ನನ್ನ ಜನ್ಮಕರ್ಮಗಳು ದಿವ್ಯ

ನನ್ನ ಜನ್ಮಕರ್ಮಗಳು ದಿವ್ಯ

‘ಧರ್ಮಗ್ಲಾನಿಯಾದಾಗ, ಸಜ್ಜನರ ರಕ್ಷಣೆಗಾಗಿಯೂ ದುಷ್ಟದಮನಕ್ಕಾಗಿಯೂ ಧರ್ಮದ ಪುನರುಜ್ಜೀವನಕ್ಕಾಗಿಯೂ ಯುಗಯುಗದಲ್ಲೂ ಸಂಭವಿಸುತ್ತೇನೆ’ ಎಂದು ಭಗವಾನ್ ಕೃಷ್ಣನು ಮುಕ್ತಕಂಠದಿಂದ ಅರುಹಿದ್ದನ್ನು ನೋಡಿದೆವು. ತನ್ನ ಆ ದಿವ್ಯ ಜನ್ಮಕರ್ಮಗಳನ್ನು ಅಸಾಮಾನ್ಯವಾದವು ಎನ್ನುವುದನ್ನೂ ಹೇಳುತ್ತಾನೆ;
‘ನನ್ನ ಜನ್ಮಗಳೂ ದಿವ್ಯ ಕರ್ಮಗಳೂ ದಿವ್ಯ ವಾದದ್ದು ಇದನ್ನು ಯಾರು ಅರ್ಥಮಾಡಿಕೊಳ್ಳಬಲ್ಲರೋ ಅವರಿಗೆ ಪುನರ್ಜನ್ಮವಿಲ್ಲ, ಅವರು ನನ್ನನ್ನೇ ಹೊಂದುತ್ತಾರೆ.’ (4.9)
ಜೀವಗಳು ಜನ್ಮಜನ್ಮಾಂತರಗಳಲ್ಲಿ ತಾವೇ ಕಲ್ಪಿಸಿಕೊಂಡ ತಮ್ಮ ಅಪೂರ್ಣ ಆಸೆಗಳನ್ನು ಪೂರೈಸಿಕೊಳ್ಳಲು ಮತ್ತೆ ಮತ್ತೆ ಹುಟ್ಟುತ್ತಲೇ ಇರುತ್ತಾರೆನ್ನಲಾಗುತ್ತದೆ. ಆದರೆ ಪರಮಾತ್ಮನು ಜೀವರ ನಡುವೆ ಜೀವನಂತೆಯೇ ಹುಟ್ಟಿಬರುತ್ತಾನಾದರೂ ಆಶಾಪಾಶಕ್ಕೆಂದೂ ಸಿಲುಕದ ನಿತ್ಯಮುಕ್ತನು, ಅವನ ಜನ್ಮಧಾರಣೆಯ ಉದ್ದೇಶವೇ ಬೇರೆ. ಅವನು ಎಲ್ಲಿ ಹೇಗೆ ಯಾವಾಗ ಅವತರಿಸುತ್ತಾನೆನ್ನುವುದನ್ನು ಯಾರಿಂದಲೂ ಹೇಳಲಾಗದು – ‘ಜನ್ಮ – ಕರ್ಮ ಚ ಮೇ ದಿವ್ಯಮ್. ಪುರಾಣಗಳಲ್ಲುಕ್ತವಾದ ಹತ್ತಾರು ಅವತಾರಗಳಷ್ಟೇ ಭಗವಂತನ ಅವತಾರಗಳೆಂದಲ್ಲ.
ಸೃಷ್ಟಿ -ಸ್ಥಿತಿ-ಲಯಗಳೇ ಅವನ ಲೀಲಾನಾಟಕ. ಅದರೊಳಗೆ ವೇಷಕಟ್ಟಿ ಸ್ವೇಚ್ಛೆಯಿಂದ ಬಂದುಹೋಗುತ್ತಿರುವುದು ಅವನಿಗೇನು ಮಹಾಸಂಗತಿ? ಭಗವಂತನು ಧರ್ಮವ್ಯವಸ್ಥೆಯ ಪುನರುಜ್ಜೀವನಕ್ಕಾಗಿ ಆಗಾಗ ಮಾನುಷರೂಪ ತಾಳಿ ತನ್ನ ದಿವ್ಯವಿಭೂತಿಗಳನ್ನು ಅಭಿವ್ಯಂಜಿಸುತ್ತಾನೆ. ಅವನ ಆ ಶ್ರೀ ಕೃಪೆಯಿಂದ ಯಾವ ಅಸಾಧ್ಯಗಳು ಸುಸಾಧ್ಯವಾಗಿ ಬಿಡುತ್ತವೋ ಹೇಳಲಾಗದು! ‘ಯಾರು ಅವನ ಕೃಪೆಗೆ ಯೋಗ್ಯರು, ಯಾರು ಅಯೋಗ್ಯರು?’ ಎನ್ನುವ ನಮ್ಮ ಲೆಕ್ಕಾಚಾರಕ್ಕೂ ಅದು ಸಿಗದು. ಜನ್ಮಸಂಬಂಧಗಳ ವ್ಯಾಮೋಹವನ್ನು ಕಳಚಿಟ್ಟು, ಮುಕ್ತಿಯ ನೆಲೆಗೇರಬಲ್ಲ ಸಮಷ್ಟಿದೃಷ್ಟಿಯ ಜ್ಞಾನಿಗೆ ಮಾತ್ರ ಭಗವಲ್ಲೀಲೆಯನ್ನು ಗುರುತಿಸಲು ಸಾಧ್ಯ.
‘ಬಿಂದುವು ಸಿಂಧುವಿನಲ್ಲಿ ಗುರುತಿಲ್ಲದೆ ಕರಗಿಹೋದಂತೆ’, ಅವನು ‘ತನ್ನತನ’ವನ್ನು ಭಗವಂತನಲ್ಲಿ ಕರಗಿಸಿಕೊಂಡು ಸಾಯುಜ್ಯವನ್ನು ಪಡೆಯುತ್ತಾನೆ – ¬‘ಮಾಮೇತಿ ಸೊà—ರ್ಜುನ’. ‘ರಾಗ, ಭಯ ಕ್ರೋಧಾದಿಗಳನ್ನು ಬಿಟ್ಟವರಾಗಿ, ನನ್ನನ್ನೇ ತಮ್ಮಲ್ಲಿ ತುಂಬಿಕೊಂಡವರಾಗಿ (ಮನ್ಮಯಾಃ), ನನ್ನನ್ನೇ ಆಶ್ರಯಿಸಿದವರಾಗಿ ಜ್ಞಾನ ಮತ್ತು ತಪಸ್ಸಿನಿಂದ ಪೂತರಾಗಿ (ವ್ಯಾಮೋಹದ ಕೊಳೆಯನ್ನು ಕಳೆದುಕೊಂಡು ಪವಿತ್ರರಾಗಿ) ನನ್ನ ಭಾವವನ್ನೇ ಹೊಂದುತ್ತಾರೆ.’ (4.10)
‘ಯೌವನ ಸೌಂದರ್ಯ ಪದವಿ ಪ್ರತಿಷ್ಠೆ ಆಯಸ್ಸು ಸಂಬಂಧಗಳು ಶಾಶ್ವತವಾಗುಳಿಯುವುದಿಲ್ಲವಲ್ಲ’ ಎಂಬ ಭಯವು ತಪ್ಪಿದ್ದಲ್ಲ! ಈ ಕೈತಪು್ಪವ ಸ್ವಭಾವದ ಭೋಗದ ಬಗ್ಗೆ ಜ್ಞಾನಿಯು ನಿರ್ಲಿಪ್ತನಾದರೆ, ಮೋಹಾಂಧನು ಆ ಭೋಗಕ್ಕೆ ‘ಅವರಿವರು ಅಡ್ಡಿ’ ಎಂದು ಭ್ರಮಿಸಿ, ಕ್ರೋಧವನ್ನು ಬೆಳೆಸಿಕೊಳ್ಳುತ್ತಾನೆ. ಈ ರಾಗ, ಭಯ, ಕ್ರೋಧಗಳ ಚಕ್ರದಿಂದ ಬಿಡಿಸಿಕೊಂಡು, ಸೃಷ್ಟಿಲೀಲೆಯ ಒಡೆಯನಾದ ಭಗವಂತನನ್ನು ಭಾವಿಸುವವನೇ ಜಾಣ. ಮತಿಮನಂಗಳಲ್ಲಿ ಭಗವಂತನನ್ನೇ ತುಂಬಿಕೊಂಡು, ‘ನಾನು ನನ್ನದು’ ಎಂಬ ಅಹಮಿಕೆಯನ್ನು ಕರಗಿಸಿಕೊಂಡು, ಭಗವಂತನಲ್ಲಿ ಆಶ್ರಯಹೊಂದುತ್ತಾನೆ. ನಿತ್ಯಾನಿತ್ಯವಿವೇಚನೆಯ ಮೂಲಕ ಜ್ಞಾನವನ್ನು ಹೊಂದುತ್ತಾನೆ. ಇಹದ ಸಂಬಂಧಗಳಲ್ಲಿ ಸಿಕ್ಕುಗಟ್ಟಿರುವ ಮತಿಮನಂಗಳನ್ನು ಬಿಡಿಸಿ ಸ್ವತಂತ್ರವಾಗಿಸಲು ತಪಶ್ಚರ್ಯುಗೈಯುತ್ತಾನೆ. ನಿರಂತರ ಸಾಧನೆಯ ಮೂಲಕ ಅಂತರಂಗದ ಮೋಹದ ಕೊಳೆಯನ್ನು ತೊಳೆದುಕೊಂಡು ಶುದ್ಧನಾಗುತ್ತಾನೆ. ಹೀಗೆ ‘ಜ್ಞಾನಪೂತ’ನಾದವನು ‘ಭಗವದ್ಭಾವ’ವನ್ನು ಹೊಂದುತ್ತಾನೆ ಎಂದು ಸೂಚಿಸುತ್ತಿದ್ದಾನೆ ಕೃಷ್ಣ.
‘ನಾನು’ ಎನ್ನುವ ಅಹಮಿಕೆಯನ್ನು ಕರಗಿಸಿಕೊಂಡ ಮುಕ್ತಾತ್ಮನಿಗೆ ಇನ್ನು ಜನ್ಮಮರಣಗಳಿರವು. ಭಗವದ್ಭಾವದಲ್ಲಿ ತನ್ಮಯನಾದ ಆತನು ಮರಣಿಸಿದಾಗ ಭಗವತ್ಸಾಯುಜ್ಯವನ್ನು ಹೊಂದುತ್ತಾನೆ. ದೇವರ ಇಚ್ಛೆಯಂತೆ ಅಂತಹ ಮಹಾತ್ಮನೇನಾದರೂ ಬದುಕಿದ್ದು ಲೋಕಕರ್ಮಗಳಲ್ಲಿ ತೊಡಗಿದರೂ, ಅವನ ಅಂತರಂಗದಲ್ಲಿ ಭಗವಂತನ ಹೊರತು ಮತ್ತಾವ ಬೇರೆ ‘ಅಸ್ಮಿತೆ’ಗಳು ಉಳಿದಿರುವುದಿಲ್ಲ. ಲೋಕಜನರಿಗೆ ಆದರ್ಶಪ್ರಾಯನಾಗುತ್ತಾನೆ, ಗುರುವಾಗುತ್ತಾನೆ. ಜೀವನ್ಮುಕ್ತನ ಪಾಲಿಗೆ ‘ಭಗವದ್ಭಾವ’ವು ಸ್ವಭಾವವೇ ಆಗಿಬಿಡುತ್ತದೆ. ‘ಮಾರ್ಕೆಟ್’ ಗುರುಗಳಂತೆ ಆರೋಪಿತವೇಷವಲ್ಲ! ಅಂತಹ ‘ಮಹಾತ್ಮರ ಆಶ್ರಯ ನಮಗೆ ಸಿಗುವುದು ವಿರಳ, ದೈವಾನುಗ್ರಹದಿಂದ ಮಾತ್ರ’ ಎನ್ನುತ್ತಾರೆ ಶಂಕರಾಚಾರ್ಯರು ‘ದುರ್ಲಭಂ¬ ದೈವಾನುಗ್ರಹಹೇತುಕಂ¬ – ಮಹಾಪುರುಷಸಂಶ್ರಯಃ’ (ವಿವೇಕಚೂಡಾಮಣಿ).

ಡಾ. ಆರತೀ ವಿ.ಬಿ
ಕೃಪೆ: ವಿಜಯವಾಣಿ

Leave a Reply