ಬದುಕಿಗೆ ಭಗವದ್ಗೀತೆ- ತನ್ನೊಳಗೆ ತಾನು ತುಷ್ಟನಾಗಿರುವವನೇ ಸ್ಥಿತಪ್ರಜ್ಞ

ಬದುಕಿಗೆ ಭಗವದ್ಗೀತೆ- ತನ್ನೊಳಗೆ ತಾನು ತುಷ್ಟನಾಗಿರುವವನೇ ಸ್ಥಿತಪ್ರಜ್ಞ

ನಿರ್ವೇದ ಭಾವವನ್ನು ತಾಳಿ, ಯೋಗವನ್ನು ಸಿದ್ಧಿಸಿಕೊಳ್ಳುವ ಬಗ್ಗೆ ಕೃಷ್ಣನು ಹೇಳಿದ ಮಾತುಗಳನ್ನು ನೋಡಿದ್ದೇವೆ. ನಮ್ಮ ಬುದ್ಧಿಯು ಲೆಕ್ಕಾಚಾರ ಹಾಕಬಹುದು- “ಅಲ್ಲ! ಆಸೆಗಳನ್ನೇ ಬಿಟ್ಟಮೇಲೆ, ಮನುಷ್ಯನು ಕರ್ಮವನ್ನೇಕೆ ಮಾಡಬೇಕು?’ ಎಂದು. ಆದರೇ ಕಟುಸತ್ಯವೇನು ಗೊತ್ತೆ? ನಮ್ಮೊಳಗೆ ಅನುರಕ್ತಿಯೇ ಇರಲಿ, ವಿರಕ್ತಿಯೇ ಇರಲಿ, ಕರ್ತವ್ಯ-ಕರ್ಮಗಳನ್ನಂತೂ ಮಾಡಿ ಮುಗಿಸಲೇಬೇಕು. ಅಷ್ಟೇ ಅಲ್ಲ, ನಾವೇ ಕಟ್ಟಿ ತಂದ ಪೂರ್ವಕೃತದ ಸುಖದುಃಖಗಳ ಬುತ್ತಿಯನ್ನು ಖಾಲಿಮಾಡಿಯೇ ತೀರಬೇಕು! ಅಲ್ಲಿಯವರೆಗೂ ಕರ್ಮದಿಂದ ’ಕಳಚಿ’ಕೊಳ್ಳುವಂತಿಲ್ಲ! ನಮ್ಮ ಬುದ್ಧಿಯೂ ಮತ್ತೂ ತರ್ಕಿಸಬಹುದು- “ಸರಿ, ಕರ್ಮವನ್ನು ಮಾಡಲೇಬೇಕೆಂದಾದ ಮೇಲೆ, ಅನುರಕ್ತಿಯಿಂದಲೇ ಮಾಡಿದರಾಯಿತು, ವಿರಕ್ತಿ ಏಕೆ?” ಆದರೆ ಅನುರಕ್ತಿಯಿಂದ (ವ್ಯಾಮೋಹದಿಂದ) ಕರ್ಮಕ್ಕಿಳ್ದರೆ, ನಮ್ಮ ಮತಿ-ಮನಗಳು ಮತ್ತೆ ಕೊಳಕಾಗುತ್ತವೆ! ಪೂರ್ವಕೃತದ ಬುತ್ತಿಯನ್ನು ಕರಗಿಸಿಕೊಳ್ಳುವ ಬದಲು, ನಾವದನ್ನು ತುಂಬಿಕೊಳ್ಳುತ್ತ ಹೋಗುತ್ತೇವೆ! ಬಂಧನಕ್ಕೊಳಪಡುತ್ತೇವೆ! ಅನುರಕ್ತಿಯು ನಮ್ಮನ್ನು ’ಕರ್ಮ ಮಾಡುತ್ತಲೇ… ಇರುವ’ ವಿವಶತೆಗೆ ಸಿಲುಕಿಸುತ್ತದೆ. ವಿರಕ್ತಿಯು ಮಾಡಿಮುಗಿಸಿ, ಕಳಚಿಕೊಂಡು ಅಂತರ್ಮುಖವಾಗಿ ವಿರಮಿಸುವ ವಿವೇಕವನ್ನು ನೀಡುತ್ತದೆ.
ವಿರಕ್ತಪುರುಷನು ನಿರ್ಲಿಪ್ತಕರ್ಮದಿಂದ ತನ್ನ ’ಬುತ್ತಿ’ಯನ್ನು ಕರಗಿಸಿಕೊಳ್ಳುತ್ತಾನೆ, ಕರ್ಮಚಕ್ರದಿಂದ ಕಳಚಿಕೊಳ್ಳುತ್ತಾನೆ. ಬಾಹ್ಯದಲ್ಲಿ ಎಲ್ಲರಂತೆ ಕಾರ್ವವೆಸಗುತ್ತಿದ್ದರೂ, ಆತನ ಅಂತಃಪ್ರಜ್ಞೆಯು ಯೋಗದ ನೆಲೆಯಲ್ಲೇ ಅಚಲವಾಗಿರುತ್ತದೆ. ಆದ್ದರಿಂದ ಆತನನ್ನು ’ಸ್ಥಿತಪ್ರಜ್ಞ’ ಎಂದು ಕರೆಯಲಾಗುತ್ತದೆ. ಕೃಷ್ಣನು ಸ್ಥಿತಪ್ರಜ್ಞನಾಗುವಂತೆ ಅರ್ಜುನನಿಗೆ ತಿಳಿಸುತ್ತಿದ್ದಾನೆ. ಈಗ ಅರ್ಜುನನು ಕುತೂಹಲದಿಂದ ಹೀಗೆ ಕೇಳುತ್ತಾನೆ-
ಸ್ಥಿತಪ್ರಜ್ಞಸ್ಯ ಕಾ ಭಾಷಾ ಸಮಾಧಿಸ್ತಸ್ಯ ಕೇಶವI ಸ್ಥಿತಧೀಃ ಕಿಂ ಪ್ರಭ್ಷೇತ ಕಿಮಾಸೀತ ವ್ರಜೇತಕಿಮ್ II
ಕೇಶವನೇ! ಸಮಾಧಿಸ್ಥನಾದ ಸ್ಥಿತಪ್ರಜ್ಞನ ಲಕ್ಷಣಗಳೇನು? ಆತ ಹೇಗೆ ಮಾತನಾಡುತ್ತಾನೆ? ಹೇಗೆ ಕುಳಿತಿರುತ್ತಾನೆ? ಹೇಗೆ ಓಡಾಡುತ್ತಾನೆ? ’ಯೋಗಿಯಾದವನು, ಸಾಮಾನ್ಯರಂತೆ ಇರನು. ವಿಲಕ್ಷಣವಾದ ನಡೆ-ನುಡಿ-ವೇಷ-ಭೂಷಗಳಿಂದ ಕೂಡಿರುತ್ತಾನೆ. ಒಂದೆಡೆ ಸಮಾಧಿಸ್ಥನಾಗಿ ಕಣ್ಣುಮುಚ್ಚಿ ಕೂತಿರುತ್ತಾನೆ, ಕೆಲಸ ಕಾರ್ಯಗಳಲ್ಲಿ ತೊಡಗಲಾರ” ಎನ್ನುವಂತಹ ಹಲವು ಪರಿಕಲ್ಪನೆಗಳು ಲೋಕದಲ್ಲಿವೆ. ಆದರೆ ಸ್ಥಿತಪ್ರಜ್ಞನ ’ವೈಶಿಷ್ಟ್ಯ’ವಿರುವುದು ಆತನ ಬಾಹ್ಯ ಜೀವನದ ವಿವರಗಳಲ್ಲಿ ಅಲ್ಲವೇ ಅಲ್ಲ!ಆತನ ಆಂತರಿಕ ಭಾವಾನುಭಾವಗಳ ನೆಲೆಯಲ್ಲಿ! ಬಾಹ್ಯದಲ್ಲಿ ಆತ, ಎಲ್ಲರಂತೆಯೇ ಇರಬಹುದು, ಇಲ್ಲದಿರಬಹುದು; ಆದರೆ ಆತನ ಅಂತರಂಗದ ಯೋಗಪ್ರಜ್ಞೆಯು ಸದಾಜಾಗೃತವಾಗಿರುತ್ತದೆ. ಕೃಷ್ಣನು ಹೇಳುತ್ತಾನೆ-
ಪ್ರಜಹಾತಿ ಯದಾಕಾಮಾನ್ಸರ್ವಾನ್ಪಾರ್ಥ ಮನೋಗತಾನ್I
ಆತ್ಮನ್ಯೇವಾತ್ಮ ನಾತುಷ್ಟಃಸ್ಥಿತಪ್ರಜ್ಞಸ್ತ ದೋಚ್ಯತೇ II
ಹೇ ಪಾರ್ಥ! ಮನದಲ್ಲಿ ನೆಲೆಮಾಡಿದ ಎಲ್ಲ ಕಾಮಗಳನ್ನೂ ಬಿಟ್ಟವನಾಗಿ, ಯಾರು ತನ್ನೊಳಗೆ ತಾನು ತುಷ್ಟನಾಗಿ ಇರಬಲ್ಲನೋ ಆತನೇ ’ಸ್ಥಿತಪ್ರಜ್ಞ’ನೆನಿಸುತ್ತಾನೆ.
’ತನ್ನೊಳಗೆ ತಾನು ತೃಪ್ತನಾಗಿರುವುದೇ ಜೀವನದ ಚರಮಸಿದ್ಧಿ! ತನ್ನೊಳಗಿನ ಆತ್ಮತೋಷವನ್ನು ಮರೆತು, ಅತೃಪ್ತಿಯ ಭ್ರಾಂತಿಯನ್ನು ಬೆಳೆಸಿಕೊಂಡು ಅಲೆಯುವುದು ಮನುಜಮತಿಗೆ ಅಂಟಿದ ರೋಗ. ತತ್ಪರಿಣಾಮವಾಗಿ, ಎಲ್ಲರೂ ಹೊರಗಡೆ ವ್ಯಕ್ತಿ-ವಸ್ತು-ಸ್ಥಾನ-ಮಾನ-ಲಾಭಗಳ ಹಿಂದೆ ಬಿದ್ದು ತೋಷವನ್ನರಸುತ್ತಾರೆ! ಶಾಂತಿ ಸಿಗಲಿಲ್ಲವೆಂದು ಅವರಿವರನ್ನೋ ಗ್ರಹಗತಿಗಳನ್ನೋ ದೂಷಿಸುತ್ತಾರೆ!ಹೀಗೆ, ’ಇರುವುದೆಲ್ಲವ ಬಿಟ್ಟು ಇರದುದ ನೆನೆದು ತುಡಿಯುವ’ ಚಡಪಡಿಕೆಯಿಂದಾಗಿಯೇ ಬದುಕಿನ ಸ್ವಾರಸ್ಯವೂ ಕೆಡುವುದು.
ಜೀವನದಲ್ಲಿ ಯಾವುದೇ ಸಾಧನೆಗೆ ಮೊದಲ ಮಾಡಬೇಕಾದದ್ದು ಆತ್ಮಾವಲೋಕನ! ಹಾಗೆ ಮಾಡಿದಾಗ, ಕಿಂಚಿತ್ತಾದರೂ ತನ್ನೊಳಗಿನ ಸತ್ವದ ಅರಿವಾಗಿ, ಜೀವನವನ್ನೆದುರಿಸುವ ಛಲಬಲಗಳು ಒಡಮೂಡುತ್ತವೆ. ಹೀಗಿರುವಾಗ, ನಿರಂತರ ಆತ್ಮಾವಲೋಕನ ಮಾಡಿದಲ್ಲಿ, ಆತ್ಮಶಕ್ತಿಯ ರಹಸ್ಯಗಳೇ ತೆರೆದುಕೊಳ್ಳುತ್ತವೆ. ಹೊರಜಗತ್ತಿನ ಅನಿತ್ಯತೆಯ ಬೋಧೆಯಾಗುತ್ತದೆ, ವಿರಕ್ತಿ ಮೂಡುತ್ತದೆ, ಯೋಗದ ದಾರಿ ತೆರೆದುಕೊಳ್ಳುತ್ತದೆ!
ಬೇಕೆಂದಾಗ ಬಾಹ್ಯದ ಕರ್ಮಗಳಲ್ಲಿಯೂ ಪ್ರವೃತ್ತವಾಗಬಲ್ಲ ದಕ್ಷತೆಯೂ, ಸಾಕೆನಿಸಿದಾಗ ತನ್ನೊಳಗೆ ತಾನು ’ಆತ್ಮನ್ಯೇವಾತ್ಮನಾತುಷ್ಟ’ನಾಗಿ ವಿರಮಿಸುವ ನಿರ್ಲಿಪ್ತಿಯೂ ಸಿದ್ಧಿಸುತ್ತದೆ! ಇದನ್ನು ಸಿದ್ಧಿಸಿಕೊಂಡವನೇ ಸ್ಥಿತಪ್ರಜ್ಞ ಎಂದು ಸೂಚಿಸುತ್ತಾನೆ ಕೃಷ್ಣ.
ಸ್ಥಿತಪ್ರಜ್ಞ ಲಕ್ಷಣಗಳ ಪೈಕಿ ’ಆತ್ಮತುಷ್ಟಿ’ಯನ್ನೇ ಮೊದಲು ಹೇಳುತ್ತಿದ್ದಾನೆ ಕೃಷ್ಣ!’ ಆನಂದಪಡುವುದಕ್ಕೆ ಹೊರಗಡೆ ಯಾವುದೋ ವಸ್ತು-ವ್ಯಕ್ತಿ-ಅನುಭವದ ನಿಮಿತ್ತಬೇಕು’ ಎನ್ನುವ ಭ್ರಾಂತಿಯಲ್ಲೇ ನಾವು ಜನ್ಮಗಳನ್ನು ಕಳೆಯುತ್ತಿರುತ್ತೇವೆ! ಯಾವ ನಿಮಿತ್ತವಿಲ್ಲದೆ ನಮ್ಮೊಳಗೆ ನಾವು ಆತ್ಮತುಷ್ಟರಾಗಿರಬಹುದು ಎನ್ನುವುದು ಅರ್ಥವಾಗಲು ಅದೆಷ್ಟೋ ಜನ್ಮಗಳ ಪಕ್ವತೆಯೇ ಬೇಕೆನ್ನಿ! ಅಂತಹ ಪಕ್ವತೆಯುಂಟಾದಾಗಲೇ ಜೀವಿಯು ಆತ್ಮತೋಷದ ರಹಸ್ಯವನ್ನರಿಯುತ್ತಾನೆ, ಸ್ಥಿತಪ್ರಜ್ಞನಾಗುತ್ತಾನೆ.
ತಮ್ಮದನ್ನೂ ಪರರದನ್ನೂ ಬಾಚಿಬಾಚಿ ನುಂಗುತ್ತಿದ್ದರೂ ’ಸಾಕು’ ಎನಿಸದ ’ಲೋಭ-ರೋಗ-ಪೀಡಿತ’ರನ್ನು ನಾವು ರಾಜಕೀಯದಲ್ಲೂ, ವ್ಯವಹಾರದಲ್ಲೂ ನೋಡುತ್ತಿರುತ್ತೇವೆ. ಬಿಡಿಗಾಸನ್ನೂ ತನ್ನವರಿಗಾಗಿಯಾಗಲಿ, ಪರರಿಗಾಗಿಯಾಗಲಿ ಬಳಸದೇ, ಕೂಡಿಟ್ಟು ಕೂಡಿಟ್ಟು ಎಣಿಸಿನೋಡಿಕೊಳ್ಳುವ ಜಿಪುಣತನವೆಂಬ ರೋಗಪೀಡಿತರನ್ನೂ ನೋಡುತ್ತೇವೆ! ಕಾಮಾತುರತೆಯಿಂದ ಪಶುಗಳಂತೆ ವರ್ತಿಸುವ ಹುಚ್ಚರನ್ನೂ ನೋಡುತ್ತೇವೆ! ಅದಾವುದೋ ಗತದ ದುಃಖನಿರಾಶೆಗಳನ್ನು ಎಂದೂ ಮರೆಯಲಾಗದೇ ಜೀವನವೆಲ್ಲ ಕೊರಗುವ ಆಜನ್ಮದುಃಖಿಗಳನ್ನೂ ನೋಡುತ್ತೇವೆ! ಆತ್ಮತೋಷವನ್ನು ಮರೆತ ಮತಿಭ್ರಾಂತ-ವ್ಯಕ್ತಿಗಳ ಉದಾಹರಣೆಗಳಿವು.
ಈ ಭ್ರಮೆಗಳಿಂದ ಕಳಚಿಕೊಂಡು, ವಿರಕ್ತರಾಗದಿದ್ದಲ್ಲಿ, ಮತಿಭ್ರಾಂತಿ ಹೆಚ್ಚುತ್ತಲೇ ಹೋಗುತ್ತದೆ! ಅದಕ್ಕೆ ಕೊನೆಮೊದಲೇ ಇಲ್ಲ! ’ಕಳಚಿಕೊಳ್ಳುವುದೊಂದೇ ದಾರಿ’ ಎನ್ನುವುದು ಕೃಷ್ಣನ ಸ್ಪಷ್ಟ ನಿರ್ದೇಶ! ಸ್ವಲ್ಪಮಟ್ಟಿಗೆ ಕಳಚಿಕೊಂಡರೂ ಅಷ್ಟರ ಮಟ್ಟಿಗೆ ಶಾಂತಿ ಸಿಗುತ್ತದೆ! ಇನ್ನು ಪೂರ್ಣವಾಗಿ ಕಳಚಿಕೊಂಡು ಆತ್ಮತುಷ್ಟನಾದವನು ಸ್ಥಿತಪ್ರಜ್ಞನೆನಿಸಿ ಧನ್ಯನಾಗುತ್ತಾನೆ.

ಡಾ ಆರತಿ ವಿ ಬಿ
ಕೃಪೆ : ವಿಜಯವಾಣಿ

Leave a Reply