ಬದುಕಿಗೆ ಭಗವದ್ಗೀತೆ- ಪತನ ಹೀಗಾಗುತ್ತದೆ ನೋಡು!

ಬದುಕಿಗೆ ಭಗವದ್ಗೀತೆ- ಪತನ ಹೀಗಾಗುತ್ತದೆ ನೋಡು!

‘ಹೇಗಾದರೂ ಮಾಡಿ ಇಂದ್ರಿಯಗಳನ್ನು ಗೆಲ್ಲು, ತನ್ನಲ್ಲಿ ನಿಲ್ಲು’ ಎಂದು ಕೃಷ್ಣನು ತಿಳಿಹೇಳುತ್ತಿದ್ದ. ಹೇಗಾದರೂ ಈ ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟು ಭೋಗೇಚ್ಛೆಯನ್ನು ಗೆಲ್ಲಬೇಕು’ ಎಂದು ನಮಗೂ ಅನ್ನಿಸುತ್ತದೆ ನಿಜ. ಆದರೆ ಗೊತ್ತಿದ್ದೂ ಇಂದ್ರಿಯಗಳನ್ನು ಹೇಗೆಂದರೆ ಹಾಗೆ ಹರಿಯಬಿಡುವ, ಭೋಗದ ಗುಂಡಿಗೇ ಮತ್ತೆ ಮತ್ತೆ ಬೀಳುವ ನಮ್ಮ ದೌರ್ಬಲ್ಯದ ಮೂಲವೆಲ್ಲಿ? ತಿಳಿಯತಕ್ಕದ್ದೇ ಅಲ್ಲವೆ?! ಯಾವುದೇ ಆಗಲಿ, ಅದರ ’ಪ್ರಾರಂಭ’ವೆಲ್ಲಿ? ಅದು ಹೇಗೆ ಕ್ರಮಿಸಿಬಂದು ಹೀಗೆ ಪರಿಣಮಿಸಿದೆ? ಎನ್ನುವುದನ್ನು ಹಿಮ್ಮುಖವಾಗಿ Trace ಮಾಡುತ್ತ ವಿಶ್ಲೇಷಿಸಿದಾಗ, ’ಸಮಸ್ಯೆಯ ಹುಟ್ಟೆಲ್ಲಿ?’ ಎನ್ನುವುದು ಸ್ಪಷ್ಟವಾಗುತ್ತದೆ. ಪರಿಹಾರವೂ ಸಾಧ್ಯವಾಗುತ್ತದೆ. ಯೋಗದ ನೈಜ ನೆಲೆಯಿಂದ ಭೋಗದ ಕೃತಕತೆಯ ಕೂಪಕ್ಕೆ ಮಾನವನು ಪತನವಾಗುವ ಪ್ರಕ್ರಿಯೆಯನ್ನು ಶ್ರೀಕೃಷ್ಣನು ಮಾರ್ಮಿಕವಾಗಿ ತಿಳಿಸುತ್ತಾನೆ. ಚೆಂಡು ಮಹಡಿಯ ಮೆಟ್ಟಲುಗಳಿಂದ ಜಾರುತ್ತ ಕೆಳಬರುವಾಗ, ಮೊದಮೊದಲು ನಿಧಾನವಾಗಿಯೂ, ಬರಬರುತ್ತ ವೇಗವಾಗಿಯೂ ಜಾರಿಬರುತ್ತದೆ! ನಾವೂ ಅಂತೆಯೇ ಸ್ತರಸ್ತರವಾಗಿ ಕೆಳಜಾರುವ ಪ್ರಕ್ರಿಯೆಯನ್ನು pinpointed ಆಗಿ ತೋರುತ್ತಿದ್ದಾನೆ ಕೃಷ್ಣ-
ಧ್ಯಾಯತೋ ವಿಷಯಾನ್ ಪುಂಸಃ ಸಂಗಸ್ತೇಷೂಪಜಾಯತೆ ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋಭಿಜಾಯತೇ
ಕ್ರೋಧಾದ್ಭವತಿ ಸಮ್ಮೋಹಃ ಸಮ್ಮೋಹಾತ್ ಸ್ಮೃತಿವಿಭ್ರಮಃ ಸ್ಮೃತಿಭ್ರಂಶಾತ್ ಬುದ್ಧಿನಾಶೋ ಬುದ್ಧಿನಾಶಾತ್ ಪ್ರಣಶ್ಯತಿ.
ನರನು ವಿಷಯವಸ್ತುಗಳನ್ನೇ ಧ್ಯಾನಿಸುವುದರಿಂದ, ಅವುಗಳಲ್ಲಿ ಸಂಗ ಉಂಟಾಗುತ್ತದೆ. ಸಂಗದಿಂದ ಕಾಮವು, ಕಾಮದಿಂದ ಕ್ರೋಧವೂ, ಕ್ರೋಧದಿಂದ ಸಮ್ಮೋಹವೂ, ಅದರಿಂದ ಸೃತಿವಿಭ್ರಮವೂ, ಅದರಿಂದಾಗಿ ಬುದ್ಧಿನಾಶವೂ, ಬುದ್ಧಿನಾಶದಿಂದಾಗಿ ಪ್ರಣಾಶವೂ ಆಗುತ್ತವೆ.
ಈ ಸೋಜಿಗದ ಸೃಷ್ಟಿಯಲ್ಲಿ ಎಷ್ಟೋ ಸ್ವಾರಸ್ಯಗಳ ಲೀಲೆ ನಡೆಯುತ್ತದೆ. ಇದನ್ನೆಲ್ಲ ನಾವು ’ತುಂಬು ಮನದಿಂದ ಆಸ್ವಾದಿಸೋಣ, ಆದರೆ ಅಂಟಿಕೊಳ್ಳದಿರೋಣ’ ಎಂದು ಅನುಭಾವಿಗಳು ದಿಗ್ದರ್ಶಿಸುತ್ತಾರೆ. ಆದರೆ ನಾವೇಕೆ ಅಲ್ಲಲ್ಲೇ ’ಅಂಟಿಕೊಂಡು’ಬಿಡುತ್ತೇವೆ? ’ಧ್ಯಾಯತೋ ವಿಷ್ಯಾನ್ ಪುಂಸಃ ಸಂಗಸ್ತೇಷೂಪಜಾಯತೇ-ಮನುಷ್ಯನು ವಿಷಯವಸ್ತುವನ್ನೇ ನಿರಂತರ ಧ್ಯಾನಿಸುವುದರಿಂದ ಅದರಲ್ಲಿ ಸಂಗ(ಬೆಸುಗೆ) ಉಂಟಾಗುತ್ತದೆ. ವಿಷಯವಸ್ತುವನ್ನು ನೋಡುವುದೂ ಮೆಚ್ಚುವುದೂ ತಪ್ಪಲ್ಲ! ಆದರೆ ಅದನ್ನು ಮರೆಯಲಾಗದೇ ಮನಸೋಲುವುದು ದೌರ್ಬಲ್ಯ! ತರುಣಿಯೊಬ್ಬಳನ್ನು ನೋಡುವುದೂ, ಅವಳ ರೂಪ-ಗುಣ-ಪ್ರತಿಭೆಗಳನ್ನು ಮೆಚ್ಚುವುದೂ, ಸ್ನೇಹ ಬೆಳೆಸುವುದೂ ಖಂಡಿತ ತಪ್ಪಲ್ಲ! ಆದರೆ ಆಕೆಯನ್ನು ಮರೆಯಲಾಗದೇ ಒದ್ದಾಡುವುದು ಮನಃಪತನಕ್ಕೆ ಬೀಜಾಂಕುರ! ಹೀಗೆ ನೋಡುವ ವಿಷಯಕ್ಕೆಲ್ಲ ಅಂಟಿಕೊಳ್ಳುವುದನ್ನೇ ’ಸಂಗ’ ಎನ್ನುವುದು. ಹಣವಾಗಲೀ, ಪದವಿಯಾಗಲಿ, ಮನ್ನಣೆಯಾಗಲಿ, ರೂಪ-ಯೌವನಗಳಾಗಲಿ, ಅವುಗಳನ್ನೇ ಚಪಲವಾಗಿ ಧ್ಯಾನಿಸುವುದು ’ಸಂಗ’. ಈ ಸಂಗದಿಂದ ಏನಾಗುತ್ತದೆ? ಸಂಗಾತ್ ಸಂಜಾಯತೇ ಕಾಮಃ (ಸಂಗದಿಂದಾಗಿ ’ಅದು ನನಗೆ ಬೇಕು!’ ಎನಿಸಲಾರಂಭಿಸುತ್ತದೆ!) ಈ ’ಬೇಕು’ ಎನ್ನುವ ಭಾವನೆ ಒಮ್ಮೆಲೆ ಎದ್ದು ಮೂಡುತ್ತದೆ! ’ಈ ಬಯಕೆ ನ್ಯಾಯವೆ? ಅವಶ್ಯಕವೇ? ಶ್ರೇಯಸ್ಕರವೇ?’ ಎನ್ನುವ ಮುಂದಾಲೋಚನೆ ಅಲ್ಲಿರುವುದಿಲ್ಲ! ಅದಕ್ಕೇ ಹೇಳುವುದು-’ಕಾಮಕ್ಕೆ ಕಣ್ಣಿಲ್ಲ’ ಅಂತ!
ಕಾಮಾತ್ ಕ್ರೋಧೋಭಿಜಾಯತೇ-ಕಾಮದಿಂದಾಗಿ ಕ್ರೋಧ ಹುಟ್ಟುತ್ತದೆ. ಬಯಕೆಯೆಂಬುದು ಈಡೇರಬಹುದು, ಈಡೇರದೇ ಹೋಗಬಹುದು, ಅಥವಾ ಈಡೇರಿದ ಮೇಲೆ ’ನಿರೀಕ್ಷಿಸಿದಷ್ಟು ಸ್ವಾರಸ್ಯಕರವಾಗಿಲ್ಲ!’ ಎನಿಸಿಬಿಡಬಹುದು! ’ಯಾಕಾದರೂ ಇಷ್ಟಪಟ್ಟೇನೋ!’ ಎಂದು ಚಡಪಡಿಕೆಯುಂಟಾಗಲೂಬಹುದು! ಆಗ ನಮ್ಮಲ್ಲಿ ಮೂಡುವುದೇ ಕ್ರೋಧ! ಕಾಮವು ಸಿಗದೇ ಹೋದರೂ ಕ್ರೋಧ! ಸಿಕ್ಕಿದ ಮೇಲೆ ’ನಿರೀಕ್ಷೆಗೆ ತಕ್ಕಂತಿಲ್ಲವಲ್ಲ!’ ಎನಿಸಿದರೂ ಕ್ರೋಧ! ಸಿಕ್ಕಮೇಲೆ ಕೈಕೊಟ್ಟರೂ ಕ್ರೋಧ! ಹೀಗೆ ಕಾಮವೇ ಕ್ರೋಧವಾಗಿ ಪರಿವರ್ತನೆಯಾಗುವ ’ತಮಾಷೆ’ ಜೀವನದಲ್ಲಿ ನಡೆಯುತ್ತಲೇ ಇರುತ್ತದೆ!
ಕ್ರೋಧಾತ್ ಭವತಿ ಸಮ್ಮೋಹಃ- ಕ್ರೋಧವುಂಟಾದಾಗ ಬೇರೆಲ್ಲ ಚಿಂತನೆಗಳೂ ಅಳಿದು, ಅದೊಂದೇ ತಾಪವು ದೇಹ-ಮನ-ಮತಿಗಳನ್ನು ತುಂಬಿಬಿಡುತ್ತದೆ! ಭಾವಾತಿಶಯದಲ್ಲಿ ಆಲೋಚನಾಶಕ್ತಿ ಕುಸಿಯುತ್ತದೆ! ’ತಾನೀಗ ಹೇಗೆ ವರ್ತಿಸಿದರೇ ಶ್ರೇಯಸ್ಕರ?’ ಎಂಬ ವಿವೇಚನೆಯೂ ಅಳಿಯುತ್ತದೆ! ಎಲ್ಲೆಲ್ಲೂ ಹತಾಶೆ ಕತ್ತಲುಗಳೇ ಕಾಣಬರುತ್ತವೆ! ಅದೇ ’ಸಮ್ಮೋಹ’ದ ಸ್ಥಿತಿ!
ಸಮ್ಮೋಹಾತ್ ಸ್ಮೃತಿವಿಭ್ರಮಃ- ಸಮ್ಮೋಹದ ಸ್ಥಿತಿಯಲ್ಲಿ ಸ್ಮೃತಿಯು ಹೊರಟುಹೋಗುತ್ತದೆ? ಯಾವುದರ ಸ್ಮೃತಿ? ’ತಾನಾರು?’ ’ತನ್ನ ಗಮ್ಯವೇನು?’ ’ತನ್ನ ನೈಜ ಗುಣ-ಸಾಮರ್ಥ್ಯ-ಕರ್ತವ್ಯಾದಿಗಳೇನು?’ ಎನ್ನುವುದರ ಬೋಧೆ! ತತ್ಕಾಲದ ನೋವು-ನಲಿವುಗಳೇ ನಮ್ಮ ‘ಶಾಶ್ವತ ಸ್ಥಿತಿ’ ಎಂಬಂತೆನಿಸಿ, ನಾವು ನಮ್ಮ ಸತ್-ಚಿತ-ಆನಂದಮಯವಾದ ಆತ್ಮಸ್ವರೂಪವನ್ನೇ ಮರೆತುಬಿಡುವಂತಾಗುತ್ತದೆ! ಕೃತಕ ಪ್ರೀತಿ-ಭೀತಿ-ಪ್ರಾಪ್ತಿಗಳ ಓಟದಲ್ಲಿ ತೊಡಗಿ ಜೀವನದ ಪರಮಗಮ್ಯವನ್ನೇ ಮರೆಯುತ್ತೇವೆ!
ಸ್ಮೃತಿಭ್ರಂಶಾತ್ ಬುದ್ಧಿನಾಶಃ- ’ತಾನು ಯಾರು’ ಎಂಬುದನ್ನೇ ಮರೆತ ವ್ಯಕ್ತಿಯ ಬುದ್ಧಿಯು ಭಾವವಿವಶವಾಗುತ್ತದೆ. ತನ್ನದೇ ’ವ್ಯವಸಾಯ’ವನ್ನು ಬಿಟ್ಟು,ಅನಿಶ್ಚಿತವಾಗಿ ಹೊಯ್ದಾಡುವ ಭಾವನೆಗಳ ಗುಲಾಮನಾಗುತ್ತದೆ! ಇದೇ ’ಬುದ್ಧಿನಾಶ’!
ಬುದ್ಧಿನಾಶಾತ್ ಪ್ರಣಶ್ಯತಿ- ಹೀಗೆ ಬುದ್ಧಿಯು ’ವಿವಶ’ವಾದಾಗ, ಜೀವನದಲ್ಲಿನ ನಿರ್ಣಯಗಳೆಲ್ಲ ತಪ್ಪಾಗತೊಡಗುತ್ತವೆ. ಧರ್ಮದ ನೆಲೆಯಲ್ಲಿ ಸರಿತಪ್ಪುಗಳನ್ನು ಚಿಂತಿಸುವುದನ್ನು ಬಿಟ್ಟು, ಭೋಗಪ್ರಾಪ್ತಿಯ ಏಕೈಕ ಗುರಿಯನ್ನಿಟ್ಟುಕೊಂಡೇ ಆಲೋಚಿಸತೊಡಗುತ್ತದೆ! ಹೀಗೆ ಸ್ವಾರ್ಥ, ಲೋಭ, ಆತುರ, ಕಪಟತನ, ಹಿಂಸಾಚಾರಗಳ ಕೈಗೊಂಬೆಯಾಗುತ್ತಾನೆ ಮನುಷ್ಯ. ಇದೇ ಅವನ ’ಪ್ರಣಾಶ’/ ಅಧಃಪತನ!
ನಾವೆಲ್ಲ ನಮ್ಮ ನಮ್ಮ ಜೀವನದ ಗತಿಯಲ್ಲಿ, ’ಎಲ್ಲಿ’, ’ಹೇಗೆ’, ’ಏಕೆ’ ಬೀಳಲಾರಭಿಸಿದೆವು ಎನ್ನುವುದನ್ನು ಅಂತರೀಕ್ಷಣೆ ಮಾಡಿಕೊಳ್ಳಲು ಗೀತೆಯ ಈ ಶ್ಲೋಕದ್ವಯವೇ ಸಾಕಲ್ಲವೆ?!

ಡಾ. ಆರತಿ ವಿ ಬಿ

ಕೃಪೆ : ವಿಜಯವಾಣಿ

Leave a Reply