ನಿರಭಿಮಾನವು ಆತ್ಮಘಾತಕ

ನಿರಭಿಮಾನವು ಆತ್ಮಘಾತಕ

‘ನಾಡು-ನುಡಿ-ಕುಲಗಳ ಬಗ್ಗೆಯೂ ಹಿಡಿದ ವೃತ್ತಿಯ ನಿರಭಿಮಾನ ಬೆಳೆದ ವ್ಯಕ್ತಿಯು ಕ್ರಮೇಣ ‘‘ತನ್ನತನ’’ ಕಳೆದುಕೊಳ್ಳುತ್ತ, ಬಾಹ್ಯದ ಪ್ರಭಾವಕ್ಕೆ ವಶವಾಗುತ್ತಾನೆ’ ಎನ್ನುವುದನ್ನು ರ್ಚಚಿಸುತ್ತಿದ್ದೆವು. ಕುಸಂಸ್ಕೃತ ಶಿಕ್ಷಣವ್ಯವಸ್ಥೆ, ಸ್ವಾರ್ಥಪ್ರೇರಿತ ರಾಜಕೀಯ ಶಕ್ತಿಗಳ ಕೈವಾಡ, ಪೋಷಕರ ಔದಾಸೀನ್ಯ – ಇವೆಲ್ಲ ಸೇರಿ ಆಧುನಿಕ ಭಾರತೀಯರ ಮನದಲ್ಲಿ ದೇಶ-ಧರ್ಮ-ಕುಲಾಚಾರಗಳ ಬಗ್ಗೆ ನಿರಭಿಮಾನ ಮೂಡಿಸುತ್ತಿದೆಯಷ್ಟೆ. ಈ ವ್ಯವಸ್ಥೆಯಲ್ಲಿ ಮಕ್ಕಳು ನಾಡನ್ನೂ ಅರಿಯದೆ, ನುಡಿಯನ್ನೂ ಸರಿಯಾಗಿ ಕಲಿಯದೆ, ದೇಶ-ಧರ್ಮ-ಸಂಸ್ಕೃತಿಗಳ ಪರಿಚಯವನ್ನೂ ಪಡೆಯದೆ, ಪಾಶ್ಚಾತ್ಯರ ಕಾರ್ಬನ್ ಕಾಪಿಗಳಾಗುವುದನ್ನೇ ‘ಜೀವನದ ಗುರಿ’ಯೆಂದೂ ಭ್ರಮಿಸತೊಡಗಿದ್ದಾರೆ! ಭಾರತವನ್ನು ಜನಾಂಗೀಯ ದ್ವೇಷ ಹಾಗೂ ದೋಷದೃಷ್ಟಿಯಿಂದ ನೋಡಿ ಅಪವ್ಯಾಖ್ಯಾನಿಸುವ ಪಾಶ್ಚಾತ್ಯ/ಪಾಶ್ಚಾತ್ಯಾವಲಂಬಿ ‘ವಿದ್ವಾಂಸ’ರ ಬರಹಗಳ ಮೂಲಕವೇ ಭಾರತವನ್ನು ‘ಅರ್ಥ’ಮಾಡಿಕೊಳ್ಳುವ ಈ ಪೀಳಿಗೆಗಳಿಗೆ, ‘ಚಾತುರ್ವಣ’ ಅಪಾರ್ಥವಾಗಿರುವುದು ಸಹಜ. ಆಕರ್ಷಕ ಆಂಗ್ಲಸಾಹಿತ್ಯವೇ ‘ಪ್ರಗತಿ-ಜ್ಞಾನ-ವಿಜ್ಞಾನಗಳ ಸಂಕೇತ’ ಎಂಬ ಮನೋದಾಸ್ಯದ ಪರಿಣಾಮವಾಗಿ ದೇಶಭಾಷಾದಾರಿದ್ರ್ಯ ಕಾಡುತ್ತಿದೆ. ನಮ್ಮ ಇತಿಹಾಸ ಪರಂಪರೆ ಧರ್ಮ ಕರ್ಮಗಳ ಯಥಾರ್ಥರೂಪವನ್ನು ಮೂಲದಲ್ಲೇ ಅಧ್ಯಯನ ಮಾಡಿ ಅರಿಯಲು ಬೇಕಾದ ಸಂಸ್ಕೃತಜ್ಞಾನವೂ ದೇಶಭಾಷಾ ಪರಿಣತಿಯೂ ಕುಗ್ಗುತ್ತಿವೆ. ಆಂಗ್ಲ ಅಂತರ್ಜಾಲತಾಣಗಳಲ್ಲಿ ಮಹಾಪುರುಷರನ್ನೂ, ರಾಜ-ರಾಣಿಯರನ್ನೂ, ಯೋಗಿಗಳನ್ನೂ, ಧರ್ಮ-ಕರ್ಮ-ಸಿದ್ಧಾಂತಗಳನ್ನೂ ಹೇಗೆ ಬಿಂಬಿಸಲಾಗುತ್ತದೋ, ‘ಹಾಗೆಯೇ’ ಅರ್ಥ ಮಾಡಿಕೊಳ್ಳಬೇಕಾದ ಸ್ಥಿತಿ! ಚಾತುರ್ವಣದ ವ್ಯಾಖ್ಯಾನವೂ ಹೀಗೆಯೇ ವಿಕೃತವಾಗಿವೆ! ಭಾರತವು ವೈವಿಧ್ಯಗಳ ಸಾಗರ. ಈ ವೈವಿಧ್ಯಗಳಲ್ಲೇ ಸಹಬಾಳ್ವೆ ನಡೆಸುವ ಕಲೆ ನಮಗೆ ಸ್ವಭಾವಸಿದ್ಧ! ಆದರೆ ತಮಗೆ ಒಪ್ಪಿಗೆಯಾದ ಏಕಮತ ಏಕಭಾಷೆ ಏಕಶೈಲಿ ಏಕಸಿದ್ಧಾಂತವನ್ನೇ ಎಲ್ಲರ ಮೇಲೂ ಹೇರಿ ‘ಸಮಾನತೆ’ ಸಾಧಿಸುವ ಹಠದ ಪರಕೀಯರಿಗೆ ಇದನ್ನು ಒಪ್ಪಿಕೊಳ್ಳಲು ಮನಸ್ಸಿಲ್ಲ! ನಮ್ಮ ವೃತ್ತಿನಿಷ್ಠೆಯನ್ನು ‘ಪ್ರಗತಿಹೀನತೆ’ಯೆಂದೂ, ಕುಲನಿಷ್ಠೆಯನ್ನು ‘ಜಾತೀಯತೆ’ಯೆಂದೂ, ಬಹುವಿಧ ಆರಾಧನಾಪದ್ಧತಿಗಳನ್ನು ‘ಧಾರ್ವಿುಕ-ಗೊಂದಲಗಳೆಂದೂ ವಿರೋಧಗಳೆಂದೂ’ ಬಿಂಬಿಸಿ, ಎಲ್ಲವನ್ನೂ ಅಪವ್ಯಾಖ್ಯಾನಿಸಿದರು. ನಮಗೂ ಅದನ್ನೇ ಒಪ್ಪಿಸುವುದಕ್ಕಾಗಿ ರಾಜತಂತ್ರವನ್ನೂ, ಶಿಕ್ಷಣಮಾಧ್ಯಮಗಳನ್ನೂ ತಿರುಚಿದರು. ಅವರ ‘ಕರಸಂಜಾತ’ರಾಗಿ ಬೆಳೆದು, ದೇಶಾಭಿಮಾನ ವೈಚಾರಿಕ ಸ್ವಾತಂತ್ರ್ಯ ಕಳೆದುಕೊಂಡ, ಸ್ವದೇಶಕ್ಕಿಂತ ಹೆಚ್ಚಾಗಿ ಶತ್ರುದೇಶಗಳಿಗೇ ನಿಷ್ಠೆ ತೋರುವ ‘ನಮ್ಮವರು’ ಸ್ವಾತಂತ್ರ್ಯಾನಂತರವೂ ಅದೇ ಕುಕಾರ್ಯ ಮುಂದುವರಿಸಿದರು. ಸಿನಿಮಾ, ರಂಗಭೂಮಿ, ‘ಸೇವಾ’ಸಂಸ್ಥೆಗಳು, ರಾಜಕಾರಣಗಳನ್ನೂ ಬಳಸಿ, ಸದಾ ದೋಷವೃತ್ತಾಂತಗಳನ್ನೇ ಕಥಿಸುವ ಚಾಳಿ ರೂಢಿಗೊಳಿಸಿದರು. ಇನ್ನು, ತಮ್ಮ ಸ್ವಂತ ಬುದ್ಧಿ ಬಳಸದೆ, ಮೂಲಸಾಹಿತ್ಯ-ಆಚಾರಗಳೊಂದಿಗೆ ಪ್ರಮಾಣಿಸಿಯೂ ನೋಡದೆ, ದೇಶ ಧರ್ಮ ಸಾಮಾಜಿಕನ್ಯಾಯಗಳ ಬಗ್ಗೆ ಯಾರೇ ಏನೇ ಅಸಂಬದ್ಧ ನುಡಿದರೂ, ಆಲಿಸಿ, ಅಂಗೀಕರಿಸುವ ನಿರಭಿಮಾನಿಗಳ ಔದಾಸೀನ್ಯ ಬೇಜವಾಬ್ದಾರಿತನವೂ ಇದಕ್ಕೆಲ್ಲ ಪುಷ್ಟಿಯಿತ್ತಿದೆ. ಒಟ್ಟಿನಲ್ಲಿ ನಾಡು ನುಡಿ ಕುಲ ವೃತ್ತಿ ಭಾಷೆ ಸಂಸ್ಕೃತಿಗಳಲ್ಲಿನ ‘ನಿರಭಿಮಾನ’ವು ಕ್ರಮೇಣ ಜನಾಂಗವೊಂದನ್ನು ತಾಯ್ಬೇರುಗಳಿಂದಲೇ ಸಡಿಲಗೊಳಿಸಿ ಬೀಳಿಸುವಷ್ಟು ಅಪಾಯಕಾರಿ ಎನ್ನುವುದನ್ನು ಗಮನಿಸಬಹುದು.
ಚಾತುರ್ವಣ ಅರ್ಥಪೂರ್ಣವಾಗಿ ನಡೆಯುತ್ತಿದ್ದ ಕಾಲದಲ್ಲಿ ಎಲ್ಲರಿಗೂ ಅವರವರ ಕುಲ-ವೃತ್ತಿ-ಧರ್ಮ-ಪರಂಪರೆಯಲ್ಲಿ ಪ್ರೀತಿ-ನಿಷ್ಠೆಗಳಿದ್ದವು. ವೃತ್ತಿ-ಪ್ರವೃತ್ತಿ-ದೇಶ-ಕಾಲಗಳ ಹಿನ್ನೆಲೆಯಲ್ಲಿ ಅವರವರ ಶೈಲಿಯಲ್ಲೇ ಅವರವರ ಆಚರಣೆ ರೂಢಿಸಿಕೊಳ್ಳುವ ಸ್ವಾತಂತ್ರ್ಯತ್ತು. ಎಲ್ಲರಿಗೂ ಅವರದೇ ಕುಲಗುರು, ಕುಲಪುರೋಹಿತ, ಜನಪ್ರತಿನಿಧಿ, ಆಂತರಿಕ ನಿಯಮ, ಸಾಂಸ್ಕೃತಿಕ ವೈಶಿಷ್ಟ್ಯಳಿದ್ದವು. ರಾಜನೂ ಆಡಳಿತವೂ ಇವರ ಆಂತರಿಕ ವ್ಯವಸ್ಥೆಯಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಹಾಗಿದ್ದೂ ಅನಾದಿಯಿಂದ ಅದೆಷ್ಟೋ ದೇಶಕಾಲೋಚಿತ ಆಂತರಿಕ ಬದಲಾವಣೆಗಳೂ ಆಗುತ್ತಲೇ ಬಂದಿವೆ. ಆದರೆ ಹೊರಗಡೆಯ ಹಸ್ತಕ್ಷೇಪಗಳು ಪ್ರಾರಂಭವಾದಾಗಲೇ ಸತ್ವನಾಶ ಪ್ರಾರಂಭವಾದದ್ದು. ಮೊಟ್ಟೆ ಒಳಗಿಂದ ಒಡೆದಾಗ ‘ಜೀವನ ಪ್ರಾರಂಭ’, ಹೊರಗಿನಿಂದ ಒಡೆದರೆ ‘ಜೀವನಾಶ’ ಅಲ್ಲವೆ?

ಡಾ. ಆರತೀ ವಿ. ಬಿ.
ಕೃಪೆ: ವಿಜಯವಾಣಿ

Leave a Reply