ಬದುಕಿಗೆ ಭಗವದ್ಗೀತೆ – ’ಸದ್ವಸ್ತುವನ್ನು ನೆನೆ, ಕರ್ತವ್ಯವನ್ನು ಮಾಡು!

ಬದುಕಿಗೆ ಭಗವದ್ಗೀತೆ – ’ಸದ್ವಸ್ತುವನ್ನು ನೆನೆ, ಕರ್ತವ್ಯವನ್ನು ಮಾಡು!

‘ಸತ್-ಅಸತ್ ಬಗ್ಗೆ ಸ್ಪಷ್ಟ ಅರಿವಿರುವ ತತ್ವದರ್ಶಿಯು ವ್ಯಥೆಪಡುವುದಿಲ್ಲ’ ಎಂದು ತಿಳಿ ಹೇಳಿದ ಕೃಷ್ಣನು ‘ಸತ್’  ವಸ್ತುವಿನ ಸ್ವರೂಪವನ್ನು ವಿವರಿಸುತ್ತಾನೆ-
ಅವಿನಾಶಿ ತು ತದ್ವಿದ್ಧಿ ಯೇನ ಸರ್ವಮಿದಂ ತತಮ್I ವಿನಾಶಮವ್ಯಯಸ್ಯಾಸ್ಯ ನ ಕಶ್ಚಿತ್ಕರ್ತುಮರ್ಹತಿ II
ಈ ಸಮಸ್ತವೂ (ಸೃಷ್ಟಿಯೂ) ಯಾವುದರಿಂದ ವ್ಯಾಪಿಸಸಲ್ಪಟ್ಟಿದೆಯೋ ‘ಅವಿನಾಶಿ’ (ನಾಶವಿಲ್ಲದ್ದು) ಎಂದು ತಿಳಿ. ಇದರ (ಸತ್ವಸ್ತುವಿನ) ನಾಶವನ್ನು ಯಾರೂ ಗೈಯಲಾರರು.” (ಭ-೨-೧೭)
ಯಾವುದು ‘ತ್ರಿಕಾಲಾಬಾಧಿತ’ವೋ (ಹಿಂದೆಯೂ ಇತ್ತು, ಇಂದೂ ಇದೆ, ಮುಂದೆಯೂ ಇದ್ದೇ ಇರುತ್ತದೆ) ಅದೇ ಸತ್. ಆದರೆ ಅಸತ್ಕಾಲದ ಮಿತಿ ಉಳ್ಳದ್ದು. ಅಂದರೆ- ‘ಅದು ಭೂತ-ವರ್ತಮಾನ – ಭವಿಷ್ಯತ್ಕಾಲಗಳೆಲ್ಲದರಲ್ಲೂ ಇರಲಾರದು’ ಎಂದರ್ಥ. ಆದರೆ ‘ಸತ್’ ವಸ್ತುವು ಸರ್ವದಾ ಸರ್ವತ್ರ ವ್ಯಾಪಿಸಿರುವ ಅವಿಚ್ಛಿನ ಅಸ್ತಿತ್ವ.
ಅದು ತನ್ನೊಳಗೆ ಈ ತಾತ್ಕಾಲಿಕ ‘ಅಸತ್’ನ್ನು ಧರಿಸಿ ಪೋಷಿಸುತ್ತದೆ. ಉದಾಹರಣೆ- ಆಕಾಶದೊಳಗೆ ಗ್ರಹೋಪಗ್ರಹಗಳೂ ಜೀವಕೋಟಿಗಳೂ ಇವೆ. ಚಲಿಸುವ ಮೋಡಗಳೂ, ಸುರಿಯುವ ಮಳೆಯು, ಬೀಸುವ ಗಾಳಿಯು, ಧಗಧಗಿಸುವ ಬೆಂಕಿಯೂ, ಆಕಾಶದಲ್ಲೇ ಪ್ರವರ್ತಿಸುತ್ತಿವೆ. ದುರ್ವಾಸನೆ – ಸುವಾಸನೆಗಳೂ ಮಂದಾನಿಲ-ವಿಷಾನಿಲಗಳೂ ಅದರಲ್ಲೇ ಚಲಿಸುತ್ತವೆ. ಆದರೆ ಈ ಎಲ್ಲವುಗಳ ಪ್ರಭಾವದಿಂದ ಆಕಾಶಕ್ಕೆ ಏನಾದರೂ ವ್ಯತ್ಯಾಸವಾಗುತ್ತದೆಯೆ? ಅಂತೆಯೇ, ಆಕಾಶವೂ ಸೇರಿದಂತೆ ತನ್ನೊಳಗೆ ಸಮಸ್ತ-ಚರಾಚರ-ಲೋಕಗಳನ್ನೂ ಜೀವಕೋಟಿಗಳನ್ನೂ ತಳೆದಿರುವ  ‘ಸತ್’ ವಸ್ತುವು ಇವಾವುಗಳ ಆಗುಹೋಗುಗಳಿಂದಲೂ ಒಂದಿನಿತೂ ವ್ಯತ್ಯಾಸವೂ ಆಗದು ‘ನಾಶ’ವೂ  ಆಗದು. ಹಾಗಾಗಿ ಅದು ಅವಿನಾಶಿಯಾದದ್ದು. ಕೃಷ್ಣನು ಮುಂದುವರೆಸುತ್ತಾನೆ-
ಅಂತವಂತ ಇಮೇದೇಹಾ ನಿತ್ಯಸ್ಯೋಕ್ತಾಃ ಶರೀರಿಣಃI ಅನಾಶಿನೋಽಪ್ರಮೇಯಸ್ಯ ತಸ್ಮಾದ್ಯುದ್ಧ್ಯಸ್ವ ಭಾರತ II
ಈ ದೇಹಗಳೊಳಗಿರುವ ಶರೀರಿಯು (ಜೀವಾತ್ಮವು) ನಿತ್ಯನು, ಅಪ್ರಮೇಯನು (ಎಣಿಕೆಗೆ ಸಿಗದವನು). ಆದರೆ ದೇಹಮನೋಬುದ್ಧಿಗಳು ಮಾತ್ರ ಅಂತ್ಯ ಕಾಣುವಂತಹವೇ! (ಭ-೨-೧೮)
ಇಲ್ಲಿ ‘ದೇಹ’ ಎಂದರೆ ಈ ಸ್ಥೂಲದೇಹವೊಂದೇ ಅಲ್ಲ. ನಮ್ಮ ಪ್ರಾಣ-ಮನೋ-ಬುದ್ಧಿಗಳೂ ಸೂಕ್ಷ್ಮತರ ದೇಹಗಳೇ. ಇವೆಲ್ಲವುಗಳೂ ಬದಲಾಗುತ್ತವೆ, ನಾಶವಾಗುತ್ತವೆ.
ಭೌತಿಕ ದೇಹವು ಬಾಲ್ಯ-ಯೌವನ-ವೃದ್ಧಾಪ್ಯಗಳನ್ನೂ ಭೋಗ-ರೋಗಗಳನ್ನೂ ಅನುಭವಿಸುತ್ತ ಕೊನೆಗೆ ಸಾಯುವುದನ್ನೂ ಕಾಣುತ್ತೇವೆ. ಮನಸ್ಸು- ಶೈಶವದಿಂದ ಇಲ್ಲಿಯವರೆಗೂ ಅದೆಷ್ಟು ಆಸೆ-ನಿರಾಶೆಗಳನ್ನು ಪಟ್ಟಿಲ್ಲ! ಅದೆಷ್ಟು ಸಂವೇದನೆಗಳನ್ನು ಬೆಳೆಸಿಕೊಂಡಿಲ್ಲ, ಅದೆಷ್ಟನ್ನು ಕಳೆದುಕೊಂಡಿಲ್ಲ! ಹೀಗೆ ಮನಸ್ಸು ಎಂದೂ ಒಂದೆ ಸ್ಥಿತಿಯಲ್ಲಿ ಇದ್ದಿಲ್ಲ, ಇರಲಾರದು ಕೂಡ! ಇನ್ನು ಬುದ್ಧಿ- ಕ್ಷಣ ಪ್ರತಿಕ್ಷಣವೂ ಜೀವನಾನುಭವಗಳಿಂದ ಅದೆಷ್ಟು ಬದಲಾಗುತ್ತ ಬಂದಿದೆ! ಅದೆಷ್ಟು ಪ್ರಭಾವಗಳಲ್ಲಿ ಸಿಲುಕಿದೆ! ಅದೆಷ್ಟು ಪ್ರಭಾವಗಳಿಂದ ಕಳಚಿಕೊಂಡಿದೆ! ಕಲಿತದ್ದೆಷ್ಟು! ಮರೆತದ್ದೆಷ್ಟು! ಅದೆಷ್ಟು ವಿಚಾರಧಾರೆಗಳನ್ನು ಬದಲಾಯಿಸಿಕೊಂಡಿದೆ! ಅವುಗಳಲ್ಲಿ ಸ್ವೋಪಜ್ಞವಾದವುಗಳೆಷ್ಟು ! ಬಾಹ್ಯ ಪ್ರಭಾವಗಳದೆಷ್ಟು!….. ಹೀಗೆ……ಬುದ್ಧಿಯೂ ನಿರಂತರ ಬದಲಾಗುತ್ತಿದೆ! ಜಗತ್ತೂ ಅಷ್ಟೆ- ಕ್ಷಣಕಾಲವೂ ಇದ್ದಂತೆ ಇರದು. ಹಗಲು ರಾತ್ರಿಗಳು, ಋತು-ಕಾಲ-ಚಕ್ರಗಳ ಹಾಗೂ ನೈಸರ್ಗಿಕ ವೃದ್ಧಿಹ್ರಾಸಗಳು ಆಗುತ್ತಲೇ ಇವೆ! ಹೀಗೆ ‘ಅಸತ್’ ಪರಿಧಿಯೊಳಗಿನ (ಸ್ಥೂಲ ಹಾಗೂ ಸೂಕ್ಷ್ಮ) ’ದೇಹ’ಗಳೆಲ್ಲವೂ ಬದಲಾಗುತ್ತವೆ, ನಾಶವಾಗುತ್ತವೆ.
ಆದರೆ ಈ ‘ಅಸತ್’ನ ಒಳಗೂ ಹೊರಗೂ ಸರ್ವತ್ರ ವ್ಯಾಪಿಸಿರುವ ‘ಸತ್’ ವಸ್ತುವು ಮಾತ್ರ ನಿರ್ವಿಕಾರವೂ ಶಾಶ್ವತವೂ ಆಗಿರುತ್ತದೆ.
ಅದು ‘ಅಪ್ರಮೇಯ’ವಾದದ್ದು ಎನ್ನುತ್ತಾನೆ ಕೃಷ್ಣ. ‘ಪ್ರಮೇಯ’ ಎಂದರೆ ಎಣಿಕೆಗೆ ಸಿಗುವಂತಹದ್ದು. ಉದಾಹರಣೆಗೆ-ನೀರನ್ನು Litreನಲ್ಲಿ ಅಳೆಯುತ್ತೇವೆ, ಅಕ್ಕಿಯನ್ನು Kilogramಗಳಲ್ಲಿ ಅಳೆಯುತ್ತೇವೆ. ದೇಹದ ಸ್ಥಿತಿಗತಿಗಳನ್ನೂ ಅಳೆಯಲು Medical Parametersಗಳಿವೆ, ಅಂತೆಯೇ ಮನುಷ್ಯನ ವಿದ್ಯಾ-ಪ್ರತಿಭೆ-ಸಾಫಲ್ಯಗಳನ್ನೂ ಬುದ್ಧಿಯಿಂದ ಅಳೆಯಬಹುದು! ಹಾಗಾಗಿ ಅವುಗಳೆಲ್ಲ ’ಪ್ರಮೇಯ’ವಾದವು. ಆದರೆ ಇಂಥ ಯಾವುದೇ ಭೌತಿಕ-ಬೌದ್ಧಿಕ ಮಾಪನಗಳೂ, ಅವಿನಾಶಿಯೂ ಶಾಶ್ವತವೂ ಆದ ‘ಸದ್ವಸ್ತುವನ್ನು ಅಳೆದು ಅರಿತು ’ಇದಮಿತ್ಥಂ’ ಎಂದು ನಿಶ್ಚಯಿಸಲಾರವು! ಹಾಗಾಗಿಯೇ ಅದು ’ಅಪ್ರಮೇಯ’! ಇದನ್ನೇ ತೈತ್ತಿರೀಯ ಉಪನಿಷತ್ತು ಧ್ವನಿ ಪೂರ್ಣವಾಗಿ ಹೀಗೆ ಹೇಳುತ್ತದೆ- “ಯತೋವಾಚೋ ನಿವರ್ತಂತೆ ಅಪ್ರಾಯಮನಸಾಸಹ…(ಎಲ್ಲಿಂದ ಮಾತು ಮನಂಗಳು ಏನನ್ನೂ ಪಡೆಯಲಾಗದೇ ಹಿಂದಿರುಗಿದವೋ—- ಆ ತತ್ವ…)
ಅಲ್ಲ! ನಮ್ಮ ಇಂದ್ರಿಯಗಳ ಗ್ರಹಿಕೆಯ ವ್ಯಾಪ್ತಿ ಅದೆಷ್ಟು ಮಿತ! ಕಣ್ಣು ನೋಡಬಲ್ಲುದೇ ಹೊರತು ಕೇಳಲಾಗದು! ಕಿವಿಯು ಕೇಳಬಲ್ಲುದೇ ಹೊರತು ಸವಿಯಲಾರದು! ಹೀಗೆ ಭೌತಿಕ ಪ್ರಪಂಚದ ಗ್ರಹಿಕೆಯ ವಿಷಯದಲ್ಲೇ ಮಿತಿಯುಳ್ಳವು ಇಂದ್ರಿಯಗಳು. ಇಂತಹ ಇಂದ್ರಿಯಗಳ ಮೂಲಕ ಪ್ರವರ್ತಿಸುವಂತಹವು ಮನಸ್ಸು ಮತ್ತು ಬುದ್ಧಿಗಳು, ಹೀಗಿರುವಾಗ ಅವು ಮೂರ್ತಪ್ರಪಂಚದಾಚೆಗಿನ ದೇಶ ಕಾಲಾತೀತವಾದ ಅಸ್ತಿತ್ವವನ್ನು ಊಹಿಸಿ-ಭಾವಿಸುವುದಾದರೂ ಹೇಗೆ ಸಾಧ್ಯ?ನಾಲ್ಕಡಿ ಉದ್ದದ ಕೋಲನ್ನು ಹಿಡಿದು ಅಂತರೀಕ್ಷವನ್ನೆಲ್ಲ ಅಳೆಯುವುದು ಸಾಧ್ಯವೇ?
ಹೀಗೆ ಅಪ್ರಮೇಯವೂ ಅವಿನಾಶಿಯೂ ಅದ ‘ಸತ್’ ತತ್ವದತ್ತ ಅರ್ಜುನನ ಧ್ಯಾನವನ್ನು ಎತ್ತುತ್ತಿದ್ದಾನೆ ಕೃಷ್ಣ!
“ವ್ಯಥೆಪಟ್ಟಿದ್ದು ಸಾಕೇಳು! ಶಾಶ್ವತವಾದ ’ಸತ್’ ತತ್ವವನ್ನು ನೆನೆ! ಯುದ್ಧ ಮಾಡು!” ಎಂದು ಪ್ರೇರೇಪಿಸುತ್ತಿದ್ದಾನೆ!
ನಶಿಸಿ ಹೋಗುವ ಅಸತ್-ಲೋಕದಲ್ಲಿ ಇರುವ ನಾವು ಆಗಿ ಹೋದುದರ ಚಿಂತೆಯಲ್ಲೋ, ಆಗಬೇಕಾದುದರ ಆತಂಕದಲ್ಲೋ, ವರ್ತಮಾನದ ಧರ್ಮಕರ್ಮಗಳನ್ನು ಮರೆಯುತ್ತೇವಷ್ಟೆ? ಕೃಷ್ಣನು ನಮಗೇ ಒಂದೇಟು ಕೊಟ್ಟು- “ಸಾಕೇಳು! ಈ ಅಸತ್-ಪ್ರಪಂಚವು ಹೀಗೆಯೇ! ಕೊರಗುವುದು ಮೂರ್ಖತನ! ಶಾಶ್ವತವಾದ ’ಸತ್’ ತತ್ವವನ್ನು ನೆನೆ! ಧರ್ಮವನ್ನರಿತು ಜೀವನ ಸಂಗ್ರಾಮವನ್ನು ಮುಂದುವರೆಸು!” ಎಂದು ಹೇಳುತ್ತಿರುವಂತೆ ಭಾಸವಾಗುತ್ತದಲ್ಲವೆ?!

ಡಾ ಆರತೀ ವಿ ಬಿ

ಕೃಪೆ : ವಿಜಯವಾಣಿ

Leave a Reply