ಗುಣದಂತೆ ಸಾಗುವ ಕರ್ಮ

ಗುಣದಂತೆ ಸಾಗುವ ಕರ್ಮ

ಕೃಷ್ಣ ಮುಂದೆ ಹೇಳುತ್ತಾನೆ; ‘ಚಾತುರ್ವಣರ್ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ¬…’ ಏಕದೇಶೀಯವಾಗಿ ಯೋಚಿಸುವ ಅಪೂರ್ಣಮತಿಗಳು ಈ ಶ್ಲೋಕಾರ್ಥವನ್ನು ತಿರುಚಿ ಅನಗತ್ಯ ವಿವಾದಕ್ಕೆಳೆಯುತ್ತಾರೆ. ಗಮನಿಸಿದರೆ ಈ ವಾಕ್ಯದಲ್ಲೇ ವಿವರಣೆ ಅಡಗಿದೆ. ‘ಗುಣಕ್ಕನುಗುಣವಾದ ಕರ್ಮವನ್ನು ಆಧರಿಸಿ ನನ್ನಿಂದಲೇ (ನಿಸರ್ಗದ ನಿಯಮದಂತೆ) ಚಾತುರ್ವಣರ್Â (ವ್ಯವಸ್ಥೆ) ಮೂಡಿದೆ.’ ಈ ‘ಗುಣ’ ಪದದ ಅರ್ಥಕ್ಕೆ ನಾನಾ ಆಯಾಮಗಳಿವೆ.
ಪ್ರತಿಯೊಂದು ಜೀವಿಯೂ ಪ್ರಕೃತಿಯ ಒಂದು ವಿಶಿಷ್ಟ ಕಲಾಕೃತಿಯೇ! ಒಬ್ಬರು ಮತ್ತೊಬ್ಬರಂತಿಲ್ಲ! ಹುಟ್ಟಿದ ಕುಲದ ವಂಶವಾಹಿನಿಗಳಿಂದಲೂ, ಸ್ವಕೀಯ ಸ್ವಭಾವದಿಂದಲೂ ಮನೆತನ-ದೇಶ-ಸಾಮಾಜಿಕ ಪರಿಸರ ಹಾಗೂ ಕಾಲಘಟ್ಟಗಳ ಹಿನ್ನೆಲೆಯಿಂದಲೂ ನಿರ್ದಿಷ್ಟ ಅಭಿರುಚಿ-ಕೌಶಲಗಳೂ, ಅರಿವು-ದೃಷ್ಟಿಕೋನಗಳೂ, ಪ್ರತಿಭೆ-ಸಾಮರ್ಥ್ಯಗಳೂ, ವ್ಯವಹಾರಜ್ಞಾನ-ಅನುಭವಗಳೂ ಮೂಡಿಬರುತ್ತವೆ. ಇದನ್ನೇ ಶ್ರೀಕೃಷ್ಣ ‘ಗುಣ’ ಎಂದಿದ್ದಾನೆ. ಇದನ್ನು ರೂಪಿಸುವಲ್ಲಿ ಮನುಜನ ಪ್ರವೃತ್ತಿಯು (ಸ್ವಕೀಯ ಅಭಿರುಚಿ-ಸತ್ವ ಸಾಮರ್ಥ್ಯಗಳೂ) ಪ್ರಧಾನ ಪಾತ್ರವನ್ನು ವಹಿಸುತ್ತದೆ. ಅವನು ಬೆಳೆಯುವ ಮನೆತನ, ವಂಶವಾಹಿನಿಗಳೂ, ಪರಿಸರ, ಪ್ರಾದೇಶಿಕ ಭೂಗೋಳ, ಹವಾಮಾನ, ಭಾಷೆ ಸಾಹಿತ್ಯ ಕಲೆ ಪದ್ಧತಿಗಳು ಹಾಗೂ ಸಾಮಾಜಿಕ ಆರ್ಥಿಕ ಸಾಂಸ್ಕೃತಿಕ ರಾಜನೈತಿಕ ಸ್ಥಿತಿಗತಿಗಳು, ಮತ-ನಂಬಿಕೆಗಳು, ಸಂಗ-ಸಹವಾಸ ಮುಂತಾದ ಹಲವು ಅಂಶಗಳು ಪ್ರವೃತ್ತಿಯನ್ನು ಬಹುಮಟ್ಟಿಗೆ ಪ್ರಭಾವಗೊಳಿಸುತ್ತವೆ. ಇದಲ್ಲದೆ ಸ್ವಾರ್ಥ ದ್ವೇಷ ಲೋಭಾದಿಗಳೂ ಅಥವಾ ದಯೆ ಸ್ನೇಹ ಕರ್ತವ್ಯನಿಷ್ಠೆಗಳೂ ಮುಂತಾದ ಆಂತರಿಕ ಗುಣ-ದೋಷಗಳು ಪ್ರವೃತ್ತಿಯನ್ನು ಬಹಳವಾಗಿ ನಿಯಂತ್ರಿಸುತ್ತವೆ. ಒಟ್ಟಿನಲ್ಲಿ ಪ್ರವೃತ್ತಿಯೆನ್ನುವುದು ಹುಟ್ಟಿದಾಗಿನಿಂದ ಸಾಯುವ ತನಕ ನಮ್ಮ ಸಂಗಾತಿಯೇ ಸರಿ!
ಕಾಡಿನಂಚಿನಲ್ಲಿ ಹುಟ್ಟಿ ಬೆಳೆದ ಜನಾಂಗಗಳಲ್ಲಿ ಧೈರ್ಯ, ದೇಹಬಲ, ನಿಸರ್ಗದ ಕುರಿತಾಗ ಸೂಕ್ಷಾ್ಮವಲೋಕನಶಕ್ತಿಯೂ ಕಾಡೊಳಗಿನ ದಾರಿದಿಕ್ಕುಗಳ ಪರಿಜ್ಞಾನವೂ, ಅಪಾಯವನ್ನು ಎದುರಿಸುವ ಕಲೆಯೂ, ಗಿಡಮೂಲಿಕೆಗಳನ್ನು ಗುರುತಿಸುವ ಕೌಶಲವೂ ಯಾವ ಔಪಚಾರಿಕ ತರಬೇತಿಯಿಲ್ಲದೆಯೂ ಕರಗತವಾಗಿಬಿಡುತ್ತದೆ! ಆಡಳಿತ ಗೂಢಚರ್ಯಎ ಶಸ್ತ್ರಾಭ್ಯಾಸಗಳಲ್ಲಿ ತೊಡಗುವಂತಹ ಅರಸರ ವಂಶಗಳ ಮಕ್ಕಳಿಗೆ ಅವೆಲ್ಲ ಬೇಗನೆ ಅರ್ಥವೂ ಆಗುತ್ತವೆ, ಅಭ್ಯಾಸವೂ ಆಗಿಬಿಡುತ್ತವೆ! ಕಲಾವಿದರ ಮಕ್ಕಳಿಗೆ ಕಲಾಭಿಜ್ಞತೆಯೂ ಬೇಗನೆ ಮೈಗೂಡುತ್ತದೆ. ಅವರು ಕಲಾವಿದರಾಗದೆ ಹೋದರೂ, ಕಲಾಪ್ರಪಂಚದ ವಿಧಿವಿಧಾನ, ವ್ಯವಹಾರಾದಿಗಳ ಬಗ್ಗೆ ಚೆನ್ನಾಗಿಯೇ ತಿಳಿವಳಿಕೆಯಿರುತ್ತದೆ. ಕೃಷಿವಿಜ್ಞಾನದಲ್ಲಿ ಹಲವು ಡಿಗ್ರಿಗಳನ್ನು ಪಡೆದಿದ್ದೂ, ವಿದೇಶಗಳಲ್ಲಿ ಪತ್ರಿಕಾಮಂಡನ ಮಾಡಿದ್ದೂ, ಸ್ವಯಂ ವ್ಯವಸಾಯದ ಅನುಭವವಿಲ್ಲದ ಪ್ರೊಫೆಸರ್ಗಳಿಗಿಂತ, ವ್ಯವಸಾಯನಿರತ ರೈತರ ಕೃಷಿಜ್ಞಾನವು ಹೆಚ್ಚು ಆಳದ್ದು, ಪ್ರಯೋಗಾತ್ಮಕವಾದದ್ದು! ಏಕೆಂದರೆ ರೈತಕುಟುಂಬದಲ್ಲಿ ಹುಟ್ಟಿ ಬೆಳೆದು, ಹೊಲಗಳಲ್ಲಿ ಬೆವರಿಳಿಸಿ ದುಡಿಯುವ ಅವರು ಕೃಷಿವಿಜ್ಞಾನದ ಹಲವು ಸೂಕ್ಷ್ಮವಿಧಿವಿಧಾನಗಳನ್ನೂ, ಅನುಭವ – ಕೌಶಲಗಳನ್ನೂ ಅಪ್ರಯತ್ನವಾಗಿ ಕಲಿತುಬಿಟ್ಟಿರುತ್ತಾರೆ! ತ್ರಿಕಾಲಸ್ನಾನ, ಆಹ್ನಿಕ, ಗಂಟೆಗಟ್ಟಲೆ ಮಂತ್ರಪಠಣ, ಅಧ್ಯಯನ, ಜಪ-ನಿಯಮ-ಪೂಜಾದಿ ಕೈಂಕರ್ಯಗಳಲ್ಲೇ ತೊಡಗಿರುವ ಆಚಾರಶೀಲ ಮನೆತನದ ಮಕ್ಕಳಿಗೆ ಆ ಶಿಸ್ತಿನ ಜೀವನಶೈಲಿ ಕಷ್ಟವೆನಿಸದು! ಮರಳುಗಾಡಿನ ಜನರು ಅಲ್ಲಿನ ಬಿರುಬಿಸಿಲಲ್ಲಿ ಆರಾಮವಾಗಿ ಬದುಕುತ್ತಾರೆ. ಹಿಮಶೃಂಗವಾಸಿ ಜನರು ತೀವ್ರ ಚಳಿಗಾಲದಲ್ಲಿ ಘಟ್ಟದ ಕೆಳಗಿಳಿದು ವಾಸಿಸುತ್ತಾರೆ, ಚಳಿ ಕಡಿಮೆಯಾದಾಗ ಬೆಟ್ಟದ ಶೃಂಗಗಳಿಗೆ ಮರಳುತ್ತಾರೆ. ಸಾಮಾನುಸರಂಜಾಮುಗಳನ್ನೂ ಸಾಕುಪ್ರಾಣಿಗಳನ್ನೂ ಸಾಗಿಸಿಕೊಂಡು ಮನೆಮಂದಿಯೊಂದಿಗೆ ಆರಾರು ತಿಂಗಳಿಗೂ ಹೀಗೆ ಸ್ಥಳಾಂತರವಾಗುವುದು ಅವರಿಗೆ ಸ್ವಭಾವವೇ ಆಗಿಬಿಟ್ಟಿರುತ್ತದೆ! ಹೀಗೆ, ಹುಟ್ಟಿಬೆಳೆದ ಪರಿಸರಕ್ಕೆ ಒಗ್ಗಿಕೊಳ್ಳುತ್ತ, ತನ್ನ ಸ್ವಾಭಿರುಚಿ ಸ್ವಭಾವಗಳನ್ನು ಅಭಿವ್ಯಂಜಿಸುವ ಮಾನವನ ಪ್ರವೃತ್ತಿಯನ್ನೇ ಕೃಷ್ಣನು ‘ಗುಣ’ ಎಂದಿದ್ದಾನೆ. ‘ಗುಣ’ವೆನ್ನುವುದು ನಿಸರ್ಗವೇ ನಮಗಿತ್ತ ಕೊಡುಗೆ. ಅದರ ಬಗ್ಗೆ ಮೇಲರಿಮೆಯಾಗಲಿ ಕೀಳರಿಮೆಯಾಗಲಿ ಇರಬೇಕಿಲ್ಲ. ಅದನ್ನು ಗುರುತಿಸಿ, ಗೌರವಿಸಿ, ಸ್ವಾಭಿಮಾನದಿಂದ ಪೋಷಿಸಬೇಕು. ಆಗಲೇ ಮನುಷ್ಯನ ಅಂತರಂಗದ ನೈಜ ಶಕ್ತಿಸಾಮರ್ಥ್ಯಗಳ ವಿಕಾಸ.
ಡಾ. ಆರತೀ ವಿ. ಬಿ.
ಕೃಪೆ: ವಿಜಯವಾಣಿ

Leave a Reply