ಬಾಹ್ಯಸ್ಪರ್ಶಗಳನ್ನು ನೆಚ್ಚದೆ ಆತ್ಮಸುಖ ಪಡೆ

ಬಾಹ್ಯಸ್ಪರ್ಶಗಳನ್ನು ನೆಚ್ಚದೆ ಆತ್ಮಸುಖ ಪಡೆ
ಡಾ. ಆರತೀ ವಿ. ಬಿ.
‘ಜೀವನದಲ್ಲಿ ಸಿಗುವ ಅಥವಾ ಸಿಗದಿರುವ ವಸ್ತು-ವ್ಯಕ್ತಿ-ಸ್ಥಾನ-ಮಾನಾದಿಗಳ ಬಗ್ಗೆ ಭಾವುಕತೆಗೆ ಒಳಗಾಗದೆ, ಸಮಭಾವದಿಂದಿರುವುದು ಜ್ಞಾನಿಯ ಲಕ್ಷಣ’ ಎನ್ನುವುದನ್ನು ಕೃಷ್ಣನು ವಿವರಿಸುತ್ತಿದ್ದ. ಅಂತಹವನು ಜೀವನದಲ್ಲಿ ಎಂತಹ ಪರಿಸ್ಥಿತಿಯಲ್ಲೂ ಎಂತಹ ದೊಡ್ಡ ಕೆಲಸವನ್ನಾದರೂ ಸ್ಥಿರ-ಶಾಂತ-ಚಿತ್ತದಿಂದ ಸಾಧಿಸಬಲ್ಲ ಎನ್ನುವುದನ್ನು ಪರಾಂಬರಿಸಿದೆವು.
ಬಾಹ್ಯಸ್ಪರ್ಶಗಳಲ್ಲಿ ಅನಾಸಕ್ತನಾಗಿ, ತನ್ನ ಆತ್ಮದಲ್ಲಿ ತಾನು ಯಾರು ನೆಲೆನಿಲ್ಲುತ್ತಾನೋ, ಬ್ರಹ್ಮಯೋಗವನ್ನು ಸಿದ್ಧಿಸಿಕೊಳ್ಳುತ್ತಾನೋ, ಅಂತಹವನು ಕ್ಷಯವಾಗದಂತಹ ಸುಖವನ್ನೇ ಪಡೆಯುತ್ತಾನೆ. (ಭ.ಗೀ.: 5.21)
‘ಬಾಹ್ಯಸ್ಪರ್ಶಗಳು’ ಎಂದರೆ ಇಂದ್ರಿಯಗಳ ಮೂಲಕ ಆಗುವ ಹೊರಜಗತ್ತಿನ ಅನುಭವಗಳು, ಅರ್ಥಾತ್ ಭೋಗಾನುಭವಗಳು. ದೇಹಧಾರಿಗಳಾದ ಮೇಲೆ ಬಾಹ್ಯಸ್ಪರ್ಶಗಳು ಅನಿವಾರ್ಯ. ಆದರೆ ಭೋಗಾನುಭವಗಳಲ್ಲಿ ಹೇಗೆ ‘ತೊಡಗುತ್ತೇವೋ’, ಹಾಗೆಯೇ ‘ಕಳಚಿಕೊಳ್ಳುವುದನ್ನೂ’ ಕಲಿಯಬೇಕು! ಇಲ್ಲದಿದ್ದರೆ ಅಪಾಯ! ಆದರೆ ನಮ್ಮ ಅಸಂಸ್ಕೃತ ಮನಸ್ಸಿಗೆ ಹೊರಜಗತ್ತಿನ ವಿವರಗಳಲ್ಲಿ ‘ತೊಡಗುವುದು’ ಮಾತ್ರ ಗೊತ್ತು, ‘ಕಳಚಿಕೊಳ್ಳುವುದು’ ಗೊತ್ತಿಲ್ಲ! ವೀರ ಅಭಿಮನ್ಯುವು ಚಕ್ರವ್ಯೂಹದಲ್ಲಿ ನುಗ್ಗುವುದನ್ನೇನೋ ಕಲಿತಿದ್ದ, ಆದರೆ ಭೇದಿಸಿ ಹೊರಬರಲು ಕಲಿತಿರಲಿಲ್ಲವಲ್ಲ! ಹಾಗಿದೆ ನಮ್ಮ ಕಥೆ! ಬಾಹ್ಯಸ್ಪರ್ಶಗಳಿಂದ ಕಳಚಿಕೊಳ್ಳುವುದನ್ನೂ ಕಲಿಯದಿದ್ದರೆ, ನಾವು ಹೊರಜಗತ್ತಲ್ಲೇ ಅದಿದನ್ನೂ ಅವರಿವರನ್ನೂ ನೋಡಿ ಬೆರಗಾಗುತ್ತ, ಬಯಸುತ್ತ, ಆರಾಧಿಸುತ್ತ ಅನುಕರಿಸುತ್ತ, ಅಥವಾ ಕೊರಗುತ್ತ, ದ್ವೇಷಿಸುತ್ತ ಅದರಲ್ಲೇ ಮೈಮರೆಯುತ್ತೇವೆ! ಇಂದ್ರಿಯಗಳ ಚಾಪಲ್ಯವನ್ನು ಪೂರೈಸುವ ಹುಚ್ಚಿನಲ್ಲಿ ನಮ್ಮೊಳಗಿನ ಆತ್ಮಸಾಮ್ರಾಜ್ಯವನ್ನೂ ಜೀವನದ ಘನೋದ್ದೇಶವನ್ನೂ ಮರೆತೇಬಿಡುತ್ತೇವೆ.
‘‘ಭೋಗದಲ್ಲಿ ಆಸಕ್ತಿಯಿದ್ದರೆ ಏನೀಗ? ಇರಲಿ ಬಿಡಿ’’ ಎನ್ನುವಿರೋ? ಅವು ಆತ್ಯಂತಿಕ ಸುಖವನ್ನು ನೀಡುವ ಹಾಗಿದ್ದಿದ್ದರೆ, ಖಂಡಿತ ಅವನ್ನು ನೆಚ್ಚಬಹುದಿತ್ತು. ಆದರೆ ಅವು ತಾತ್ಕಾಲಿಕ. ಅಷ್ಟೇ ಅಲ್ಲ, ದುಃಖವನ್ನು ಉಂಟುಮಾಡುತ್ತವೆ ಎಂದು ಎಚ್ಚರಿಸುತ್ತಿದ್ದಾನೆ ಕೃಷ್ಣ!
(ಇಂದ್ರಿಯಗಳ) ಸಂಸ್ಪರ್ಶದ ಭೋಗಗಳು ಆದಿ, ಅಂತ್ಯವುಳ್ಳವು, (ಹಾಗಾಗಿ) ದುಃಖಯೋನಿಗಳು. ಬುಧರು (ತಿಳಿದವರು) ಅವುಗಳಲ್ಲಿ ರಮಿಸುವುದಿಲ್ಲ (ಮೈಮರೆಯುವುದಿಲ್ಲ). (ಭ.ಗೀ.: 5.22)
ಈ ಭೋಗಗಳು ಆದ್ಯಂತವುಳ್ಳವು. ಅರ್ಥಾತ್ ಪ್ರಾರಂಭ ಹಾಗೂ ಕೊನೆಯನ್ನುಳ್ಳವು. ಹಾಗಾಗಿ ‘‘ಭೋಗ ಸಿಕ್ಕಿತು!’’ ಎಂದು ವಿರಮಿಸುವಂತಿಲ್ಲ. ಯಾವಾಗ ಕೈತಪ್ಪಿ ಹೋಗುತ್ತವೋ ಎಂಬ ಅನಿಶ್ಚಿತತೆ ಕಾಡುತ್ತಿರುತ್ತದೆ! ಭೋಗವು ಮುಗಿದಾಗ ಅಥವಾ ಕೈತಪ್ಪಿದಾಗ ದುಃಖ ಆವರಿಸುತ್ತದೆ. ಈ ಕಾರಣಕ್ಕಾಗಿ ಭೋಗಗಳ ಬಗ್ಗೆ ನಿರ್ಲಿಪ್ತಿಯಿರುವುದು ಕ್ಷೇಮ. ಭೋಗವನ್ನು ‘ಶಾಶ್ವತವಾಗಿ ಬಿಗಿಹಿಡಿಯಲು’ ಹವಣಿಸಿದರೆ ನಾವು ಜೀವನೋದ್ದೇಶವನ್ನೂ ಮರೆತು ಬಹಿಮುಖರಾಗಿ ಅಲೆಯುತ್ತ ಆಯಾಸಪಡುತ್ತೇವೆ.
ಅಚ್ಚುಕಟ್ಟಾಗಿ ವೇಷಭೂಷ ಧರಿಸುವುದು ಶಿಷ್ಟಾಚಾರ. ಆದರೆ ‘ಯೌವನವೇ ಮಾಸಬಾರದು’ ಎಂಬ ಹಠ ಹಿಡಿದರೆ ಮನುಷ್ಯನು ಚಿಂತಾಕ್ರಾಂತನಾಗುತ್ತಾನೆ. ಕೃತಕ ಸೌಂದರ್ಯಸಾಧನಗಳಿಗೆ ವಶನಾಗುತ್ತಾನೆ. ಮನೆ-ಪರಿವಾರ-ಉದ್ಯೋಗಗಳನ್ನು ಹಿಡಿಯುವುದು ತಪ್ಪಲ್ಲ. ಆದರೆ ಅವನ್ನೆಲ್ಲ ‘ಶಾಶ್ವತವಾಗಿ ಉಳಿಸಿಕೊಳ್ಳುವ’ ಹುಚ್ಚಿಗಿಳಿದರೆ ಹಠ-ಕಣ್ಣೀರು-ನಿರಾಶೆ-ಕಾಯಿಲೆಗಳು ತಪ್ಪುವುದಿಲ್ಲ. ಜನ-ಧನ-ಅಧಿಕಾರಗಳನ್ನು ಹಿಡಿಯುವುದೇನೂ ತಪ್ಪಲ್ಲ. ಆದರೆ ಅವುಗಳನ್ನು ‘ಬಿಟ್ಟುಕೊಡುವುದೇ ಇಲ್ಲ! ನಾನೂ ನನ್ನವರೂ, ನನ್ನ ಮಕ್ಕಳೂ-ಮೊಮ್ಮಕ್ಕಳೂ-ಮರಿಮಕ್ಕಳೂ, ನನ್ನ ಮತದವರೂ ಅನುಭವಿಸುತ್ತಲೇ ಇರಬೇಕು’ ಎಂದು ಹಠ ಹಿಡಿದರೆ ಮನುಷ್ಯ ಪಶುವಾಗಲಾರಂಭಿಸುತ್ತಾನೆ. ಸುಳ್ಳು-ಮೋಸ-ರಾಜಕೀಯ ನಾಟಕಗಳಿಗೆ ಇಳಿಯುತ್ತಾನೆ. ಕುತಂತ್ರ-ಕಪಟ-ಕೊಲೆ-ಪಾತಕಗಳಿಗೂ ಇಳಿದಾನು. ಹೇಗೆಂದರೆ ಹಾಗೆ ಭೋಗದಾಸೆಯನ್ನು ಬೆಳೆಯಗೊಟ್ಟರೆ ಅದೊಂದು ಮನೋರೋಗವೇ ಆಗಿ ಬಸವಳಿಸುವುದು ಖಂಡಿತ.
ಅಡ್ಡಮಾರ್ಗದಲ್ಲಿ ಗದ್ದುಗೆಯೇರುವ ರಾಜಕೀಯನಾಯಕರನ್ನು ನೋಡಿದರೆ ಸಾಕು, ಭೋಗಾತುರದ ‘ರೋಗ’ ಮನುಷ್ಯನನ್ನು ಹೇಗೆ ಪಶುವನ್ನಾಗಿಸುತ್ತದೆ ಎನ್ನುವುದು ಸ್ಪಷ್ಟವಾಗುತ್ತದೆ! ಮಾಡಬಾರದ್ದನ್ನು ಮಾಡಿ ಅಧಿಕಾರಕ್ಕೇರಿಯಾದ ಮೇಲೂ ಇವರು ನೆಮ್ಮದಿಯಿಂದಿರುತ್ತಾರೆಯೇ? ಹಗಲಿರುಳೂ ಕುರ್ಚಿಯಿಂದ ಬೀಳುವ ಭೀತಿ! ಆಡಳಿತಕ್ಕಿಂತ ಕುರ್ಚಿ ಉಳಿಸಿಕೊಳ್ಳುವ ಪರದಾಟವೇ ಹೆಚ್ಚು! ತಿಂದದ್ದು ಅರಗದು. ನಿದ್ರೆ ಬಾರದು. ಆದರೂ ‘ಸಾಕು’ ಎನ್ನಲು ಮಾತ್ರ ಮನಸ್ಸೇ ಬಾರದು! ಇಷ್ಟೆಲ್ಲ ಪಾಡುಪಟ್ಟು ಮೆರೆಯುವುದು ನಾಲ್ಕಾರು ವರ್ಷ ಮಾತ್ರ! ಆ ಬಳಿಕ ಇವರು ಇತಿಹಾಸದಲ್ಲಿ ಕಪ್ಪು ಚುಕ್ಕೆಗಳಾಗಿಬಿಡುತ್ತಾರಷ್ಟೆ! ‘‘ಭೋಗದಾಸೆಯನ್ನು ಅಲ್ಲಿಗಲ್ಲೇ ನಿಯಂತ್ರಿಸದಿದ್ದರೆ ಅದು ನಮ್ಮನ್ನು ಇಂತಹ ಕೆಟ್ಟ ‘ಮನೋರೋಗ’ಕ್ಕೆ ತಳ್ಳೀತು ಜೋಕೆ’’ ಎನ್ನುವುದು ಗೀತಾಚಾರ್ಯನ ಎಚ್ಚರಿಕೆಯ ಮಾತು. ಇದನ್ನೇ ಆಚಾರ್ಯ ಶಂಕರರು ಹೀಗೆ ಪ್ರತಿಧ್ವನಿಸುತ್ತಾರೆ: ‘ಮಾಯಾಮಯ (ಅನಿಶ್ಚಿತ) ಜನ-ಧನ-ಯೌವನಾದಿಗಳಲ್ಲಿ ಮೈಮರೆಯದೆ, ನಿತ್ಯವಾದ ಬ್ರಹ್ಮಪದವನ್ನರಿತು ಪ್ರವೇಶಿಸು’
(ಮಾ ಕುರು ಧನಜನಯೌವನಗರ್ವಂ ಹರತಿ ನಿಮೇಷಾತ್ ಕಾಲಃ ಸರ್ವಂ | ಮಾಯಾಮಯಮಿದಂ ಅಖಿಲಂ ಹಿತ್ವಾ ಬ್ರಹ್ಮಪದಂ ತ್ವಂ ಪ್ರವಿಶ ವಿದಿತ್ವಾ ||).
ಕೃಪೆ: ವಿಜಯವಾಣಿ

Leave a Reply