ಆತ್ಮಸುಖಿಗೆ ಬ್ರಹ್ಮಪ್ರಾಪ್ತಿ

ಆತ್ಮಸುಖಿಗೆ ಬ್ರಹ್ಮಪ್ರಾಪ್ತಿ
ಡಾ. ಆರತೀ ವಿ. ಬಿ.
‘ಯಾವನು ಅಂತರಾತ್ಮನಲ್ಲೇ ಸುಖ ಕಾಣುತ್ತ, ಆತ್ಮದಲ್ಲೇ ವಿರಮಿಸುತ್ತ ಅಂತಜ್ಯೋತಿಯೇ ತಾನಾಗುತ್ತಾನೋ, ಅಂತಹ ಬ್ರಹ್ಮಭೂತನಾದ ಯೋಗಿಯು ಬ್ರಹ್ಮನಿರ್ವಾಣವನ್ನು ಪಡೆಯುತ್ತಾನೆ. (ಭ.ಗೀ.: 5.24)
ತನ್ನೊಳಗಿನ ಅಂತರಾತ್ಮನಲ್ಲಿ ಸುಖಿಸುವುದು ಜೀವನದ ಆತ್ಯಂತಿಕ ಸಿದ್ಧಿಯೇ ಸರಿ. ಬಾಹ್ಯದ ವಿವರಗಳಲ್ಲೇ ಕಳೆದುಹೋಗದೆ, ನಮ್ಮೊಳಗೆ ನಾವು ಸುಖಿಸುವುದನ್ನು ಕಲಿತೆವೆಂದರೆ, ಹೊರಗಡೆಯ ಯಾವುದೂ ನಮ್ಮನ್ನು ಪ್ರಭಾವಗೊಳಿಸಲಾರದು. ನಮ್ಮೊಳಗೆ ನಾವು ವಿರಮಿಸುವ ಕಲೆಯು ಹೇಳಿದಷ್ಟು ಸುಲಭವಂತೂ ಅಲ್ಲ! ಭೋಗದಲ್ಲಿ ತೊಡಗುವುದೇ ‘ವಿಶ್ರಾಂತಿ, ತೃಪ್ತಿ, ಸಿದ್ಧಿ’ ಎಂದೆಲ್ಲ ಭ್ರಾಂತಿಗಳಲ್ಲಿದ್ದೇವೆ. ಅದನ್ನೆಲ್ಲ ಕಳಚಿ ನಮ್ಮೊಳಗೆ ಸುಖಿಸಬಹುದು ಎನ್ನುವ ಕಲ್ಪನೆಯೂ ನಮಗಿಲ್ಲ! ಬದಲಾಗುವ ಅಥವಾ ಕೈತಪ್ಪಿ ಹೋಗುವ ಭೋಗಗಳನ್ನೇ ಬೆನ್ನಟ್ಟುತ್ತಿದ್ದೇವೆ. ಆತ್ಮಸುಖವೇ ನೈಜ ಸುಖ ಎಂಬ ಅರಿವು ಮೂಡಿ, ನಾವು ನಮ್ಮೊಳಗೆ ಸುಖಿಸುವುದೇ ಜೀವನಕಲೆ! ಅದನ್ನು ಕಲಿತ ಮೇಲೆ ನಾವು ಹೊರಗಡೆಯೂ ಚೆನ್ನಾಗಿ ಬದುಕಬಲ್ಲೆವು. ಬೇಡವೆಂದಾಗ ಕಳಚಿಕೊಂಡು ನಮ್ಮೊಳಗೂ ನಾವು ಆತ್ಮಾರಾಮರಾಗಿರಬಲ್ಲೆವು.
ಆತ್ಮಜ್ಯೋತಿಯಲ್ಲಿ ತಾದಾತ್ಮ್ಯ ಹೊಂದಿದವನು ಎಂದರೆ, ಆತ್ಮದ ಅರಿವಿನಲ್ಲಿ ಮಗ್ನನಾದವನು. ಬಿಂದುವು ಸಿಂಧುವಿನಲ್ಲಿ ಕರಗಿದಂತೆ, ‘ನಾನು’ ಎಂಬ ಜೀವಭಾವವನ್ನು ಪರಮಾತ್ಮನಲ್ಲಿ ಕರಗಿಸಿ ಅಲ್ಲೇ ತಲ್ಲೀನನಾದವನು ಎಂದರ್ಥ. ಅಂಥವನು ‘ಬ್ರಹ್ಮಭೂತ’ ಎನಿಸುತ್ತಾನೆ. ಬ್ರಹ್ಮವಿತ್ ಬ್ರಹ್ಮೆ ೖವ ಭವತಿ (ಬ್ರಹ್ಮವನ್ನು ಅರಿತವನು ಬ್ರಹ್ಮವೇ ಆಗಿಬಿಡುತ್ತಾನೆ). ಇದೇ ಬ್ರಹ್ಮನಿರ್ವಾಣದ ಸ್ಥಿತಿ. ‘ವಿವೇಕ-ವೈರಾಗ್ಯ ಸಂಪಾದಿಸಿ, ನಂತರ ಜೀವನದಲ್ಲಿ ತೊಡಗು, ಆಗ ಮೋಹದ ಕಲ್ಮಶ ತಟ್ಟದು’ ಎನ್ನುವುದು ಇಲ್ಲಿನ ನಿರ್ದೇಶ. ಕಲ್ಮಶವಿಲ್ಲದ ಶುದ್ಧರು ಸಹಜವಾಗಿಯೇ ಬ್ರಹ್ಮನಿರ್ವಾಣಕ್ಕೆ ಅರ್ಹರಾಗುತ್ತೇವೆ:
‘ಕ್ಷೀಣಕಲ್ಮಶರೂ, ಸಂಶಯಗಳನ್ನೂ ಹೋಗಲಾಡಿಸಿಕೊಂಡವರೂ ಸಂಯಮಿಗಳೂ ಎಲ್ಲ ಜೀವರ ಹಿತದಲ್ಲಿ ನಿರತರಾದಂತಹವರೂ ಆದ ಋಷಿಗಳು ಬ್ರಹ್ಮನಿರ್ವಾಣವನ್ನು ಪಡೆಯುತ್ತಾರೆ’ (5.25).
ಕಾಮಮೋಹಾದಿ ಕಲ್ಮಶವನ್ನು ಗೆದ್ದ ಶುದ್ಧರು ಕ್ಷೀಣಕಲ್ಮಶರು.
ಛಿನ್ನದ್ವೈಧಾ: ದ್ವೈಧಾ ಎಂದರೆ ಮತಿಯ ಗೊಂದಲ. ‘ಯಾವುದು ನಿತ್ಯ ಯಾವುದು ಅನಿತ್ಯ’ ಎನ್ನುವುದು ಗೊತ್ತಿಲ್ಲದೆ ವ್ಯವಹರಿಸುವುದು. ‘ಶಾಶ್ವತವಾದ ಆತ್ಮಸ್ವರೂಪದ ಬಗ್ಗೆಯೇ ಅವಿಶ್ವಾಸ, ತಾತ್ಕಾಲಿಕ ಭೋಗಗಳು ಶಾಶ್ವತ’ ಎಂಬ ಭ್ರಮೆ. ಇದನ್ನು ಗೆದ್ದು ಆತ್ಮಭಾವವನ್ನು ತಾಳುವವನು ಎಂದು ತಾತ್ಪರ್ಯ.
ಯತಾತ್ಮಾ ಎಂದರೆ ಯಮ ಅರ್ಥಾತ್ ‘ನಿಗ್ರಹ’. ತನ್ನನ್ನು ತಾನು ನಿಯಂತ್ರಣ ಮಾಡಿಕೊಳ್ಳುವುದು. ಯೋಗಶಾಸ್ತ್ರದಲ್ಲಿ ಐದು ಯಮಗಳನ್ನು ಪಟ್ಟಿ ಮಾಡಲಾಗಿದೆ – ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ. ಈ ಐದು ಯಮಗಳನ್ನು ಸಿದ್ಧಿಸಿಕೊಂಡವನೇ ಯತಾತ್ಮಾ ಅಥವಾ ಯಮಿ.
ಅಹಿಂಸಾ: ದೇಹ, ಮಾತು, ಮನಸ್ಸುಗಳೆಂಬ ಮೂರು ಸ್ತರಗಳಲ್ಲೂ ಹಿಂಸೆ ನಡೆಸದಿರುವುದು ಅಹಿಂಸೆ. ಹೊಡೆಯುವುದು-ಕೊಲ್ಲುವುದು ಇತ್ಯಾದಿ ದೈಹಿಕಹಿಂಸೆಯಾದರೆ, ಬೈಗುಳ, ಚಾಡಿ, ಸುಳ್ಳು, ಅವಮಾನ ಮಾಡುವುದು ವಾಚಿಕಹಿಂಸೆ. ಹಗೆ, ದ್ವೇಷ, ಮಾತ್ಸರ್ಯಾದಿಗಳು ಮಾನಸಿಕ ಹಿಂಸೆ. ವೈಯಕ್ತಿಕವಾಗಿ ತೊಂದರೆಯಾದಾಗ ಆದಷ್ಟು ಸಹಿಸಿ, ಕ್ಷಮಿಸಿ, ಮನಃಪ್ರಸನ್ನತೆಯನ್ನು ಕಾಪಾಡಿಕೊಳ್ಳಬೇಕು. ಆದರೆ ಸಮಾಜದಲ್ಲಿ ಅನ್ಯಾಯ-ಅಕ್ರಮಗಳಾದಾಗ ದಮನಿಸುವುದು ಅಹಿಂಸೆಯ ಮತ್ತೊಂದು ರೂಪ. ‘ದುಷ್ಟದಮನಕ್ಕಾಗಿ ಕೈಗೊಳ್ಳುವ ಪ್ರತಿರೋಧ ಅಥವಾ ಶಿಕ್ಷೆಯೇ ಧರ್ಮಹಿಂಸೆ (ಅಹಿಂಸಾ ಪರಮೋಧರ್ಮಃ ಧರ್ಮಹಿಂಸಾ ತಥೈವ ಚ |). ಸಾಮ-ದಾನ-ಭೇದೋಪಾಯಗಳೆಲ್ಲ ವಿಫಲವಾದಾಗ ದಂಡೋಪಾಯಕ್ಕೆ (ಕಠಿಣಶಿಕ್ಷೆ ನೀಡುವುದಕ್ಕೆ) ಮುಂದಾಗಬೇಕಾಗುತ್ತದೆ. ಕಳ್ಳರನ್ನೂ ದುಷ್ಟರನ್ನೂ ಭ್ರಷ್ಟರನ್ನೂ ಆತಂಕವಾದಿಗಳನ್ನೂ ದೇಶದ್ರೋಹಿಗಳನ್ನೂ ಅಲ್ಲಲ್ಲೇ ಶಿಕ್ಷಿಸಿ ತಡೆಯದಿದ್ದರೆ ಸಮಾಜಕ್ಕೆ ತೊಂದರೆಯಾಗುತ್ತದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ದಕ್ಕಿದ್ದು ಲಕ್ಷೋಪಲಕ್ಷ ದೇಶಪ್ರೇಮಿಗಳು ಬ್ರಿಟಿಷರ ವಿರುದ್ಧ ಧರ್ಮಹಿಂಸೆಯಲ್ಲಿ ತೊಡಗಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ್ದರಿಂದಲೇ. ಕಣ್ಮುಂದೆಯೇ ದೇಶದ್ರೋಹಿಗಳೂ ಧರ್ಮದ್ವಿಷರೂ ನಮ್ಮನ್ನು ಜಾತಿ-ಭಾಷೆ-ಮತಗಳಲ್ಲಿ ವಿಭಜಿಸುತ್ತ, ಲೂಟಿಗೈಯುತ್ತ, ಮತಾಂತರಗೈಯುತ್ತ, ನಮ್ಮ ಭವ್ಯ-ಇತಿಹಾಸವನ್ನೇ ತಿರುಚುತ್ತ, ಮಾಡಬಾರದದ್ದನ್ನು ಮಾಡುತ್ತಿದ್ದರೂ ನಾವು ಕೈಕಟ್ಟಿ ಕೂರುವುದು ‘ಅಹಿಂಸೆ’ಯಲ್ಲ. ಹಾಗೆ ಮಾಡಿದರೆ ನಾವೇ ದುಷ್ಟರಿಗೆ ಅಪರಿಮಿತ ಹಿಂಸಾಚಾರಗೈಯಲು ಅವಕಾಶ ಕೊಟ್ಟಂತಹ ಪಾಪ ಮಾಡಿದಂತಾಗುತ್ತದೆ! ಧರ್ಮರಕ್ಷಣೆಗೆ ನಿಲ್ಲುವ ಕ್ಷಾತ್ರವನ್ನೇ ತಾನೇ ಕೃಷ್ಣನು ಇಲ್ಲಿ ಅರ್ಜುನನಿಗೆ ಮನಗಾಣಿಸುತ್ತ ಬಂದಿರುವುದು!
ಸತ್ಯ: ಸದಾ ಸತ್ಯಾಸತ್ಯಗಳ ಅನುಸಂಧಾನ ಮಾಡುವುದು, ಬಾಯಲ್ಲಿ ಸತ್ಯವೆಂದು ಖಚಿತವಾದದ್ದನ್ನು ಮಾತ್ರವೇ ನುಡಿಯುವುದು, ಕೊಟ್ಟ ಮಾತಿಗೆ ತಪ್ಪದಿರುವುದು – ಇವು ಸತ್ಯದ ಲಕ್ಷಣಗಳು.
ಅಸ್ತೇಯ: ಕದಿಯದಿರುವುದು ಅಸ್ತೇಯ. ವಸ್ತುಗಳನ್ನಷ್ಟೇ ಅಲ್ಲ, ಮತ್ತೊಬ್ಬರ ಕೀರ್ತಿ, ಅವಕಾಶ ಲಪಟಾಯಿಸುವುದೂ ಅಸ್ತೇಯವೇ.
ಬ್ರಹ್ಮಚರ್ಯ: ಕಾಮವೆಂಬ ಪ್ರಬಲವೈರಿಯನ್ನು ಗೆಲ್ಲುವುದೇ ಬ್ರಹ್ಮಚರ್ಯ! ವಿವಾಹ ಸಮ್ಮತವಾದ ಸಂಬಂಧ ತಪ್ಪಲ್ಲವಾದರೂ, ಅಲ್ಲೂ ಕಾಮವನ್ನು ಕ್ರಮೇಣ ಗೆಲ್ಲುತ್ತ ಮೇಲೇರುವುದು ವಿದಿತ. ಬ್ರಹ್ಮಚರ್ಯದಿಂದಾಗಿ ಆಯುರಾರೋಗ್ಯಗಳೂ ಮತಿ-ಮನಗಳ ಶಕ್ತಿಯೂ ಇಚ್ಛಾ, ಜ್ಞಾನ, ಕ್ರಿಯಾಶಕ್ತಿಗಳೂ ವರ್ಧಿಸುತ್ತವೆ. ಯೋಗಸಾಧನೆಗೆ ಇದು ಅತ್ಯಂತ ಅಗತ್ಯ.
ಅಪರಿಗ್ರಹ: ಯಾರಿಂದಲೂ ಏನನ್ನೂ ಸ್ವೀಕರಿಸದೆ ಇರುವುದು, ಅಥವಾ ಅಗತ್ಯಕ್ಕಿಂತ ಹೆಚ್ಚಾಗಿ ಸ್ವೀಕರಿಸದಿರುವುದು ಅಪರಿಗ್ರಹ. ಇದರಿಂದ ಜೀವನ ಶುದ್ಧವೂ ಸರಳವೂ ಮಾನಘನವೂ ಆಗುತ್ತದೆ.

ಕೃಪೆ : ವಿಜಯವಾಣಿ

Leave a Reply