ಬದುಕಿಗೆ ಭಗವದ್ಗೀತೆ – ಯಾರೆಲ್ಲ ವೇದವಾದರತರೆನಿಸಿಯಾರು?

ಬದುಕಿಗೆ ಭಗವದ್ಗೀತೆ – ಯಾರೆಲ್ಲ ವೇದವಾದರತರೆನಿಸಿಯಾರು?

ವೇದ-’ಜ್ಞ’ರು ಬೇರೆ, ವೇದ-’ವಾದರತ’ರು ಬೇರೆ. ಎಲ್ಲರೂ ‘ಶುದ್ಧಜ್ಞಾನ’ಕ್ಕಾಗಿಯೇ ವೇದವನ್ನು ಆಶ್ರಯಿಸುತ್ತಾರೆ ಎನ್ನಲಾಗದು.
ವಿದ್ಯಾ ಪ್ರೀತಿಯಿಂದ ವೇದವೇದಾಂತಗಳನ್ನು ವೇದಾಂಗಗಳನ್ನೂ ಕ್ರಮಯುತವಾಗಿ ಗಂಭೀರವಾಗಿ ಅಧ್ಯಯನ ಮಾಡುವವರಿರುತ್ತಾರೆ. ಅವರುಗಳಲ್ಲಿ ಕೆಲವರು ಚಾರಿತ್ರ್ಯ-ಅಂತರ್ದೃಷ್ಟಿ-ತಪಸ್ಸುಗಳ ಬಲದಿಂದ ವೇದಾರ್ಥ-ಸ್ವಾರಸ್ಯಗಳನ್ನು ಸಾಕ್ಷಾತ್ಕರಿಸಿಕೊಳ್ಳಬಲ್ಲವರೂ ಹೌದು. ಆದರೆ ಹೀಗೆ ನಿಜಾರ್ಥದಲ್ಲಿ ವೇದಾಧ್ಯಯನದಲ್ಲಿ ತೊಡಗಿದ ಪ್ರಥಮಾಧಿಕಾರಿಗಳ ಸಂಖ್ಯೆ ವಿರಳ. ಇತರೆಲ್ಲರೂ ಬೇರೆಬೇರೆ ಕಾರಣಕ್ಕಾಗಿ ವೇದವನ್ನು ಆಶ್ರಯಿಸಿ ಪ್ರಯೋಜನ ಪಡೆಯುತ್ತಾರೆ.
ಕುಲಧರ್ಮವೆಂಬ ಶ್ರದ್ಧೆಯಿಂದ ಯಥಾಶಕ್ತಿ ವೇದಭಾಗಗಳನ್ನು ಪಠಣ-ಮನನ ಮಾಡುವವರಿರುತ್ತಾರೆ. ಪೌರೋಹಿತ್ಯ-ಜ್ಯೋತಿಷ್ಯ ಹಾಗೂ ಶಾಸ್ತ್ರಾಧ್ಯಾಪನವನ್ನು ಮಾಡುವವರೂ ವೇದವನ್ನು ಅಷ್ಟರಮಟ್ಟಿಗೆ ತಿಳಿಯುತ್ತಾರೆ. ವೇದಸಂಹಿತೆಗಳನ್ನು ಸಂರಕ್ಷಿಸುವ ಸಲುವಾಗಿ ವೇದಗಳ ಪಠಣ-ವ್ಯಾಖ್ಯಾನಾದಿಗಳನ್ನು ಮಾಡುವವರೂ ಮಾಡಿಸುವವರೂ ಇರುತ್ತಾರೆ. ‘ಒಂದಿಷ್ಟು ಪುಣ್ಯ’ ಬರುತ್ತದೆ ಎಂಬ ಮುಗ್ಧ ಶ್ರದ್ಧೆಯಿಂದ ಕೆಲವು ವೇದಮಂತ್ರಗಳನ್ನು ಪಠಿಸುವವರಿದ್ದಾರೆ. ಧರ್ಮಪ್ರಶ್ನೆಗಳಿಗೆ ಉತ್ತರಗಳನ್ನರಸಿ ವೇದವನ್ನು ಅಲ್ಲಲ್ಲಿ ಹೆಕ್ಕಿ ನೋಡುವವರಿರುತ್ತಾರೆ. ಸಾಮಾನ್ಯ ಹಣವು ಒದಗಿಸಲಾಗದಂತಹ ಸ್ವರ್ಗ-ಸಂತಾನ-ಅಧಿಕಾರ-ಕೀರ್ತಿ-ರಾಜ್ಯಪ್ರಾಪ್ತಿ ಮುಂತಾದ ವಿಶಿಷ್ಟ ಭೋಗಗಳ ಪ್ರಾಪ್ತಿಗೆ ಸಾಧಕವಾದ ಮಂತ್ರ-ತಂತ್ರಗಳನ್ನು ತಿಳಿಯುವ ಸಲುವಾಗಿ ವೈದಿಕ-ಕರ್ಮವನ್ನಾಶ್ರಯಿಸುವವರೂ ಹೆಚ್ಚಾಗಿಯೇ ಇದ್ದಾರೆ. ಇಂತಹ ಆಸೆಬುರುಕರು ಹುಟ್ಟಿ-ಸಾಯುವ ಪ್ರಕ್ರಿಯೆಗೇ ತಳ್ಳುವ ಅತಿಯಾದ ಕಾಮ್ಯಕರ್ಮಗಳ ಜಾಲದಲ್ಲಿ ಸಿಲುಕುತ್ತಾರೆ. ಅವರಿಗೆ ವೇದಕರ್ಮಗಳು ಭೋಗಸಾಧನೆಗಳಷ್ಟೇ, ಯೋಗಸಾಧನೆಗಳಲ್ಲ.
ವೇದದ ಅರ್ಥ-ವಿಶೇಷಾರ್ಥಗಳ ಗೋಜಿಗೆ ಹೋಗದೆ, ಸ್ವರೋಚ್ಚಾರ-ಪುರಸ್ಸರವಾಗಿ ವೇದಸಂಹಿತೆಗಳ ಮಂತ್ರಗಳನ್ನು ಘೋಷಿಸುವ ಶ್ರದ್ಧೆ-ಪರಿಣತಿಗಳನ್ನು ಮಾತ್ರ ಹೊಂದಿರುವವರನ್ನು ‘ವೈದಿಕರು’ ಎಂದೇ ಗುರುತಿಸುವುದು ಲೋಕರೂಢಿ. ಯಾವುದೋ ಒಂದು ಭಾಗವನ್ನು ಶ್ರದ್ಧೆಯಿಂದಲೋ ಜಿಜ್ಞಾಸೆಯಿಂದಲೋ ಕೆಲದಿನಗಳ ಮಟ್ಟಿಗೆ ಆಲಿಸಿ, ತಮಗೆ ಅರ್ಥವಾದದ್ದಷ್ಟನ್ನೇ ಹಿಡಿದು ’ವೇದಾರ್ಥ-ಬೋಧನೆಗೆ ಶುರುಹಚ್ಚಿಕೊಳ್ಳುವ ದಿಢೀರ್-ವೇದಾಂತಿಗಳೂ ಹೆಚ್ಚುತ್ತಿದ್ದಾರೆ! ತಮ್ಮ ಮಠ-ಮತ-ಸಿದ್ಧಾಂತ-ಸ್ವಾಭಿಪ್ರಾಯವನ್ನೇ ಸಮರ್ಥಿಸುವ ಸಲುವಾಗಿ ವೇದಾರ್ಥವನ್ನೇ ಬಳಸುವ ಅಥವಾ ತಿರುಚುವ ಕೂಪಮಂಡೂಕರೂ ಇರುತ್ತಾರೆ. ವೇದಾರ್ಥಗಳನ್ನು ಗ್ರಹಿಸಲು ಅತ್ಯಗತ್ಯವೆನಿಸುವ ಜ್ಞಾನೋಪಕರಣಗಳಾದ ‘ವೇದಾಂಗ’ಗಳನ್ನೂ (ಶೀಕ್ಷಾ-ವ್ಯಾಕರಣ-ಜ್ಯೋತಿಷ-ಕಲ್ಪ-ನಿರುಕ್ತ-ಛಂದಸ್ಸು) ಹಾಗೂ ಇದಕ್ಕೆಲ್ಲ ಕೀಲಿಕೈಯ್ಯಾದ ಸಂಸ್ಕೃತ-ಭಾಷಾಜ್ಞಾನವನ್ನೂ ಕಿಂಚಿತ್ತೂ ಹೊಂದಿರದೆ, ಲಭ್ಯ ವ್ಯಾಖ್ಯಾನ-ವಿವರಣೆಗಳನ್ನು ಹಿಡಿದು, ಸರಿಯಾಗಿಯೋ ತಪ್ಪಾಗಿಯೋ ಅರೆಬರೆಯಾಗಿಯೋ ವ್ಯಾಖ್ಯಾನಿಸುವ ’ಅನುವಾದಶೂರ” ವೈದಿಕರೇ ಜಾಸ್ತಿ!ಸಂಸ್ಕೃತ ಹಾಗೂ ವೇದಾಂಗಗಳ ಹಿನ್ನಲೆಯೇ ಇಲ್ಲದಿದ್ದರೂ, ವೇದಮಂತ್ರಗಳನ್ನು ಚೆನ್ನಾಗಿ ಪಠಿಸುವುದನ್ನು ಮಾತ್ರ ಕಲಿತವರೂ ಕಲಿಸುವವರೂ ಹಲವರು, ತಮ್ಮ ಮಾತನ್ನು ಮನ್ನಿಸುವ ಮುಗ್ಧಶ್ರೋತೃಗಳು ಸಿಕ್ಕಿದಾಕ್ಷಣ ಮನಸ್ಸಿಗೆ ಬಂದ ಹಾಗೆ ಮಂತ್ರಾರ್ಥಗಳನ್ನು ವ್ಯಾಖ್ಯಾನಿಸುವ ಚಪಲವನ್ನೂ ಹೊಂದಿರುತ್ತಾರೆ! PhD ಗಾಗಿ, ಮಠಮಂದಿರಗಳ ಮಾನ್ಯತೆಗಾಗಿ ವೇದಪುಸ್ತಕಗಳನ್ನು ತಿರುವಿ ಹಾಕಿ ‘ವೇದಬ್ರಹ್ಮ’ರೆನಿಸುವ ಜಾಣರೂ ಅಸಂಖ್ಯ! ಕುತೂಹಲಕ್ಕಾಗಿ ವೇದಪುಸ್ತಕಗಳನ್ನು ಇಣುಕಿ ನೋಡಿ “ಓ ಇಷ್ಟೇನಾ?” ಎಂದು ತಿರಸ್ಕಾರದಿಂದಲೋ, “ಓ! ಇಷ್ಟೆಲ್ಲ ಇದೆಯಾ?!” ಎಂದು ಭಯಾಶ್ಚರ್ಯದಿಂದಲೋ ಉದ್ಗರಿಸಿ ಮಿರಮಿಸುವವರೂ ಇರುತ್ತಾರೆ!
ಇನ್ನು ವೇದ-ವೇದಾಂತ-ಆಗಮ-ಪುರಾಣ-ತಂತ್ರ-ಜಾನಪದ-ಪ್ರಾದೇಶಿಕ-ಪ್ರಾಚೀನ- ಅರ್ವಾಚೀನ-ಪ್ರಸ್ತುತ-ಅಪ್ರಸ್ತುತ-ಸಮಯೋಚಿತ-ಕಾಲೋಚಿತ-ಕಾಲಾತೀತ-ಸ್ವಕೀಯ-ಪರಕೀಯವೆಂಬ ವಿಗಂಡನೆಗೆ ಒಳಪಡಬೇಕಾದ ಪ್ರಚಲಿತ ಆಚಾರ-ವಿಚಾರಗಳ ನಡುವೆ ಇರುವ ಸಾಮಾನ್ಯ ವ್ಯತ್ಯಾಸಗಳನ್ನೂ ತಿಳಿಯದೇ, ಹಿಂದು-ಧರ್ಮ-ಕರ್ಮ-ವಿಚಾರವೆಲ್ಲವನ್ನೂ ಒಟ್ಟಾಗಿ ‘ವೇದ’ ಎಂದು Label ಹೆಸರಿಸಿ ವ್ಯವಹರಿಸುವ ಮುಗ್ಧತೆ ಸರ್ವತ್ರ ಹರಡಿದೆ. ದೇವರು-ಧರ್ಮಗಳ ಬಗ್ಗೆ ಮಾತನಾಡುವ ಎಲ್ಲರನ್ನೂ ‘ವೇದವಿದರು’, ‘ವೇದೋಪಾಸಕರು’ ಎಂದು ಪಟ್ಟಿಕಟ್ಟುವಲ್ಲಿ ಮಾಧ್ಯಮಗಳೂ ವೇದಿಕೆಗಳೂ ಹಿಂದೆಮುಂದೆ ಯೋಚಿಸುವುದಿಲ್ಲ! ಇವರ ಮಾತುಗಳಲ್ಲಿ ಅಪಕ್ವತೆ-ಅಸಮಂಜಸತೆ-ಅಮಾನವೀಯತೆಗಳಿದ್ದಲ್ಲಿ ಆ ದೋಷಗಳನ್ನೆಲ್ಲ ‘ವೇದ’ಗಳ ಮೇಲೆ ಹೇರಿಬಿಡುವುದೂ ಅನುಕೂಲವಾಗಿಬಿಟ್ಟಿದೆ! ಹೀಗಾಗಿ ‘ಯಾವುದು ವೈದಿಕ? ಯಾವುದು ಅವೈದಿಕ?’ ಎಂದು ಕಳೆ-ಬೆಳೆಗಳ ವ್ಯತ್ಯಾಸವನ್ನೇ ಮರೆಸುವಷ್ಟು ಗೊಂದಲ ತುಂಬಿ ಹೋಗಿದೆ.
ಭಾರತದ ಮೂಲಧರ್ಮ-ಸಂಸ್ಕೃತಿಯನ್ನೆಲ್ಲ ನಾಶಗೈಯುವ ಹುನ್ನಾರದ ವೇದದ್ವಿಷರು, ಭಾರತೀಯತೆಯ ತಾಯಿಬೇರಿನಂತಿರುವ ವೇದ-ವೇದಾಂತಗಳ ಎಲ್ಲ ಅಂಶಗಳನ್ನೂ ಅಮಾನವೀಯ-ನಿಷ್ಪ್ರಯೋಜಕ ಎಂದು ಸಾಧಿಸಿ ತೋರುವ ಸಲುವಾಗಿಯೇ, ದೇಶವಿದೇಶಗಳಲ್ಲಿ, ತನು-ಮನ-ಧನಗಳನ್ನು ವ್ಯಯಿಸಿ ವೇದಗಳನ್ನು ತೀವ್ರವಾಗಿ ’ಸಂಶೋಧಿಸುತ್ತಿದ್ದಾರೆ’ ಕೂಡ!
ವೇದವೇದಾಂತದ ಅಕ್ಷರ-ಮಾತ್ರವನ್ನೂ ಮೂಲದಲ್ಲಿ ಓದದೆ, ಪಾಶ್ಚಾತ್ಯರೂ ವೇದವಿರೋಧಿಗಳೂ ಹರಡಿಬಿಟ್ಟ ಮಿಥ್ಯಾರ್ಥಗಳನ್ನೇ ಓದಿ, ಅದೇ ಧಾಟಿಯಲ್ಲಿ ಆಲೋಚಿಸಿ, ಪುಂಖಾನುಪುಂಖವಾಗಿ ವೇದವಿರೋಧಿ-ವಿಶ್ಲೇಷಣೆ ಮಾಡಿ ಚಿಂತಕ(?)ರೆನಿಸಿ ಒಮ್ಮೆಲೇ ಸ್ಥಾನ-ಮಾನ-ಬಿರುದುಗಳನ್ನು ಗಿಟ್ಟಿಸಿಕೊಳ್ಳುವವ (ಸ್ವ)’ಪ್ರಗತಿಪರರನ್ನು’ ನಮ್ಮಭಾರತೀಯ(?) ಶಿಕ್ಷಣಪದ್ಧತಿಯ ವಿಕೃತ ಇತಿಹಾಸ-ಸಿದ್ಧಾಂತಗಳೇ ನಿರ್ಮಿಸುತ್ತಿವೆ! ವೇದಾಧ್ಯಯನಕ್ಕೆ ಪರಂಪರೆಯು ವಿಧಿಸುವ ಯಾವ ಪ್ರಾಥಮಿಕ-ಶಿಷ್ಟಾಚಾರಗಳನ್ನೂ ಪಾಲಿಸದೇ, ಕೈಯಲ್ಲಿ Peg ಹಿಡಿದೇ ವೇದಗಳ ಆಂಗ್ಲಾನುವಾದಗಳನ್ನು ಓದುತ್ತ, ’ವಿಶ್ಲೇಷಿಸುವ’ Scholars of mere Academic interestಗಳ ಸಂಖ್ಯೆ ದೇಶ-ವಿದೇಶಗಳ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚುತ್ತಿದೆ. ಮತಾಂತರ-ಬೌದ್ಧಿಕ ಆಕ್ರಮಣ-Racism-colonization ನಿಮಿತ್ತವಾಗಿ ವೇದವಿರೋಧಿ ಕಲ್ಪನೆಗಳನ್ನು ಹರಡುವ ಸಲುವಾಗಿಯೇ Sponsored Vedic scholarsಗಳೂ ಹೆಚ್ಚುತ್ತಿದ್ದಾರೆ! ವೇದಾಧ್ಯಯನಕ್ಕಾಗಿಯೇ ಜೀವನವನ್ನೆಲ್ಲ ಮುಡಿಪಿಟ್ಟು ತಪಸ್ವಿಗಳಂತೆ ಬದುಕುತ್ತ ಗಂಭೀರ ಚಿಂತನ-ಮಂಥನ ಮಾಡುವ ವಿದ್ವಾಂಸರಿಗೆ ಇಂತಹ ‘Scholars’, ‘ಬುದ್ಧಿ’ ಹೇಳುವುದೂ ಹೆಚ್ಚುತ್ತಿದೆ!
ಹೀಗೆ ಯಾವ ಯಾವುದೋ ನಿಮಿತ್ತವಾಗಿ ವೇದಕ್ಕೆ ಅಂಟಿಕೊಳ್ಳುತ್ತಾರೆ ಜನ. ಎಲ್ಲರೂ ತಮ್ಮ ತಮ್ಮ ಅಭಿಪ್ರಾಯವನ್ನು ಮಂಡಿಸಲು ಬಳಸುವುದು ‘ವೇದ’ವನ್ನೇ. ಹಾಗಾಗಿ ಇವರೆಲ್ಲರೂ ವೇದವಾದರತರೇ!
‘ಇವುಗಳ ಪೈಕಿ ನಾವು ಯಾವ ವರ್ಗಕ್ಕೆ ಸೇರುತ್ತೇವೆ?’ ಎನ್ನುವ ಪ್ರಾಮಾಣಿಕ ಆತ್ಮನಿರೀಕ್ಷಣೆ ಮಾಡಿಕೊಂಡಲ್ಲಿ ‘ವೇದವಾದರತರು’ ಎಂಬ ಕೃಷ್ಣನ ಮಾತಿನ ತಿವಿತ ಇವತ್ತಿಗೂ ಎಷ್ಟು ಪ್ರಸ್ತುತ ಎನ್ನುವುದು ಚೆನ್ನಾಗಿ ಅರ್ಥವಾಗುತ್ತದೆ!
ಡಾ. ಆರತಿ ವಿ ಬಿ
ಕೃಪೆ : ವಿಜಯವಾಣಿ

Leave a Reply