ಕಾಮವನ್ನು ಗೆಲ್ಲು, ಆತ್ಮದಲ್ಲಿ ನಿಲ್ಲು

ಕಾಮವನ್ನು ಗೆಲ್ಲು, ಆತ್ಮದಲ್ಲಿ ನಿಲ್ಲು

‘ಇತ್ತ ಅತ್ಯಾಸೆ ಮೂಡಿಸಿ ಪಾಪ ಮಾಡುವಂತೆ ಪ್ರೇರೇಪಿಸುತ್ತ, ಅತ್ತ ಪರಮಾರ್ಥದ ವಿಷಯದಲ್ಲೂ ಗಮನವೇ ಹರಿಯದಂತೆ ದಿಕ್ಕುತಪ್ಪಿಸುವ ಕಾಮವೆಂಬ ಆಂತರಿಕ ವೈರಿಯನ್ನು ಮೊದಲು ಜಯಿಸು’ ಎಂದು ಕೃಷ್ಣ ವಿವರಿಸುತ್ತಿದ್ದನಷ್ಟೆ? ಮುಂದುವರೆಸುತ್ತಾನೆ;
‘‘ಇಂದ್ರಿಯಗಳು (ದೇಹದಲ್ಲಿನ ಇತರೆಲ್ಲ ಅಂಗಗಳಿಗಿಂತಲೂ) ಪ್ರಧಾನ. ಇಂದ್ರಿಯಗಳಿಗಿಂತ ದೊಡ್ಡದು ಮನಸ್ಸು. ಮನಸ್ಸಿಗಿಂತ ಬುದ್ಧಿಯು ದೊಡ್ಡದು. ಬುದ್ಧಿಗಿಂತ ಆತ್ಮಸ್ವರೂಪವು ದೊಡ್ಡದು. ನಿನ್ನನ್ನು ನಿಯಂತ್ರಿಸಿಕೋ, ದುರ್ಜಯವಾದ ಕಾಮವೆಂಬ ಶತ್ರುವನ್ನು ಜಯಿಸು, ಬುದ್ಧಿಗಿಂತಲೂ ದೊಡ್ಡದಾದ ಆತ್ಮಸ್ವರೂಪವನ್ನು ತಿಳಿದುಕೋ.’’ (ಭ.ಗೀ.: 3-42.43)
ದೇಹದಲ್ಲಿ ಅತಿ ಬಲಶಾಲಿಯಾದವು ಇಂದ್ರಿಯಗಳು. ದೇಹಕ್ಕೂ ಹೊರಜಗತ್ತಿಗೂ ಸಂಬಂಧ ಕಲ್ಪಿಸುವುದೂ ಅವುಗಳೇ. ಅವನ್ನು ಪ್ರೇರೇಪಿಸುವುದು ‘ಮನಸ್ಸು’. ಇಂದ್ರಿಯಗಳ ಅನುಭವಗಳಲ್ಲಿ ಸುಖ-ದುಃಖಾದಿ ಕಲ್ಪನೆಗಳನ್ನು ಮೂಡಿಸಿ, ‘ಇದು ಇಷ್ಟ-ಅದು ಇಷ್ಟವಿಲ್ಲ’, ‘ಇದು ಬೇಕು-ಅದು ಬೇಡ’, ‘ಇವರು ತನ್ನವರು-ಅವರು ಬೇರೆಯವರು’ ಎಂಬ ಭೇದಗಳನ್ನೂ, ರಾಗದ್ವೇಷಗಳನ್ನೂ ಮೂಡಿಸುತ್ತದೆ. ಮನಸ್ಸು ‘ಬೇಕು’ ಎಂದರೆ ಇಂದ್ರಿಯಗಳು ಅಲ್ಲಿಗೆ ಧಾವಿಸುತ್ತವೆ, ‘ಬೇಡ’ವೆಂದರೆ ತಿರಸ್ಕರಿಸುತ್ತವೆ. ಹೀಗೆ ಇಂದ್ರಿಯಗಳಿಗಿಂತ ಮನಸ್ಸು ಬಲಯುತ.
ಮನಸ್ಸು ‘ಭಾವಿಸ’ಬಲ್ಲುದು ಅಷ್ಟೆ, ‘ನಿರ್ಣಯಿಸ’ಲಾಗದು. ಬುದ್ಧಿಯೇ ‘ನಿರ್ಣಯಿಸು’ವಂತಹದ್ದು. ಬುದ್ಧಿಯು ಶುದ್ಧವೂ ಶಕ್ತವೂ ಆಗಿದ್ದಲ್ಲಿ, ಮನಸ್ಸನ್ನೂ ಇಂದ್ರಿಯಗಳನ್ನೂ ನಿಯಂತ್ರಿಸಬಲ್ಲುದು. ಬಾಹ್ಯಜಗತ್ತನ್ನೂ ಅಂತರಂಗವನ್ನೂ ಶೋಧಿಸುತ್ತ ಉತ್ತಮ ನಿರ್ಣಯಗಳನ್ನು ತೆಗೆದುಕೊಳ್ಳಬಲ್ಲುದು. ಹೀಗೆ ಮನಸ್ಸಿಗಿಂತ ದೃಢಬುದ್ಧಿಯು ಬಲಶಾಲಿ. ಆದರೆ ಬುದ್ಧಿಗಿಂತಲೂ ದೊಡ್ಡದು ‘ಆತ್ಮ’. ದೇಹ-ಮನ-ಬುದ್ಧಿ-ಇಂದ್ರಿಯಗಳ ಅಸ್ತಿತ್ವಕ್ಕೆ ಆತ್ಮವೇ ಆಸರೆ. ಆತ್ಮಚೈತನ್ಯವನ್ನವಲಂಬಿಸಿಯೇ ಇವುಗಳ ‘ಆಟ’ ನಡೆಯುತ್ತಿರುವುದು.
ಬುದ್ಧಿಯು ಚಪಲ-ಮನಸ್ಸಿನ ಆಸೆಗಳನ್ನು ಪೂರೈಸುವುದಕ್ಕಾಗಿಯೇ ತನ್ನ ಶಕ್ತಿ-ಯುಕ್ತಿಗಳನ್ನು ವ್ಯಯಗೊಳಿಸುವ ಬದಲು, ನಿತ್ಯಸತ್ಯವಾದ ಆತ್ಮದತ್ತ ಹೊರಟರೆ, ಅಪರಿಮಿತ ಶಕ್ತಿಯನ್ನೂ ಜ್ಞಾನವನ್ನೂ ಹೊಂದುತ್ತದೆ. ಕಾಮವೆಂಬ ‘ಅಲುಗಾಡುವ ಮೇಜಿ’ನ ಮೇಲೆ ನಿಂತ ವ್ಯಕ್ತಿಯ ಮನೋಬುದ್ಧೀಂದ್ರಿಯಗಳು ಎಂದೂ ಸ್ಥೆ ೖರ್ಯವನ್ನು ಪಡೆಯಲಾರವು. ಆತ್ಮವೆಂಬ ‘ಗಟ್ಟಿನೆಲ’ವೇ ಜೀವಿಗೆ ಸ್ಥಿರವೂ ಶಾಶ್ವತವೂ ಆದ ಆಸರೆಯಾಗಬಲ್ಲುದು. ಆದ್ದರಿಂದ ‘ಕಾಮವನ್ನು ಗೆಲ್ಲು, ಆತ್ಮದಲ್ಲಿ ನಿಲ್ಲು’ ಎಂದು ಒತ್ತಿಹೇಳುತ್ತಿದ್ದಾನೆ ಆಚಾರ್ಯ ಕೃಷ್ಣನು.
ಕಾಮವೆಂಬ ಭಾವವಿಕಾರವು ಮನಸ್ಸು-ಇಂದ್ರಿಯಗಳನ್ನೆಲ್ಲ ವಶವಾಗಿಸಿಕೊಂಡು ಅವನ್ನು ಎಂಜಲೆಲೆಯಂತೆ ಅತ್ತಿತ್ತ ಹೊಯ್ದಾಡಿಸುತ್ತದಲ್ಲದೆ, ತನ್ನ ಆಶಾಪೂರ್ತಿಗಾಗಿ ಉಪಾಯಗಳನ್ನು ಹೂಡುತ್ತ ಸಹಕರಿಸಲು ಬುದ್ಧಿಯನ್ನೂ ಬಲವಂತವಾಗಿ ಸೆಳೆದೊಯ್ಯುತ್ತದೆ! ಅದಕ್ಕೇ ನೋಡಿ! ಆಸೆಬುರುಕರ ಬುದ್ಧಿವಂತಿಕೆಯೆಲ್ಲ ತಮ್ಮ ಮುಗಿಯದ ಆಸೆಗಳ ಪೂರ್ತಿಗಾಗಿಯಷ್ಟೇ ಮೀಸಲು! ಮನೆಯ ಮೇಲೆ ಮನೆ, ಕಾರಿನ ಮೇಲೆ ಕಾರು, ಸೈಟಿನ ಮೇಲೆ ಸೈಟು, ಸಾಮಾನುಗಳ ಮೇಲೆ ಸಾಮಾನು, ಪದವಿಯ ಮೇಲೆ ಪದವಿ, ಭೋಗದ ಮೇಲೆ ಭೋಗ ಅಥವಾ ಅದೇ ಭೋಗಗಳ ನವೀಕರಣ, ವೈಭವೀಕರಣಕ್ಕಾಗಿಯೇ ಬುದ್ಧಿಶಕ್ತಿಯೆಲ್ಲ ವ್ಯಯವಾಗುವುದು! ಹೊಸ ಗ್ಯಾಜೆಟ್ಗಳನ್ನೂ, ಮನೆಗಳನ್ನೂ ಕಾರ್ಗಳನ್ನೂ ಖರೀದಿಸುತ್ತಲೇ ಇರುವುದು, ಹಣದಾಸೆಗಾಗಿ ಊರು-ದೇಶ ಬದಲಾಯಿಸುತ್ತಲೇ ಇರುವುದು, ಹೇಗೋ ಮಾಡಿ ಸ್ಥಾನಮಾನಗಳನೇರುತ್ತಲೇ ಇರುವುದು, ಕೀರ್ತಿ-ಪ್ರಶಸ್ತಿಗಳಿಗಾಗಿ ಲಾಬಿ ಮಾಡುತ್ತಲೇ ಇರುವುದು, ಸುಲಭದ ಪ್ರಸಾರ-ಪ್ರಚಾರ ಸಿಕ್ಕುವುದಾದರೆ ದೇಶ-ಧರ್ಮ-ನ್ಯಾಯಗಳನ್ನೂ ನಿಂದಿಸುತ್ತಲೇ ಇರುವುದು. ಇಂಥವನ್ನೇ ‘ಪ್ರಗತಿ’ ‘ಉನ್ನತಿ’ ಎಂದು ಇವರು ಭ್ರಮಿಸುತ್ತಾರೆ! ಅದಕ್ಕಾಗಿಯೇ ಬುದ್ಧಿ-ತರ್ಕಗಳನ್ನೆಲ್ಲ ಅತಿಯಾಗಿ ಬಳಸಿ ಬಳಲುತ್ತಾರೆ! ‘ತನಗೂ ಮಡದಿ ಮಕ್ಕಳಿಗೂ ಮೊಮ್ಮಕ್ಕಳಿಗೂ ಚೇಲಾಗಳಿಗೂ ಮಾಡಿಟ್ಟಷ್ಟೂ ಕೂಡಿಟ್ಟಷ್ಟೂ ತೃಪ್ತಿ ಮಾತ್ರ ಏಕೆ ಬರುತ್ತಿಲ್ಲ?’ ಎಂದು ಒಮ್ಮೆಯಾದರೂ ಅವರ ಬುದ್ಧಿಗೆ ಆತ್ಮಾವಲೋಕನ ಮಾಡಿಕೊಳ್ಳಲಾಗದು! ಇದೇ ಕಾಮವಶರ ಗತಿ.
ಆದರೆ ದೈವಕೃಪೆಯಿಂದ ಅದೇ ಬುದ್ಧಿಯು ನಿತ್ಯಾನಿತ್ಯಗಳ ಚಿಂತನೆಗೆ ತೊಡಗಿತೆನ್ನಿ, ಆಗ ಅದು ಮನಸ್ಸನ್ನೂ ಇಂದ್ರಿಯಗಳನ್ನೂ ತಾನಾಗಿಯೇ ನಿಯಂತ್ರಿಸಲಾರಂಭಿಸುತ್ತದೆ. ಊರ್ಧ್ವುುಖವಾಗತೊಡಗುತ್ತದೆ. ಆತ್ಮಸ್ವರೂಪದ ಬೋಧೆಗೆ ತೆರೆದುಕೊಳ್ಳಲಾರಂಭಿಸುತ್ತದೆ. ಆಗ ಅಂತರಂಗದಲ್ಲಿ ಶಾಂತಿ, ಸ್ಥಿರತೆ, ಶಕ್ತಿ, ಪ್ರಸನ್ನತೆ, ಪ್ರೌಢಿಮೆಗಳನ್ನು ಮೂಡುತ್ತವೆ. ಭೇದ-ಮೋಹ-ದ್ವೇಷಗಳನ್ನು ಗೆದ್ದು, ತನ್ನೊಳಗೂ ಹೊರಗೂ ಇರುವ ಆತ್ಮಚೈತನ್ಯವನ್ನು ಎಲ್ಲೆಲ್ಲೂ ಎಲ್ಲರಲ್ಲೂ ಗುರುತಿಸಿ, ವಿಶ್ವಾತ್ಮಭಾವದಲ್ಲಿ ವಿಸ್ತಾರಗೊಳ್ಳುತ್ತಾನೆ ಮನುಷ್ಯ. ಲೌಕಿಕಕರ್ಮಗಳಲ್ಲೂ ಧರ್ಮವರಿತು ಚರಿಸುತ್ತಾನಲ್ಲದೆ, ಲೋಕೋತ್ತರ ಸತ್ಯಗಳನ್ನೂ ಅರಿಯಬಲ್ಲವನಾಗುತ್ತಾನೆ.

ಡಾ. ಆರತೀ ವಿ. ಬಿ.
ಕೃಪೆ : ವಿಜಯವಾಣಿ

Leave a Reply