ಆಂತರಿಕ ಸಂನ್ಯಾಸವೇ ನಿಜವಾದ ಸಂನ್ಯಾಸ

ಆಂತರಿಕ ಸಂನ್ಯಾಸವೇ ನಿಜವಾದ ಸಂನ್ಯಾಸ
ಕರ್ಮಸಂನ್ಯಾಸಯೋಗವೆಂಬ ಅಧ್ಯಾಯದಲ್ಲಿ ಶ್ರೀಕೃಷ್ಣನು ಮನೋನಿಗ್ರಹದ ಮೂಲಕ ಮಾಡುವ ಆಂತರಿಕ ತ್ಯಾಗದ ಬಗ್ಗೆ ಹೇಳಿದ. ತನ್ಮೂಲಕ ಪಂಚಪ್ರಾಣಗಳನ್ನು ಸ್ಥಿರಗೊಳಿಸಿ, ನಾಸಾಗ್ರದಲ್ಲಿ ದೃಷ್ಟಿಯನ್ನು ಕೀಲಿಸಿ, ನಿಶ್ಚಲಧ್ಯಾನದಲ್ಲಿ ಮುಳುಗಿ, ಆತ್ಮಸಂಸ್ಥಿತಿಯ ಯೋಗವನ್ನು ಹೊಂದಿ ಮುಕ್ತನಾಗುವ ಪರಿಯನ್ನೂ ವಿವರಿಸಿದ. ಇಂತಹ ಸ್ಥಿತಿಗೇರಿದ ಮಹಾತ್ಮನು – ‘‘ಕೃಷ್ಣನು ಕೇವಲ ವೃಷ್ಣಿವಂಶದ ರಾಜಪುತ್ರನಷ್ಟೇ ಆಗಿರದೆ, ಸರ್ವಧರ್ಮಕರ್ಮಗಳ ಪ್ರೇರಕನೂ ಕಾರಕನೂ, ಭೋಕ್ತಾರನೂ ಆದ ಸಾಕ್ಷಾತ್ ಈಶ್ವರನು’’ ಎನ್ನುವುದನ್ನು ಗುರುತಿಸಬಲ್ಲ ಎನ್ನುವುದನ್ನೂ ಹೇಳಿದ್ದು ಇಲ್ಲಿನ ವೈಶಿಷ್ಟ್ಯ ಕೃಷ್ಣನು ತನ್ನ ಭಗವತ್ಸ್ವರೂಪದ ಬಗ್ಗೆ ವಾಚ್ಯವಾಗಿ ಹೇಳಿಕೊಂಡಿರುವ ಕೆಲವೇ ಪ್ರಸಂಗಗಳಲ್ಲಿ ಇದೂ ಒಂದು, ಮಹಿಮೆಯು ಮಾತ್ರವೇ ಮಹಿಮೆಯನ್ನರಿಯಬಲ್ಲುದು. ಆರನೆಯ ಅಧ್ಯಾಯದ ಪ್ರಾರಂಭದಲ್ಲಿ ಕೃಷ್ಣನು ಮತ್ತೆ ಮೂಲಚರ್ಚೆಗೇ ಹಿಂದಿರುಗುತ್ತಾನೆ:
‘‘ಯಾವನು ಕರ್ಮಫಲವನ್ನು ಆಶ್ರಯಿಸದೇ ಕರ್ತವ್ಯಕರ್ಮಗಳನ್ನು ಮಾಡುತ್ತಾನೋ, ಅಂತಹವನು ನಿಜವಾದ ಸಂನ್ಯಾಸೀ, ನಿಜವಾದ ಯೋಗಿ. ಕೇವಲ ಬಾಹ್ಯದಲ್ಲಿ ನಿರಗ್ನಿಯೂ ಕರ್ಮತ್ಯಾಗ ಮಾಡಿದವನೂ ಆದವನು (ಆ ಮಾತ್ರಕ್ಕೆ) ಸಂನ್ಯಾಸೀ ಅಲ್ಲ.’’ (ಭ.ಗೀ.: 6.1)
‘ನಿರಗ್ನಿ’ಯಾಗುವುದು ಎಂದರೆ ‘ಹೋಮ-ಹವನ, ಯಜನ-ಯಾಜನಾದಿ ಧಾರ್ವಿುಕ ಕರ್ಮಗಳನ್ನೂ, ಅಡುಗೆ ಮುಂತಾದ ಲೌಕಿಕಕರ್ಮಗಳನ್ನೂ ಬಿಟ್ಟುಬಿಡುವುದು’ ಎಂದರ್ಥ. ‘ಬಾಹ್ಯದಲ್ಲಿ ಕರ್ಮತ್ಯಾಗ’ ಎಂದರೆ ‘ಸಂಪಾದನೆ, ಪರಿವಾರ, ಸಮಾಜದ ಕಟ್ಟಳೆಗಳೆಲ್ಲವನ್ನೂ ಬಿಟ್ಟು ಸಂನ್ಯಾಸದ ದೀಕ್ಷೆಯನ್ನು ಸ್ವೀಕರಿಸುವುದು’ ಎಂದರ್ಥ. ಆದರೆ, ಸಂನ್ಯಾಸವು ಕೇವಲ ಬಾಹ್ಯವಿಧಿಯಾಗಿದ್ದರೆ ಅದು ಸಾಲದು ಎನ್ನುವುದನ್ನು ಕೃಷ್ಣ ನಿರ್ದಾಕ್ಷಿಣ್ಯವಾಗಿ ಹೇಳುತ್ತಿದ್ದಾನೆ. ಬಾಹ್ಯಸಂನ್ಯಾಸದ ನಿಯಮಾವಳಿಗಳು ಕಠಿಣ. ಆದರೂ ಶ್ರದ್ಧೆ ಪರಿಶ್ರಮಗಳಿಂದ ಪಾಲಿಸಬಹುದು. ಆದರೆ ಅಷ್ಟಕ್ಕೇ ಅದು ಪೂರ್ಣ ‘ಸಂನ್ಯಾಸ’ವೆನಿಸುವುದಿಲ್ಲ ಎನ್ನುತ್ತಿದ್ದಾನೆ ಕೃಷ್ಣ! ಏನಿದರರ್ಥ?
(ಬ್ರಹ್ಮಚರ್ಯ-ಗೃಹಸ್ಥ-ವಾನಪ್ರಸ್ಥ-ಸಂನ್ಯಾಸಗಳೆಂಬ ಚತುರಾಶ್ರಮಗಳೆಂಬ) ಆಶ್ರಮಧರ್ಮದ ವಿನ್ಯಾಸವನ್ನು ನೋಡೋಣ. ಆಯಾ ವಯಸ್ಸಿನಲ್ಲಿ, ದೇಶ-ಕಾಲ-ಸಂದರ್ಭಗಳ ಹಿನ್ನೆಲೆಯಲ್ಲಿ ಪೂರೈಸಬೇಕಾದ ವಿಹಿತಕರ್ಮಗಳನ್ನು ಪೂರೈಸಿದರೆ, ಆಗ ಮನುಷ್ಯನ ಸರ್ವಾಂಗೀಣ ವಿಕಾಸವಾಗುತ್ತದೆ. ಅವನಿಗೂ ಸಮಾಜಕ್ಕೂ ಶ್ರೇಯಸ್ಸು ಎಂಬುದು ಆಶ್ರಮಧರ್ಮದ ಮೂಲ ಪರಿಕಲ್ಪನೆ.
ಯೌವನದ ಪೂರ್ವಭಾಗದವರೆಗೂ ‘ಬ್ರಹ್ಮಚರ್ಯಾಶ್ರಮ’. ತನು-ಮನಗಳನ್ನು ಶುದ್ಧವಾಗಿರಿಸಿಕೊಳ್ಳುತ್ತ, ಅಧ್ಯಯನ, ಪರಿಚರ್ಯು, ಅಗ್ನಿಕಾರ್ಯಗಳನ್ನು ಮಾಡುತ್ತ ವಿದ್ಯೆ-ವೃತ್ತಿಕೌಶಲ-ಸ್ವಾವಲಂಬಿತನ ಹಾಗೂ ವಿಚಾರಶಕ್ತಿಯನ್ನು ಬೆಳೆಸಿಕೊಳ್ಳುವುದು ಬ್ರಹ್ಮಚರ್ಯಾಶ್ರಮಕ್ಕೆ ವಿಹಿತ. ಮದುವೆಯಾಗಿ, ಧರ್ಮದ ಚೌಕಟ್ಟಿನಲ್ಲಿ ಸಕಲಭೋಗಗಳನ್ನೂ ಅನುಭವಿಸುತ್ತ, ಪರಿವಾರವನ್ನೂ, ಅತಿಥಿಗಳನ್ನೂ ಆಶ್ರಿತರನ್ನೂ ರಕ್ಷಿಸುವ – ಪೋಷಿಸಬೇಕಾದವನು ಗೃಹಸ್ಥ. ಇದಕ್ಕಾಗಿ ಜನ-ಧನ-ದ್ರವ್ಯಗಳನ್ನು ಸಂಪಾದಿಸುವುದೂ ಅವನಿಗೆ ವಿಹಿತ.
ವಾನಪ್ರಸ್ಥಾಶ್ರಮವೆಂದರೆ, ‘ವನದತ್ತ (ನಿರ್ಜನಪ್ರದೇಶದತ್ತ / ಏಕಾಂತದತ್ತ) ಹೊರಡುವುದು’ ಎಂದರ್ಥ. ಗೃಹಸ್ಥಾಶ್ರಮದ ಜವಾಬ್ದಾರಿಗಳನ್ನು ಎಳೆಯರಿಗೆ ವಹಿಸಿ, ನಿರ್ಲಿಪ್ತಿ ಬೆಳೆಸಿಕೊಳ್ಳುವುದು, ಅಧ್ಯಯನ-ಅಧ್ಯಾಪನ, ತೀರ್ಥಾಟನ, ಸೇವೆ, ಆತ್ಮಾನುಸಂಧಾನಗಳಲ್ಲಿ ತೊಡಗುತ್ತ, ಜೀವನದ ಉತ್ತರಭಾಗವನ್ನು ಅರ್ಥಪೂರ್ಣವಾಗಿ ಕಳೆಯುವುದು ವಾನಪ್ರಸ್ಥಾಶ್ರಮ.
ಕುಲ-ಮತ-ಬಂಧು-ಮಿತ್ರರೆಂಬ ಕಟ್ಟಲೆಗಳನ್ನು ಕೊಡವಿ ಪರಿವ್ರಾಜಕನಾಗಿ ಹೊರಡುವುದು ಸಂನ್ಯಾಸ. ಅದಕ್ಕೆ ವೈರಾಗ್ಯವೊಂದೇ ‘ಅರ್ಹತೆ’. ಬಾಹ್ಯದಲ್ಲಿನ ‘ದೀಕ್ಷೆ-ಕಾವಿಬಟ್ಟೆ-ನಾಮಪರಿವರ್ತನ’ ಮುಂತಾದವು ಸಾಂಕೇತಿಕ. ವಯಸ್ಸು-ಲಿಂಗ-ವರ್ಣಭೇದಗಳಿಲ್ಲದೆ ಯಾರಿಗೆ ಬೇಕಾದರೂ ವೈರಾಗ್ಯ ಸಿದ್ಧಿಸಬಹುದು. ಅದನ್ನು ಘೊಷಿಸಿಕೊಂಡಾಗ ‘ಸಂನ್ಯಾಸಾಶ್ರಮ’ ಎನಿಸುತ್ತದೆ. ಸಂನ್ಯಾಸ ಅತ್ಯುನ್ನತ ಆದರ್ಶ. ಆದರೆ ಕಡ್ಡಾಯವಲ್ಲ.
ಹಾಗಾದರೆ ಇಂತಹ ನಿರಗ್ನಿಯೂ ಕರ್ಮತ್ಯಾಗಿಯೂ ಆದವನನ್ನು ‘ಸಂನ್ಯಾಸಿಯಲ್ಲ’ ಎಂದೇಕೆ ಹೇಳುತ್ತಿದ್ದಾನೆ ಕೃಷ್ಣ? ಆಂತರಿಕ ಸಂನ್ಯಾಸವಿಲ್ಲದೆ, ಅರೆಬರೆ ವೈರಾಗ್ಯದ ಬಿಸಿಯಲ್ಲೇ ಸಂನ್ಯಾಸದೀಕ್ಷೆ ಪಡೆಯುವಂತಹವರ ಮನದಲ್ಲಿ ಆಸಕ್ತಿ-ಕರ್ಮಪ್ರವೃತ್ತಿಗಳು ಉಳಿದೇ ಇರುತ್ತವೆ. ಆದರೂ ಇಚ್ಛಾಶಕ್ತಿಯಿಂದ ಅದನ್ನು ಅದುಮಿಟ್ಟುಕೊಂದು ಸಂನ್ಯಾಸದ ನಿಯಮಪಾಲನೆಯನ್ನು ಹೇಗೋ ಮಾಡುತ್ತಿರುತ್ತಾರೆ. ಇಂತಹವರಲ್ಲಿ ಶ್ರದ್ಧೆ-ಪರಿಶ್ರಮ-ಎಚ್ಚರಗಳು ಕೊಂಚ ತಪ್ಪಿದರೂ, ಪತನದ ಭಯ! ಹಾಗಾಗಿ ಬಾಹ್ಯಲಾಂಛನಗಳಿಗಿಂತಲೂ ಆಂತರಿಕಪಕ್ವತೆಯತ್ತ ಪ್ರಪ್ರಥಮವಾಗಿ ಗಮನ ಹರಿಸಬೇಕೆನ್ನುವುದು ಇಲ್ಲಿನ ಬುದ್ಧಿಮಾತು. ‘‘ಸಂನ್ಯಾಸವೆನ್ನುವುದು ಬಾಹ್ಯದ ‘ಕರ್ಮ’ವೋ ಲಾಂಛನವೋ ಅಲ್ಲ, ಅದು ಆಂತರಿಕ ಪಕ್ವತೆಯ ಸ್ಥಿತಿ’’ ಎನ್ನುವುದನ್ನು ಕೃಷ್ಣನು ಸ್ಪಷ್ಟಪಡಿಸುತ್ತಿದ್ದಾನೆ. ಈ ಕಾಲದಲ್ಲಿ, ಸಂನ್ಯಾಸವನ್ನೇ ‘ಆಡಂಬರದ ಕರ್ಮ’ದಂತೆ ಮಾಡಿಕೊಂಡಿರುವವರನ್ನೂ, ಅರೆಬರೆ ವೈರಾಗ್ಯದ ಬಿಸಿಯಲ್ಲಿ ಅವಸರ ಅವಸರವಾಗಿ ಸಂನ್ಯಾಸಕ್ಕೆ ನುಗ್ಗುವುದು, ಅಷ್ಟೇ ಬೇಗನೆ ಪತನವಾಗುವುದು ಮುಂತಾದ ಪ್ರಸಂಗಗಳನ್ನು ನೋಡುತ್ತಿದ್ದರೆ, ಕೃಷ್ಣನು ಹೇಳುತ್ತಿರುವ ‘ಆಂತರಿಕಸಂನ್ಯಾಸ’ದ ಮಾಹಾತ್ಮ್ಯು ಚೆನ್ನಾಗಿ ಭಾಸವಾಗುತ್ತದೆ. ಒಟ್ಟಿನಲ್ಲಿ ಆಂತರಿಕಸಂನ್ಯಾಸವು ಸಿದ್ಧಿಸಿರುವವನು ಮಾತ್ರವೇ ಮುಕ್ತನೂ ಯೋಗಯುಕ್ತನೂ ಆಗುತ್ತಾನೆ ಎನ್ನುವುದು ಕೃಷ್ಣನ ನಿಶ್ಚಿತ ನಿಲುವು.

Leave a Reply