ಭಗವದ್ಗೀತೆಯ ಸಾರಸರ್ವಸ್ವ  ಭಾಗ- ೩

ಭಗವದ್ಗೀತೆಯ ಸಾರಸರ್ವಸ್ವ  ಭಾಗ- ೩
ಮಾನವ ಹಕ್ಕುಗಳು–
ಅ) ಸ್ವಾಭಾವಿಕ ಮಾನವ ಹಕ್ಕುಗಳು–
ಮಾನವೀಯವಾಗಿ ಬದುಕಲು ಬಯಸುವ ವ್ಯಕ್ತಿಗೆ ಯಾವ ಮಾನವ ಹಕ್ಕುಗಳಿವೆ ಎಂಬುದನ್ನು ಭಾರತೀಯ ಜಗತ್ತಿನಲ್ಲಿ ಒಂದು ಸಿದ್ಧಾಂತದಂತೆ ಮೊಟ್ಟ ಮೊದಲಿಗೆ ಪ್ರತಿಪಾದಿಸಿದುದು ಭಗವದ್ಗೀತೆಯೇ. ಅದು ವ್ಯಕ್ತಿಯನ್ನು ಹಲವು ಮಗ್ಗುಲುಗಳಲ್ಲಿ ಗಮನಿಸಿದೆ. ಅವನನ್ನು ದೇಹ ಭಾವದಿಂದ ಗಮನಿಸಿ ದೇಹ ಆರೋಗ್ಯದಿಂದ ಇರುವಂತೆ ನೋಡಿಕೊಳ್ಳುವುದು ವ್ಯಕ್ತಿಯ ಜವಾಬ್ದಾರಿ ಎಂದು ಹೇಳಿ ಆರೋಗ್ಯಯುತ ದೇಹವನ್ನು ಹೊಂದುವುದು ವ್ಯಕ್ತಿಯ ಮೂಲಭೂತ ಹಕ್ಕು ಎಂದು ಗೀತೆ ಗಮನಿಸುತ್ತದೆ. ಆರೋಗ್ಯಯುತ ದೇಹವನ್ನು ಹೇಗೆ ಹೊಂದಬಹುದು ಎಂಬುದರ ಸೂತ್ರವಾಗಿ ಯುಕ್ತವಾದ ಮತ್ತು ಮಿತವಾದ ಆಹಾರ, ವಿಹಾರಗಳ ಕಡೆಗೆ ಗಮನ ಸೆಳೆಯುತ್ತದೆ.
ಆ) ಗಮನಾರ್ಹ ಮಾನವ ಹಕ್ಕು–
ದೇಹದ ಇಂದ್ರಿಯಗಳ ಸ್ವಭಾವವೇ ಬಾಹ್ಯಮುಖಿ ಆಗಿರುವುದು. ಅವು ತಮ್ಮ ವ್ಯಾಪ್ತಿಗೆ ಬಂದದ್ದನ್ನೆಲ್ಲಾ ಸುಮ್ಮನೆ ಸ್ವೀಕರಿಸಿ ಬಿಡುತ್ತವೆ. ಈ ಸ್ವಭಾವವನ್ನು ಹಿಡಿತದಲ್ಲಿ ಇಟ್ಟುಕೊಳ್ಳದಿದ್ದರೆ ದೇಹದ ಆರೋಗ್ಯಕ್ಕೂ ಹಾನಿ, ಮನಸ್ಸಿನ ಆರೋಗ್ಯಕ್ಕೂ ಹಾನಿ ಎಂದೆನ್ನುವ ಭಗವದ್ಗೀತೆ ಮನುಷ್ಯನನ್ನು ಅವನ ಮನೋಭಾವದ ದೃಷ್ಟಿಯಿಂದ ಗಮನಿಸುವುದಕ್ಕೂ ಆದ್ಯತೆ ಕೊಡುತ್ತದೆ, ಮನಸ್ಸು ಆರೋಗ್ಯದಿಂದ ಇದ್ದರೆ ದೇಹವೂ ಆರೋಗ್ಯದಿಂದ ಇರುತ್ತದೆ ಎಂಬುದನ್ನು ಒಪ್ಪಿಕೊಳ್ಳುವ ಭಗವದ್ಗೀತೆ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳುವುದಕ್ಕೆ ಪೂರಕವಾದದ್ದು ಯಾವುದು ಎಂಬುದನ್ನು ಪರಿಶೀಲಿಸುತ್ತದೆ. ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳುವುದೇ ಗಮನಾರ್ಹ ಮಾನವ ಹಕ್ಕು ಎನ್ನುತ್ತದೆ.
ಇ) ಮಾನಸಿಕ ಆರೋಗ್ಯ–
ಸುಂದರ ಬದುಕಿಗೆ ಸಂಬಂಧಿಸಿದಂತೆ ಭಾರತೀಯ ತಾತ್ತ್ವಿಕ ಚಿಂತನೆಯಲ್ಲಿ ಮನಸ್ಸಿನ ಆರೋಗ್ಯಕ್ಕೆ ಪ್ರಥಮ ಪ್ರಾಶಸ್ತ್ಯ. ಭಗವದ್ಗೀತೆಯ ಮೊದಲ ಪ್ರಶ್ನೆಯೇ ಮನೋವಿಕಾರವನ್ನು ತಡೆಯುವುದು ಹೇಗೆ ಎಂಬುದು. ಸತ್ಯ – ಅಸತ್ಯಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವ, ಗುರುತಿಸಿದ ಸತ್ಯಕ್ಕೆ ಅನುಗುಣವಾಗಿ ನಡೆವಳಿಕೆಯನ್ನು ರೂಪಿಸಿಕೊಳ್ಳುವ ಮನಃಸ್ಥಿತಿ ಮನೋವಿಕಾರವನ್ನು ತಡೆಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎನ್ನುತ್ತದೆ ಭಗವವ್ಗೀತೆ. ಸುಖವೇ ಬರಬೇಕು, ದುಃಖ ಇರಲೇ ಬಾರದು; ಲಾಭವೇ ಆಗುತ್ತಿರಬೇಕು, ನಷ್ಟ ಆಗಲೇ ಬಾರದು; ಜಯವೇ ದೊರೆಯುತ್ತಿರಬೇಕು, ಅಪಜಯ ಉಂಟಾಗಲೇ ಬಾರದು ಎನ್ನುವ ಮನಃಸ್ಥಿತಿಯು ಮನಸ್ಸಿನ ಸ್ವಾಸ್ಥ್ಯವನ್ನು ಖಂಡಿತವಾಗಿ ಕೆಡಿಸುತ್ತದೆ ಎನ್ನುತ್ತದೆ ಭಗವದ್ಗೀತೆ.
ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯಗಳೂ ಮನಸ್ಸಿನ ಆರೋಗ್ಯವನ್ನು ಕೆಡಿಸುತ್ತವೆ, ಅವುಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಎಂದು ಭಗವದ್ಗೀತೆ ಸೂಚಿಸುತ್ತದೆ. ತಾಮಸ ಗುಣವು ಸೋಮಾರಿತನವನ್ನೂ, ರಜೋಗುಣವು ಮೂಗು ಮುಖ ಇಲ್ಲದ ಕ್ರಿಯಾಶೀಲತೆಯನ್ನೂ, ಸಾತ್ವಿಕ ಗುಣವು ಸುಮ್ಮ ಸುಮ್ಮನೆ ದೊಡ್ಡಸ್ಥಿಕೆಯನ್ನೂ ಮುಂದು ಮಾಡುತ್ತವೆ ಎಂದು ಎಚ್ಚರಿಸುತ್ತದೆ. ಬಹಿರ್ಮುಖ ಆಗಿರುವ ಇಂದ್ರಿಯ ಸಂವೇದನಾತ್ಮಕ ಅರಿವು ಮತ್ತು ಮನಸ್ಸಿನ ಕ್ರಿಯಾಶೀಲತೆಯನ್ನು ಮನಸ್ಸಿನ ಆರೋಗ್ಯದ ದೃಷ್ಟಿಯಿಂದ ಅಂತರ್ಮುಖಿ ಆಗಿಸಿಕೊಂಡು ವಿವೇಚನೆಯ ಒರೆಗಲ್ಲಿಗೆ ಹಚ್ಚುವ ಅವಶ್ಯಕತೆಯ ಕಡೆಗೆ ಗಮನ ಸೆಳೆಯುತ್ತದೆ.
ವ್ಯಕ್ತಿ ಅಂತರ್ಮುಖಿ ಆದಾಗ ಸತ್ಯಾಸತ್ಯತೆಯ ಅರಿವು ಉಂಟಾಗುತ್ತದೆ; ಆ ಅರಿವಿನ ಮೂಲಕ ಮಾನಸಿಕ ಸಮಚಿತ್ತತೆ ಸಾಧ್ಯವಾಗುತ್ತದೆ, ಮನಸ್ಸೂ ನಿರೋಗಿಯಾಗುತ್ತದೆ, ವ್ಯಕ್ತಿಯು ವೈಯಕ್ತಿಕವಾಗಿ ಮಾತ್ರವಲ್ಲದೆ ಸಾಮಾಜಿಕವಾಗಿಯೂ ಆರೋಗ್ಯವಾಗಿರುತ್ತಾನೆ ಎಂದೆನ್ನುವ ಭಗವದ್ಗೀತೆಯು ವೈಯಕ್ತಿಕ ಮಾನಸಿಕ ಆರೋಗ್ಯದ ಜೊತೆ ಜೊತೆಗೆ ಸಾಮಾಜಿಕ ಆರೋಗ್ಯದ ಕಡೆಗೂ ಗಮನ ಸೆಳೆಯುತ್ತದೆ.
ಈ) ಮಾನವ ಹಕ್ಕಿನ ಉಲ್ಲಂಘನೆ–
ದೈಹಿಕ ಆಸೆ ಆಕಾಂಕ್ಷೆಗಳಿಗೆ ಪ್ರಾಧಾನ್ಯತೆ ಇದ್ದಾಗ ಸದಾ ಅವುಗಳ ಈಡೇರಿಕೆಯ ಕಡೆಗೇ ಗಮನವೆಲ್ಲಾ ಇರುತ್ತದೆ. ಅವುಗಳಲ್ಲಿ ಒಂದಷ್ಟು ಪೂರೈಕೆಯಾದರೆ ಮತ್ತಷ್ಟು ಆಸೆ ಆಕಾಂಕ್ಷೆಗಳ ಬೆನ್ನು ಹತ್ತುವಂತಾಗುತ್ತದೆ. ನಿಧಾನವಾಗಿ ಸರಿ ತಪ್ಪುಗಳ, ಒಳಿತು ಕೆಡುಕುಗಳ, ನ್ಯಾಯ ಅನ್ಯಾಯಗಳ ಪ್ರಶ್ನೆ ಹಿಂದಕ್ಕೆ ಸರಿಯುತ್ತದೆ. ಇನ್ನೊಬ್ಬರ ಅಗತ್ಯಗಳಿಗೆ ಕಿಂಚಿತ್ತೂ ಸ್ಪಂದಿಸದಂತೆ ಆಗುತ್ತದೆ ಎಂದೆನ್ನುತ್ತದೆ ಭಗವದ್ಗೀತೆ.
ಒಂದೊಮ್ಮೆ ಆಸೆ ಆಕಾಂಕ್ಷೆಗಳು ಈಡೇರದಿದ್ದರೆ ಕೋಪ ಬರುತ್ತದೆ. ಕೋಪದಿಂದ ಬುದ್ಧಿನಾಶ ಉಂಟಾಗುತ್ತದೆ. ವಿವೇಚನಾತ್ಮಕ ಪರಿಜ್ಞಾನ ಇಲ್ಲದಂತಾಗಿ ಸರಿಯಾದ ದಾರಿಯನ್ನು ಅನುಸರಿಸುವ ಮನೋಮಾರ್ಗ ಮುಚ್ಚಿ ಹೋಗುತ್ತದೆ. ಇದರ ಒಟ್ಟಾರೆ ಪರಿಣಾಮ ವ್ಯಕ್ತಿಯ ಘನತೆಯುತ ಅಸ್ತಿತ್ವಕ್ಕೆ ಕೊಡಲಿ ಪೆಟ್ಟು ಎನ್ನುವ ಭಗವದ್ಗೀತೆ ದೈಹಿಕ ಮತ್ತು ಮಾನಸಿಕ ಆರೋಗ್ಯಗಳ ಕಡೆಗೆ ಗಮನ ಕೊಡದಿದ್ದರೆ ಹೇಗೆ ಮಾನವ ಹಕ್ಕಿನ ಉಲ್ಲಂಘನೆ ಉಂಟಾಗುತ್ತದೆ ಎಂಬುದನ್ನು ವಿವರಿಸುತ್ತದೆ.
ಪಕ್ಷಪಾತ ಮನಃಸ್ಥಿತಿ–
ಮಾನವ ಹಕ್ಕುಗಳ ಪ್ರತಿಪಾದನೆ ಮತ್ತು ಅವುಗಳ ಉಲ್ಲಂಘನೆಯನ್ನು ಮನುಷ್ಯನ ವ್ಯಾವಹಾರಿಕ ಪ್ರಪಂಚದ ದೃಷ್ಟಿಯಿಂದಲೂ ಗೀತೆ ಪರಿಶೀಲಿಸುತ್ತದೆ. ವ್ಯಕ್ತಿಯ ದೈಹಿಕ – ಭೌತಿಕ ಅಸ್ತಿತ್ವದ ನೆಲೆಗಟ್ಟು ಅವನ ಭೌತಿಕ – ವ್ಯಾವಹಾರಿಕ ಪ್ರಪಂಚ; ಅವನು ಅದರ ಬಗ್ಗೆ ಹೊಂದಿರುವ ದೃಷ್ಟಿಕೋನವು ಭಾವಾತ್ಮಕ – ಅಭಾವಾತ್ಮಕ, ಸೃಷ್ಟ್ಯಾತ್ಮಕ – ವಿನಾಶಾತ್ಮಕ, ಸುಂದರ – ಅಸುಂದರ, ವ್ಯಕ್ತಿ ನಿಷ್ಟ – ವಸ್ತು ನಿಷ್ಟ, ಸ್ನೇಹ ಗೌರವ ಪೂಜ್ಯಭಾವ – ನಿಕೃಷ್ಟ ತಿರಸ್ಕಾರ ಜಿಗುಪ್ಸಾತ್ಮಕ ಎಂದೆಲ್ಲ ಬಗೆ ಬಗೆಯಾಗಿ ಇಮ್ಮುಖ; ಈ ಇಮ್ಮುಖ ಭಾವಗಳಲ್ಲಿ ಯಾವುದೋ ಒಂದು ಭಾವಕ್ಕೆ ಅತಿಯಾಗಿ ಪ್ರಾಮುಖ್ಯತೆ ಕೊಟ್ಟಾಗ ಮಾನವ ಅಸ್ತಿತ್ವದ ಘನತೆಗೆ ಭಂಗ ಉಂಟು ಮಾಡುವ ಅತಿಯಾದ ದುಃಖ, ವ್ಯಾಮೋಹ, ಮದ, ಮಾತ್ಸರ್ಯ ಮುಂತಾದವುಗಳು ವಿಜೃಂಭಿಸುತ್ತವೆ ಎಂದೆನ್ನುತ್ತದೆ ಗೀತೆ.
ಅಶಾಂತಿ–
ನಾವು ನಮ್ಮ ಜೊತೆಗಾರರನ್ನು ಅವರವರ ಸ್ವಭಾವ, ಅವರು ಸಮಾಜದಲ್ಲಿ ಪಡೆದಿರುವ ಸೌಲಭ್ಯ, ಸವಲತ್ತುಗಳೇ ಮುಂತಾದ ನೆಲೆಗಳಲ್ಲಿ ಗಮನಿಸಿ ಅವರು ನಮ್ಮಂತೆ ಇಲ್ಲ ಅಥವಾ ನಾವು ಅವರಂತೆ ಇಲ್ಲ ಎನ್ನುವ ಪ್ರತ್ಯೇಕತಾ ದೃಷ್ಟಿಯಿಂದಲೇ ಅವರನ್ನು ನೋಡುತ್ತಾ ಹೋದಾಗ ಬಗೆ ಬಗೆಯ ಭೇದಭಾವಗಳನ್ನು, ಜಿಗುಪ್ಸೆ ತಿರಸ್ಕಾರ ನಿಕೃಷ್ಟತೆ, ಅದೇನು ಮಹಾ ಎನ್ನುವ ಉಡಾಫೆಯೇ ಮೊದಲಾದ ಅಗೌರವಯುತ ಅಥವಾ ದ್ವೇಷದ ಭಾವನೆಗಳನ್ನು ಜೊತೆಗಾರರ ಬಗ್ಗೆ ನಮ್ಮಲ್ಲಿ ತುಂಬಿಕೊಳ್ಳುತ್ತಾ ಹೋಗುತ್ತೇವೆ. ಎಲ್ಲದರ ಬಗ್ಗೆ, ಎಲ್ಲರ ಬಗ್ಗೆ ಸೂಕ್ತ ಆದರ ಭಾವ ಇದ್ದ ಹೊರತೂ ಅಗೌರವಯುತವಾದ ಭಾವಗಳಿಂದ ನಮಗೆ ಹೊರ ಬರಲು ಆಗುವುದಿಲ್ಲ. ಸಮಗ್ರವಾದ ದೃಷ್ಟಿಕೋನವನ್ನು ವಾಸ್ತವತೆಗೆ ಸಂಬಂಧಿಸಿದಂತೆ ರೂಪಿಸಿಕೊಳ್ಳಲೂ ಆಗುವುದಿಲ್ಲ. ಸಮತೋಲನದ ಸಮಗ್ರ ದೃಷ್ಟಿಕೋನದ ಅಭಾವದಿಂದ ವ್ಯಕ್ತಿಯ ಮತ್ತು ಅವನ ಸಮುದಾಯದ ಹಾಗೂ ಒಟ್ಟಾರೆ ಮಾನವ ಸಮಾಜದ ಘನತೆಯುತ ಅಸ್ತಿತ್ವಕ್ಕೆ ಆಘಾತಕಾರಿ ಪೆಟ್ಟು ಉಂಟಾಗುತ್ತದೆ ಎನ್ನುತ್ತದೆ ಭಗವದ್ಗೀತೆ.
ಅಸಮತೋಲನದ ಮನಃಸ್ಥಿತಿ ಮತ್ತು ಪ್ರತ್ಯೇಕತಾ ನೀತಿಗಳ ಒಟ್ಟಾರೆ ಪರಿಣಾಮ ಮಾನಸಿಕ ಅಶಾಂತಿ, ವೈಯಕ್ತಿಕ ಮತ್ತು ಸಾಮುದಾಯಿಕ ಜೀವನರೀತಿಯಲ್ಲಿ ಅಶಾಂತಿ. ಮನುಷ್ಯನ ಘನತೆಯುತ ಅಸ್ತಿತ್ವ ಎನ್ನುವ ಮೂಲಭೂತ ಮಾನವ ಹಕ್ಕಿನ ಪ್ರತಿಪಾದನೆಗೆ ಅತ್ಯಂತ ಪ್ರಮುಖವಾದ ಅಡ್ಡಿ ಅಶಾಂತಿಯೇ ಎನ್ನುತ್ತದೆ ಗೀತೆ. ಪರಮಶಾಂತಿಯ ಪ್ರತಿಪಾದನೆಯೇ ಅದಕ್ಕೆ ರಾಮಬಾಣ ಎಂದೂ ಗುರುತಿಸುತ್ತದೆ.
ಈ) ಮಾನವ ಹಕ್ಕಿನ ಪ್ರತಿಪಾದನೆ – ಸ್ಥಿತಪ್ರಜ್ಞೆ–
ಸಾಕ್ರಟೀಸನಂತೆ ಭಗವದ್ಗೀತೆಗೂ ಎಚ್ಚರದ ಸಮತೋಲನದ ಸಮತೂಕದ ಸ್ಥಿತಪ್ರಜ್ಞೆಯೇ ಮಾನವ ಹಕ್ಕುಗಳ ಪ್ರತಿಪಾದನೆಯನ್ನು ಸಾಧ್ಯಗೊಳಿಸುವ ಮತ್ತು ಮಾನವ ಹಕ್ಕಿನ ಉಲ್ಲಂಘನೆಯ ಸಂದರ್ಭವನ್ನು ನಿರ್ಧರಿಸುವ ಮತ್ತು ನಿವಾರಿಸುವ ಅಂತಿಮ ಸಾಧನೋಪಾಯ ಮತ್ತು ಮಾನದಂಡ. ಗೀತೆಯು ಎಲ್ಲಾ ಸಂದರ್ಭಗಳಲ್ಲೂ ಸಮತೋಲನ ತಪ್ಪದ ಜಾಗೃತ ಪ್ರಜ್ಞೆ, ಎಚ್ಚರದ ಅರಿವು ಅತ್ಯಗತ್ಯ ಎಂಬುದನ್ನು ಗಮನಿಸುವುದು ಒಟ್ಟಾರೆ ವ್ಯಕ್ತಿ ಮತ್ತು ಸಮುದಾಯದ ಘನತೆಯುತ ಅಸ್ತಿತ್ವದ ದೃಷ್ಟಿಯಿಂದಲೇ. ನಾವು ನಮ್ಮನ್ನು ಕೇವಲ ದೇಹಭಾವದಿಂದ ಗಮನಿಸಿ ನಮ್ಮ ವೈಯಕ್ತಿಕ ಆಸೆ ಆಕಾಂಕ್ಷೆ ನಿಲುವು ಅಭಿಪ್ರಾಯ ಧೋರಣೆಗಳನ್ನು ರೂಪಿಸಿಕೊಳ್ಳುವುದರಿಂದ ನಮಗೆ ನಾವು ಮಾತ್ರ ಪ್ರಧಾನ ಆಗುತ್ತೇವೆ, ಇತರರು ಗೌಣ ಆಗುತ್ತಾರೆ, ಅದರಿಂದ ಅವರ ಘನತೆಯುತ ಅಸ್ತಿತ್ವಕ್ಕೆ ಧಕ್ಕೆಯುಂಟಾಗುತ್ತದೆ ಮತ್ತು ನಮ್ಮ ಘನತೆಯುತ ಅಸ್ತಿತ್ವಕ್ಕೆ ಭಂಗ ಉಂಟಾಗಬಹುದಾದ ಸಂದರ್ಭವನ್ನು ನಾವೇ ಸೃಷ್ಟಿ ಮಾಡಿ ಕೊಟ್ಟಂತೆ ಆಗುತ್ತದೆ ಎಂದೆನ್ನುತ್ತದೆ ಭಗವದ್ಗೀತೆ.
ಅದ್ವೈತ ಭಾವ–
ಸೃಷ್ಟಿ, ಹಗಲು, ಉತ್ತರಾಯಣ, ಶುಕ್ಲಪಕ್ಷ, ದೇವಯಾನ ಇತ್ಯಾದಿಗಳು ಇವೆ ಎಂದರೆ ಅವುಗಳಿಗೆ ಅನುಕ್ರಮವಾಗಿ ನಾಶ, ರಾತ್ರಿ, ದಕ್ಷಿಣಾಯನ, ಕೃಷ್ಣಪಕ್ಷ, ಪಿತೃಯಾನ ಮುಂತಾದವುಗಳು ಇವೆ ಎಂದೇ ಅರ್ಥ; ಈ ರೀತಿಯ ಇಮ್ಮುಖಗಳು ಪರಸ್ಪರ ಸಾಪೇಕ್ಷವಾದ ದ್ವೈತಗಳು; ಈ ಎಲ್ಲ ಇಮ್ಮುಖಗಳಿಗೂ ಅದರದರದೇ ಆದ ಮಹತ್ವ ಇದೆ, ಅವು ಪರಸ್ಪರ ಒಂದಕ್ಕೊಂದು ಪೂರಕ ಎನ್ನುತ್ತದೆ ಭಗವದ್ಗೀತೆ. ಇವುಗಳನ್ನು ಯಾವ ಮನೋವಿಕಾರಕ್ಕೂ ಒಳಪಡದೆ, ಯಾವ ಅತಿರೇಕತೆಗೂ ಒಳಗಾಗದೆ ಸಮಭಾವದಿಂದ ಗಮನಕ್ಕೆ ತಂದುಕೊಂಡು ಸೂಕ್ತವಾದ ಚಟುವಟಿಕೆಗಳನ್ನು ರೂಪಿಸಿಕೊಳ್ಳಬೇಕು; ಇದೇ ಇವುಗಳನ್ನು ದ್ವೈತಭಾವದಿಂದ ಗ್ರಹಿಸುವುದರಿಂದ ಉಂಟಾಗಬಹುದಾದ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯಲು ಇರುವ ಏಕೈಕ ಪರಿಹಾರೋಪಾಯ ಎಂದು ಗೀತೆ ಹೇಳುತ್ತದೆ.
ವ್ಯಾಪಕ ಆಯಾಮಗಳು–
ದೈಹಿಕ, ಪ್ರಾಪಂಚಿಕ, ಭೌತಿಕ, ಮಾನಸಿಕ, ವೈಯಕ್ತಿಕ, ಸಾಮುದಾಯಿಕ, ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಸ್ಥಿತಪ್ರಜ್ಞೆಯನ್ನು ಸಿದ್ಧಿಸಿಕೊಳ್ಳುವುದು ಮತ್ತು ಅದನ್ನು ರೂಢಿಗತ ಆಗಿಸಿಕೊಳ್ಳುವುದೇ ಮಾನವ ಹಕ್ಕಿನ ಪ್ರತಿಪಾದನೆಯ ಅತ್ಯಂತ ಗಮನಾರ್ಹವಾದ ಮಾರ್ಗ ಎಂಬ ಭಗವದ್ಗೀತೆಯ ನಿಲುವಿಗೆ ವ್ಯಾಪಕವಾದ ಆಯಾಮಗಳು ಇವೆ. ಈ ಆಯಾಮಗಳನ್ನು ಪರಮ ಶಾಂತಿ, ಪರಮ ಸಮಾನತೆ, ಪರಮ ಸ್ವಾತಂತ್ರ್ಯ, ಪರಮಗತಿ ಎಂದೆಲ್ಲಾ ಗೀತೆ ಗುರುತಿಸುತ್ತದೆ.
Leave a Reply