ಬದುಕಿಗೆ ಭಗವದ್ಗೀತೆ – ಸನ್ಮಿತ್ರನಾದ ಶ್ರೀಕೃಷ್ಣನ ಅಮೂಲ್ಯ ದಿಗ್ದರ್ಶನ

ಬದುಕಿಗೆ ಭಗವದ್ಗೀತೆ – ಸನ್ಮಿತ್ರನಾದ ಶ್ರೀಕೃಷ್ಣನ ಅಮೂಲ್ಯ ದಿಗ್ದರ್ಶನ

ಶ್ರೀಕೃಷ್ಣನು ತನ್ನ ಜಾಣ್ಮೆ ಹಾಗೂ ಅಧಿಕೃತವಾಣಿಯಿಂದಲೂ ಸ್ನೇಹಾಧಿಕ್ಯದಿಂದಲೂ ಅರ್ಜುನನ ಗೊಂದಲವನ್ನೂ ಭಾವುಕತೆಯನ್ನು ಸ್ತರಸ್ತರವಾಗಿ ಭಂಜಿಸಿದ, ಕರ್ಮನಿಶ್ಚಯದ ವಿಚಾರದಲ್ಲಿ ಸ್ಪಷ್ಟತೆಯನ್ನು ಮೂಡಿಸಿದ. ಕೃಷ್ಣನಂತಹ ಗೆಳೆಯನನ್ನು ಪಡೆದ ಅರ್ಜುನನೇ ಧನ್ಯ! ರಾಜಾಭರ್ತೃಹರಿಯ ಸುಭಾಷಿತವೊಂದು ವಿವರಿಸುತ್ತದೆ-
ಪಾಪಾನ್ನಿವಾರಯತಿ ಯೋಜಯತೇ ಹಿತಾಯ Iಗುಹ್ಯಂ ನಿಗೂಹತಿ ಗುಣಾನ್ ಪ್ರಕಟೀಕರೋತಿ II
ಆಪದ್ಗತಂ ಚ ನ ಜಹಾತಿ ದದಾತಿ ಕಾಲೆ Iಸನ್ಮಿತ್ರಲಕ್ಷಣಮಿದಂ ಪ್ರವದಂತಿ ಸಂತಃ II 1.72
ಸನ್ಮಿತ್ರನು ತನ್ನ ಮಿತ್ರನನ್ನು ಪಾಪಮಾಡದಂತೆ ತಡೆಯುತ್ತಾನೆ. ಹಿತವನ್ನು ಉಂಟುಮಾಡುವ ಕಾರ್ಯಗಳಲ್ಲಿ ತೊಡಗಿಸುತ್ತಾನೆ, ಮಿತ್ರನ ಗೌಪ್ಯತೆಯನ್ನು (ಮರ್ಯಾದೆಯನ್ನು) ಕಾಪಾಡುತ್ತಾನೆ. ಮಿತ್ರನ ಗುಣಗಳನ್ನು ಎಲ್ಲರ ಮುಂದೆ ಎತ್ತಿ ಹೇಳುತ್ತಾನೆ, ಆಪತ್ಕಾಲದಲ್ಲಿ ಕೈಬಿಡದೆ ಜೊತೆಗಿರುತ್ತಾನೆ, ಸಕಾಲದಲ್ಲಿ (ಅಗತ್ಯ ವಸ್ತುಗಳನ್ನು ಬೆಂಬಲವನ್ನೋ) ಕೊಡುತ್ತಾನೆ.
ಜೀವನದಲ್ಲಿ ಮಿತಿಮೀರಿದ ಕಷ್ಟಗಳು ಬಂದಾಗ ಹತಾಶಾ ಭಾವ ಮೂಡುವುದು ಸಹಜ. ಅಂತಹ ಸಂದರ್ಭದಲ್ಲಿ ಧರ್ಮ ನ್ಯಾಯಗಳ ಮೇಲೆ ಮನುಷ್ಯ ಭರವಸೆಯನ್ನು ಕಳೆದುಕೊಂಡು ದಾರಿತಪ್ಪಬಹುದು. ಪಾಂಡವರ ವಿಷಯದಲ್ಲಿ ಹೀಗಾಗದಂತೆ ನಿರಂತರವೂ ಅವರನ್ನು ಸಲಹಿದ ಸನ್ಮಿತ್ರ ಶ್ರೀಕೃಷ್ಣ.
ರಾಜ್ಯದಲ್ಲಿದ್ದಾಗಲೂ, ವನವಾಸದಲ್ಲಿದ್ದಾಗಲೂ ‘ಯಾವುದನ್ನು ಮಾಡಿದರೆ ಶ್ರೇಯಸ್ಕರ’ ಎನ್ನುವುದನ್ನು ನಿರಂತರವಾಗಿ ಪಾಂಡವರೊಂದಿಗೆ ಚರ್ಚಿಸುತ್ತದ್ದುದಲ್ಲದೆ, ಪ್ರಾಜ್ಞಋಷಿಗಳನ್ನು ಅವರಿದ್ದೆಡೆಗೇ ಕಳುಹಿಸಿ, ಅವರಿಂದಲೂ ಉತ್ತಮ ಮಾರ್ಗದರ್ಶನ ಸಿಗುವಂತೆ ವ್ಯವಸ್ಥೆ ಮಾಡಿದ ಔದಾರ್ಯ ಕೃಷ್ಣನದು! ಪಾಂಡವರ ಲೋಪಗಳನ್ನು ಬಲ್ಲ ಕೃಷ್ಣನು ಅವರ ಮರ್ಯಾದೆಯನ್ನು ಉಳಿಸುವಲ್ಲಿ ಜಾಗ್ರತೆ ವಹಿಸಿದ್ದ. ಪಾಂಡವರ ಸಕಾರಾತ್ಮಕ ಮನೋಭಾವವನ್ನು ಹೊಗಳಿ ಅವರ ಘನತೆಯನ್ನು ಹೆಚ್ಚಿಸಿದ. ಘೋರವಾದ ವಂಚನೆಗೆ ಒಳಪಟ್ಟು ರಾಜ್ಯಭ್ರಷ್ಟರಾಗಿ ವನವಾಸಕ್ಕೆ ತೆರಳಿ ಅಪಾರವಾದ ನಷ್ಟ ಅವಮಾನಗಳನ್ನು ಉಂಡ ಪಾಂಡವರಿಗೆ ವನವಾಸದುದ್ದಕ್ಕೂ ಸಹಕಾರವನ್ನೂ ಕೊಡುತ್ತಲೇ ಇದ್ದ. ಯುದ್ಧದಲ್ಲಿ ತಾನೇ ಅವರ ಪಕ್ಷದಲ್ಲಿ ನಿಂತ, ಅರ್ಜುನನ ಸಾರಥಿಯಾದ, ಕ್ಷಣಕ್ಷಣಕ್ಕೂ ರಾಜನೈತಿಕ ತಿರುವುಮುರುವುಗಳಲ್ಲಿ ಯುದ್ಧದಲ್ಲಿ ಮಾರ್ಗದರ್ಶನವಿತ್ತ. ವೈರಿಪಕ್ಷದಲ್ಲಿ ತನ್ನ ಸ್ವಜನರನ್ನು ಕಂಡು ಭಾವುಕನೂ ಅಧೀರನೂ ಆದ ಅರ್ಜುನನ್ನು ತನ್ನ ನಿರ್ಮಲ ಸ್ನೇಹದಿಂದಲೂ, ಪ್ರಭಾವಶಾಲೀ ಆಪ್ತಸಲಹೆಯಿಂದಲೂ, ತತ್ವಬೋಧನೆಯಿಂದಲೂ ದಿಗ್ದರ್ಶನ ಮಾಡಿ ಮನಃಕಲ್ಮಶವನ್ನು ಹೋಗಲಾಡಿಸಿದ, ಹೀಗೆ ಪಾಂಡವರನ್ನು ಇಹದಲ್ಲೂ ಪರದಲ್ಲೂ ಸಲಹಿದ ಅಪೂರ್ವ ಸನ್ಮಿತ್ರ ಶ್ರೀಕೃಷ್ಣ.
ಕೃಷ್ಣನ ನುಡಿಗಳಿಂದಾಗಿ ಅರ್ಜುನನಿಗೆ ಧರ್ಮಕರ್ಮಗಳ ತತ್ವನಿಶ್ಚಯವೇನೋ ಆಗಿದೆ. ಆದರೆ, ಮೋಹವನ್ನು ಗೆದ್ದು ನಿಶ್ಚಲಮತಿಯಿಂದ ಯುದ್ಧಮಾಡುವುದು ಹೇಳಿದಷ್ಟು ಸುಲಭವೆ? ಮನೋಬುದ್ಧಿಗಳಿಗೆ ಅದನ್ನು ಪಾಲಿಸಲು ಬೇಕಾದ ಸ್ಥೈರ್ಯ-ಧೈರ್ಯಗಳೂ ಬೇಕಲ್ಲವೆ? ಮನಃಸಂಯಮದ ವಿಷಯದಲ್ಲಿ ಯಾವಾಗಲೂ ಅಷ್ಟೆ! ನಮಗೆ Theory ಅರ್ಥವಾಗುತ್ತದೆ! ಆದರೆ ಅನುಷ್ಠಾನಕ್ಕೆ ತರುವಾಗ ನಮ್ಮದೇ ಮನೋಬುದ್ಧಿಗಳು ಕೈಕೊಡುತ್ತವೆ! ಕೊನೆಗೆ ಇದೆಲ್ಲ ಆಗದಹೋಗದ ಮಾತು ಅಂತ ತಪ್ಪಿಸಿಕೊಳ್ಳಲು ನೋಡುತ್ತೇವೆ! ಶಾಸ್ತ್ರ-ನ್ಯಾಯ-ನೀತಿಗಳನ್ನೇ ವ್ಯಾಖ್ಯಾನಿಸುವ ವಿದ್ವಜ್ಜನರೂ ತಮ್ಮ ಜೀವನದಲ್ಲಿ ಅದೆಲ್ಲವನ್ನೂ ಅಕ್ಷರಶಃ ಪಾಲಿಸ ಹೊರಟಾಗ ಹಣ್ಣುಗಾಯಿ-ನೀರುಗಾಯಿ-ಯಾಗಿಬಿಡುತ್ತಾರೆ! ಇನ್ನು ಅದಾವ ವಿಮರ್ಶೆಯನ್ನೂ ಮಾಡದೇ ಸುಮ್ಮನೆ ಉಂಡುಟ್ಟು ಓಡಾಡುವ ಸಾಮಾನ್ಯರಿಗೆ ಅದೆಷ್ಟು ಕಷ್ಟವಾಗಬಹುದು! ಇದು ಜೀವನದ ಕಠೋರಸತ್ಯ!
ಶ್ರೀ ರಾಮಕೃಷ್ಣ ಪರಮಹಂಸರು ಕೊಡುವ ನಿದರ್ಶನವೊಂದು ಇಲ್ಲಿ ಸ್ಮರಣೀಯ- ಒಬ್ಬ ವ್ಯಕ್ತಿ ಮಾತನಾಡುವ ಗಿಣಿಯೊಂದನ್ನು ಸಾಕಿದ್ದನಂತೆ. ಅದಕ್ಕೆ ಉಣ್ಣಲು ಕಾಳು ಕೊಟ್ಟು ಕೊಟ್ಟು ರಾಮ ಕೃಷ್ಣ ಗೋವಿಂದ ಎಂಬ ದೇವರನಾಮಗಳನ್ನು ಉಚ್ಚರಿಸುವ ಅಭ್ಯಾಸ ಮಾಡಿಸಿದನಂತೆ. ಬಂದುಹೋಗುವವರೆಲ್ಲ ಆ ಗಿಣಿಯು ‘ರಾಮ ಕೃಷ್ಣ ಗೋವಿಂದ’ ಎಂದು ಮುದ್ದಾಗಿ ನುಡಿಯುವುದನ್ನು ಕೇಳಿ ಮೆಚ್ಚುತ್ತಿದ್ದರಂತೆ. ಆಹಾ ಎಂತಹ್ ಸಾತ್ವಿಕ ಗಿಣಿ ಯಾವಾಗಲೂ ದೇವರನಾಮವನ್ನೇ ಹೇಳುತ್ತದೆ ಎಂದು ಹೊಗಳುತ್ತಿದ್ದರಂತೆ. ಒಮ್ಮೆ ಬೆಕ್ಕೊಂದು ಬಂದು ಅದನ್ನು ಹಿಡಿಯಿತಂತೆ. ಆಗ ಪ್ರಾಣಭಯದ ತಲ್ಲಣದಲ್ಲಿ ಗಿಣಿಯು ‘ರಾಮ’ ‘ಕೃಷ್ಣ’ ‘ಗೋವಿಂದ’ ಎನ್ನುವುದನ್ನು ಮರೆತೇ ಹೋಯಿತಂತೆ, “ಕ್ಯಾ–ಕ್ಯಾ–“ ಎಂದು ಅರಚುತ್ತ ಪ್ರಾಣಬಿಟ್ಟಿತಂತೆ!
ದಿನವಿಡೀ ಪದ್ಯವೊಂದನ್ನು ಕಂಠಪಾಠಮಾಡಿಕೊಂಡ ವಿದ್ಯಾರ್ಥಿಯೊಬ್ಬ, ಸಂಜೆ ವೇದಿಕೆಯೇರಿದಾಗ, ಸಭಾಕಂಪವಾಗಿ ಎಲ್ಲವನ್ನು ಮರೆತು ಏನೇನನ್ನೋ ತೊದಲಿ ನಗೆಗೀಡಾದನಂತೆ ! ಇದೂ ಹಾಗೆಯೇ! ಜೀವನವೆಲ್ಲ ಕೇಳಿದ ಓದಿದ ವ್ಯಾಖ್ಯಾನಿಸಿದ ವಿಚಾರಗಳು ಸಂಕಷ್ಟದ ಕಾಲದಲ್ಲಿ ಮರೆತುಹೋಗುತ್ತವೆ.!
ಪರತತ್ವ-ನ್ಯಾಯಾನ್ಯಾಯಗಳು-ನೀತಿ ತ್ಯಾಗ- ಇವುಗಳನ್ನು ಕೇಳುವಾಗ ಅಹುದಹುದೆಂದು ತಲೆಯಾಡಿಸುವ ನಾವು. ಇತರರನ್ನು ತರ್ಕಬದ್ಧವಾಗಿ ವಿಮರ್ಶಿಸುವ ನಾವು, ‘ನಮ್ಮನ್ನು ನಾವೇ’ ವಿಮರ್ಶಿಸಿಕೊಳ್ಳಬೇಕಾಗಿ ಬಂದರೆ ಮಾತ್ರ ಕಂಗಾಲಾಗಿಬಿಡುತ್ತೇವೆ! ತಕ್ಷಣ ಸ್ವಾನುಕಂಪ, ಭಾವುಕತೆಯ ಭಾವಗಳು ಮುಂದಾಗಿ ಬುದ್ಧಿಯನ್ನು ಹಿಂದೆ ಹಾಕುತ್ತವೆ! ಇಂತಹ ದೌರ್ಬಲ್ಯವನ್ನು ಗೆದ್ದಲ್ಲದೆ ಉದ್ಧಾರವಿಲ್ಲ. ಇದನ್ನು ಗೆಲ್ಲುವುದು ಕಷ್ಟಸಾಧ್ಯ. ಆದರೆ ‘ಅಸಾಧ್ಯ’ವಲ್ಲ. ಯಾವ ಗುಣಗಳನ್ನು ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದರ ಮೂಲಕ ಮಾತ್ರ ದೃಢತೆ ಹಾಗೂ ಸತ್ಯದರ್ಶನ ಸಾಧ್ಯವೋ, ಅಂತಹ ಗುಣಗಳನ್ನು ಶ್ರೀಕೃಷ್ಣನು ಬಿಡಿಬಿಡಿಸಿ ಹೇಳುತ್ತ ಸಾಗುವುದನ್ನು ಮುಂದೆ ನೋಡೋಣ.

ಡಾ. ಆರತಿ ವಿ ಬಿ
ಕೃಪೆ : ವಿಜಯವಾಣಿ

Leave a Reply