ಬದುಕಿಗೆ ಭಗವದ್ಗೀತೆ – ಇರುವುದು ಇಲ್ಲವಾಗದು, ಇಲ್ಲದಿರುವುದು ಇರಲಾರದು – ಇದೇ ತತ್ವದರ್ಶಿಯ ಬೋಧೆ

ಬದುಕಿಗೆ ಭಗವದ್ಗೀತೆ – ಇರುವುದು ಇಲ್ಲವಾಗದು, ಇಲ್ಲದಿರುವುದು ಇರಲಾರದು – ಇದೇ ತತ್ವದರ್ಶಿಯ ಬೋಧೆ

‘ವ್ಯಥೆಪಡದೆ ಇರಬಲ್ಲವನೇ ಧೀರ’ ಎನ್ನುವುದನ್ನು ಕೃಷ್ಣನು ವಿವರಿಸಿದ್ದನ್ನು ನೋಡಿದೆವಷ್ಟೆ? ವ್ಯಥೆ ಆಗುವುದಾದರೂ ಏಕೆ? ನೆಚ್ಚಬಾರದ್ದನ್ನು ನೆಚ್ಚಿನೊಂದಾಗ, ನೆಚ್ಚಬೇಕಾದ್ದನ್ನು ನೆಚ್ಚದೆ ಅದು ಕೈತಪ್ಪಿ ಹೋದಾಗ! ಸ್ಥಿರವಾದ ನೆಲದ ಮೇಲೆ ನಿಂತರೆ ಸ್ಥಿರವಾಗಿ ನಿಲ್ಲುತ್ತೇವೆ. ಆದರೆ ಸುತ್ತುತ್ತಿರುವ ಯಂತ್ರದ ಮೇಲೆ ನಿಂತರೆ, ತೂರಾಡುವುದೂ ಬೀಳುವುದು ತಪ್ಪುವುದೇ? ಅಂತೆಯೇ ನಮ್ಮ ಜೀವನದಲ್ಲೂ ಶಾಶ್ವತವು ಯಾವುದೋ ಅದು ‘ನಮ್ಮ ನೆಲೆ’ಯಾದಲ್ಲಿ ನಮ್ಮ ಅಂತರಂಗವೂ ಶಾಂತಿ-ಸ್ಥೈರ್ಯಗಳನ್ನು ಹೊಂದುತ್ತದೆ. ಅದರ ಬದಲಾಗಿ ಅನಿಶ್ಚಿತವೂ ಪರಿವರ್ತನಶೀಲವೂ ಆದ ವಿಷಯ-ವಸ್ತು-ವ್ಯಕ್ತಿ-ಸಂದರ್ಭಗಳನ್ನೇ ‘ನಮ್ಮ ನೆಲೆ’ಯನ್ನಾಗಿಸಿ ಕೊಂಡರೆ, ನಮ್ಮ ಅಂತರಂಗದಲ್ಲಿ ಶಾಂತಿ-ಸ್ಥೈರ್ಯಗಳು ಮೂಡುವುದಾದರೂ ಹೇಗೆ? ಕೃಷ್ಣನು ಈ ವಿವೇಕವನ್ನೇ ಅರ್ಜುನನಿಗೆ ಬೋಧಿಸುತ್ತಾನೆ-
ನಾಸತೋ ವಿದ್ಯತೆ ಭಾವೋ ನಾಭಾವೋ ವಿದ್ಯತೆ ಸತಃ I ಉಭಯೋರಪಿ ದೃಷ್ಟ್ವೋಂತಸ್ತ್ವನಯೋಸ್ತತ್ವದರ್ಶಿಭಿಃ II
ಇಲ್ಲದಿರುವುದು ‘ಸತ್ಯ’ವಾಗದು, ಅಂತೆಯೇ ಇರುವ ಸತ್ಯವು ‘ಇಲ್ಲ’ವಾಗದು. ಈ ಎರಡರ ಸ್ವಭಾವ-ಸ್ವರೂಪಗಳನ್ನು ತತ್ವದರ್ಶಿಯು ಅರ್ಥಮಾಡಿಕೊಂಡಿರುತ್ತಾನೆ.(ಭ-೨-೧೬)
ಕ್ಷಣಕ್ಷಣಕ್ಕೂ ರೂಪದಾಳಿ ಗತಿಸುತ್ತಿರುವ ದೃಶ್ಯಪ್ರಪಂಚವನ್ನು ನೋಡುತ್ತಲೇ ಇದ್ದೇವಷ್ಟೆ? ಇದರ ಸ್ವರೂಪವೇ ಅಸತ್ . ಇದರಲ್ಲಿ ವ್ಯಕ್ತಿಗಳು, ವಸ್ತುಗಳು, ಜೀವನದ ಸಂದರ್ಭಗಳು, ಸುಖದುಃಖಗಳು, ನಿಸರ್ಗವೂ ಸೇರಿದೆ. ಇವುಗಳೆಲ್ಲ ಹುಟ್ಟಿಬರುತ್ತವೆ, ಸ್ವಲ್ಪಕಾಲ ಇದ್ದು ಅಳಿದು ಹೋಗುತ್ತವೆ- ಇದೇ ಸೃಷ್ಟಿಚಕ್ರದ ಲೀಲೆ. ಇವುಗಳು ಯಾವುವೂ ಶಾಶ್ವತವಲ್ಲ, ಇರುವಷ್ಟು ಕಾಲವೂ ಬಾಲ್ಯ, ಯೌವನ-ವೃದ್ಧಾಪ್ಯ-ಮರಣಗಳಲ್ಲದೆ, ನೈಸರ್ಗಿಕ ವಿಕಾಸ-ವಿಕೋಪಗಳೂ ಸೇರಿ ಬದಲಾಗುತ್ತಲೇ ಇರುತ್ತವೆ. ಇವು ಸೃಷ್ಟಿಲೀಲೆಯಲ್ಲಿ ಇದ್ದು ಹೋಗುವ ತಾತ್ಕಾಲಿಕ ಅಸ್ತಿತ್ವಗಳು. ಈ ಲೋಕದಲ್ಲಿರುವಾಗ ನಾವು ಕ್ಷಣಿಕವಾದ ಇವುಗಳಲ್ಲಿ ಯಾವುದನ್ನಾದರೂ ಭದ್ರವಾಗಿ ಹಿಡಿಯಹೊರಟರೆ, ಅದು ಸರಿಯುತ್ತದೆ, ನಾವು ಬೀಳುತ್ತೇವೆ, ವ್ಯಥೆಪಡುತ್ತೇವೆ! ನಾವು ಒಂದಷ್ಟು ವ್ಯಕ್ತಿ-ವಸ್ತು-ಸಂಪತ್ತುಗಳನ್ನು ದಕ್ಕಿಸಿಕೊಂಡು ನೂರುವರ್ಷ ಬದುಕಿ ಬಾಳಬಹುದೆನೋ, ನಿಜ. ಆದರೆ, ನೂರು ವರ್ಷಗಳಾದ ಮೇಲಾದರೂ ಅದನ್ನೆಲ್ಲ ಬಿಟ್ಟು ಹೋಗಲೇಬೇಕಷ್ಟೆ?! ಅದಕ್ಕೆ ಇದನ್ನು ‘ಅಸತ್’ ! ಈ ‘ಅಸತ್ತಿ’ನ ಸ್ವರೂಪ ಅರ್ಥವಾಗಿ ಅಂಗೀಕಾರವಾದ ತಕ್ಷಣ ನಮ್ಮಲ್ಲಿ ದುಃಖ ಕುಗ್ಗುತ್ತದೆ, ಶಾಂತಿ ಮರುಕಳಿಸುತ್ತದೆ, ಆತ್ಮಬಲ ಎಚ್ಚೆತ್ತುಕೊಳ್ಳುತ್ತದೆ. ಜೀವನವು ಹದದಲ್ಲಿ ಸಾಗುತ್ತದೆ. ತತ್ವದರ್ಶಿಯಾದ ಪಂಡಿತನು ಹೀಗೆ ಅಸತ್ ಸ್ವರೂಪವನ್ನು ಮೀರಿ ನಿಂತು ಸತ್ ಸ್ವರೂಪದತ್ತ ತಿರುಗುತ್ತಾನೆ.

ಈ ಸತ್ ಸ್ವರೂಪವಾದರೂ ಯಾವುದು? ಬದಲಾಗುವ ‘ಅಸತ್’ ಸೃಷ್ಟಿಯ ಒಳಗೂ ಹೊರಗೂ ಶಾಶ್ವತವಾದ ಅಸ್ತಿತ್ವವೊಂದಿದೆ- ಅದೇ ಸತ್. ಅದು ವೃದ್ಧಿಹ್ರಾಸಗಳನ್ನು ಹೊಂದದು, ಬದಲಾಗದು, ಅದೇ ನಮ್ಮ ಒಳಗಿನೊಳಗಿನೊಳಗಿರುವ ಆತ್ಮತತ್ವ. ಜಗತ್ತನ್ನೆಲ್ಲ ವ್ಯಾಪಿಸಿರುವ ಪರಮಾತ್ಮತತ್ವ. ಈ ಸತ್ ನ ಅನುಭವವೇ ’ನಮ್ಮ ನೆಲೆ’ಯಾದಾಗ, ನಾವು ಸ್ಥಿರವೂ, ಶಾಂತವೂ, ಪ್ರಸನ್ನವೂ ಆಗುತ್ತೇವೆ. ನಮ್ಮೊಳಗಿರುವ ಈ ನಿತ್ಯವೂ ನಿರ್ವಿಕಾರವೂ ಆದ ಚೈತನ್ಯಶಕ್ತಿಯ ಅನುಭವವನ್ನು ನಾವು ಪಡೆಯಬೇಕಾದರೆ ಬದಲಾಗುವ ದೃಶ್ಯಪ್ರಪಂಚದಿಂದ ಕಳಚಿಕೊಂಡು, ಸ್ವಲ್ಪ ಕಾಲ ನಮ್ಮೊಳಗೆ ನಾವು ಮುಳುಗಬೇಕು. ಆದರೆ ಹೊರಗಡೆಯ ವಸ್ತು-ವಿಷಯ-ಪ್ರಪಂಚದಿಂದ ಕಳಚಿಕೊಳ್ಳುವ ಧೈರ್ಯವಾಗಲಿ ಆಸಕ್ತಿಯಾಗಲಿ ಪುರುಸೊತ್ತಾಗಲಿ ನಮಗೆಲ್ಲಿ? ‘ಅದೇ ನಮ್ಮ ಬದುಕಿನ ಸರ್ವಸ್ವ’ ಎಂಬ ಮಮಕಾರದಲ್ಲಿರುತ್ತೇವೆ. ಕಣ್ಮುಂದೆ ಎಲ್ಲವೂ ಬದಲಾಗುತ್ತಿದ್ದರೂ ಗತಿಸಿಹೊಗುತ್ತಿದ್ದರೂ ಅದನ್ನೇ ಬಿಗಿದಿಟ್ಟುಕೊಂಡು ಉಳಿಸಿಕೊಂಡು ’ಸುಖಿಸುವ’ ‘ಶಾಂತಿಪಡೆಯುವ’ ಒದ್ದಾಟದಲ್ಲೇ ಇರುತ್ತೇವೆ! ಅದಕ್ಕೆ ಮೊದಲೇ ಹೇಳಿದ್ದು ಅಸತ್ತಿನಲ್ಲಿ ನೆಲೆ ನಿಂತರೆ ಚಲಿಸುವ ಯಂತ್ರದ ಮೇಲೆ ನಿಶ್ಚಲವಾಗಿ ನಿಲ್ಲುವ ವ್ಯರ್ಥಪ್ರಯತ್ನ ಮಾಡಿ ಸೋತಂತೆ ಎಂದು! ಇಂತಹ ಅಸತ್ತನ್ನು ನೆಚ್ಚಿದರೆ ವ್ಯಥೆ ತಪ್ಪೀತೆ?

ಆದರೆ ‘ತತ್ತ್ವದರ್ಶಿ’ಯ ರೀತಿಯೇ ಬೇರೆ. ‘ತತ್ವ’ವನ್ನು (ತತ್-ತ್ವ= ಅದರ ಸ್ವಭಾವ, ಸ್ವರೂಪ) ಯಥಾವತ್ತಾಗಿ ದರ್ಶಿಸುವವವನೇ ’ತತ್ವ’ದರ್ಶಿ. ಅವನು ಈ ಅಸತ್ ಪ್ರಪಂಚದ ಸ್ವರೂಪವನ್ನು ಗಮನಿಸಿ ಅರ್ಥಮಾಡಿಕೊಳ್ಳುತ್ತಾನೆ. ಅದರ ಬಗ್ಗೆ ಕಾಲ್ಪನಿಕ ಆಸೆ ಭರವಸೆಗಳನ್ನು ತಾಳಿ ಮೋಸಹೋಗುವುದಿಲ್ಲ, ಬದಲಾಗಿ, ತನ್ನೊಳಗಿನ ಸತ್ಯ-ಜ್ಞಾನ-ಆನಂದಗಳ ‘ಸತ್’ನ ನೆಲೆಯನ್ನು ಅರಸಿ ಅಲ್ಲೇ ನೆಲೆನಿಲ್ಲುತ್ತಾನೆ. ಅವನಿಗೆ ಶಾಂತಿ ಸ್ಥೈರ್ಯ, ಶಕ್ತಿಗಳು ಅಂತರಂಗದಿಂದಲೇ ಉಕ್ಕಿಬರಲಾರಂಭಿಸುತ್ತವೆ. ಅಂತಹವನಿಗೆ ಅಸತ್ ಪ್ರಪಂಚದ ಆಗುಹೋಗುಗಳು ತುಂಬ ಸುಖವನ್ನೋ ದುಃಖವನ್ನೋ ಉಂಟುಮಾಡುವುದಿಲ್ಲ, ಗಲಿಬಿಲಿಗೊಳಿಸುವುದೂ ಇಲ್ಲ. ಅವನ ನಿರ್ಲಿಪ್ತಿ ನಿಶ್ಚಲಮತಿಯು ಎಲ್ಲವನ್ನೂ ನಿಷ್ಪಕ್ಷಪಾತವಾಗಿ ವಿಮರ್ಶಿಸಲು ಸಮರ್ಥವೆನಿಸುತ್ತದೆ.
ಪ್ರಾಜ್ಞನು ಲೀಲಾಪ್ರಪಂಚದಲ್ಲಿನ ಆಗುಹೋಗುಗಳಲ್ಲಿ ಭಗವಂತನ ದಿವ್ಯ ಸೃಜನಶೀಲತೆಯ ಸೊಬಗನ್ನು ಆಸ್ವಾದಿಸುತ್ತಾನೆ. ತನ್ನ ಧರ್ಮಕರ್ಮಗಳನ್ನು ಅರಿತು ಪಾಲಿಸುತ್ತಾನೆ. ಅದರ ಫಲಾಫಲಗಳ ಬಗ್ಗೆ ತುಂಬ ತಲೆಕೆಡಿಸಿಕೊಳ್ಳುವುದಿಲ್ಲ. ಜೀವನದ ತಿರುವುಮುರುವುಗಳಿಂದ ಬಾಧೆಪಡುವುದಿಲ್ಲ. ‘ಇವೆಲ್ಲವೂ ಜಗಲ್ಲೀಲೆಯ ಅಂಕಗಳು’ ಎಂಬ ಅಂಗೀಕಾರದ ಭಾವ ಅವನಲ್ಲಿ ಮೂಡಿರುತ್ತದೆ.ಅಂತಹ ಶಾಂತನೂ, ಪ್ರಾಜ್ಞನೂ, ಸ್ಥಿರಚಿತ್ತನೂ ಆದ ಪಂಡಿತನೇ ಜೀವನದ ಸಂಗ್ರಾಮದಲ್ಲಿ ನಿಜವಾದ ವಿಜೇತನೆನಿಸುತ್ತಾನೆ ಕೂಡ! – ಇದು ಕೃಷ್ಣನ ಮಾತಿನ ಇಂಗಿತ.
ಡಾ ಆರತೀ ವಿ ಬಿ
ಕೃಪೆ : ವಿಜಯವಾಣಿ

Leave a Reply