Need help? Call +91 9535015489

📖 Print books shipping available only in India. ✈ Flat rate shipping

ಚಾತುರ್ವರ್ವಣವನ್ನು ಅಂದಗೆಡಿಸಿದ ದುರಭಿಮಾನ

ಚಾತುರ್ವರ್ವಣವನ್ನು ಅಂದಗೆಡಿಸಿದ ದುರಭಿಮಾನ

ಚಾತುರ್ವಣ ವ್ಯವಸ್ಥೆಯನ್ನು ಅರ್ಥಹೀನವಾಗಿಸುವಲ್ಲಿ ನಿರಭಿಮಾನವೊಂದು ಕಾರಣವಾದರೆ, ಮತ್ತೊಂದು ಕಾರಣ ‘ದುರಭಿಮಾನ’ವೆಂಬ ಮನೋವಿಕಾರ. ಈ ದುರಭಿಮಾನವು ಅಸಹನೆ, ತಿರಸ್ಕಾರ, ದ್ವೇಷ, ಮತಾಂಧತೆಗಳನ್ನು ಹುಟ್ಟಿಸಿ ಮನುಷ್ಯನನ್ನು ದಾರಿ ತಪ್ಪಿಸುವಂಥದ್ದು. ದುರಭಿಮಾನವೆಂಬ ಕಸ ಮನದ ಕಣ್ಣನ್ನು ಆವರಿಸಿದಾಗ, ಮನುಷ್ಯ ತನ್ನನ್ನು ನಿಸರ್ಗದಿಂದ ‘ಪ್ರತ್ಯೇಕ’ವೆಂದು ಭಾವಿಸತೊಡಗುತ್ತಾನೆ. ಅನಿರ್ವಚನೀಯ ಸ್ವಾರಸ್ಯಗಳ, ವೈವಿಧ್ಯಗಳ ಈ ಅನಂತ ಸಂಕೀರ್ಣ ಪ್ರಕೃತಿಯಲ್ಲಿ ‘ನಾನೂ ಒಂದು ವಿಶಿಷ್ಟ ಪ್ರಕಾರ’ ಎಂದು ಭಾವಿಸಿ, ಸುಂದರ ಸಂಬಂಧ ಉಳಿಸಿಕೊಳ್ಳುವ ಜವಾಬ್ದಾರಿ ಅವನಲ್ಲಿ ಮರೆಯಾಗುತ್ತದೆ. ‘ನಾನೊಬ್ಬನೇ ಏನೋ ವಿಶೇಷ’ ಎಂಬ ಭ್ರಾಂತಿ ನೆತ್ತಿಗೇರುತ್ತದೆ. ತನ್ನ ಬಗ್ಗೆ, ತನ್ನ ದೇಹ, ರೂಪ, ಮೈಬಣ್ಣ, ವೇಷಭೂಷಣ, ಆಚಾರವಿಚಾರಗಳ ಬಗ್ಗೆ; ಆಸ್ತಿ, ಉದ್ಯಮ, ಕುಲ, ವೃತ್ತಿ, ಪ್ರವೃತ್ತಿಗಳ ಬಗ್ಗೆ, ಅಥವಾ ತಾನು ಒಲಿದ ಗುರು, ಮತ, ಪಂಥ, ನಂಬಿಕೆ, ಸಿದ್ಧಾಂತಗಳ ಬಗ್ಗೆಯೋ – ‘ಅದೇ ಸರ್ವಸ್ವ, ಸವೋತ್ಕೃಟ , ಸರ್ವಥಾ ವಿಹಿತ, ಅದರಾಚೆ ಬೇರೇನೂ ಸರಿಯಿಲ್ಲ’ ಎಂಬ ಭ್ರಾಂತಿ ಮೂಡಿಸುತ್ತದೆ. ಕೆಲವರಲ್ಲಿ ಈ ಮತಾಂಧತೆ ಮನೋರೋಗವಾಗಿ ವ್ಯಕ್ತಿತ್ವವನ್ನು ಕುಗ್ಗಿಸಿದರೆ, ಕೆಲವರಲ್ಲಿ ಪರರನ್ನು ದಮನಗೊಳಿಸಿ, ಮತಾಂತರಿಸಿ, ಕೊಲ್ಲುವಷ್ಟು ಅತಿರೇಕಕ್ಕೂ ಹೋಗುವುದುಂಟು. ಇದನ್ನೇ ‘ಕೂಪಮಂಡೂಕನ್ಯಾಯ’ ಎನ್ನುವುದು.
ಬಾವಿಯಲ್ಲಿ ಹುಟ್ಟಿ ಬೆಳೆದ ಕಪ್ಪೆಯೊಂದು ಎಂದೂ ಬಾವಿಯಾಚೆ ಹೋಗಿರಲಿಲ್ಲ. ಅದರ ಪಾಲಿಗೆ ಬಾವಿಯೇ ಪ್ರಪಂಚ. ಒಮ್ಮೆ ಸಮುದ್ರತೀರದ ಕಪ್ಪೆಯೊಂದು ಬಾವಿಯೊಳಕ್ಕೆ ಬಂತು. ‘ಎಲ್ಲಿಂದ ಬಂದಿರುವೆ?’ ಎಂದು ಕೇಳಲು ‘ಸಮುದ್ರತೀರದಿಂದ’ ಎಂದಿತು. ‘ಸಮುದ್ರವೆಂದರೇನು?’ ಎಂದು ಕೇಳಲು ಹೇಳಿತು, ‘ಸಮುದ್ರವೆಂದರೆ ಊಹಿಸಲೂ ಆಗದಷ್ಟು ಆಳವೂ ಅಗಲವೂ ಆಗಿರುವ ಅನಂತ ಜಲರಾಶಿ’. ಬಾವಿಯ ಕಪ್ಪೆಗೆ ಆಶ್ಚರ್ಯ! ಒಂದಷ್ಟು ದೂರ ಜಿಗಿದು ಕೇಳಿತು, ‘ಸಮುದ್ರ ಇಷ್ಟು ಅಗಲವಿದೆಯೆ?’ ಸಮುದ್ರದ ಕಪ್ಪೆ ನುಡಿಯಿತು, ‘ಇದಕ್ಕೆ ಸಾವಿರ ಪಟ್ಟು ಹೆಚ್ಚು ಅಗಲವಿದೆ!’ ಬಾವಿಯ ಕಪ್ಪೆಗೆ ನಂಬಲಾಗಲಿಲ್ಲ. ‘ನನ್ನ ಬಾವಿಗಿಂತ ದೊಡ್ಡದೊಂದು ಇರಲು ಹೇಗೆ ಸಾಧ್ಯ?’ ಮತ್ತೂ ದೂರಕ್ಕೆ ಹಾರಿ ಕೇಳಿತು, ‘ನಿಮ್ಮ ಆ ಸಮುದ್ರ ‘‘ಇ…ಷ್ಟು’ ಅಗಲವಿದೆಯೇ?’ ಸಮುದ್ರದ ಕಪ್ಪೆ ನಕ್ಕು ಹೇಳಿತು, ‘ಅಯ್ಯೋ ಮರುಳೆ! ನಿನ್ನ ಈ ಚಿಕ್ಕ ಬಾವಿ ಎಲ್ಲಿ! ಆ ಅನಂತ ಸಮುದ್ರವೆಲ್ಲಿ! ನೀನು ಇಲ್ಲಿಂದಾಚೆ ಬಂದು ನೋಡಿದರೇನೇ ನಿನಗರ್ಥವಾಗುವುದು!’ ‘ತನ್ನ ಬಾವಿಗಿಂತ ದೊಡ್ಡ ಜಲರಾಶಿ ಇದೆ’ ಎಂದು ಕೇಳುತ್ತಲೇ ಬಾವಿಯ ಕಪ್ಪೆಗೆ ಭಯಂಕರ ಕೋಪ ಬಂತು. ಸಮುದ್ರದ ಕಪ್ಪೆಯನ್ನು ಬೈದು, ಹೊಡೆದು ಬಾವಿಯಿಂದಾಚೆಗೆ ಓಡಿಸಿಯೇಬಿಟ್ಟಿತು!
ದುರಭಿಮಾನವು ನಮ್ಮನ್ನು ಇಂಥ ‘ಕೂಪಮಂಡೂಕ’ರನ್ನಾಗಿ ಮಾಡುತ್ತದೆ. ‘ಬಾವಿ’ಯಲ್ಲಿ ಹುಟ್ಟುವುದು, ವಾಸಿಸುವುದು ತಪ್ಪಲ್ಲ. ಆದರೆ ‘ನನ್ನ ಬಾವಿಯಾಚೆ ಜಗತ್ತೇ ಇಲ್ಲ’ ಎಂದು ಭ್ರಮಿಸುವುದು ಮೂರ್ಖತನ. ಕೂಪಮಂಡೂಕತ್ವದ ದುರಭಿಮಾನ ಇರಬಾರದು, ತೆರೆದ ಮನದ ಸಹಬಾಳ್ವೆಯಿರಬೇಕು. ‘ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ’ (ವಿಶ್ವದ ಎಲ್ಲೆಡೆಗಳಿಂದ ಸುವಿಚಾರಗಳು ನಮ್ಮಲ್ಲಿಗೆ ಬರಲಿ) ಎನ್ನುವುದೇ ಸನಾತನಧರ್ಮದ ಮೂಲಭೂತ ಸಿದ್ಧಾಂತ. ಅವರವರ ಸ್ವಂತಿಕೆ, ಸ್ವರೂಪಗಳನ್ನು ಉಳಿಸಿಕೊಂಡೇ, ಪರಸ್ಪರರಿಗೆ ಪೂರಕವಾಗಿ ಸಹಬಾಳ್ವೆ ನಡೆಸುವುದು ನಮ್ಮ ನೆಲದಲ್ಲಿ ಅನಾದಿಯಿಂದ ನಡೆದುಬಂದ ನೀತಿ. ಹೀಗಾಗಿಯೇ ಇಷ್ಟು ಬಗೆಬಗೆಯ ಕುಲ, ವೃತ್ತಿ, ಮತ, ಪದ್ಧತಿಗಳೂ, ಜೀವನಶೈಲಿಗಳೂ ಉಳಿದಿವೆ ಬೆಳೆದಿವೆ. ಆಚೆಯಿಂದ ಬಂದು ಹಾಳುಗೆಡವಿ ಆಕ್ರಮಿಸಿದ ಪರಕೀಯರನ್ನೂ ಕ್ಷಮಿಸಿ ಜೀರ್ಣಿಸಿಕೊಳ್ಳಲು ಸಾಧ್ಯವಾಗಿದೆ!
ತೆರೆದಂಗಳದ ಸಂತೆಯಲ್ಲಿ ಅವರವರು ತಮ್ಮ ತಮ್ಮ ವ್ಯವಹಾರವೆಸಗಲು ಅನುವು ಮಾಡಿಕೊಡುತ್ತಿದ್ದದ್ದು ಚಾತುರ್ವಣ ಎಂಬ ಸಮೃದ್ಧ ಸಂತೆ. ಆದರೆ ದುರಭಿಮಾನಗ್ರಸ್ತರು ತಮ್ಮ ಕುಲಧರ್ಮ-ವ್ಯವಹಾರಗಳನ್ನು ‘ಜಾತಿ’ಯ ಬಾವಿಗಳನ್ನಾಗಿ ಮಾಡಿಕೊಂಡರು, ಹೊರಜಗತ್ತಿನೊಂದಿಗೆ ಇರಬೇಕಾದ ಸುಂದರ ಬಾಂಧವ್ಯವನ್ನು ಕತ್ತರಿಸಿಕೊಂಡರು, ದುರಭಿಮಾನದ ದುರ್ಗಂಧದಲ್ಲಿ ನಾರುತ್ತ ಬಂದರು. ತಾವೇ ಬೀರುತ್ತಿದ್ದ ದುರ್ವಾಸನೆಗೆ ಚಾತುರ್ವಣ ವ್ಯವಸ್ಥೆ ಕಾರಣವೆಂದುಬಿಟ್ಟರು!

 ಡಾ. ಆರತೀ ವಿ. ಬಿ.

ಕೃಪೆ: ವಿಜಯವಾಣಿ

Leave a Reply

This site uses Akismet to reduce spam. Learn how your comment data is processed.