‘ಎಲ್ಲ ಮಾರ್ಗಗಳೂ ನನ್ನನ್ನೇ ಸೇರುತ್ತವೆ’

‘ಎಲ್ಲ ಮಾರ್ಗಗಳೂ ನನ್ನನ್ನೇ ಸೇರುತ್ತವೆ’

‘ಮನುಷ್ಯನ ಆಂತರ್ಯದಲ್ಲಿನ ಭಯ ರಾಗ ಕ್ರೋಧಗಳ ಮೋಡಗಳು ಕರಗಿದಾಗ ಮಾತ್ರವೇ ಭಗವಂತನ ದಿವ್ಯ ಜನ್ಮಕರ್ಮಗಳ ಮರ್ಮವು ಅಣುವಿನಷ್ಟಾದರೂ ಮಾನುಷಮತಿಯೆಂಬ ಆಕಾಶದಲ್ಲಿ ಮಿಂಚೀತು; ಹಾಗೆ ಭಗವಲ್ಲೀಲೆಯನ್ನು ಗುರುತಿಸಬಲ್ಲ ಶುದ್ಧಾತ್ಮನಿಗೆ ಇನ್ನು ಮರುಜನ್ಮವಿರದು’ ಎನ್ನುವ ಮಾತನ್ನು ಕೃಷ್ಣನು ಹೇಳುತ್ತಿದ್ದ.
ಭಯಕ್ರೋಧಾದಿಗಳನ್ನು ನೀಗುವುದು ಭಗವತ್ಸಾಕ್ಷಾತ್ಕಾರಕ್ಕೆ ಮೊದಲ ಅರ್ಹತೆಯೆಂದಾಯಿತು. ಅರ್ಹರು ಸತ್ಯಸಾಕ್ಷಾತ್ಕಾರದ ದಾರಿ ಹಿಡಿಯಬಲ್ಲರು. ಆದರೆ ಆ ‘ದಾರಿ’ ಯಾವುದು? ಭಕ್ತಿಯೋ? ಕರ್ಮಯೋ? ತರ್ಕವೋ? ವೈದಿಕವೋ? ಆಗಮವೋ? ತಂತ್ರವೋ?¬ – ಇವುಗಳ ಪೈಕಿ ಯಾವ ಮಾರ್ಗ ಸರಿ? ಯಾವುದು ಸುಲಭ? ಯಾವುದು ಶ್ರೇಷ್ಠ? ಎಂಬ ಪ್ರಶ್ನೆಗಳು ನಮ್ಮಲ್ಲೇಳುತ್ತವೆ. ಭಯಕ್ರೋಧಾದಿಗಳಿಂದ ಮುಕ್ತರಾದ ಶುದ್ಧಾತ್ಮರು ಈ ಪ್ರಶ್ನೆಗಳಿಗೆ ಉತ್ತರಗಳನ್ನು ಹೊರಗಡೆ ಹುಡುಕದೆ, ತಮ್ಮೊಳಗೇ ಅನುಭವಪೂರ್ಣವಾಗಿ ಕಂಡುಕೊಳ್ಳುತ್ತಾರೆ. ಮಿಕ್ಕವರು ‘ಸಾಧನೆ’ಯೆನ್ನುವುದು ಅದಾವುದೋ ವರ್ಣರಂಜಿತ ಆಚಾರಸಂಹಿತೆಯಿರಬೇಕೆಂದು ಭಾವಿಸಿ ಹೊರಗಡೆ ಹುಡುಕುತ್ತಾರೆ. ಈ ಯತ್ನದಲ್ಲಿ ಯಾರದೋ ವ್ಯಕ್ತಿತ್ವ, ಸಿದ್ಧಾಂತ, ಮತಪಂಥಗಳಿಗೆ ಮನಸೋಲುತ್ತಾರೆ, ತಮ್ಮ ಆ ತಾತ್ಕಾಲಿಕ ನೆಮ್ಮಿಕೆಯನ್ನೇ ವಾದಸಂವಾದಗಳ ಮೂಲಕ ಮಂಡಿಸಿ ಗೆಲ್ಲಲೂ ಉತ್ಸುಕರಾಗುತ್ತಾರೆ! ಹಲವೊಮ್ಮೆ ಈ ಸಂವಾದಗಳು ವಿವಾದಗಳಾಗಿ, ವಾಗ್ಯುದ್ಧಗಳಾಗಿ, ವಿಧ್ವಂಸಕ – ಕಾಳಗಗಳಾಗಿಯೂ ತಿರುಗವುದುಂಟು! ವ್ಯಾಖ್ಯಾನಕೌಶಲಿಗಳು, ಬಾಹ್ಯಾಚಾರಧುರೀಣರು ಆಗುವ ಭರದಲ್ಲಿ ಭಗವತ್ಸಾಕ್ಷಾತ್ಕಾರದ ಗಮ್ಯವನ್ನೇ ಮರೆತುಬಿಡುವವರೇ ಹೆಚ್ಚು! ‘ತಾವು ಒಪ್ಪಿದ್ದನ್ನೇ ಜಗತ್ತೆಲ್ಲ ಒಪ್ಪಬೇಕೆಂಬ’ ಹಠದಲ್ಲಿ ಸುಳ್ಳು ಮೋಸ ಅನಾಚಾರಗಳನ್ನೂ¬ಕೊನೆಗೆ ಕೊಲೆಯನ್ನೂ ಮಾಡುವಷ್ಟು ನೀಚಮಟ್ಟಕ್ಕೂ ಇಳಿಯುವ ಸೆಮೆಟಿಕ ಮತಗಳ ‘ಮತಾಂತರಿಸುವ ಕುತ್ಸಿತಪರಂಪರೆಯನ್ನು’ ಶತಮಾನಗಳಿಂದ ನೋಡುತಲೇ ಬಂದಿದ್ದೇವಷ್ಟೆ?!
‘ಯಾವ ಮಾರ್ಗದಲ್ಲಿ ಸಾಗಿದರೆ ದೇವರು ಒಲಿದಾನು?’ ಎನ್ನುವ ಮನುಷ್ಯನ ಈ ಗೊಂದಲಕ್ಕೆ ತೆರೆಯೆಳೆಯುವಂತಹ ಮಾತನ್ನು ಆಚಾರ್ಯಕೃಷ್ಣನು ಹೇಳುತ್ತಾನೆ; ‘ಯಾರು ಯಾವ ರೀತಿಯಲ್ಲಿ ನನ್ನನ್ನು ಅರಸಿಬರುತ್ತಾರೋ ನಾನು ಅವರಿಗೆ ಹಾಗೆಯೇ ಒಲಿಯುತ್ತೇನೆ. ಎಲ್ಲ ಕಡೆಗಳಿಂದಲೂ ಎಲ್ಲರೂ ನನ್ನೆಡೆಗೆ ಬರುತ್ತಾರೆ’. (4-11)
‘ಎಲ್ಲರೂ ಅವರವರ ದೇಶ ಕಾಲ ಅಭಿರುಚಿ ಸಾಮರ್ಥ್ಯ ಸಂದರ್ಭಾನುಸಾರ ಸಹಜವಾಗಿ ಅರಳಬೇಕು, ಅವರವರ ಆಂತರ್ಯದಲ್ಲೇ ಸತ್ಯಸಾಕ್ಷಾತ್ಕಾರ ಮಾಡಿಕೊಳ್ಳಬೇಕು’ ಎನ್ನುವುದು ಆರ್ಷಧರ್ಮದ ನಿಲುವು. ತಾರಸಿಗೇರಲು ಸಾಮಾನ್ಯರು ಮೆಟ್ಟಿಲನ್ನು ಹತ್ತಿದರೆ, ಸಾಹಸಿಗರು ಹಗ್ಗವನ್ನು ಹಿಡಿದೇರುತ್ತಾರೆ, ಮಿಕ್ಕವರು ಲಿಫ್ಟನ್ನೋ ಎಸ್ಕಲೇಟರ್ಗಳನ್ನೋ ಬಳಸುತ್ತಾರೆ. ಬಲ್ಲಿದರು ಹೆಲಿಕಾಪ್ಟರನ್ನೂ ಬಳಸಬಹುದು! ಮಾರ್ಗಗಳು ಹಲವಾದರೂ ತಲುಪುವುದು ತಾರಸಿಗೇ! ವೇದವು ‘ಏಕಂ ಸತ್ ವಿಪ್ರಾಃ ಬಹುಧಾ ವದಂತಿ’ (ಸತ್ಯವೊಂದೇ ಅದನ್ನು ತಿಳಿದವರು ಬಹುವಿಧವಾಗಿ ಹೇಳುತ್ತಾರೆ) ಎಂದು ಇದನ್ನೇ ಹೇಳಿದ್ದು, ಜಗದ್ಗುರುವಾದ ಕೃಷ್ಣನು ಅದನ್ನೇ ಇಲ್ಲಿ ಪ್ರತಿಧ್ವನಿಸುತ್ತಿದ್ದಾನೆ.
ಪ್ರತಿಯೊಂದು ಬೀಜವೂ ತನ್ನೊಳಗಿನ ಸತ್ವವನ್ನನುಸರಿಸಿ, ಸಕಾಲದಲ್ಲಿ ಮೊಳಕೆಯೊಡೆದು, ಗಿಡವಾಗಿ ಬೆಳೆದು ಮರವಾಗಿ ನಿಂತು ತನ್ನಿಚ್ಛೆಯಂತೆ ಫಲಗಳನ್ನು ಕೊಡುತ್ತದೆ. ಅಂತೆಯೇ ಜೀವರೆಲ್ಲರೂ ಅವರವರ ಧಾಟಿಯಲ್ಲೇ ಪಕ್ವರಾಗಬೇಕು. ಸ್ವಾಮಿ ವಿವೇಕಾನಂದರನ್ನು ಒಬ್ಬರು ಕೇಳಿದರಂತೆ; ‘ವಿಶ್ವದಲ್ಲಿ ಇಷ್ಟೊಂದು ಮತಗಳಿರುವುದರಿಂದಲೇ ಅಶಾಂತಿ. ಒಂದೇ ಮತ ಇದ್ದಿದ್ದರೆ ಶಾಂತಿಯಿರುತ್ತಿತ್ತಲ್ಲವೆ?’ ಸೃಷ್ಟಿನಿಯಮನ್ನರಿತ ಜ್ಞಾನಿಗಳಾದ ಸ್ವಾಮಿಗಳು ಉತ್ತರಿಸಿದರು; ‘ಈಗಿರುವ ಮತಗಳು ಸಾಲವು! ಒಬ್ಬೊಬ್ಬರಿಗೆ ಒಂದೊಂದು ಮತವಿದ್ದರೆ ಸರಿಹೋಗುತ್ತದೆ!’ ಎಂದು! ಅವರದೇ ವಿವರಣೆಯ ಸಾರ ಹೀಗಿದೆ – ವೈವಿಧ್ಯವೆನ್ನುವುದು ಸೃಷ್ಟಿನಿಯಮ. ಅದನ್ನು ಗೌರವಿಸಲೇಬೇಕು. ಮನುಷ್ಯರ ಭಾವನಾತ್ಮಕ ಸಂವೇದನೆಗಳು ಬೇರೆಬೇರೆ, ವೈಚಾರಿಕ ನೆಲೆಗಳು ಬೇರೆಬೇರೆ, ಆಧ್ಯಾತ್ಮಿಕ ಜಿಜ್ಞಾಸೆಯ ಸ್ತರಗಳೂ ಬೇರೆಬೇರೆ, ಆಯ್ಕೆ ಅಭಿರುಚಿಗಳೂ ಬೇರೆಬೇರೆ, ದೇಶ ಕಾಲ ಸಂದರ್ಭಗಳೂ ಅನಿವಾರ್ಯತೆಗಳೂ ಬೇರೆಬೇರೆ. ಹೀಗಿರುವಾಗ ಎಲ್ಲರಿಗೂ ಒಂದೇ ಪಥ್ಯ ಹೇಗೆ ಒಗ್ಗೀತು? ಇದು ಸರಳ ಮನೋವಿಜ್ಞಾನ. ಇದನ್ನರಿಯದ ವ್ಯಕ್ತಿಗಳು ಮತಗಳು ಹಠಮಾರಿಗಳಾಗಿ ಕಾಲಾಂತರದಲ್ಲಿ ಅಳಿಯುತ್ತವೆ. ಇದನ್ನು ಅರಿತವರು ಜಾಣರಾಗಿ ತಮ್ಮ ಮಾರ್ಗವನ್ನು ಕಂಡುಕೊಳ್ಳುತ್ತಾರೆ!
ಭಗವತ್ಸಾಕ್ಷಾತ್ಕಾರವೇ ಆಸ್ತಿಕರೆಲ್ಲರ ಉದ್ದೇಶವಾಗಿರುವುದಿಲ್ಲ. ಕೃಷ್ಣನು ಹೇಳುತ್ತಾನೆ; ‘ಕರ್ಮಗಳ ಸಿದ್ಧಿಯನ್ನು ಆಶಿಸಿ, ಜನರು ದೇವತೆಗಳ ಉಪಾಸನೆಗೈಯುತ್ತಾರೆ. ಅವರಿಗೆ ಬೇಗನೆ ಕರ್ಮಸಿದ್ಧಿ ದೊರೆಯುತ್ತದೆ’ (4-12) ಒಟ್ಟಿನಲ್ಲಿ ಯಾರು ಯಾವ ದೇವತಾರೂಪದ ಉಪಾಸನೆಗೈಯುತ್ತಾರೋ, ಪರಮಾತ್ಮ ಅವರವರಿಗೆ ಆಯಾ ರೂಪದಲ್ಲೇ ಒಲಿದು ಸೂಕ್ತ ಫಲಗಳನ್ನು ನೀಡುತ್ತಾನೆ. ತಮ್ಮ ತಮ್ಮ ಗುಣ ಕರ್ತವ್ಯ ಅಭಿರುಚಿ ದೇಶ ಕಾಲ ಸಂದರ್ಭಗಳ ಅನುಕೂಲದಂತೆ ವ್ಯಕ್ತಿಗಳು ಅರಳಬೇಕು ಭಗವಲ್ಲಾಭವನ್ನೋ ಫಲಪ್ರಾಪ್ತಿಯನ್ನೋ ಪಡೆಯಬೇಕೆಂದು ತಾತ್ಪರ್ಯ.
ಡಾ. ಆರತೀ ವಿ. ಬಿ.

ಕೃಪೆ: ವಿಜಯವಾಣಿ

Leave a Reply