‘ಫಲಹೇತುವಾಗಿ ಕರ್ಮವೆಸಗದಿರು’

‘ಫಲಹೇತುವಾಗಿ ಕರ್ಮವೆಸಗದಿರು’

‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು’ ಎನ್ನುವ ತಥ್ಯವನ್ನು ಮನಗಾಣಿಸುತ್ತಿದ್ದ ಶ್ರೀಕೃಷ್ಣನು ಹೀಗೆ ಮುಂದುವರೆಸುತ್ತಾನೆ: ಮಾ ಕರ್ಮಫಲಹೇತುರ್ಭೂಃ – ( ಫಲವನ್ನೇ ಹೇತುವನ್ನಾಗಿಸಿಕೊಂಡು ಕರ್ಮ ಮಾಡಬೇಡ)
‘ಅಲ್ಲ! ಫಲಹೇತುವಿಲ್ಲದೆ ಕರ್ಮ ಮಾಡುವುದು ಹೇಗೆ ಸಾಧ್ಯ ?’ ಅನಿಸಬಹುದು. ಕೃಷ್ಣನು ತಿಳಿಸಹೊರಟಿರುವುದು, ‘ಮಾಡಿದ ಕರ್ಮವು “ಬಂಧನ” ಕ್ಕೆ ಕಾರಣವಾಗಿದೆ, ಹೇಗೆ ಬಂಧನದಿಂದ “ಬಿಡುಗಡೆ” ಯ ಸಾಧನವಾಗಬಹುದು?’ ಎನ್ನುವುದನ್ನು. ಫಲಗಳನ್ನೇ ಆಶಿಸುತ್ತ ಕರ್ಮ ಮಾಡುವುದರಿಂದ ತೃಪ್ತಿಯೂ ಬಾರದು, ನೈಪುಣ್ಯವೂ ವರ್ಧಿಸದು. ಫಲಾಭಿಲಾಷೆಯಿಂದಾಗಿ ತತ್ಸಂಬಂಧಿಯಾದ ಸುಖದುಃಖಗಳು ಜಾಲದಂತೆ ಅವರಿಸಿ ಕಟ್ಟಿಹಾಕುತ್ತವೆ. ಕರ್ಮಚಾಪಲ್ಯವು ಚಟವಾಗಿ ಅತಿಯಾಗಿ ಬೆಳೆದು, ಮನುಷ್ಯನು ಅರ್ಥಹೀನ ಪರದಾಟದಲ್ಲಿ ತೊಡಗಿ, ತನು ಮನ ಸಮಯಗಳನ್ನು ವ್ಯಯಿಸಿಕೊಳ್ಳುತ್ತಾನೆ ಅಷ್ಟೆ. ಇಂತಹ ಅರ್ಥಹೀನ workaholism ನಿಂದ ಅಶಾಂತಿ ಅತೃಪ್ತಿ ಆಯಾಸಗಳೇ ಹೆಚ್ಚು. ಕೊನೆಗೊಂದು ದಿನ ಸಾಕಾಗಿ, ಜಿಗುಪ್ಸೆ ಮೂಡಿ, ಎಲ್ಲವನ್ನೂ ಕೈಚೆಲ್ಲಿ ಕೂರುವಂತಾದೀತು! ‘ ಕರ್ಮ ಮಾಡುವ ಪರಿ ಇದಲ್ಲ, ಬೇರುಂಟು’ ಎನ್ನುವುದು ಕೃಷ್ಣನ ಮಾತಿನ ತಾತ್ಪರ್ಯ. ಚಾಕುವನ್ನು ತಪ್ಪಾಗಿ ಬಳಸಿದರೆ ಕೈಗೆ ಗಾಯವಾಗುವಂತೆಯೇ, ಕರ್ಮವನ್ನು ಫಲಹೇತುವಾಗಿ ಮಾತ್ರವೇ ಬಳಸಿದರೆ ಬಂಧನ ನೋವುಗಳು ತಪ್ಪಿದ್ದಲ್ಲ. ಲೌಕಿಕ-ಜೀವನದಲ್ಲಿ ಎತ್ತರೆತ್ತರದ ಸ್ಥಾನಮಾನ ಧನ ಕೀರ್ತಿ ಅಧಿಕಾರಗಳಲ್ಲಿ ಮೆರೆದ ದೊಡ್ಡ ವ್ಯಕ್ತಿಗಳೂ ಕೊನೆಕೊನೆಗೆ ಹತಾಶೆ ಖಿನ್ನತೆಗಳಿಗೆ ಜಾರುವುದು ಈ ಕಾರಣದಿಂದಾಗಿಯೇ! ಕರ್ಮವನ್ನು ಮಾಡಿದ್ದು ತಪ್ಪಲ್ಲ, ಮಾಡಿಯೂ ಅಂತರಂಗದಲ್ಲಿ ‘ಕಳಚಿಕೊಳ್ಳದೆ’ ಉಳಿದಿದ್ದು ಮೂರ್ಖತನ! ನಿರ್ಲಿಪ್ತಿ ಹಾಗೂ ಸ್ಥೈರ್ಯಗಳೇ ಆತ್ಯಂತಿಕ ಯಶಸ್ಸಿನ ಸೂತ್ರಗಳು. ಆರ್ಷಪರಂಪರೆಯು ಸಾಕ್ಷಾತ್ಕರಿಸಿಕೊಂಡ ಈ ರಹಸ್ಯವನ್ನೇ ಕೃಷ್ಣನು ನೆನಪಿಸುತ್ತಿದ್ದಾನೆ ಮಾ ಕರ್ಮಫಲಹೇತುರ್ಭೂಃ ಎಂದು.
ಕರ್ಮವು ಬಂಧನಕ್ಕೂ ಕಾರಣವಾಗಬಹುದು, ಬಿಡುಗಡೆಗೂ ಕಾರಣವಾಗಬಹುದು. ಅಂತರಂಗದ ಜಾಟಿಲ್ಯವನ್ನು ಕರ್ಮದ ಮೂಲಕವೇ ಬಿಡಿಸಿಕೊಳ್ಳುವ ವಿಷಯದಲ್ಲಿ ಶ್ರೀಮಾತೆ ಶಾರದಾದೇವಿಯವರು ನೀಡುವ ಉದಾಹರಣೆ ಮನೋಜ್ಞ ‘ಮಗು, ಒಂದು ಕಡ್ಡಿಯ ಸುತ್ತ ಬಣ್ಣಬಣ್ಣದ ದಾರಗಳನ್ನು ಸುತ್ತಿ ಸುತ್ತಿ ಇಟ್ಟಿದ್ದೀಯೇ ಎಂದಿಟ್ಟುಕೊ. ಸುತ್ತುವ “ಕರ್ಮ”ದಿಂದ ಬಂಧನವಾಗಿದೆ, ಈಗ ಅದೇ ದಾರವನ್ನು ವಿರುದ್ಧ ದಿಕ್ಕಿನಲ್ಲಿ (ಕರ್ಮಯೋಗದ ಮೂಲಕ ) ಸುತ್ತುತ್ತ ಬಂದರೆ, ದಾರ ಬಿಚ್ಚಿಕೊಳ್ಳುತ್ತ ಹೋಗುತ್ತದೆ, ಬಿಡುಗಡೆಯಾಗುತ್ತದೆ!’ ಸರಳೋದಾಹರಣೆಯ ಮೂಲಕ ಎಂತಹ ದೊಡ್ಡ ಸಿದ್ಧಾಂತವನ್ನೇ ದೃಷ್ಟಾಂತೀಕರಿಸಿದ್ದಾರೆ ಆ ಮಹಾತಾಯಿ! ‘ದಾರ ಸುತ್ತುವ ಕರ್ಮ’ ಒಂದೇ; ಆದರೆ ‘ ದಿಕ್ಕುಗಳು ‘ ಬೇರೆ ಬೇರೆ!ಒಂದು ‘ಬಂಧಿಸಿದರೆ’ ಮತ್ತೊಂದು ‘ಬಿಡಿಸುತ್ತದೆ’! ಕರ್ಮವೂ ಅಷ್ಟೆ, ಫಲಾಭಿಲಾಷೆಯ ದಿಕ್ಕಿನಲ್ಲಿ ಹೊರಟರೆ ಕಟ್ಟಿಹಾಕುತ್ತದೆ. ನಿರ್ಲಿಪ್ತವಾದರೆ ಬಿಡುಗಡೆ ಮಾಡಿಸುತ್ತ ಸಾಗುತ್ತದೆ.
ಫಲಹೇತುವಾಗಿ ಕರ್ಮ ಮಾಡುವುದರಲ್ಲಿ ದುಃಖ ದುಗುಡಗಳೇ ಹೆಚ್ಚು. ಆದರೆ ಈ ಸತ್ಯವು ಸಾಮಾನ್ಯವಾಗಿ ನಮಗಾರಿಗೂ ಅರ್ಥವೇ ಆಗುವುದಿಲ್ಲ! ಬಹುಶಃ ನಾವು ಹಲವು ಜನ್ಮಗಳಲ್ಲಿ ಹಾದು ಕೈಸುಟ್ಟುಕೊಂಡೇ ಪಾಠ ಕಲಿಯಬೇಕೋ ಏನೋ!
ಸ್ವಲ್ಪ ನಿಂತು, ಆಚಾರ್ಯ ಕೃಷ್ಣನ ಮಾತನ್ನು ಮನನ ಮಾಡಿ ಒಮ್ಮೆ ಪ್ರಯೋಗಿಸಿನೋಡಬಾರದೇಕೆ? ಹಾಗೆ ಮಾಡುವುದರಿಂದ ವಿದ್ಯಾರ್ಥಿಗಳು ಕೇವಲ ಪರೀಕ್ಷಾ ಪರಿಣಾಮಗಳನ್ನೇ ನೆನೆಯುತ್ತ ಚಡಪಡಿಸುವುದು ತಪ್ಪುತ್ತದೆ Fat Pocket Job ನ ಕನಸುಕಾಣುತ್ತ ಪ್ರವೃತ್ತಿಗೆ ವಿರುದ್ಧವಾದ ವೃತ್ತಿ-ಉದ್ಯೋಗಗಳಿಗೆ ತಗಲುಹಾಕಿಕೊಂಡು ಆಜೀವನವೂ ‘Job Satisfaction ಇಲ್ಲ’ ಎಂದು ಕೊರಗುವುದು ತಪ್ಪುತ್ತದೆ. ಧನಾಕಾಂಕ್ಷಿಗಳು ಶೀಘ್ರ-ಲಾಭದ ಮಾಯಾಮೃಗವನ್ನಟ್ಟುತ್ತ ಅಕ್ರಮ ಅನಾಚಾರಗಳಿಗೆ ಇಳಿದು ಚಾರಿತ್ರ್ಯಹಾನಿ ಮಾಡಿಕೊಳ್ಳುವುದು ತಪ್ಪುತ್ತದೆ. ಬಯಸಿದ್ದು ಸಿಗಲಿಲ್ಲವೆಂದಾಕ್ಷಣ ಯುವಜನತೆಯು ಹೆಂಡದಂಗಡಿಗೆ ಶರಣಾಗಿ ತನು ಮನ ಧನಗಳನ್ನು ಹಾಳು ಮಾಡಿಕೊಳ್ಳುವುದೂ ತಪ್ಪುತ್ತದೆ. ವ್ಯಾಪಾರಿಗಳು, ಅನಿರಿಕ್ಷಿತ ಕಷ್ಟ ನಷ್ಟಗಳಿಗೆ ಹೆದರದೆ ಮುಂದುವರೆಯುವ ಸ್ಥೈರ್ಯವನ್ನು ಪಡೆಯಲು ಸಾಧ್ಯವಾಗುತ್ತದೆ. ಮಾರಣಾಂತಿಕ ಅಧಿವ್ಯಾಧಿಗಳಿಗೆ ತುತ್ತಾದವರೂ, ಜೀವನದ ಆ ವಿಚಿತ್ರ ಪರೀಕ್ಷೆಗಳನ್ನು ಶಾಂತವಾಗಿ ಎದುರಿಸುವ ಛಲಬಲಗಳನ್ನೂ ತಮ್ಮೊಳಗೇ ಕಂಡುಕೊಳ್ಳುವಂತಾಗುತ್ತದೆ. ಫಲದ ವಿವಕ್ಷೆ ಬೇಡವೇ ಬೇಡವೆಂಬುದು ಕೃಷ್ಣನ ಆಗ್ರಹವಲ್ಲ. ಆದರೆ ಫಲಾಫಲಗಳ ಅನಿಶ್ಚಿತತೆಯನ್ನು ಮನಗಂಡು ಸಂಯಮದಿಂದ ಇರಬೇಕೆನ್ನುವ ಕಿವಿಮಾತು ಇದಾಗಿದೆ.
ಏಕೆಂದರೆ ಫಲದ ಹುಚ್ಚು ಕುಗ್ಗುತ್ತಿದ್ದಂತೆ ಮನಸ್ಸು ಶಾಂತವಾಗುತ್ತದೆ, ಬುದ್ಧಿಯು ಊರ್ಧ್ವಗಾಮಿಯಾಗುತ್ತದೆ, ಸತ್ಯ ಧರ್ಮ ಕರ್ಮಗಳ ತಥ್ಯಸಾಕ್ಷಾತ್ಕಾರವೂ ಆಗತೋಡಗುತ್ತದೆ. ಜೀವನದ ಉನ್ನತಾರ್ಥಗಳು ಸ್ಪಷ್ಟವಾಗುತ್ತವೆ. ಬಾಳು ಬಂಗಾರವಾಗುತ್ತದೆ. ಹೀಗೆ ಕರ್ಮರಹಸ್ಯವನ್ನರಿತು ರಾಜಮಾರ್ಗದಲ್ಲಿ ನಡೆಯಬಲ್ಲ ಜಾಣರಿಗೆ ಭೋಗವೂ ತ್ಯಾಗವೂ ಯೋಗವೂ ಎಲ್ಲವೂ ಸುಗಮವಾಗುತ್ತ ಹೋಗುತ್ತವೆ. ನಿರ್ಲಿಪ್ತನಾದವನು ಸೋಲು ಗೆಲುವುಗಳಿಗೂ ಮಾನಾಪಮಾನಗಳಿಗೂ ಮರಣಕ್ಕೂ ಅಂಜದೆ ಆತ್ಮಾರಾಮನಾಗಿರಬಲ್ಲ. ಹಾಗಾಗಿ ಆತನ ಕಾರ್ಯವೈಖರಿಯೂ ಅತ್ಯಂತ ಪ್ರಭಾವಶಾಲಿಯಾಗಿರುತ್ತದೆ, ಪರಿಣಾಮಕಾರಿಯಾಗಿರುತ್ತದೆ. ರಾಮ ಕೃಷ್ಣ ಜನಕಾದಿ ರಾಜರ್ಷಿಗಳೂ, ಚಾಣಕ್ಯ ವಿದ್ಯಾರಣ್ಯಾದಿ ರಾಜಗುರುಗಳೂ, ವಿಶ್ವೇಶ್ವರಯ್ಯ ವಿವೇಕಾನಂದಾದಿ ಮಹಾತ್ಮರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಭೂತಪೂರ್ವ ಸಾಧನೆಗಳನ್ನು ಮಾಡಲು ಅವರಿಗೆ ಅದಮ್ಯ ಶಕ್ತಿಯು ಪ್ರಾಪ್ತವಾಗುತ್ತಲೇ ಇದ್ದದ್ದು ಎಲ್ಲಿಂದ? ಫಲಹೇತುವಿಲ್ಲದ ನಿಃಸ್ವಾರ್ಥ ಕರ್ಮನಿಷ್ಠೆಯಿಂದಾಗಿಯೇ. ನಿರ್ಲಿಪ್ತಾಂತರಂದಲ್ಲೇ ಪರಮಾತ್ಮನ ಕೃಪೆಯೂ ಫಲಿಸುವುದರಿಂದ ಅಂತಹ ವ್ಯಕ್ತಿಯ ಶಕ್ತಿಯು ಅನಂತವಾಗುತ್ತದೆ!
ಡಾ.ಆರತಿ ವಿ ಬಿ
ಕೃಪೆ:ವಿಜಯವಾಣಿ

Leave a Reply