ಸುಮ್ಮನಿರುವುದೇ ನೈಷ್ಕರ್ವ್ಯುವೆ?

ಸುಮ್ಮನಿರುವುದೇ ನೈಷ್ಕರ್ವ್ಯುವೆ?

ಕರ್ಮಮಾರ್ಗ-ಜ್ಞಾನಮಾರ್ಗಗಳೆಂಬ ಎರಡು ಆಯ್ಕೆಗಳನ್ನು ಬಹಳ ಹಿಂದೆ ತಾನೇ ಮುಂದಿಟ್ಟಿದ್ದಾನೆಂದು ಭಗವಂತನು ಹೇಳಿದ್ದನ್ನು ನೋಡಿದ್ದೇವೆ. ಈಗ ಕರ್ಮ-ಜ್ಞಾನಗಳ ವಿವರಣೆಯನ್ನು ನೀಡುತ್ತಾನೆ:
ನ ಕರ್ಮಣಾಮನಾರಂಭಾತ್ ನೈಷ್ಕರ್ವ್ಯುಂ ಪುರುಷ್ಪೊ—ಶ್ನುತೇ |
ನ ಚ ಸಂನ್ಯಸನಾದೇವ ಸಿದ್ಧಿಂ ಸಮಧಿಗಚ್ಛತಿ || (ಭ.ಗೀ.: 3.4)
‘ಕರ್ಮಗಳನ್ನು ‘‘ಪ್ರಾರಂಭ’’ ಮಾಡದೆ ಇದ್ದುಬಿಟ್ಟ ಮಾತ್ರಕ್ಕೆ ಮನುಷ್ಯನಿಗೆ ‘‘ನೈಷ್ಕರ್ವ್ಯು’’ಸ್ಥಿತಿಯು ಸಿದ್ಧಿಸದು. ಅಥವಾ ಕರ್ಮವನ್ನೇ ‘‘ಬಿಟ್ಟುಬಿಟ್ಟ’’ ಮಾತ್ರಕ್ಕೂ (ಜ್ಞಾನದ) ಸಿದ್ಧಿಯು ಲಭಿಸದು.’
ಇಲ್ಲಿ ಕೃಷ್ಣನು ‘ಸುಮ್ಮಸುಮ್ಮನೆ ಸುಮ್ಮನಿರುವುದಕ್ಕೂ’ – ‘ನೈಷ್ಕರ್ವ್ಯು’ಕ್ಕೂ ಇರುವ ವ್ಯತ್ಯಾಸವನ್ನು ಸ್ಪಷ್ಟಪಡಿಸುತ್ತಿದ್ದಾನೆ. ಕರ್ಮವನ್ನು ಕೇವಲ ‘ಬಾಹ್ಯದಲ್ಲಿ ಕಾಣುವ ಪ್ರಕ್ರಿಯೆ’ ಎಂದು ನಾವು ತಿಳಿಯುತ್ತೇವಲ್ಲ, ಅಲ್ಲೇ ಎಡವಟ್ಟಾಗುವುದು! ಮನುಷ್ಯನ ಎಲ್ಲ ಕರ್ಮಗಳು ನಿಜಕ್ಕೂ ಪ್ರಾರಂಭವಾಗುವುದು ಅವನ ಅಂತರಂಗದಲ್ಲಿ – ‘ಸಂಕಲ್ಪ’ಗಳ ರೂಪದಲ್ಲಿ. ಅವುಗಳೇ ಎಲ್ಲ ಕರ್ಮಕ್ಕೂ ‘ಬೀಜ’ಗಳು. ಜನ್ಮಜನ್ಮಾಂತರಗಳಲ್ಲಿ ಇಂತಹ ಅಸಂಖ್ಯ ಬೀಜಗಳನ್ನು ಮನುಷ್ಯನು ತನ್ನೊಳಗೆ ಹುಟ್ಟು ಹಾಕಿಕೊಂಡಿರುತ್ತಾನೆ. ಅವುಗಳೇ ಜನ್ಮಜನ್ಮಗಳಲ್ಲಿ ಆಯಾ ಮನುಷ್ಯನ ಜೀವನಾನುಭವಗಳಾಗಿ ಕರ್ಮಗಳಾಗಿಯೂ ಮೂರ್ತೀಭವಿಸುತ್ತವೆ. ಈ ಪೂರ್ವಕೃತ ಸಂಕಲ್ಪಗಳು ಕಾರ್ಯರೂಪಕ್ಕೆ ಬರುತ್ತ, ಫಲಾಫಲಗಳನ್ನೀಯುತ್ತ ಅಲ್ಲಿಗಲ್ಲಿಗೆ ಅಳಿದು ಮುಗಿಯುತ್ತವೆ. ಅದರೊಂದಿಗೆ ಜನ್ಮಾರ್ಜಿತ ಪಾಪ-ಪುಣ್ಯ ಸುಖ-ದುಃಖರೂಪದಲ್ಲಿ ಅನುಭವಕ್ಕೆ ಬರುತ್ತ, ಅಲ್ಲಿಗಲ್ಲಿಗೆ ಅಳಿದು ಮುಗಿಯುತ್ತವೆ. ಹೀಗೆ ಸಂಕಲ್ಪಗಳೂ, ಸುಖ-ದುಃಖಗಳೂ ಬೇಗ ಬೇಗ ಅಳಿದು ಮನುಷ್ಯನ ಅಂತರಂಗ ನಿರಾಳವಾಗಬೇಕು. ಕರ್ಮವೂ ಜನ್ಮವೂ ಮುಗಿಯಬೇಕು.
ಆದರೆ ನಾವು ಮನುಷ್ಯರ ಜೀವನಗತಿಯನ್ನು ಗಮನಿಸಿ ನೋಡಿದರೆ, ಅವರ ಈ ‘ಕರ್ಮದ ಸರಣಿ’ಯು ಮುಗಿಯುವಂತೆಯೇ ಕಾಣುವುದಿಲ್ಲವಲ್ಲ! ಜನ್ಮ-ಮರಣಗಳ ಚಕ್ರವು ನಿಲ್ಲುವಂತೆಯೇ ಕಾಣುತ್ತಿಲ್ಲವಲ್ಲ! ಅವನು ಮಾಡುವ ಕರ್ಮವೆಲ್ಲ ಪಾಪ-ಪುಣ್ಯಗಳಿಗೂ, ಆ ಪಾಪ-ಪುಣ್ಯಗಳು ಜನ್ಮ-ಮರಣಗಳಿಗೂ, ಅದು ಮತ್ತಷ್ಟು ಕರ್ಮಗಳಿಗೂ, ಅದು ಪಾಪ-ಪುಣ್ಯಗಳಿಗೂ ಮರಳಿ ಮರಳಿ ಕಾರ್ಯಕಾರಣಗಳಾಗುವಂತಹ ಕೊನೆಯಿಲ್ಲದ ಚಕ್ರವೇ ಉರುಳುತ್ತಿದೆಯಲ್ಲ! ಹೌದು! ಸಾಮಾನ್ಯರ ವಿಷಯದಲ್ಲಿ ಈ ಕರ್ಮವಾಗಲಿ ಜನ್ಮಚಕ್ರವಾಗಲಿ ಮುಗಿಯುವ ಬದಲು ಮುಂದುವರೆಯುತ್ತಲೇ ಇದೆ! ಕಾರಣ ಇಷ್ಟೆ:
‘ಇರುವ ಸಂಕಲ್ಪಗಳನ್ನು ಪೂರ್ತಿ ಮಾಡುವುದೂ, ಕಟ್ಟಿತಂದ ಪಾಪ-ಪುಣ್ಯಗಳನ್ನು ಉಂಡು ಮುಗಿಸುವುದು ಅನುಭವಿಸುವುದು ಇಹದಲ್ಲಿನ ನಮ್ಮ ಕೆಲಸ ಅಷ್ಟೆ’ ಎನ್ನುವುದನ್ನು ಮರೆತ ಮನುಷ್ಯನು ಅವುಗಳಿಗೆ ‘ಅಂಟಿಕೊಂಡು’ಬಿಡುತ್ತಾನೆ! ಮಮಕಾರವಶನಾಗಿ, ‘ಬೇಕು-ಬೇಡ’ಗಳೆಂಬ ಹೊಸ ಸಂಕಲ್ಪಗಳನ್ನು ಹುಟ್ಟುಹಾಕಿಕೊಳ್ಳುತ್ತಲೇ ಸಾಗುತ್ತಾನೆ! ಮಮಕಾರಜನ್ಯ ಕರ್ಮಗಳ ಮೂಲಕ ಹೊಸ ಪಾಪ-ಪುಣ್ಯಗಳನ್ನು ತುಂಬಿಕೊಳ್ಳುತ್ತ ಬಂಧನಕ್ಕೊಳಗಾಗುತ್ತ ಸಾಗುತ್ತಾನೆ! ಹೀಗಾಗಿ ಕರ್ಮಮಾಡಿ ‘ಮುಗಿಸುವ’ ಬದಲು, ನವನವೀನ ಕರ್ಮಗಳನ್ನು ಹೆಣೆದುಕೊಳ್ಳುತ್ತಾನೆ! ನಮ್ಮನ್ನು ಬಿಡುಗಡೆ ಮಾಡಬೇಕಾದ ಕರ್ಮವನ್ನು ನಮ್ಮನ್ನು ಬಂಧಿಸುವಂತೆ ಪರಿವರ್ತಿಸುವ ಖಲನಾಯಕ ಯಾರು ಗೊತ್ತೆ? ಹೊರಗಿನ ಬೇರಾರೂ ಅಲ್ಲ! ಅದು ನಮ್ಮೊಳಗಿನ ‘ಮಮಕಾರ’ವೆನ್ನುವ ‘ಹಿತಶತ್ರು’ವೇ! ಹಾಗಾದರೆ ಇದಕ್ಕೆಲ್ಲ ಕೊನೆಯಿಲ್ಲವೆ? ಇದೆ! ಅದೇ ‘ನಿರ್ಲಿಪ್ತಕರ್ಮ’! ಹಳೆಯ ಸಂಕಲ್ಪಗಳೂ ಪಾಪ-ಪುಣ್ಯಸಂಚಯವೂ ಕರಗುವ ತನಕ ಕರ್ಮವನ್ನು ಮಾಡದೆ ಬೇರೆ ಆಯ್ಕೆಯಿಲ್ಲ. ಆದರೆ ಹಾಗೆ ಕರ್ಮ ಮಾಡುವಾಗ ಹೊಸ ಸಂಕಲ್ಪಗಳನ್ನು ತಾಳದೆ, ಹೊಸ ಪುಣ್ಯ-ಪಾಪಗಳನ್ನು ಕಟ್ಟಿಕೊಳ್ಳದೆ, ‘ನಿರ್ಲಿಪ್ತ’ವಾಗಿರುವ ಎಚ್ಚರವಿರಬೇಕು! ಫಲತ್ಯಾಗ ಮಾಡಿ ಕೈತೊಳೆದುಕೊಳ್ಳುವ ವಿರಕ್ತಿಯೂ ಇರಬೇಕು! ಆಗ ಮಾತ್ರವೇ ಹಳೆಯ ವಾಸನೆಗಳು ಅಳಿದು, ಕರ್ಮಗಳು ಮುಗಿದು, ಮನುಷ್ಯನು ‘ಕೃತಕೃತ್ಯ’ನಾಗುತ್ತಾನೆ. (ಕೃತಕೃತ್ಯ ಎಂದರೆ ‘ಮಾಡಿ ಮುಗಿಸಿದವನು’ ಎಂದರ್ಥ). ಅದನ್ನೇ ನೈಷ್ಕರ್ವ್ಯುಸ್ಥಿತಿ ಎನ್ನುವುದು. ಆ ಸ್ಥಿತಿಗೇರಿದ ಮನುಷ್ಯನು ಮಾಡುವ ಕರ್ಮಗಳು ಪುನಃ ಸಂಕಲ್ಪ-ಫಲಾನುಭವಗಳಿಗೆ ಬೀಜವಾಗದು. ಅದು ಅವನ ಅಂತರಾಳವನ್ನು ನಿರಾಳವಾಗಿಸಿ, ಬಿಡುಗಡೆಗೆ ಸಾಧನವಾಗುತ್ತವೆ. ಹಾಗಾಗಿ ಅವು ‘ಕರ್ಮ’ಗಳೆನಿಸುವುದಿಲ್ಲ, ‘ಅಕರ್ಮಗಳು’ ಎನಿಸುತ್ತವೆ!
ಶ್ರೀರಾಮಕೃಷ್ಣರು ಕೊಡುವ ಉದಾಹರಣೆ ಮನೋಜ್ಞವಾಗಿದೆ: ಕಪ್ಪು ಶಾಯಿಯ ಬಾಟ್ಲಿಯನ್ನು ತೊಳೆಯುವಾಗ, ಮೊದಮೊದಲು ಅದರೊಳಗಿನಿಂದ ಕಪ್ಪು ನೀರೇ ಹೊರಬರುತ್ತದೆ. ತೊಳೆಯುತ್ತಲೇ ಇದ್ದರೆ, ಕ್ರಮೇಣ ಆ ಕಪ್ಪು ಕಡಿಮೆಯಾಗುತ್ತ, ಕೊನೆಕೊನೆಗೆ ಶುದ್ಧ ನೀರೇ ಹೊರಬರುತ್ತದೆ. ಹಾಗೆಯೇ ನಮ್ಮೊಳಗಿನ ಸಂಕಲ್ಪ-ವಾಸನೆಗಳನ್ನು ನಿರ್ಲಿಪ್ತ ಕರ್ಮವೆಂಬ ತಿಳಿನೀರಿನಿಂದ ತೊಳೆಯುತ್ತಿದ್ದರೆ ಮಾತ್ರ, ‘ವಾಸನಾಕ್ಷಯ’ವಾಗುವುದು. ಬಾಟ್ಲಿಯಲ್ಲಿ ಶಾಯಿಯು ಲೇಶಮಾತ್ರವಿದ್ದರೂ ತೊಳೆಯುವುದು ತಪ್ಪದು. ಅಂತೆಯೇ ನಮ್ಮ ಅಂತರಂಗದಲ್ಲಿ ಸಂಕಲ್ಪವು ಲೇಶಮಾತ್ರವೇ ಉಳಿದಿದ್ದರೂ, ಅದನ್ನು ಕರ್ಮರೂಪದಲ್ಲಿ ಆಚರಿಸಿ, ಫಲವನ್ನು ಅನುಭವಿಸುವುದು ತಪ್ಪದು. ಬಾಟ್ಲಿಯು ಸಂಪೂರ್ಣ ಸ್ವಚ್ಛವಾದ ಮೇಲೆ ತೊಳೆಯುವ ಅಗತ್ಯವೇ ಇರದು. ಅಂತೆಯೇ ಸಂಕಲ್ಪರಹಿತನಿಗೆ ‘ಕರ್ಮ’ದ ಅಗತ್ಯವೇ ಇಲ್ಲ. ಅದೇ ನೈಷ್ಕರ್ವ್ಯುಸ್ಥಿತಿ. ಆ ಸ್ಥಿತಿಯಲ್ಲಿ ಆತನು ಏನೇ ಮಾಡಿದರೂ ಅದು ಅಕರ್ಮವೇ. ಅಂತಹ ಸ್ಥಿತಿಗೇರಿದವನು ಲೋಕಕಲ್ಯಾಣಕ್ಕಾಗಿಯಷ್ಟೇ ಕೆಲಸ ಮಾಡುತ್ತಾನೆಯೇ ಹೊರತು ತಾನು ‘ಗಳಿಸ’ಬೇಕಾದದ್ದೂ ‘ಕಳೆದು’ಕೊಳ್ಳಬಹುದಾದದ್ದೂ ಏನೂ ಉಳಿದಿರುವುದಿಲ್ಲ. ಸುಟ್ಟ ಬೀಜವು ಬಿತ್ತಿದರೂ ಹೇಗೆ ಮೊಳೆಯದೋ ಹಾಗೆ ಆತನು ಕರ್ಮವೆಸಗಿದರೂ ಫಲಾಫಲಗಳನ್ನು ಅನುಭವಿಸಬೇಕಿಲ್ಲ!
ಕರ್ಮದ ಪರಿಯಲ್ಲಿರುವ ಈ ಧರ್ಮಸೂಕ್ಷ್ಮಗಳನ್ನರಿಯದೆ, ಸುಮ್ಮನೆ ‘ಸುಮ್ಮನಿದ್ದುಬಿಡುತ್ತೇನೆ, ನನ್ನದು ‘ಜ್ಞಾನಮಾರ್ಗ’ ಎಂದು ಕೊಚ್ಚಿಕೊಳ್ಳುವುದು ಆಷಾಡಭೂತಿತನ. ಅಲ್ಲದೆ ‘ಸುಮ್ಮನಿರುವುದು’ ನಿಜಕ್ಕೂ ಯಾರಿಂದಲೂ ಸಾಧ್ಯವಾಗದು ಎಂಬುದನ್ನು ಮುಂದಿನ ಶ್ಲೋಕದಲ್ಲಿ ಶ್ರೀಕೃಷ್ಣನು ತಿಳಿಹೇಳುವುದನ್ನು ನೋಡಲಿದ್ದೇವೆ.

Leave a Reply