿಗೆ ನಮ್ಮನ್ನು ರಕ್ಷಿಸುವುದೇನು ಮಹಾ. ಒಮ್ಮೆ ಆತನಿಗೆ ಮೊರೆಯಿಟ್ಟರೆ ಸಾಕು ನಮ್ಮ ನೆರವಿಗೆ ಧಾವಿಸಿ ಬರುತ್ತಾನೆ. ಆತ ಅತ್ಯಂತ ಕರುಣಾಮಯಿ.
ನಾವೂ ಆ ದೇವರು ಮೆಚ್ಚುವ ಹಾಗೆ ಸಂತೋಷಪಡುವ ಹಾಗೆ ನಡೆದುಕೊಳ್ಳಬೇಕು. ಒಳ್ಳೆಯ ಗುಣವನ್ನು – ದೈವೀ ಗುಣಗಳನ್ನು ಬೆಳೆಸಿಕೊಂಡು ಹಾಗೆಯೇ ನಡೆಯಬೇಕು. ಸ್ವಾರ್ಥ, ಕೆಟ್ಟ ಗುಣ ಪರಪೀಡನೆ ಪಾಪ ಸಜ್ಜನರ ನಿಸ್ವಾರ್ಥ ಸೇವೆ, ಅನುಕಂಪ – ಇವು ಒಳ್ಳೆಯ ಗುಣಗಳು, ಇಷ್ಟನ್ನು ಅರಿತು ಹಾಗೆ ಬದುಕಿದರೆ ಸಾಕು.
– ಕೆ. ಬಿ. ಪ್ರಭುಪ್ರಸಾದ್

Leave a Reply