ಬದುಕಿಗೆ ಭಗವದ್ಗೀತೆ- ‘ಪ್ರಸಾದ’ವನ್ನು ಪಡೆದು, ಗೆದ್ದುಕೋ!

ಬದುಕಿಗೆ ಭಗವದ್ಗೀತೆ- ‘ಪ್ರಸಾದ’ವನ್ನು ಪಡೆದು, ಗೆದ್ದುಕೋ!

ಜೀವನದ ಗತಿಯಲ್ಲಿ ಸಾಗುವ ಮನುಷ್ಯನು, ತನ್ನ ನಿಜದ ನೆಲೆಯಿಂದ ’ಎಲ್ಲಿ’, ’ಹೇಗೆ’ ಜಾರಲಾರಂಭಿಸುತ್ತಾನೆ ಎನ್ನುವುದನ್ನು ಮಾರ್ಮಿಕವಾಗಿ ಕೃಷ್ಣನು ಮನಗಾಣಿಸುತ್ತಿದ್ದ. ನಿರ್ಲಿಪ್ತಿಯ ಅಂತರವಿಲ್ಲದೇ ಬಾಹ್ಯ ಪ್ರಪಂಚದೊಂದಿಗೆ ’ಸಂಗ’ ಬೆಳೆಸಿಕೊಂಡಾಗ, ಹೇಗೆ ಆಸಂಗದಿಂದಾಗಿ ಕಾಮವೂ, ಅದರ ಹಿಂದೆ-ಹಿಂದೆಯೇ ಕ್ರೋಧ-ಸಮ್ಮೋಹ-ಸ್ಮೃತಿ ನಾಶ ಹಾಗೂ ಬುದ್ಧಿನಾಶಗಳೂ ಉಂಟಾಗಿ ಮನುಷ್ಯನನ್ನು ಅಧೋಗಾಮಿಯಾಗಿಸುತ್ತವೆ ಎನ್ನುವುದನ್ನೂ ಬಿಡಿಸಿ ಹೇಳಿದ. ಹಾಗಾದರೆ ಈ ಪತನದ ಪ್ರಾರಂಭವಿರುವುದೇ ’ಸಂಗ’ದಲ್ಲಿ ಎಂದಾಯಿತು! ಈ ’ಸಂಗ’ವೊಂದಿಲ್ಲದಿದ್ದರೇ ಸಾಕು, ಮನುಷ್ಯನು ಗೆದ್ದುಕೊಳ್ಳಬಲ್ಲ ಎನ್ನುವುದನ್ನು ಹೀಗೆ ಸ್ಪಷ್ಟಪಡಿಸುತ್ತಾನೆ-
ರಾಗ ದ್ವೇಷ ವಿಯುಕ್ತೈಸ್ತು ವಿಷಯಾನಿಂದ್ರಿಯೈಶ್ಚರನ್ಆತ್ಮವಶ್ಯೇರ್ವಿಧೇಯಾತ್ಮಾ ಪ್ರಸಾಧಮಧಿಗಚ್ಛತಿ
ಇಂದ್ರಿಯಗಳನ್ನು ತನ್ನ ಹತೋಟಿಯಲ್ಲಿಟ್ಟುಕೊಂಡಿದ್ದು, ರಾಗದ್ವೇಷಗಳಿಂದ ಮುಕ್ತಗೊಂಡಿದ್ದು, ಯಾವ ಮನುಷ್ಯನು ವಿಷಯ ಪ್ರಪಂಚದಲ್ಲಿ ಚರಿಸುತ್ತಾನೋ, ಆತನು ಪ್ರಸಾದವನ್ನು ಪಡೆಯುತ್ತಾನೆ. (ಬಗ್ಗಡವಾಗದೇ ತಿಳಿಯಾಗಿರುವ ಮನಸ್ಸಿನ ಸ್ಥಿತಿಯನ್ನು ’ಪ್ರಸಾದ’ಗುಣ ಎನ್ನಲಾಗುತ್ತದೆ)
ನಾವು ಈ ವಿಷಯ ಪ್ರಪಂಚದಲ್ಲಿರುವುದು ಅನಿವಾರ್ಯ. ಹಾಗಾಗಿ ಅದನ್ನು ’ಬೈಯು’ವುದರಲ್ಲಿ ಯಾವ ’ಪರಿಹಾರ’ವೂ ಸಿಗದು, ಪರಿಹಾರ ಬೇಕೆನಿಸಿದವರು ಈ ವಿಷಯ-ಪ್ರಪಂಚದಲ್ಲಿರುವಾಗಲೇ, ತಮ್ಮ ಇಂದ್ರಿಯಗಳನ್ನು ಆತ್ಮವಶವಾಗಿಸಿಕೊಳ್ಳಬೇಕು, ರಾಗ-ದ್ವೇಷ-ಮುಕ್ತವಾಗಿಸಿಕೊಳ್ಳಬೇಕು. ತನ್ನೊಳಗಿನ ದೋಷವನ್ನು ಪರಿಹರಿಸಿಕೊಳ್ಳದೇ ಜಗತ್ತನ್ನು ಹಳಿಯುವುದು ಅಪ್ರಾಮಾಣಿಕನ ರೀತಿ. ತಮ್ಮ ಕಾಮವನ್ನು ಹತ್ತಿಕ್ಕಲಾಗದ ಪುರುಷರು ತಮ್ಮ ಅಧಃಪತನಕ್ಕೆ ಕಾರಣ ’ಹೆಣ್ಣೇ’ ಎಂದು ಆರೋಪಿಸಿಬಿಡುವುದುಂಟು! ’ಕಾಮಿನಿ! ಮೋಹಿನಿ! ಮಾಯೆ!’ ಎಂದೆಲ್ಲ ಹೆಣ್ಣನ್ನು ಜರಿದುಬಿಡುತ್ತಾರೆ! ಆದರೆ ಅವಳನ್ನು ಮನಸ್ಸಿಂದ ತೆಗೆದು ಪ್ರಸನ್ನರಾಗಿರಬಲ್ಲರೆ? ಇಲ್ಲ! ಇಂತಹ ಅಪ್ರಾಮಾಣಿಕತೆಯಿಂದ ಲಾಭವಿಲ್ಲ. ತನ್ನೊಳಗೆ ಮೊದಲು ಆತ್ಮನಿರೀಕ್ಷಣ ಆತ್ಮಶುದ್ಧೀಕರಣಗಳನ್ನು ಮಾಡಬೇಕೆನ್ನುವುದು ತಾತ್ಪರ್ಯ. “ಹೆಣ್ಣು ಮಾಯೆಯೆಂಬರು I ಹೆಣ್ಣು ಮಾಯೆಯಲ್ಲ II ಹೊನ್ನು ಮಾಯೆ ಎಂಬರು I ಹೊನ್ನು ಮಾಯೆಯಲ್ಲ II ಮಣ್ಣುಮಾಯೆಯೆಂಬರು I ಮಣ್ಣು ಮಾಯೆಯಲ್ಲ II ಮನದ ಮುಂದಣ ಆಸೆಯೇ ಮಾಯೆ ಕಾಣಾ II ಗುಹೇಶ್ವರ!” ಎಂಬ ಅಲ್ಲಮಪ್ರಭುಗಳ ವಚನವೂ ಇದನ್ನೇ ಪುಷ್ಟೀಕರಿಸುತ್ತದೆ!
ಹರಿಪ್ರಸನ್ನನೆಂಬ (ಮುಂದೆ ಸ್ವಾಮಿ ವಿಜ್ಞಾನಾನಂದ ಪುರಿ) ಉತ್ತಮ ಸಾಧಕನು ಅಖಂಡ-ಬ್ರಹ್ಮಚರ್ಯವನ್ನು ಪಾಲಿಸುತ್ತಿದ್ದ. ಸ್ತ್ರೀಸಂಗವನ್ನೂ ಸರ್ವಥಾ ಬಿಟ್ಟಿದ್ದ. ಒಮ್ಮೆ, ಹೆಣ್ಣು ಹಸುಳೆಯೊಂದು ಅಂಬೆಗಾಲು ಹಾಕುತ್ತ ಅವನ ಕಡೆಗೆ ಬಂದಾಗ ಅಸಹನೆ-ಭಯಗಳಿಂದ ದೂರಸರಿದುಬಿಟ್ಟ. ಇದನ್ನು ಗಮನಿಸಿದ ಅವನ ಗುರು ಶ್ರೀರಾಮಕೃಷ್ಣರು ಹೇಳುತ್ತಾರೆ “ಹುಷಾರ್! ಹೀಗೆ ಮಾಡಿದರೇನೇ ಬಂಧನಕ್ಕೆ ಬೀಳುವುದು! ಹೆಣ್ಣನ್ನು ’ಮಾಯೆ’ ಎಂದು ಹಾಗೆ ತಿರಸ್ಕರಿಸಬಾರದು, ’ಮಾತೆ’ ಎಂದು ಪುರಸ್ಕರಿಸಬೇಕು!” ಎಂದು!
ಹೀಗೆ ಹೆಣ್ಣು-ಹಣ-ಆಸ್ತಿ-ಅಧಿಕಾರಗಳ ವಿಷಯಗಳಲ್ಲೂ ಪರದೂಷಣಕ್ಕಿಳಿಯದೇ, ‘ಆತ್ಮನಿರೀಕ್ಷಣೆ’ ಮಾಡುವುದು ಪ್ರಾಮಾಣಿಕ ರೀತಿ. ಹೊರಗಡೆಯ ಸಂದರ್ಭಗಳೇನೇ ಇರಲಿ, ಅಂತರಂಗದಲ್ಲಿ ಅದರ ಬಗ್ಗೆ ನಿರ್ಲಿಪ್ತಿಯಿದ್ದರೆ ಮಾತ್ರವೇ ಪ್ರಸಾದದ ಸಿದ್ಧಿ. ಕಾಮಮೋಹಲಿಪ್ತಾಂತರಂಗಕ್ಕೆ ಮನಃಪ್ರಸಾದವಿರದು! ಇಪ್ಪತ್ತು-ಮೂವತ್ತು ವರ್ಷಗಳಾದರೂ ಕಹಿನೆನಪುಗಳಿಂದ ಹೊರಬಾರದ ’ಆಜನ್ಮದುಃಖಿ’ಗಳಿಗೂ ಮನಃಪ್ರಸಾದವಿರದು. “ನಾನಿಲ್ಲದೇ ಏನೇನೂ ನಡೆಯದು!” ಎಂಬ ಪಾರುಪತ್ಯ-ಸ್ವಭಾವದವರಿಗೂ ’ಪ್ರಸಾದ’ ಸಿಗದು! “ಇಷ್ಟು—ಇನ್ನೊಂದಿಷ್ಟು— ಮತ್ತೊಂದಿಷ್ಟು—!” ಎಂದು ಹಣ-ಆಸ್ತಿ-ಅಧಿಕಾರಗಳ ಹಿಂದೆ ಓಡುವವರಿಗೂ ಪ್ರಸಾದ ದಕ್ಕದು. ಹೊನ್ನು-ಹೆಣ್ಣು-ಮಣ್ಣುಗಳ ಮಧ್ಯದಲ್ಲೇ ಇದ್ದರೂ, ಅಂತರಂಗದಲ್ಲಿ ರಾಗದ್ವೇಷಗಳನ್ನಿಟ್ಟುಕೊಳ್ಳದೇ, ಇಂದ್ರಿಯಗಳನ್ನು ಹೇಗೆಂದರೆ ಹಾಗೆ ಹರಿಯಬಿಡದೆ ಇರಬಲ್ಲ ಸ್ಥಿತಪ್ರಜ್ಞ ವ್ಯಕ್ತಿಗೆ ಮಾತ್ರವೇ ’ಪ್ರಸಾದ’ ಸಿಗುತ್ತದೆ. ಎಲ್ಲ ಜಪ-ತಪ-ಪೂಜೆ-ಉತ್ಸವಾದಿಗಳ ಸಾರ್ಥಕ್ಯವಿರುವುದೂ ಈ ’ಪ್ರಸಾದಗುಣ’ದಲ್ಲಿ ಎನ್ನುವ ಸಂಕೇತವಾಗಿಯೇ ಇರಬೇಕು-ದೇವಾಲಯ-ಪೂಜೆ-ಸಮಾರಂಭಗಳಲ್ಲಿ ಕೊನೆಯಲ್ಲಿ ’ಪ್ರಸಾದ’ವನ್ನು ಹಂಚಲಾಗುವುದು!
ಪ್ರಸಾದೇ ಸರ್ವದುಃಖಾನಾಂ ಹಾನಿರಸ್ಯೋಪಜಾಯತೇ I ಪ್ರಸನ್ನಚೇತಸೋ ಹ್ಯಾಶು ಬುದ್ಧಿಃ ಪರ್ಯವತಿಷ್ಠತೇ II
ಪ್ರಸಾದದಲ್ಲೇ ಎಲ್ಲ ದುಃಖಗಳು ಕೊನೆಗೊಳ್ಳುವುದು. ಪ್ರಸನ್ನಚಿತ್ತದವನ ಬುದ್ಧಿಯು ಬೇಗನೆ (ಪರತತ್ವದಲ್ಲಿ) ನೆಲೆಗೊಳ್ಳುತ್ತದೆ.
ಈ ಜೀವನದಲ್ಲಿ ದುಃಖವು ಸುಖದೊಂದಿಗೆ ಬರುವ ಉಚಿತ ಬಳುವಳಿ! (Buy one-Get one Free ಎಂಬಂತೆ!) ಹಾಗಾಗಿ ಸುಮ್ಮನೆ ಚಡಪಡಿಸುವ ಬದಲು, ಒಪ್ಪಿಕೊಂಡು ಶಾಂತವಾಗುವುದು ಜಾಣತನ. ಆದದ್ದನ್ನು ಮರೆಯುತ್ತ, ಆಗಬೇಕಾದ್ದರ ಬಗ್ಗೆ ಆತಂಕವಿಟ್ಟುಕೊಳ್ಳದೇ, ಇದ್ದದ್ದನ್ನು ತೃಪ್ತಿಯಿಂದ ಆಸ್ವಾದಿಸುತ್ತ ಬದುಕುವುದನ್ನು ಒತ್ತಿಹೇಳುತ್ತಿದ್ದಾನೆ ಕೃಷ್ಣ. ಏಕೆಂದರೆ, ಮನಃ ಪ್ರಸಾದವಿಲ್ಲದವನು ಅದೆಷ್ಟೇ ಪೂಜೆ-ದಾನಗಳನ್ನು ಮಾಡಿದರೂ, ತಾತ್ಕಾಲಿಕ ಸುಖ-ಸಂತೋಷಗಳನ್ನಷ್ಟೇ ಪಡೆಯುತ್ತಾನೆ. ಅದನ್ನು ಮುಗಿಸಿ ಈ ಕಡೆ ಬರುತ್ತಲೇ “ಅಯ್ಯೋ! ನನ್ನ ಜೀವನದಲ್ಲೇಕೆ ಹೀಗೆಲ್ಲ ಆಯಿತು!” ಎಂದು ಹಳೆಯ ಗೋಳನ್ನೇ ಶುರು ಮಾಡುತ್ತಾನೆ!
“ಎಮ್ಮೆಯು ಕೊಳದಲ್ಲಿ ನೆತ್ತಿಯವರೆಗೂ ಮುಳುಗಿ ರಮಿಸುತ್ತದೆ. ಆಗ ಅದರ ಮೈಮೇಲಿನ ನೊಣಗಳೆಲ್ಲ ಮೇಲೆದ್ದು ನೀರಮೇಲೆ ಭ್ರಮಿಸುತ್ತಿರುತ್ತವೆ! ಎಮ್ಮೆಯು ಮಿಂದು ಆಚೆ ಬರುತ್ತಲೇ ನೊಣಗಳು ಮತ್ತೆ ಮೈಮೇಲೆ ಕೂತುಬಿಡುತ್ತವೆ! ಅಂತೆಯೇ ಧಾರ್ಮಿಕ-ಕರ್ಮಗಳಲ್ಲಿ ತಾತ್ಕಾಲಿಕ ಶುದ್ಧಿಯ ಭಾವವನ್ನು ಪಡೆದರೂ, ಅದು ಮುಗಿಯುತ್ತಲೇ (ಪ್ರಸಾದ ಗುಣವಿಲ್ಲದ) ಮನುಷ್ಯನ ಮನಸ್ಸಿನ ಹಳೆಯ ವಾಸನೆಗಳು ಮತ್ತೆ ಮರುಕಳಿಸುತ್ತವೆ” ಎಂದು ಮನೋಜ್ಞವಾಗಿ ನಿದರ್ಶಿಸುತ್ತಾರೆ ಶ್ರೀರಾಮಕೃಷ್ಣರು! ತಾತ್ಕಾಲಿಕ ಪರಿಹಾರಗಳನ್ನಲ್ಲ, ಶಾಶ್ವತಪರಿಹಾರವನ್ನು ಪಡೆಯುವುದು ಜಾಣ್ಮೆ! ಅದು ಪ್ರಸಾದಗುಣದ ಸಿದ್ಧಿಯಿಂದ ಮಾತ್ರವೇ ಸಾಧ್ಯ ಎನ್ನುವುದು ಗುರುಕೃಷ್ಣನ ಸ್ಪಷ್ಟ ದಿಗ್ದರ್ಶನ.
ಡಾ. ಆರತಿ ವಿ ಬಿ
ಕೃಪೆ : ವಿಜಯವಾಣಿ

Leave a Reply