ವರ್ಣವ್ಯವಸ್ಥೆಯಲ್ಲಿ ದುರಭಿಮಾನದ ಅಪಸ್ವರ

ವರ್ಣವ್ಯವಸ್ಥೆಯಲ್ಲಿ ದುರಭಿಮಾನದ ಅಪಸ್ವರ

ಚಾತುರ್ವರ್ಣ್ಯ ವ್ಯವಸ್ಥೆಯ ಬಗ್ಗೆ ರ್ಚಚಿಸುತ್ತಿದ್ದೆವು.
‘ನಮ್ಮದೇ ಸರ್ವಸ್ವ’ ಎನ್ನುವ ಕೂಪಮಂಡೂಕಬುದ್ಧಿಯವರು, ಯಾರನ್ನೂ ತಮ್ಮ ಬಾವಿಯೊಳಗೆ ಬರಗೊಡದೆ ಉಳಿಯುತ್ತಾರೆ. ಇವರಲ್ಲಿ ಎರಡು ಬಗೆ: ಕೆಲವರು ತಮ್ಮ ಕುಲ-ವೃತ್ತಿಗಳಲ್ಲೇ ಆಶ್ರಯವನ್ನೂ ಸುರಕ್ಷೆಯನ್ನೂ ತೃಪ್ತಿಯನ್ನೂ ಕೊಂಡುಕೊಳ್ಳುತ್ತಾರೆ. ತಮ್ಮ ಸಾಂಸ್ಕೃತಿಕವೈಶಿಷ್ಟ್ಯನ್ನು ಉಳಿಸಿ ಬೆಳೆಸಿಕೊಳ್ಳುತ್ತಾರೆ. ಭಾರತದ ಅದೆಷ್ಟೋ ಲಲಿತಕಲೆಗಳೂ ಕುಶಲಕಲೆಗಳೂ ಕೃಷಿ, ಆಹಾರ, ವೇಷಭೂಷಗಳೂ, ಹಬ್ಬಹರಿದಿನಗಳೂ, ಭಾಷೆ-ಸಾಹಿತ್ಯಾದಿ ಪ್ರಕಾರಗಳು ಉಳಿದಿರುವುದು ಇವರುಗಳಿಂದಾಗಿಯೇ. ಹೊರಜಗತ್ತಿನ ಜಾಹೀರಾತು, ಹಣ-ಪದವಿಗಳ ಆಕರ್ಷಣೆಗೆ ಮನಸೋಲದೆ, ಸರ್ಕಾರದ ನೆರವಿಗೂ ಕಾಯದೆ, ಮೂದಲಿಸುವವರಿಗೂ ಮನಗೊಡದೆ, ಕಷ್ಟವಾದರೂ, ಅನನುಕೂಲವಾದರೂ, ಧರ್ಮರಕ್ಷಣೆಯ ಉದ್ದೇಶದಿಂದ ಕುಲವಿದ್ಯೆಗಳನ್ನು ಉಳಿಸಿತಂದ ಎಲ್ಲ ವರ್ಣದ ಇಂತಹ ನಿಷ್ಠಾವಂತ ವ್ಯಕ್ತಿಗಳು ಶ್ಲಾಘನಾರ್ಹರೇ ಸರಿ! ಆದರೆ, ಮತ್ತೆ ಕೆಲವರಿರುತ್ತಾರೆ. ಅವರಿಗೆ ‘ಕುಲನಿಷ್ಠೆ’ಗಿಂತ ಕುಲದ ದುರಭಿಮಾನ ಹೆಚ್ಚು! ಅಂತಹವರಿಂದಲೇ ಎಡವಟ್ಟಾಗುವುದು. ಇಂತಹವರ ವಿಷಯದಲ್ಲಿ ಕುಲವರ್ಣವು ‘ಜಾತಿಭೇದ’ದ ಗೋಡೆಯಾಗುತ್ತ ಬಂತು! ಇವರಿಂದಾಗಿ ಕುಲಕುಲಗಳಲ್ಲಿ ಅಂತರವು ಹೆಚ್ಚಿತು, ಸ್ನೇಹವು ಕುಗ್ಗಿತು. ‘ಯಾರು ಮೇಲು? ಯಾರು ಕೀಳು?’ ಎಂದು ಪ್ರತಿಷ್ಠಾಪಿಸುವ ಹುಚ್ಚಿನಲ್ಲಿ ಡಂಬಾಚಾರವೂ ತರ್ಕಶಕ್ತಿಯನ್ನೂ ಹಣವನ್ನೂ ಅಧಿಕಾರವನ್ನೂ ವ್ಯಯಿಸುವುದು ಮೊದಲಾಯಿತು. ‘ತಾನು ಸರ್ವಥಾ ಮೇಲು’ ಎಂದು ಬಿಂಬಿಸಿಕೊಳ್ಳುವ ಭರದಲ್ಲಿ ಕುಲಾಚಾರವನ್ನೂ ಆತ್ಮಾವಲೋಕನವನ್ನೂ ಸಾಮಾಜಿಕನ್ಯಾಯದ ಪ್ರಜ್ಞೆಯನ್ನೂ ಬಲಿಗೊಟ್ಟ ಉದ್ಧಟರಿವರು! ಮತ್ತೆ ಕೆಲವರು, ತಮ್ಮನ್ನೂ ತಮ್ಮ ವೃತ್ತಿಯನ್ನೂ ‘ಕೀಳು’ ಎಂದು ನಂಬುವುದರ ಮೂಲಕ, ಈ ಭೇದಭಾವಕ್ಕೆ ಪುಷ್ಟಿಯಿತ್ತಿದ್ದೂ ದುರ್ದೈವ! ಕೀಳರಿಮೆಯಿಂದ ಕುಸಿದವರು, ಅನ್ನವಿತ್ತ ಕಾಯಕವನ್ನೇ ಹಳಿದರು, ಪಾರಂಪರಿಕ ವಿದ್ಯೆಗಳನ್ನು ಕೈಬಿಟ್ಟರು, ‘ಉದ್ಧಾರ’ವಾಗಲು ಅನ್ಯರ ಮುಂದೆ ಕೈಚಾಚಿದರು! ಅಂತೂ ಪ್ರಾಚೀನ ಹಾಗೂ ಮಧ್ಯಯುಗಗಳಲ್ಲಿ ಅರ್ಥಪೂರ್ಣವಾಗಿದ್ದ ಚಾತುರ್ವಣರ್Âವ್ಯವಸ್ಥೆ, ಅರ್ವಾಚೀನ ಇತಿಹಾಸದಲ್ಲಿ ಮೇಲು-ಕೀಳೆಂಬ ಜಾತಿಭೇದದಲ್ಲಿ ಸಿಲುಕಿತು!
ಮತ್ತೊಂದು ಬಗೆಯ ದುರಭಿಮಾನವಿದೆ – ಅದು ಅಹಂಕಾರ ಮಮಕಾರಗಳ ಗೋಡೆಗಳನ್ನು ಕಟ್ಟಿ, ಅವುಗಳಾಚೆ ಇರುವ ಎಲ್ಲವನ್ನೂ ಎಲ್ಲರನ್ನೂ ತಿರಸ್ಕಾರದಿಂದಲೂ, ಅಸಹ್ಯದಿಂದಲೂ, ದ್ವೇಷದಿಂದಲೂ ಕಾಣುವಂತೆ ಮಾಡಿಬಿಡುತ್ತದೆ! ಸ್ವಮತದ ಸತ್ಯಸಾಕ್ಷಾತ್ಕಾರಕ್ಕಾಗಿ ಯತ್ನಿಸುವುದನ್ನು ಮರೆತೇಬಿಟ್ಟು ಪರಮತ ಖಂಡನೆಯ ಗೀಳಿಗಿಳಿಯುತ್ತಾರೆ! ತನ್ನ ಮೇಲ್ಮೆಯನ್ನು ಸ್ಥಾಪಿಸಲೋಸುಗವಾಗಿ ಪರರ ಹುಟ್ಟಲ್ಲೂ, ಮತ, ಸಿದ್ಧಾಂತ, ರೀತಿ-ನೀತಿಗಳಲ್ಲೂ ದೋಷಗಳನ್ನೇ ಹುಡುಕಿ ಆಡಿಕೊಳ್ಳುತ್ತಾರೆ! ತನ್ನನ್ನು ‘ಮೇಲೆಂ’ದು ಪ್ರತಿಷ್ಠಾಪಿಸಲು ತನುಮನಧನಗಳನ್ನೂ ತರ್ಕವನ್ನೂ ಡಾಂಬಿಕತೆಯನ್ನೂ, ಕೊನೆಗೆ ಸುಳ್ಳು ಮೋಸಗಳನ್ನೂ ಹಿಡಿಯುತ್ತಾರೆ! ತರ್ಕದಿಂದ ಸೈದ್ಧಾಂತಿಕವಾಗಿ ಸೋಲಿಸಲಾಗದೆ ಹೋದಾಗ, ಇವರು ಪರರ ವೈಯಕ್ತಿಕ ದೂಷಣೆ ಹಾಗೂ ಚಾರಿತ್ರ್ಯಧೆಗೂ ಮೊದಲಾಗುವುದುಂಟು! ತಮ್ಮ ಪಾಡಿಗೆ ತಾವಿರುವ ಎಲ್ಲ ವರ್ಣದವರನ್ನೂ ಅವರವರ ಮತದ ‘ಸಮರ್ಥನೆ’ಗೆ ನಿಲ್ಲಲೇಬೇಕಾದ ಅನಿವಾರ್ಯತೆಗೂ, ಪರಮತ-ಖಂಡನೆಯ ಕೆಸರೆರಚಾಟಕ್ಕೂ ಇಳಿಯುವಂತೆ ಪ್ರಚೋದಿಸುವವರು ಇಂತಹ ತಿಳಿಗೇಡಿಗಳೇ! ಹೀಗೆ, ಇವರ ‘ಆಚಾರವಿಲ್ಲದ ನಾಲಗೆ’ಯೇ ಜಾತಿಕಲಹಕ್ಕೆ ನಾಂದಿ ಹಾಡಿ, ಪ್ರಸನ್ನ ಮನಸ್ಸುಗಳನ್ನು ಪ್ರಕ್ಷುಬ್ಧವಾಗಿಸಿಬಿಡುತ್ತದೆ! ಈ ಮನಸ್ಸುಗಳನ್ನು ಒಡೆಯುವ ದುರ್ನೀತಿಯನ್ನು ಮತಗಳಿಗಾಗಿ ಬಳಸುವ ದುಷ್ಟ ರಾಜಕಾರಣಿಗಳು. ಸಮಾಜವನ್ನು ತಮ್ಮ ಸ್ವಾರ್ಥಕ್ಕಾಗಿ ಒಡೆದು, ಏನೋ ಹೇಳಿಕೆಯಿತ್ತು ಜಾರಿಕೊಳ್ಳುವುದನ್ನು ಮರೆಯುವುದಿಲ್ಲ!
ಆದರೆ ಕಾರ್ಯ-ಕಾರಣಗಳನ್ನು ಸಮಷ್ಟಿಯಾಗಿ ಅರ್ಥ ಮಾಡಿಕೊಳ್ಳಲಾಗದವರು ‘ಎಲ್ಲ ಸಮಸ್ಯೆಗೂ ವರ್ಣವ್ಯವಸ್ಥೆಯೇ ಕಾರಣ! ಧರ್ಮವೇ ಕಾರಣ!’ ಎಂದು ಕಣ್ಮುಚ್ಚಿ ತೀರ್ಪನ್ನಿತ್ತು ಚಾತುರ್ವರ್ಣ್ಯ ಪರಿಕಲ್ಪನೆಗೆ ಅನ್ಯಾಯವೆಸಗುತ್ತಾರೆ.

ಡಾ. ಆರತೀ ವಿ. ಬಿ.
ಕೃಪೆ: ವಿಜಯವಾಣಿ

Leave a Reply