ಬದುಕಿಗೆ ಭಗವದ್ಗೀತೆ- ಮುನಿಗಳ ಹಗಲು, ಮೋಹವಶರ ಪಾಲಿಗೆ ಕತ್ತಲು

ಬದುಕಿಗೆ ಭಗವದ್ಗೀತೆ- ಮುನಿಗಳ ಹಗಲು, ಮೋಹವಶರ ಪಾಲಿಗೆ ಕತ್ತಲು

“ರಾಗದ್ವೇಷಗಳ ಬಿರುಗಾಳಿಗೆ ಸಿಕ್ಕ ನಾವೆಯಂತಾಗದೇ, ಪ್ರಜ್ಞೆಯನ್ನು ಇಂದ್ರಿಯ ವಿಷಯಗಳಿಂದ ತೆಗೆದು ಆತ್ಮದಲ್ಲಿ ನೆಲೆಗೊಳಿಸಿಕೊಂಡ ‘ಸ್ಥಿತಪ್ರಜ್ಞ’ನಿಗೆ ಮಾತ್ರವೇ ಶಾಂತಿ ಲಭ್ಯ”- ಎಂದು ಶ್ರೀಕೃಷ್ಣನು ವಿವರಿಸಿದ್ದನಷ್ಟೆ? ಅಂತರ್ಮುಖಿಯಾದ ಸ್ಥಿತಪ್ರಜ್ಞನಿಗೂ ಬಹಿರ್ಮುಖಿಗಳಾದ ಸಾಮಾನ್ಯರಿಗೂ ಇರುವ ವ್ಯತ್ಯಾಸವನ್ನು ಹೀಗೆ ಸೂಚಿಸುತ್ತಾನೆ ಕೃಷ್ಣ-
ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮಿ I
ಯಸ್ಯಾಂ ಜಾಗತಿ ಭೂತಾನಿ ಸಾ ನಿಶಾ ಪಶ್ಯತೋ ಮುನೇಃ II
ಯಾವುದು ಎಲ್ಲರ ಪಾಲಿಗೆ ‘ರಾತ್ರಿ’ಯಾಗಿರುತ್ತದೋ, ಸಂಯಮಿಯು ಅಲ್ಲಿ ‘ಜಾಗೃತ’ನಾಗಿರುತ್ತಾನೆ. ಯಾವ ವಿಷಯದಲ್ಲಿ ಸರ್ವರೂ ‘ಜಾಗೃತ’ರಾಗಿರುತ್ತಾರೋ, ಅದನ್ನು ಮುನಿಗಳು ‘ರಾತ್ರಿ’ಯಂತೆ ಕಾಣುತ್ತಾರೆ.
ಇಲ್ಲಿ ‘ರಾತ್ರಿ’ ಎಂದರೆ ಅರಿವಿನ ಅಭಾವ. ಸಾಮಾನ್ಯರ (ಇಂದ್ರಿಯ ಜಯವಿಲ್ಲದವರ) ಪಾಲಿಗೆ ಯಾವುದು ‘ರಾತ್ರಿ’ಯೋ(ಯಾವುದು ಅರಿವಿಗೆ ನಿಲುಕದ ರಹಸ್ಯವೋ) ಆ ವಿಷಯದಲ್ಲಿ ಸಂಯಮಿಗಳು ಜಾಗೃತರಾಗಿರುತ್ತಾರೆ (ಅವರಿಗದು ಅರ್ಥವಾಗುತ್ತದೆ). ಸಾಮಾನ್ಯರು ಕಾಣಲಾಗದ ತಥ್ಯಗಳು ‘ಎತ್ತರ’ದಲ್ಲಿರುವ ಮುನಿಗಳಿಗೆ ಗೋಚರಿಸುತ್ತವೆ. ಸಾಮಾನ್ಯರು ‘ತಾನು-ತನ್ನದು’ ಎಂಬ ಸಂಕುಚಿತ ‘ಓಣಿ’ಯಲ್ಲಿ ಆಲೋಚಿಸಿದರೆ, ಮೋಹವನ್ನು ಗೆದ್ದ ಮುನಿಗಳು ತತ್ವಾಕಾಶದಲ್ಲಿ ನಿಂತು ಸಮಷ್ಟಿದರ್ಶನವನ್ನು ಪಡೆಯುತ್ತಾರೆ.
ಸಾಮಾನ್ಯರು ಸುಖ-ಭೋಗ-ವ್ಯವಹಾರಾದಿಗಳ ವಿಷಯದಲ್ಲಿ ಜಾಗ್ರತರು! ಅವುಗಳಲ್ಲಿನ ಲಾಭನಷ್ಟಗಳ ಬಗ್ಗೆ ಅತೀವ ಕಾಳಜಿ ವಹಿಸುತ್ತಾರೆ! ಅಲ್ಲಿನ ಏರುಬೀಳುಗಳಿಗೆ ಭಾವುಕರಾಗಿ ಸ್ಪಂದಿಸುತ್ತಾರೆ. ಆದರೆ ಸ್ಥಿತಪ್ರಜ್ಞರು, ಕರ್ತವ್ಯ-ನಿರ್ವಹಣೆಗಾಗಿ ವ್ಯವಹಾರದಲ್ಲಿ ತೊಡಗಿದ್ದರೂ, ಅದಾವುದರ ಬಗೆಯೂ ‘ಮೋಹ’ ಬೆಳೆಸಿಕೊಳ್ಳುವುದಿಲ್ಲ. ಇಂತಹ ನಿರ್ಮೋಹ ಮನಸ್ಕತೆಯಿಂದಾಗಿ ಸ್ಥಿತಪ್ರಜ್ಞನು ಲೌಕಿಕ ಕರ್ಮಗಳಲ್ಲಿ ನಿರ್ಲಿಪ್ತನಾಗಿದ್ದು ಕ್ರಮಶುದ್ಧಿ-ಉದ್ದೇಶಶುದ್ಧಿಗಳಿಂದ ದುಡಿಯಬಲ್ಲ. ಯಶಸ್ವಿಯಾಗಬಲ್ಲ. ಹಾಗಾಗಿ, ‘ಕರ್ಮಸಾಫಲ್ಯವು ಸಿದ್ಧಿಸುವುದೇ ಸ್ಥಿತಪ್ರಜ್ಞನಿಗೆ, ಮೋಹವಶನಿಗಲ್ಲ’.
ಲೌಕಿಕದ ವ್ಯಗ್ರಜೀವನದಲ್ಲೇ ಮಗ್ನವಾಗಿದ್ದೂ ಸ್ಥಿತಪ್ರಜ್ಞರಾಗಿದ್ದಂತಹ ಪೃಥು, ಋಷಭದೇವ(ಜೈನಧರ್ಮದ ಮೂಲಪ್ರವರ್ತಕ), ಹರಿಶ್ಚಂದ್ರ, ಶ್ರೀರಾಮ, ಶ್ರೀಕೃಷ್ಣ, ಜನಕಮಹಾರಾಜಾದಿ ರಾಜರ್ಷಿಗಳ ಉದಾಹರಣೆಗಳನ್ನು ಪುರಾಣಗಳು ಒದಗಿಸುತ್ತವೆ. ಇತಿಹಾಸದಲ್ಲಿ ಬೆಳಗಿ ಹೋದ ಭಗವಾನ್ ಚಾಣಕ್ಯ, ಭಗವಾನ್ ವಿದ್ಯಾರಣ್ಯಸ್ವಾಮಿಗಳು ಮುಂತಾದವರೂ, ರಾಜರುಗಳೊಂದಿಗೆ ನಿತ್ಯವೂ ರಾಜತಂತ್ರ-ಸಾಮ್ರಾಜ್ಯಸ್ಥಾಪನೆ-ನಿರ್ವಹಣೆಗಳ ಕಾರ್ಯದಲ್ಲಿ ತೊಡಗಿದ್ದೂ, ಸದಾ ಪರಮನಿರ್ಲಿಪ್ತರಾಗಿದ್ದ ನಿದರ್ಶನಗಳೂ ನಮ್ಮ ಮುಂದಿವೆ. ಹೀಗೆ ಸಮಾಜಮುಖಿಯಾಗಿದ್ದು ಅಭೂತಪೂರ್ವ ಧರ್ಮಕರ್ಮಗಳನ್ನು ಸಾಧಿಸುತ್ತಿದ್ದರೂ, ಅಂತರಂಗದಲ್ಲಿ ಶಾಂತ-ನಿಃಸ್ಪೃಹ ಮನಃಸ್ಥಿತಿಯಲ್ಲಿ ನೆಲೆನಿಂತಿದ್ದ ಮಹಾತ್ಮರ ಉದಾಹರಣೆಗಳಿಗೆ ನಮ್ಮ ದೇಶದಲ್ಲಿ ಬರವೇ ಇಲ್ಲ!
ಒಟ್ಟಿನಲ್ಲಿ, ನಿರ್ಲಿಪ್ತಿಯೊಂದೇ ಸ್ಥಿತಪ್ರಜ್ಞತ್ವಕ್ಕೂ ಕರ್ಮಯೋಗಸಿದ್ಧಿಗೂ ಸಾಧಕ. ಮೋಹವಶರು ಧರ್ಮಕರ್ಮಗಳನ್ನೂ ಸರಿಯಾಗಿ ಮಾಡಲಾರರು, ಸಂದರ್ಭಬಂದಾಗ ಬಿಡಲೂ ಆರರು! ಆದರೆ ನಿಷ್ಠೆಯಿಂದ ಕರ್ತವ್ಯಗಳನ್ನು ಮಾಡುವಂತಹ ಸ್ಥಿತಪ್ರಜ್ಞನು ಸಂದರ್ಭ ಬಂದರೆ ಯಾವ ಅಳುಕಿಲ್ಲದೆ ಎಲ್ಲವನ್ನೂ ತ್ಯಜಿಸಿ ಹೊರಡಲೂ ಬಲ್ಲ! ಅದೇ ಅವನ ಶಕ್ತಿ!
ದಕ್ಷಿಣೇಶ್ವರದ ಕಾಳೀದೇಗುಲದ ಯಾವನೋ ಪೂಜಾರಿಯ ಮೇಲೆ ಯಜಮಾನನಿಗೆ ಸಿಟ್ಟುಬಂದು “ಆತನನ್ನು ತೊಲಗಲು ಹೇಳು!” ಎಂದು ಅಪ್ಪಣೆ ಗೈದ. ಅಧಿಕಾರಿಯು ಗೊಂದಲದಲ್ಲಿ ನೇರವಾಗಿ ಶ್ರೀರಾಮಕೃಷ್ಣರ ಬಳಿಬಂದು “ಯಜಮಾನರು ಆಜ್ಞೆಕೊಟ್ಟಿದ್ದಾರೆ- ನೀವಿನ್ನು ಇಲ್ಲಿರುವಂತಿಲ್ಲವಂತೆ!” ಎಂದು. ರಾಮಕೃಷ್ಣರು “ಸರಿ” ಎನ್ನುತ್ತ ಹಾಗೆಯೇ ನಡೆದು ಹೊರಟೇಬಿಟ್ಟರು! ೨೮ ವರ್ಷಗಳ ಸುದೀರ್ಘಕಾಲ ತಾನು ವಾಸವಿದ್ದು ಸೇವೆಗೈದ ಸ್ಥಳದ ಬಗ್ಗೆ ಅವರಿಗೆ ಒಂದಿನಿತೂ ಮೋಹವಿಲ್ಲ!”ನಾನು ಮಾಡಿದ ತಪ್ಪಾದರೂ ಏನು?” ಎಂದು ನ್ಯಾಯ ಕೇಳಲೂ ಕೂಡ ಹೋಗಲಿಲ್ಲ! “ತನಗಿಂತಹ ಅನ್ಯಾಯವಾಗಬಾರದಿತ್ತು!” ಎಂದು ದುಃಖಿಸಲೂ ಇಲ್ಲ. ‘ಏನೂ ಆಗಿಯೇ ಇಲ್ಲ’ವೆಂಬಂತೆ ಶಾಂತವಾಗಿ ಹೊರಟೇಬಿಟ್ಟರು! ಅಷ್ಟರಲ್ಲಿ ಆ ಅಧಿಕಾರಿಯು ಮತ್ತೆ ಓಡಿಬಂದು ಕ್ಷಮೆಯಾಚಿಸುತ್ತ “ಅಯ್ಯೋ ಭಟ್ಟರೆ! ನೀವಲ್ಲವಂತೆ! ಅದು ಮತ್ತಾರಿಗೋ ಹೇಳಿದ್ದಂತೆ! ಕ್ಷಮಿಸಬೇಕು” ಎಂದ. ರಾಮಕೃಷ್ಣರು “ಸರಿ” ಎನ್ನುತ್ತ ವಾಪಾಸ್ಸು ಬಂದು ಕೋಣೆಯಲ್ಲಿ ಕುಳಿತುಬಿಟ್ಟರು! ಹೋಗೆಂದಾಗ ದುಃಖ-ಆಘಾತಗಳಾಗಲಿಲ್ಲ! ವಾಪಸ್ಸು ಬಾರೆಂದು ಕೇಳಿಕೊಂಡಾಗ ಬಿಂಕ-ದುಮ್ಮಾನಗಳು ಅಡ್ಡಿಬರಲಿಲ್ಲ! ಇರುವುದೂ ಕಷ್ಟವಲ್ಲ! ಹೊರಡುವುದೂ ಕಷ್ಟವಲ್ಲ!
ತಾರುಣ್ಯ, ಸಂಸಾರ, ಸಾಮ್ರಾಜ್ಯಗಳ ಸುಖಗಳನ್ನೆಲ್ಲ ಬಿಟ್ಟು ಸತ್ಯಾನ್ವೇಷಣೆಗಾಗಿ ಹೊರಡುವುದು ಸಿದ್ಧಾರ್ಥನಿಗೆ ಕಷ್ಟವೆನಿಸಲಿಲ್ಲ! ಸಂಪದ್ಭರಿತ ವಿಜಯನಗರ ಸಾಮ್ರಾಜ್ಯದಲ್ಲಿ ನವಕೋಟಿಗಳ ಸಾಹುಕಾರನಾಗಿದ್ದ ಸೀನಪ್ಪನಿಗೆ ಅದೆಲ್ಲವನ್ನೂ ಒಮ್ಮೆಲೆ ತ್ಯಜಿಸಿ ದಾಸದೀಕ್ಷೆಯನ್ನು ಪಡೆಯುವುದೂ ಕಷ್ಟವೆನಿಸಲಿಲ್ಲ! ಬಯಸದೇ ಬಂದ ಸಾಮ್ರಾಜ್ಞಿಪಟ್ಟವನ್ನೂ, ಹುಚ್ಚೆದ್ದು ಪ್ರೀತಿಸುತ್ತಿದ್ದ ಪತಿಯನ್ನೂ ತ್ಯಜಿಸಿ ತನ್ನಾತ್ಮಲಿಂಗದಸಂದರ್ಶನಕ್ಕಾಗಿ ಹೊರಡುವುದು ಮಹಾದೇವಿಗೂ ಕಷ್ಟವೆನಿಸಲಿಲ್ಲ! ದೇಶಕ್ಕಾಗಿಯೂ ದೈವಾನುಸಂಧಾನಕ್ಕಾಗಿಯೂ ಪದವಿ-ಶ್ರೀಮಂತಿಕೆಗಳನ್ನೆಲ್ಲ ಬಿಟ್ಟು ವಿರಾಗಿಯಾಗುವುದು ನರೇಂದ್ರನಿಗೂ ಕಷ್ಟವೆನಿಸಲಿಲ್ಲ! ಯಾವ ಧನ-ಕೀರ್ತಿ-ಸುಖ-ಸಂಪದಗಳಿಗಾಗಿಯೇ ಸಾಮಾನ್ಯರು ಹಗಲೂ-ರಾತ್ರಿ ಹಪಹಪಿಸುತ್ತಾರೋ, ಅದೆಲ್ಲವನ್ನು ಈ ಮಹಾತ್ಮರುಗಳು ‘ರಾತ್ರಿ’ (ಕತ್ತಲೆಯ ವ್ಯಾಪಾರ) ಎಂದು ಬಗೆದರು! ಹಾಗಾಗಿಯೇ ಅವರುಗಳು ಅದನ್ನೆಲ್ಲ ಮೀರಿ, ಬುದ್ಧನೂ, ಪುರಂದರದಾಸನೂ, ಧೀರವಿರಾಗಿಣಿ ಮಹಾದೇವೀ ಅಕ್ಕನೂ, ವಿವೇಕಾನಂದರೂ ಆಗಿ ಬೆಳೆದುನಿಂತರು! “ಅಯ್ಯೋ! ಇವರು ಇಷ್ಟೆಲ್ಲ ಸೊಗಸಾದ ಸುಖಸಂಪದಗಳನ್ನು ಹೇಗಾದರೂ ಬಿಟ್ಟುಹೋದರಪ್ಪ?!” ಎಂದು ಅರ್ಥವಾಗದೇ ಇಂದಿಗೂ ಕಣ್ಣುಬಿಡುತ್ತಾರೆ ಸಾಮಾನ್ಯರು! ಆ ಮಹಾತ್ಮರ ವಿರಕ್ತಿ ಸಾಮಾನ್ಯರಿಗೆ ಅರ್ಥವಾಗದ ‘ರಾತ್ರಿ’ಯೇ ಸರಿ!ಈ ಸಾಮಾನ್ಯರು ಅತಿಮೋಹದಿಂದ ತೊಡಗುವಂತಹ ಲೌಕಿಕವ್ಯವಹಾರಗಳು ಆ ಮುನಿಗಳ ಪಾಲಿಗೆ ‘ರಾತ್ರಿ’ಯೇ ಸರಿ!
ಡಾ. ಆರತಿ ವಿ ಬಿ
ಕೃಪೆ : ವಿಜಯವಾಣಿ

Leave a Reply