ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ!

ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ!

ಮೂರು ಬಗೆಯ ಜನರಿಂದ ಚಾತುರ್ವಣ ವ್ಯವಸ್ಥೆಯು ‘ಜಾತಿ’ಯ ಹಣೆಪಟ್ಟಿಯನ್ನು ಪಡೆದು ದೋಷಿಯೆನಿಸಬೇಕಾಗಿಬಂತು ಎನ್ನುವುದನ್ನು ನೋಡುತ್ತ ಬಂದಿದ್ದೇವೆ:
1. ದೇಶ-ಸಂಸ್ಕೃತಿಗಳ ಬಗೆಗಿನ ಅಸ್ಮಿತಾಭಾವವನ್ನೇ ಕಳೆದುಕೊಂಡ ನಿರಭಿಮಾನಿಗಳು ವರ್ಣವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳುವ ಯತ್ನವನ್ನೂ ಮಾಡದೆ, ಅದನ್ನು ‘ಜಾತಿ’ ಎಂದು ಮೂದಲಿಸಿ ಕೈಬಿಟ್ಟರು.
2. ಮೇಲು-ಕೀಳೆಂಬ ಲೆಕ್ಕಾಚಾರದ ಗೀಳಿನ ದುರಭಿಮಾನಿಗಳು ವರ್ಣವೆಂದರೆ ‘ಜಾತಿ’ ಎಂಬ ಅಪಾರ್ಥಕ್ಕೆ ಎಡೆಮಾಡಿಕೊಟ್ಟರು, ಸಮಾಜದ ಭಾವೈಕ್ಯತೆಗೇ ಧಕ್ಕೆ ತಂದರು.
3. ಈ ನಿರಭಿಮಾನಿಗಳ ಹಾಗೂ ದುರಭಿಮಾನಿಗಳ ಅತಿರೇಕವನ್ನು ಚೆನ್ನಾಗಿ ದುರ್ಬಳಕೆ ಮಾಡಿಕೊಂಡವರು ಆಕ್ರಮಣಕಾರರು.
ಖಡ್ಗ-ಓಲೈಕೆಗಳ ಮೂಲಕ ಮಾಡುವಷ್ಟು ಮತಾಂತರಗಳನ್ನು ಶತಮಾನಗಳ ಕಾಲ ಗೈದರು. ಆದರೆ ಈ ನಿರಭಿಮಾನಿಗಳನ್ನೂ ದುರಭಿಮಾನಿಗಳನ್ನೂ ಪೋಷಿಸಿಬಿಟ್ಟರೆ ಸಾಕು, ಸಮಾಜವು ತಾನಾಗಿಯೇ ಒಡೆದು ಚೂರಾಗುತ್ತದೆ, ಕಬಳಿಸಲು ಸುಲಭ ಎಂಬುದನ್ನು ಬೇಗ ಅರಿತರು! ನಮ್ಮ ಎಲ್ಲ ಆಚಾರವಿಚಾರಗಳನ್ನೂ ವೃತ್ತಿ-ವೈವಿಧ್ಯಗಳನ್ನೂ ‘ಜಾತಿ’ಯ ಹಿಪಾಕ್ರಸಿಯ ಸಾಲಿನಲ್ಲಿ ಮೇಲೆ-ಕೆಳಗೆ ನಿಲ್ಲಿಸಿ, ಕೆಲವರನ್ನು ಮೇಲೆಂದು ಹೊಗಳಿ ಹಿಗ್ಗಿಸಿದರು, ಕೆಲವರನ್ನು ಕೀಳೆಂದು ಕುಗ್ಗಿಸಿದರು! ಹೀಗೆ, ಸಮಾಜದಲ್ಲಿ ಅದಾಗಲೇ ಅಲ್ಲಲ್ಲಿ ಮೂಡಿದ್ದ ಜಾತಿಭೇದದ ಬಿರುಕುಗಳನ್ನು ತಮ್ಮ ಶಕುನಿತಂತ್ರಗಳ ಮೂಲಕ, ‘ದೊಡ್ಡ ಕಂದಕ’ಗಳನ್ನಾಗಿಸಿದರು!
ನಿರಭಿಮಾನಿಗಳಿಗೆ ‘ನಿಮ್ಮ ಆಚಾರವಿಚಾರಗಳೆಲ್ಲ ಅರ್ಥಹೀನ, ನಮ್ಮತ್ತ ಬನ್ನಿ’ ಎಂದು ನಂಬಿಸಿ ಸ್ವದೇಶಧರ್ಮಗಳ ವಿರುದ್ಧ ಎತ್ತಿಕಟ್ಟಿದರು. ಅದಕ್ಕಾಗಿ ವಿಪುಲ ಹಣ-ನೌಕರಿ-ಸವಲತ್ತುಗಳನ್ನೂ ನೀಡಿ ಓಲೈಸಿದರು! ಅತ್ತ ದುರಭಿಮಾನಿಗಳನ್ನು ‘ನೀವೇ ಸರ್ವಶ್ರೇಷ್ಠರು! ಆ ‘‘ಕೀಳುಜನರು’’ ಎಂದೂ ನಿಮ್ಮ ಮಟ್ಟಕ್ಕೆ ಬರಲಾರರು!’ ಎಂದು ಹೊಗಳಿ ಹೊನ್ನಶೂಲಕ್ಕೇರಿಸಿದರು! ಹೊಗಳಿಸಿಕೊಂಡ ದುರಭಿಮಾನಿಗಳು, ಹೊಗಳಿದವರಿಗೆ ಸಹಜವಾಗಿಯೇ ನಿಷ್ಠೆ ತೋರಲಾರಂಭಿಸಿದರು! ಅವರಿಗೂ ಉದ್ಯೋಗ ಬಡ್ತಿಗಳು ಸಿಕ್ಕವು! ಹೇಗಿದೆ ನೋಡಿ! ಮೇಲು-ಕೀಳೆಂದು ಇಬ್ಭಾಗವಾಗಿ ನಿಂತ ಈ ಮೂಢರಿಗೆ, ತಮ್ಮದೇ ದೇಶಧರ್ಮದವರಲ್ಲಿ ಬೆರೆಯಲು ‘ಜಾತಿ’ ಅಡ್ಡ ಬರುವಂತಾಯಿತು! ಆದರೆ ದೇಶಧರ್ಮಗಳ ಶತ್ರುಗಳಾದ ಪರದೇಶೀಯರ ಕೆಳಗೆ ಕೆಲಸ ಮಾಡಲು ‘ಜಾತಿ’ ಅಡ್ಡಿ ಬರಲಿಲ್ಲ! ಅಂಗಿ-ಪಂಚೆ-ಧೋತರಗಳ ಮೇಲೆ ಕೋಟು-ಟೈಗಳನ್ನು ಧರಿಸಲಾರಂಭಿಸಿದವರು, ಕಾಲಕ್ರಮದಲ್ಲಿ, ಸ್ವದೇಶದ ವೇಷವನ್ನೂ ಆಹಾರವನ್ನೂ ಭಾಷೆಯನ್ನೂ ಜೀವನಶೈಲಿಯನ್ನೂ ಬಿಡುತ್ತ ಬಂದರು! ಬಡತನ, ಅನನುಕೂಲ, ಅನ್ಯಾಯಕ್ಕೆ ಪಾತ್ರರಾದವರು ಮಾತ್ರ ಸ್ವಧರ್ಮವೃತ್ತಿಗಳನ್ನು ಬಿಟ್ಟಿರೆಂದು ಭ್ರಮಿಸಬೇಡಿ! ಸಮೃದ್ಧ ಕುಲವೃತ್ತಿ, ಅನುಕೂಲ, ಹೊಲ, ಗದ್ದೆ, ಮನೆ, ಆಸ್ತಿ, ವಿದ್ಯೆ, ಕಲೆ, ಸಾಹಿತ್ಯಗಳನ್ನೂ ಬಿಟ್ಟು, ಪರಕೀಯರಿತ್ತ ಉದ್ಯೋಗಕ್ಕಾಗಿ ಕೈಚಾಚಿದವರೇ ಹೆಚ್ಚು! ಸಮೃದ್ಧಿಯಿದ್ದರೂ ಹಳ್ಳಿಗಳನ್ನು ಬಿಟ್ಟು ನಗರಕ್ಕೆ, ನಗರವನ್ನು ಬಿಟ್ಟು ವಿದೇಶಕ್ಕೆ ಹಾರುವುದು ನಂತರದ ಬೆಳವಣಿಗೆಗಳು. ಈಗಂತೂ, ನಮ್ಮ ‘ಆಧುನಿಕ ಶಾಲೆ’ಗಳು ಮಕ್ಕಳನ್ನು ತಯ್ಯಾರು ಮಾಡುತ್ತಿರುವುದೇ ವಿದೇಶದ ಸ್ಟ್ಯಾಂಡರ್ಡ್ಸ್ಗೆ ತಕ್ಕಂತೆ ಬೆಳೆಯಲಿ ಎಂದೇ!
ಈ ಪರಕೀಯ ಹಸ್ತಕ್ಷೇಪವು ಭಾರತದ ಮೂಲ ಧರ್ಮ, ಸಂಸ್ಕೃತಿ, ಸಾಹಿತ್ಯ, ಜೀವನಶೈಲಿಗಳನ್ನೆಲ್ಲ ಕೀಳು ಎಂದು ಪ್ರತಿಪಾದಿಸುತ್ತ, ದೇಶದ ಆರ್ಥಿಕತೆ, ಶಿಕ್ಷಣವ್ಯವಸ್ಥೆ, ಕಾನೂನು ಮತ್ತು ರಾಜನೈತಿಕ ಸ್ವರೂಪಗಳಲ್ಲೂ ಅಪಾರವಾಗಿ ಹಸ್ತಕ್ಷೇಪವನ್ನೂ ಗೈಯುತ್ತ ಬಂದಿದೆ. ವಿದೇಶೀಯ ಆಡಳಿತವನ್ನು ದೇಶದಿಂದ ತೊಲಗಿಸಿದ ಮೇಲಾದರೂ ಎಲ್ಲವೂ ಸರಿಹೋಗಬೇಕಿತ್ತು! ಆದರೆ ಆದದ್ದೇ ಬೇರೆ! ಶತ್ರುದೇಶಗಳಿಗೆ ನಿಷ್ಠೆ ತೋರಿ, ತಮ್ಮ ವೈಯಕ್ತಿಕ ಲಾಭದ ಬೇಳೆ ಬೇಯಿಸಿಕೊಳ್ಳುವ ವಾಮಪಂಥೀಯರು, ಶಿಕ್ಷಣ ಮತ್ತು ಮಾಧ್ಯಮಗಳ ಜುಟ್ಟು ಹಿಡಿದು ಅದೇ ‘ಜಾತಿ’ಯ ಅಪವ್ಯಾಖ್ಯಾನಗಳನ್ನೇ ‘ಬಂಡವಾಳ’ವನ್ನಾಗಿಸಿಕೊಂಡರು!
ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ ಎನ್ನುವ ಪಂಚತಂತ್ರದ ಕಥೆ ಇಲ್ಲಿ ಸ್ಮರಣೀಯ. ಎರಡು ಬೆಕ್ಕುಗಳು ಒಂದು ರೊಟ್ಟಿ ಚೂರಿಗಾಗಿ ಜಗಳವಾಡುತ್ತಿದ್ದುದನ್ನು ನೋಡಿ, ಇಬ್ಬರಿಗೂ ನ್ಯಾಯ ಕೊಡಿಸುತ್ತೇನೆಂದು ಕೋತಿಯೊಂದು ಮುಂದೆ ಬಂತಂತೆ. ಕೋತಿಯು ರೊಟ್ಟಿಯನ್ನು ‘ಸಮಪ್ರಮಾಣ’ವಾಗಿ ಇಬ್ಬರಿಗೂ ಹಂಚುತ್ತೇನೆನ್ನುತ್ತ, ಅಲ್ಲಿ ಸ್ವಲ್ಪ-ಇಲ್ಲಿ ಸ್ವಲ್ಪ ಕಚ್ಚಿ ಕಚ್ಚಿ ಎಲ್ಲವನ್ನೂ ತಾನೇ ತಿಂದುಹಾಕಿಬಿಟ್ಟಿತಂತೆ!
ಆದರೆ ದುರ್ದೈವವೇನೆಂದರೆ, ಯಾರುಯಾರೋ ಮಾಡಿದ ಯಾವಯಾವುದೋ ಅವಾಂತರಕ್ಕೆಲ್ಲ ‘ಚಾತುರ್ವಣ ವ್ಯವಸ್ಥೆ’ಯನ್ನು ದೋಷಿಯನ್ನಾಗಿಸಿಬಿಡುವುದು ನಡೆದಿದೆ! ವರ್ಣವ್ಯವಸ್ಥೆಯು ಅರ್ಥಪೂರ್ಣವಾಗಿ ನಡೆಯುತ್ತಿದ್ದ ಕಾಲದಲ್ಲಿ ಹೇಗೆ ಜಾತಿಭೇದವಿಲ್ಲದೆ ಸಾಮಾಜಿಕರು ಸ್ನೇಹದಿಂದ ಇರಲು ಸಾಧ್ಯವಾಗಿತ್ತು ಎನ್ನುವುದನ್ನು ಪೌರಾಣಿಕ ಹಾಗೂ ಐತಿಹಾಸಿಕ ಉದಾಹರಣೆಗಳ ಮೂಲಕ ಮುಂದೆ ನಾವೇ ನೋಡೋಣ.

ಡಾ. ಆರತೀ ವಿ. ಬಿ.
ಕೃಪೆ: ವಿಜಯವಾಣಿ

Leave a Reply