ವೈಚಾರಿಕ ಪಾರತಂತ್ರ್ಯ ಮತ್ತು ವರ್ಣವ್ಯವಸ್ಥೆಯ ಅಪಾರ್ಥ

ವೈಚಾರಿಕ ಪಾರತಂತ್ರ್ಯ ಮತ್ತು ವರ್ಣವ್ಯವಸ್ಥೆಯ ಅಪಾರ್ಥ

‘ಭಾರತೀಯರನ್ನು ಸ್ವಾವಲಂಬನದಿಂದಲೂ ಸ್ವದೇಶಪರಂಪರೆಗಳಿಂದಲೂ ದೂರಗೈದು ಕೈವಶವಾಗಿಸಿಕೊಳ್ಳಲು ಬ್ರಿಟಿಷರು ಹೇಗೆ ಹಲವು ಕಾನೂನು-ಕುತಂತ್ರಗಳನ್ನು ಹೆಣೆದರು; ತಾವು ಕಲ್ಪಿಸುವ ಶಿಕ್ಷಣ, ಉದ್ಯೋಗ, ಶಾಸನಗಳ ವ್ಯವಸ್ಥೆಯೊಳಕ್ಕೇ ಎಲ್ಲರೂ ಬಂದು ಬೀಳುವಂತೆ ಬಲೆ ಬೀಸಿದರು’ ಎನ್ನುವುದನ್ನು ರ್ಚಚಿಸುತ್ತಿದ್ದೆವು.

ಕುಲವೃತ್ತಿಗಳನ್ನು ಹಿಡಿದವರಿಗೆ ಬ್ರಿಟಿಷರ ಅನ್ಯಾಯವನ್ನು ಎದುರಿಸುವುದೂ ಕಷ್ಟವಾಗುತ್ತಿತ್ತು- ನ್ಯಾಯವಿಚಾರಣೆಯು ಅರ್ಥವೇ ಆಗದ ಆಂಗ್ಲಭಾಷೆಯಲ್ಲೂ, ಆಂಗ್ಲ ಶಿಷ್ಟಾಚಾರಗಳಲ್ಲೂ ನಡೆಯುತ್ತಿದ್ದರಿಂದ, ಭಾರತೀಯರು ಆಂಗ್ಲವಕೀಲರನ್ನೇ ಆಶ್ರಯಿಸಬೇಕಿತ್ತು. ಬ್ರಿಟಿಷರ ನವನವೀನ ಕಾನೂನುಗಳೂ, ದಾರಿ ತಪ್ಪಿಸುವ ಸಮಜಾಯಿಷಿಗಳೂ ಹಾಗೂ ಪಕ್ಷಪಾತಿ ಆಂಗ್ಲನ್ಯಾಯಾಧೀಶರೂ ಇವರ ಬಾಯಿಮುಚ್ಚಿಸಿಬಿಡುತ್ತಿದ್ದರು. ಬ್ರಿಟಿಷ್ ಕೋರ್ಟ್​ಗಳಲ್ಲಿ ಭಾರತೀಯ ಪಂಚಾಯತಿ ನಿಯಮಗಳಿಗೂ, ವ್ಯಾಪಾರವಿಧಾನಗಳಿಗೂ ಬೆಲೆಯೇ ಇರಲಿಲ್ಲ! ಇರುವ ವೃತ್ತಿ, ಆಸ್ತಿ, ಭೂಮಿಗಳನ್ನೇ ಕಳೆದುಕೊಳ್ಳುವ ಭಯದಲ್ಲಿದ್ದ ಅಸಹಾಯಕರು ಈ ಕೋರ್ಟಿನ ಹೋರಾಟಕ್ಕೆಲ್ಲ ಹಣವನ್ನೊದಗಿಸುವುದು ಅಸಾಧ್ಯವಾಗುತ್ತ ಬಂತು! ಧನಿಕರ ಮನೆಯ ಯುವಕರು, ಬ್ರಿಟಿಷರ ಕಾಲೇಜುಗಳಲ್ಲಿ ಓದಿ ಬೆಳೆದು ತಮ್ಮ ಆಂಗ್ಲವ್ಯಾಸಂಗ, ಡಿಗ್ರಿಗಳನ್ನು ಬ್ರಿಟಿಷರಿತ್ತ ಉದ್ಯೋಗಗಳನ್ನು ಗಿಟ್ಟಿಸಲೆಂದು ಬಳಸಿದರೇ ಹೊರತು ದೇಶಹಿತಕ್ಕಾಗಿ ಬಳಸುವ ಧೈರ್ಯವನ್ನಾಗಲಿ ಆಸಕ್ತಿಯನ್ನಾಗಲಿ ಹೊಂದಲಿಲ್ಲ.

ಬ್ರಿಟಿಷರ ಕ್ರೂರ ಆರ್ಥಿಕನೀತಿಗಳ ಕಾರಣದಿಂದಾಗಿ, ಜನಸಾಮಾನ್ಯರೂ ಸಮೃದ್ಧ ಕುಲಕಸುಬುಗಳನ್ನು ದಿನೇದಿನೆ ಕೈಬಿಡುತ್ತ ಬರಬೇಕಾಯಿತು; ಆಂಗ್ಲರು ಕಲ್ಪಿಸುವ ಶಿಕ್ಷಣ ಹಾಗೂ ಉದ್ಯೋಗಗಳನ್ನೇ ಮೊರೆಹೋಗುವಂತಾಯಿತು. ಶಾಲಾಶಿಕ್ಷಣದಲ್ಲಿ ಮೊದಮೊದಲು ದೇಶಭಾಷೆ, ದೇಶಿ ಉಡುಪುಗಳಿಗೆ ಅನುಮತಿಯಿತ್ತ ಬ್ರಿಟಿಷರು, ಬರಬರುತ್ತ ಆಂಗ್ಲಶೈಲಿಯ ಸಮವಸ್ತ್ರ ಹಾಗೂ ಆಂಗ್ಲಭಾಷೆಯನ್ನೇ ಕಡ್ಡಾಯಗೊಳಿಸಿದರು! ಪಠ್ಯದಲ್ಲಿ, ನೆಪಮಾತ್ರಕ್ಕಾಗಿ ದೇಶಭಾಷೆಗಳ ಅವಲೋಕನ ಮಾಡಿಸಿ, ಬೇರೆಲ್ಲವನ್ನೂ ಪಾಶ್ಚಾತ್ಯಪಠ್ಯಗಳ ಮೂಲಕವೇ ಓದುವಂತೆ ಮಾಡಿಸಿದರು. ಶಾಲಾಕಾಲೇಜು ವ್ಯಾಸಂಗದುದ್ದಕ್ಕೂ, ಅವರ ಪಠ್ಯಗಳಲ್ಲಿ ಭಾರತದ ಯಾವುದೇ ಭಾಷೆಯನ್ನಾಗಲೀ, ಕಲೆಸಾಹಿತ್ಯವನ್ನಾಗಲಿ, ಗುಣಮಟ್ಟದ ವೃತ್ತಿಪರ ತರಬೇತಿಯನ್ನಾಗಲಿ ನೀಡದಂತೆಯೂ ಎಚ್ಚರ ವಹಿಸಿದರು! ಕುಲಕಸುಬುಗಳನ್ನೂ ‘ಮೇಲುಕೀಳು ಜಾತಿಗಳ’ ಲೆಕ್ಕದಿಂದಲೇ ಅಳೆದು ನೋಡುವ ಆಂಗ್ಲ ‘ಕನ್ನಡಕ’ವನ್ನೂ ತೊಡಿಸಿದರು. ‘ಭಾರತೀಯಮೂಲದ ವಿದ್ಯೆಗಳನ್ನು ಕಲಿಯುವುದಿದ್ದರೆ ಶಾಲೆಯಾಚೆ ಹವ್ಯಾಸವಾಗಿ ಕಲಿಯಬಹುದೇ ಹೊರತು, ಗಂಭೀರ ವ್ಯಾಸಂಗವಾಗಿ ಅಲ್ಲ’ ಎಂಬಂಥ ಸ್ಥಿತಿಯನ್ನು ತಂದಿಟ್ಟರು. ಇಂಥ ವ್ಯವಸ್ಥೆಯಲ್ಲಿ ಪೀಳಿಗೆಯಿಂದ ಪೀಳಿಗೆಗೆ ನಮ್ಮಲ್ಲಿ ಪರಕೀಯಾನುಕರಣೆ ಹಾಗೂ ಕೀಳರಿಮೆಗಳು ಹೆಚ್ಚಿದವು! ಲೆಕ್ಕವೇ ಕಟ್ಟಲಾಗದಷ್ಟು ಅಮೂಲ್ಯ ಸಂಪತ್ತನ್ನೂ ಭಾರತದಿಂದ ಕೊಳ್ಳೆ ಹೊಡೆದವರನ್ನೂ ‘ಶ್ರೇಷ್ಠರು! ಮುಂದುವರಿದವರು!’ ಎಂದು ಸ್ತುತಿಸುವ ಮನೋದಾಸ್ಯವೂ ಹೆಚ್ಚಿತು!

ಆಂಗ್ಲ ಐಷಾರಾಮೀ ಪಂಡಿತಂಮನ್ಯರು, ತಾವೇ ತಯಾರಿಸಿಕೊಂಡ ಶಬ್ದಕೋಶಗಳನ್ನು ಬಳಸಿ, ನಮ್ಮ ವೇದಪುರಾಣೇತಿಹಾಸಕಾವ್ಯಾದಿಗಳ ಅನಂತವಾಙ್ಮಯವನ್ನು ಅಲ್ಲಿಲ್ಲಿ ಪುಟ ತಿರುವಿ ನೋಡಿ, ಮನಬಂದಂತೆ ‘ವಿಶ್ಲೇಷಣೆ’ಗೈದು ಗ್ರಂಥಗಳನ್ನು ಪ್ರಕಟಿಸಿದರು! ಅದನ್ನೆಲ್ಲ ಈ ನಮ್ಮ ‘ಸುಶಿಕ್ಷಿತ’ ನವಪೀಳಿಗೆ ಪ್ರಶ್ನಾತೀತ ಭಕ್ತಿಯಿಂದ ಓದಿಕೊಂಡು, ಭಾರತೀಯ ಪರಂಪರೆಯಲ್ಲಿನ ಎಲ್ಲವನ್ನೂ ಬಯ್ದು ‘ನವಜಾತ ವೈಚಾರಿಕತೆ’ ಮೆರೆದರು!

ಸ್ವತಂತ್ರಭಾರತದಲ್ಲೂ ‘ಆಂಗ್ಲಭಕ್ತ’ ನಾಯಕರ ನೇತೃತ್ವದಲ್ಲಿ ಇದೇ ಕುತ್ಸಿತಶಿಕ್ಷಣಪದ್ಧತಿ ಮುಂದುವರೆಯಿತು. ಅದರ ವಿಷಫಲ? ‘ಸ್ವದೇಶನಿಂದನೆ – ವಿದೇಶಶ್ಲಾಘನೆ’ಗಳೇ ಪ್ರಗತಿ; ಸ್ವಧರ್ಮ, ಸಂಸ್ಕೃತಿ, ಭಾಷೆ, ಕುಲವೃತ್ತಿ, ವೇಷಭೂಷಗಳೆಲ್ಲವನ್ನೂ ಬಿಟ್ಟು ಬೇರೊಬ್ಬರಂತಾಗುವುದು ಗ್ಲೋಬಲ್ ಔಟ್​ಲುಕ್! ಇಂಥ ಅವೈಚಾರಿಕತೆಯು ‘ವೈಚಾರಿಕತೆ’ಯ ಹಣೆಪಟ್ಟಿ ತಾಳಿ; ಸಿನಿಮಾ, ರಂಗಭೂಮಿ, ಪತ್ರಿಕಾಮಾಧ್ಯಮಗಳಲ್ಲೂ, ‘ವಿಚಾರ’ಗೋಷ್ಠಿಗಳಲ್ಲೂ ಹರಡಿ, ರಾಜಕಾರಣಿಗಳಿಗೂ ಉಪಕರಣವಾಗಿ ಬಲಗೊಳ್ಳುತ್ತಿದೆ. ವೇದ, ಶಾಸ್ತ್ರ, ರಾಮಾಯಣ ಮಹಾಭಾರತಾದಿಗಳನ್ನು ಪುಟ ಮಾತ್ರವಾದರೂ ತಿರುವಿ ನೋಡದವರು ‘ಪ್ರೌಢ ಅಭಿಪ್ರಾಯಗಳನ್ನು’ ಮಂಡಿಸುವುದು ಹೆಚ್ಚಿ, ವರ್ಣವ್ಯವಸ್ಥೆಯ ಸ್ವರೂಪೋದ್ದೇಶಗಳ ಬಗ್ಗೆ ಭಾರೀ ಅಪಾರ್ಥವು ಹರಡಿದೆ. ಇಂತಹ ಬಾಡಿಗೆ ವಿಚಾರದಲ್ಲೇ ಬಾಳುವ ಅಭ್ಯಾಸವಾದ ಮನಃಸ್ಥಿತಿಯವರನ್ನು ಹಿಂಡುಹಿಂಡಾಗಿ ಮತಾಂತರಿಸುವುದೂ, ವಿಧರ್ವಿುಗಳಿಗೆ ಸುಲಭವಾಗುತ್ತ ಬಂದಿದೆ!

‘ಕಾಪಿ-ಪೇಸ್ಟ್’ ಮನೋಧರ್ಮದ ಶಿಕ್ಷಣಮಾಧ್ಯಮಗಳಲ್ಲಿ ಆತ್ಮಾವಲೋಕವಿಲ್ಲದೆ ಬೆಳೆದ ‘ಬುದ್ಧಿವಂತರು’ ವರ್ಣಪದ್ಧತಿಯ ಬಗ್ಗೆಯೂ ಸ್ವಂತ ಅನುಭವ – ಸಂಶೋಧನೆಗಳತ್ತ ಗಮನ ಹರಿಸದೆ, ಬಾಡಿಗೆ ವಿಶ್ಲೇಷಣೆಗಳನ್ನೇ ಬಳಸುತ್ತ ಗೊಂದಲಕ್ಕೆ ಆಸ್ಪದವೀಯುತ್ತಿರುವುದು ಕಾಣಬರುತ್ತಿದೆ. ನಮ್ಮದೇ ಕುಲವೃತ್ತಿ-ಪರಂಪರೆಗಳಿಗೆ ನಾವೇ ಪರಕೀಯರಾಗುತ್ತ, ಅದನ್ನೆಲ್ಲ ಮ್ಯೂಸಿಯಂಗಳಲ್ಲಿ ಸಂರಕ್ಷಿಸಿಡಬೇಕಾದ ಕಾಲಕ್ಕೆ ಸಾಗುತ್ತಿರುವ ನಮ್ಮಲ್ಲಿ, ನಮ್ಮ ಪೂರ್ವಜರ ಸಾಧನೆಗಳ ಬಗ್ಗೆ ಊಹಾಪೋಹಗಳೂ ಹೆಚ್ಚಿವೆ. ಕೆಲವರು ಗತಕಾಲದ ವೈಭವೀಕರಣಕ್ಕೆ ಇಳಿದರೆ, ಹಲವರು ಸ್ವದೇಶನಿಂದನೆ-ವಿದೇಶಶ್ಲಾಘನೆಯ ಅತಿರೇಕಕ್ಕಿಳಿಯುತ್ತಾರೆ! ಪರಿಣಾಮವಾಗಿ – ಒಂದೆಡೆ ಕುಲಧರ್ಮವನ್ನು ಜಾತಿಯ ಹಠದಿಂದ ಆಚರಿಸುವ ‘ಸಂಪ್ರದಾಯ ಜಡರು’! ಮತೊಂದೆಡೆ, ವರ್ಣವ್ಯವಸ್ಥೆಗೆ ‘ಕಾಸ್ಟಿಸಮ್ ಎಂಬ ಪೋರ್ಚುಗೀಸ್ ನಾಮಕರಣ ಮಾಡಿ, ದೇಶದ ಶತ್ರುಗಳು ಹೆಣೆದ ತಲೆಬುಡವಿಲ್ಲದ ‘ಸಾಮಾಜಿಕ ವಿಶ್ಲೇಷಣೆ’ಗಳನ್ನು ಬಳಸಿ, ಅಪಾರ್ಥಗಳನ್ನು ಹರಡುವ ಮತಿಗೇಡಿಗಳು! ಮುಗಿಯದ ವಾಗ್ವಾದಗಳಲ್ಲಿ ತೊಡಗಿದ ಈ ಎರಡೂ ಅತಿರೇಕದವರೂ ವರ್ಣವ್ಯವಸ್ಥೆಯ ನಿಜರೂಪ ಅರಿತಿಲ್ಲ, ಅರಿಯಲಾಗುವುದೂ ಇಲ್ಲ.

 ಡಾ. ಆರತೀ ವಿ. ಬಿ.

ಕೃಪೆ: ವಿಜಯವಾಣಿ

Leave a Reply