ಬದುಕಿಗೆ ಭಗವದ್ಗೀತೆ – ಪರಮಾತ್ಮನೇ ಮುಂದಿಟ್ಟ ಎರಡು ಆಯ್ಕೆಗಳು

ಬದುಕಿಗೆ ಭಗವದ್ಗೀತೆ – ಪರಮಾತ್ಮನೇ ಮುಂದಿಟ್ಟ ಎರಡು ಆಯ್ಕೆಗಳು

ಶ್ರೀಕೃಷ್ಣನು ನಿರ್ಲಿಪ್ತಕರ್ಮಯೋಗದ ಪರಿಯನ್ನು ತಿಳಿಸಿದರೂ, ಅರ್ಜುನನ ಗೊಂದಲ ಇನ್ನೂ ಅಳಿದಿಲ್ಲ. ‘ಜ್ಞಾನವೇ ಶ್ರೇಷ್ಠ ಎನ್ನುತ್ತಿದ್ದೀಯೆ. ಆದರೂ ‘‘ಕರ್ಮದಲ್ಲಿ ತೊಡಗು’’ ಎನ್ನುತ್ತಿದ್ದೀಯೆ! ಯಾವುದಾದರೂ ಒಂದನ್ನು ನಿಶ್ಚಯವಾಗಿ ಹೇಳು’ ಎಂದು ಅಳಲುತ್ತಾನೆ. ಶ್ರೀಕೃಷ್ಣನು ಉತ್ತರಿಸುತ್ತಾನೆ:
ಲೋಕೇಸ್ಮಿನ್ ದ್ವಿವಿಧಾ ನಿಷ್ಠಾ ಪುರಾ ಪ್ರೋಕ್ತಾ ಮಯಾನಘ |
ಜ್ಞಾನಯೋಗೇನ ಸಾಂಖ್ಯಾನಾಂ ಕರ್ಮಯೋಗೇನ ಯೋಗಿನಾಮ್|
(ಭ.ಗೀ.: 3.3)
‘ಹೇ ಅನಘನೆ ! (ಪಾಪರಹಿತನೆ) ಜಗತ್ತಿನಲ್ಲಿ ಎರಡು ಬಗೆಯಲ್ಲಿ ನಿಷ್ಠೆಗಳಿವೆ. ಅವನ್ನು ನಾನೇ ಬಹಳ ಹಿಂದೆ ಹೇಳಿದ್ದೇನೆ. ಅವುಗಳಲ್ಲಿ ಜ್ಞಾನಯೋಗವೆಂಬುದರಲ್ಲಿ ಸಾಂಖ್ಯರು ನಿಷ್ಠರಾಗಿರುತ್ತಾರೆ. ಕರ್ಮಯೋಗದಲ್ಲಿ ಯೋಗಿಗಳು ನಿಷ್ಠರಾಗಿರುತ್ತಾರೆ.’
ಇಲ್ಲಿ ‘ಪುರಾ’ ಎಂಬ ಶಬ್ದವು ‘ಬಹಳ ಹಿಂದೆ / ಯುಗಾಂತರಗಳ ಹಿಂದೆ’ ಎಂಬರ್ಥ ಹೊಂದಿದೆ. ದ್ವಾಪರಯುಗದಲ್ಲಿ, ಒಂದಾನೊಂದು ಶ್ರಾವಣಮಾಸದ ಅಷ್ಟಮಿಯಂದು ವಸುದೇವ-ದೇವಕಿಯರಲ್ಲಿ ಜನಿಸಿದಂತಹ ಕೃಷ್ಣನು ‘ಯುಗಾಂತರಗಳ ಹಿಂದೆ’ ಇರಲು ಹೇಗೆ ಸಾಧ್ಯ? ಎಂದು ಬಹಳ ಜನರಿಗೆ ಗೊಂದಲವೇಳುವುದುಂಟು. ಕೃಷ್ಣನು ತಾನು ಕೇವಲ ಒಂದು ‘ವ್ಯಕ್ತಿ’ಯಾಗಿ ಇದನ್ನು ಹೇಳುತ್ತಿಲ್ಲ, ‘ಪರತತ್ವದ ನೆಲೆ’ಯಲ್ಲಿ ನಿಂತು ಹೇಳುತ್ತಿದ್ದಾನೆ.
‘ಜ್ಞಾನ’ವೆಂಬುದು ಸರ್ವರಿಗೂ ಸಮಾನವಾಗಿ ಒದಗಬಲ್ಲ ಸತ್ಯದರ್ಶನ. ಆದರೆ ಅದು ಗ್ರಾಹ್ಯವಾಗುವುದು ಕೇವಲ ಶುದ್ಧಾಂತರ್ಯಕ್ಕೆ, ನಿಮೋಹ ಮತಿಗೆ. ಮೋಹ ಗೆದ್ದು, ಸೂಕ್ಷ್ಮತಮ ಸತ್ಯಗಳನ್ನೂ ತತ್ವಸಿದ್ಧಾಂತಗಳನ್ನೂ ದರ್ಶಿಸುವವರು ‘ದಾರ್ಶನಿಕರು’. ದಾರ್ಶನಿಕರೆಂದರೆ ಸತ್ಯಜ್ಞಾನಗಳನ್ನು ‘ಸೃಷ್ಟಿಸಿ’ದವರಲ್ಲ, ‘ದರ್ಶಿಸಿ’ದವರು. ಅಖಂಡಜ್ಞಾನಧಾರೆಗೆ ‘ಟ್ಝ್ಠ ಜ್ಞಿ/ ್ಚnಛ್ಚಿಠಿ’ ಮಾಡಿಕೊಂಡವರು! ಆ ಜ್ಞಾನಧಾರೆಯೇ ಅನಾದಿಯಿಂದಲೂ ಹರಿದು ಎಲ್ಲರ ಮತಿಮನಗಳಲ್ಲಿ ಹೊಳಹನ್ನು ಉಂಟುಮಾಡುವ ಶಕ್ತಿಯಾಗಿದೆ. ಆ ಜ್ಞಾನಧಾರೆಯಲ್ಲಿ ತಾದಾತ್ಮ್ಯ ಹೊಂದಿ, ತಾನೇ ಅದಾಗಿ, ತಾನೇ ಅದರ ಆವಿರ್ಭಾವವಾಗಿ ನುಡಿಯುತ್ತಿದ್ದಾನೆ ಶ್ರೀಕೃಷ್ಣ. ಅರ್ಜುನನ ಮುಂದೆ ಕಾಣುವ ಕೃಷ್ಣನ ‘ಮಾಂಸಲದೇಹ’ವಾದರೋ, ಅವನೊಳಗಿನ ಜಾಗೃತ-ಪರತತ್ವ-ಚೇತನಕ್ಕೆ ಒಂದು ‘ವಾಹನ’ವಷ್ಟೆ. ‘ದೇಹವೇ ತಾನು’ ಎನ್ನುವ ಭಾವವಿದ್ದಲ್ಲಿ ಕೃಷ್ಣನು ತನ್ನನ್ನು ‘ದೇವಕಿಸುತ’ನೆಂದಷ್ಟೇ ಗಣಿಸುತ್ತಿದ್ದನು. ಆದರೆ ‘ತತ್ವವೇ ತಾನೆಂಬ’ ಅನುಭೂತಿಯ ನೆಲೆಯಲ್ಲಿದ್ದ ಕೃಷ್ಣನು ‘ನಾನು ಯುಗಗಳ ಹಿಂದೆಯೇ ಈ ಜ್ಞಾನವನ್ನು ಬೋಧಿಸಿದ್ದೇನೆ’ ಎಂದು ಘೊಷಿಸುತ್ತಿದ್ದಾನೆ. ಆತ್ಮತತ್ವ-ಜಡತತ್ವಗಳ ಸ್ಪಷ್ಟ ಪರಿಜ್ಞಾನವುಳ್ಳ ದಾರ್ಶನಿಕನಿಗೆ ಮಾತ್ರವೇ ಹೀಗೆ ಹೇಳಲು ಸಾಧ್ಯ. ಯೋಗೇಶ್ವರನಾದ ಕೃಷ್ಣನು ತತ್ವದೆತ್ತರದಲ್ಲಿ ನಿಂತು ಹೀಗೆ ಹೇಳಿರುವುದು ಅವನಿಗೆ ಅನುರೂಪವಾಗಿಯೇ ಇದೆ. ತತ್ವ-ಯೋಗಾದಿಗಳ ಚರ್ಚೆಯ ಸಂದರ್ಭದಲ್ಲಿ ‘ಅಹಂ’ ಎನ್ನುವ ಶಬ್ದವು ‘ವ್ಯಕ್ತಿ’ವಾಚಕವಾಗಿರದೆ, ‘ತತ್ತ್ವ’ವಾಚಕವಾಗಿರುತ್ತದೆ ಎನ್ನುವುದನ್ನೂ ನಾವು ಇಲ್ಲಿ ಗಮನದಲ್ಲಿರಿಸಿಕೊಳ್ಳಬೇಕು. ಶ್ರೀಕೃಷ್ಣನ ಜೀವನಸಂದೇಶಗಳ ನೆಲೆಯನ್ನೂ, ತಾತ್ವಿಕ-ಶಾಸ್ತ್ರೀಯ ಚರ್ಚೆಯ ನಡೆಯನ್ನೂ ಎತ್ತರವನ್ನೂ ಒಂದಿನಿತೂ ಅರಿಯದೆ, ಕೃಷ್ಣನು ಹೀಗೆ ‘ನಾನೇ ಭಗವಂತ’ ಎಂದು ವಾಚ್ಯವಾಗಿ ಘೊಷಿಸುವುದು ‘ಅಹಂಕಾರ ಪ್ರದರ್ಶನ’ ಎಂದು ನಿರ್ಣಯಿಸುವುದು ಮೂರ್ಖತನ.
ಇನ್ನು ಪುರಾಣಾದಿಗಳ ಹಿನ್ನೆಲೆಯಲ್ಲಿ ನೋಡುವುದಾದರೆ, ಅಲ್ಲಿಯೂ ಕೃಷ್ಣನ ಈ ಘೊಷಣೆಗೆ ಸಮರ್ಥನೆ ಸಿಗುತ್ತದೆ. ಕೃಷ್ಣನು ಮಹಾವಿಷ್ಣುವಿನ ಅಷ್ಟಮಾವತಾರ. ಅವನ ಪೂರ್ವಾವತಾರಗಳಾದ ಮತ್ಸ್ಯಾವತಾರದಲ್ಲಿ ಸತ್ಯವ್ರತ ಮಹಾರಾಜನಿಗೂ ಹಾಗೂ ಕಪಿಲಾವತಾರದಲ್ಲಿ ತಾಯಿ ದೇವಹೂತಿಗೂ ಈ ವೇದವೇದಾಂತಗಳ ಜ್ಞಾನಸಾರವನ್ನು ಅರುಹಿದ್ದನು. ಇದಲ್ಲದೆ ಅಸಂಖ್ಯ ದೇವ-ಮುನಿ – ಸಂವಾದೋಪದೇಶಾದಿಗಳಲ್ಲೂ ವೇದಾಗಮತಂತ್ರಾದಿ ಶಾಸ್ತ್ರಪರಂಪರೆಗಳಲ್ಲೂ ಪರತತ್ವದ ಅನುಸಂಧಾನದ ನಾನಾ ವಿಧಾನಗಳನ್ನು ಪರಮಾತ್ಮನೇ ಪ್ರಕಾಶಿಸಿದ್ದಾನೆ. ಹೀಗಾಗಿ ಎಲ್ಲ ಶಾಸ್ತ್ರಗಳ ಪದ್ಧತಿಗಳ ಎಲ್ಲ ಸಾಧನಾನುಭವಗಳಲ್ಲಿ ಪ್ರಕಾಶಿಸುವುದು ಏಕೈಕ ಪರಮಾತ್ಮನ ಜ್ಞಾನವೇ ಆಗಿದೆ. ‘ತಾನು ಆ ಪರಮಾತ್ಮಸ್ವರೂಪಿಯೇ!’ ಎನ್ನುವುದನ್ನು ಭಕ್ತರಿಗಾಗಿ ಮುಕ್ತಕಂಠದಿಂದ ಅರುಹುತ್ತಿದ್ದಾನೆ ಕೃಷ್ಣ!
ಅರ್ಜುನನನ್ನು ಅನಘ (ಪಾಪರಹಿತನೆ) ಎಂದು ಕರೆದಿರುವುದೂ ಧ್ವನಿಪೂರ್ಣ. ‘ತಾನು ಅನಾದಿಯಾದ ಜ್ಞಾನರೂಪಿ ಪರಮಾತ್ಮನು’ ಎನ್ನುವುದನ್ನು ಅರ್ಜುನನಂತಹ ‘ಪಾಪರಹಿತ’ನಿಗೆ ಮಾತ್ರವೇ ತಿಳಿಸುತ್ತಾನೆಯೇ ಹೊರತು ಪಾಪಕಲುಷಿತಚಿತ್ತರಿಗಲ್ಲ. ಏಕೆಂದರೆ ಪಾಪದ ಕೊಳೆ ತುಂಬಿದ ಚಿತ್ತಕ್ಕೆ ಹೇಳಿದರೂ ಅರ್ಥವಾಗದು! ಪರಮಾತ್ಮನ ಚೈತನ್ಯವನ್ನು ಗುರುತಿಸಲೂ ಒಂದು ಮಟ್ಟದ ಸಾಮರ್ಥ್ಯವೂ ಅಪೇಕ್ಷಿತ. ಅದನ್ನೇ ಈ ಕಗ್ಗದ ಪದ್ಯ ಸೂಚಿಸುತ್ತದೆ:
ಪರಿಪರಿಯ ರೂಪದಲಿ ಪರದೈವ ಕಣ್ಮುಂದೆ |
ಚರಿಸುತಿರೆ ನರನದರ ಗುರುತನರಿಯದೆಯೆ ||
ಧರೆಯದದು ತನ್ನಂದದ ಪ್ರಾಣಿಯೆಂದೆಣಿಸಿ |
ತೊರೆಯುವನು ದೊರೆತುದನು – ಮಂಕುತಿಮ್ಮ || 776 ||
ಕೃಷ್ಣನಲ್ಲಿನ ಪರತತ್ವದ ‘ಗುರುತ’ನ್ನರಿಯಬಲ್ಲ ನಿಷ್ಪಾಪಮನಸ್ಸನ್ನು ಪಡೆದಿರುವ ಅರ್ಜುನನಿಗೆ ಕೃಷ್ಣನು ಅರುಹುತ್ತಿದ್ದಾನೆ:
‘ಹೇ ಅನಘನೆ! ಎರಡು ಬಗೆಯ ಸಾಧಾನಾನಿಷ್ಠೆಗಳು ಈ ಜಗತ್ತಿನಲ್ಲಿವೆ. ಅವೆರಡನ್ನೂ ನಾನೇ ಯುಗಾಂತರಗಳ ಹಿಂದೆಯೇ ಹೇಳಿದ್ದೇನೆ. ‘‘ಸಾಂಖ್ಯ’’ರೆಂಬ ಸಾಧನಾ-ಪ್ರಕಾರದವರು ‘‘ಜ್ಞಾನಮಾರ್ಗ’’ದ ಮೂಲಕವೂ, ‘‘ಯೋಗಿ’’ಗಳೆಂಬ ಸಾಧನಾಪ್ರಕಾರದವರು ‘‘ಕರ್ಮಮಾರ್ಗ’’ದಿಂದಲೂ ತತ್ವಾನುಸಂಧಾನ ಮಾಡುತ್ತಾರೆ.’
ಎಲ್ಲಕ್ಕೂ ‘ಏಕಮೂಲಿಕಾ ಪ್ರಯೋಗ’ ಎಂಬ ಶಾಠ್ಯ ಸನಾತನಧರ್ಮದಲ್ಲಿಲ್ಲ. ಸೃಷ್ಟಿಯಲ್ಲಿನ ಎಲ್ಲಕ್ಕೂ ಎಲ್ಲರಿಗೂ ಒಗ್ಗುವ ಒದಗಿಬರುವ ನಾನಾ ಸಾಧನಾವಿಧಾನಗಳ ಆಯ್ಕೆ ಇಲ್ಲಿದೆ. ‘‘ನಾನೇ ಈ ಎರಡು ವಿಧಾನಗಳನ್ನು ಯುಗಾಂತರಗಳ ಹಿಂದೆಯೇ ಹೇಳಿದ್ದೇನೆ’ ಎನ್ನುವ ಮೂಲಕ, ‘ಎಲ್ಲ ಅನುಷ್ಠಾನವಿಧಾನಗಳಿಗೂ ಮೂಲನೂ ಪರಮಾತ್ಮನೇ, ಗಮ್ಯನೂ ಪರಮಾತ್ಮನೇ’ ಎನ್ನುವ ತಥ್ಯವನ್ನೂ ಆಚಾರ್ಯ ಕೃಷ್ಣನು ಧ್ವನಿಸುತ್ತಿದ್ದಾನೆ.

Leave a Reply