ಭಗವದ್ಗೀತೆಯ ಸಾರಸರ್ವಸ್ವ  ಭಾಗ-೪ 

ಭಗವದ್ಗೀತೆಯ ಸಾರಸರ್ವಸ್ವ  ಭಾಗ-೪
ಭಗವದ್ಗೀತೆ ಮತ್ತು ಅಹಿಂಸೆ–
ಅಹಿಂಸಾತ್ಮಕ ಬದುಕು–
ಯುದ್ಧ ಬೇಡ, ಯುದ್ಧದಿಂದ ಆಗಬಾರದ ಅನರ್ಥಗಳ ಸರಮಾಲೆಯೇ ಹುಟ್ಟಿಕೊಳ್ಳುತ್ತದೆ ಎನ್ನುವ ವಾದದಿಂದ ಆರಂಭ ಆಗುವ ಭಗವದ್ಗೀತೆಯು ವ್ಯವಸ್ಥಿತವಾದ ಶಾಂತಿಯುತವಾದ ಬದುಕಿಗೂ, ಯುದ್ಧ ರಹಿತ ರಾಜಕೀಯ ವ್ಯವಸ್ಥೆಗೂ ಇರುವ ಸಂಬಂಧವನ್ನು ಮುಂದಿಟ್ಟು ಪ್ರತ್ಯೇಕತಾ ಮನೋಭಾವಗಳಿಂದ ಉಂಟಾಗುವ ರಾಜಕೀಯ ಹಾಗೂ ವೈಯಕ್ತಿಕ ನೆಲೆಯ ಮಾನಸಿಕ ಯುದ್ಧಗಳಿಂದ ಪಾರಾಗಿ ವ್ಯಕ್ತಿಯೇ ಅಂತಿಮವಾಗಿ ಪರಮಶಾಂತಿ ಆಗಿಬಿಡುವ ಗುರಿಯನ್ನು ವೈಭವೀಕರಿಸುತ್ತದೆ. ಪರಮಶಾಂತಿ ಎಂಬುದು ಕೇವಲ ಯುದ್ಧದ ನಿರಾಕರಣೆ ಮತ್ತು ಇರುವ ವ್ಯವಸ್ಥೆಯ ಮುಂದುವರಿಯುವಿಕೆ ಇವುಗಳ ಮೂಲಕ ಸಾಧಿತವಾಗುವಂತಹುದಲ್ಲ ಎಂಬುದನ್ನು ಗಂಭೀರವಾಗಿ ವಿವರಿಸುತ್ತದೆ. ಅಹಿಂಸೆಯನ್ನು ಹಲವು ಮಜಲುಗಳಲ್ಲಿ ಗಮನಿಸುತ್ತದೆ.
ಅಹಿಂಸಾತ್ಮಕ ಪರಮ ವಾಸ್ತವತೆ–
ಭಗವದ್ಗೀತೆಗೆ ಶಾಂತಿ ಎನ್ನುವುದು ವ್ಯಕ್ತಿತ್ವದ ಹಾಗೂ ಇಡೀ ವಾಸ್ತವಿಕತೆಯ ಒಂದು ಸ್ವರೂಪ ಲಕ್ಷಣ. ಯಾವುದೇ ರೀತಿಯ ಪ್ರತ್ಯೇಕತೆಯನ್ನು ವ್ಯಕ್ತಿ ಭಾವಿಸಿದರೂ ಅದು ಅಶಾಂತಿಯ ರೂಪವೇ. ವಾಸ್ತವವಾಗಿ ಪ್ರತ್ಯೇಕತೆಗಳು ಪರಸ್ಪರ ಸಾಮರಸ್ಯತೆ, ಹೊಂದಾಣಿಕೆಯ ವ್ಯವಸ್ಥೆಗೆ ಒಳ ಪಟ್ಟಿರುವುದರಿಂದ ಹೊಂದಾಣಿಕೆ ಸಾಮರಸ್ಯತೆಗಳಿಗೆ ಭಂಗ ಬಾರದಂತೆ ನೋಡಿಕೊಂಡರೆ ನಮ್ಮ ಅನುಭವ ಶಾಂತಿಯ ಅನುಭವವೇ ಆಗಿರುತ್ತದೆ; ವೈಯಕ್ತಿಕ ನೆಲೆಯಲ್ಲಿ ಲಾಭ ಅಲಾಭ, ಸುಖ ದುಃಖ, ಜಯ ಅಪಜಯ ಇತ್ಯಾದಿ ಪ್ರತ್ಯೇಕತಾ ಮನೋಭಾವಗಳಿಂದ ವ್ಯಕ್ತಿ ಬಿಡುಗಡೆ ಪಡೆದರೆ ವೈಯಕ್ತಿಕ ಅನುಭವ ಆಗುವ ಶಾಂತಿಯು ಇಡೀ ವಾಸ್ತವಿಕತೆಯಲ್ಲಿ ಗಮನಕ್ಕೆ ಬರುವುದೆಲ್ಲದರ ಸ್ವರೂಪಾತ್ಮಕತೆಯೇ ಆಗಿದೆ ಎಂಬುದರ ಅರಿವು ಕ್ರಮಾಗತವಾಗಿ ಉಂಟಾಗುತ್ತದೆ. ಹೀಗೆ ಭಗವದ್ಗೀತೆ ಶಾಂತ, ಅಹಿಂಸಾತ್ಮಕ ವಾಸ್ತವಿಕತೆಯ ಪರಿಕಲ್ಪನೆಯನ್ನು ವಿವರಿಸುತ್ತದೆ.
ಅಹಿಂಸಾತ್ಮಕ ಮನಃಸ್ಥಿತಿ–
ಶಾಂತಿ ಎನ್ನುವುದು ಹೊರಗೆ ದೈಹಿಕವಾಗಿ ಶಸ್ತ್ರಾಸ್ತ್ರಗಳಿಂದ ಮಾಡುವ ಯುದ್ಧವನ್ನು ತಡೆಗಟ್ಟುವುದರಿಂದ ಉಂಟಾಗುವಂತಹುದಲ್ಲ; ಬದಲಿಗೆ ಮನಸ್ಸಿನ ಒಳಗೆ ನಡೆಯುವ ಯುದ್ಧದಿಂದ ಪಾರಾಗುವುದರಿಂದ ದೊರಕುವ ಸ್ಥಿತಿ; ದೈಹಿಕ ತುಡಿತ ಮಾನಸಿಕ ಒಲವುಗಳ ನಡುವಿನ ತಾಕಲಾಟ, ನಿಜ ವಾಸ್ತವತೆಯ ಬಗೆಗಿನ ನಿರ್ಲಕ್ಷ್ಯ, ತಾತ್ಕಾಲಿಕ ಸುಖ ಭೋಗಗಳ ಆಮಿಷಗಳಿಂದ ಉಂಟಾಗುವ ಒದ್ದಾಟ, ನಿರೀಕ್ಷೆಗಳು ಮತ್ತು ವಾಸ್ತವಿಕತೆಯ ಬಗೆಗಿನ ವಾಸ್ತವ ಅರಿವು ಇವುಗಳ ನಡುವೆ ನಡೆಯುವ ಯುದ್ಧವೇ ಮಾನಸಿಕ ಯುದ್ಧ; ಈ ರೀತಿಯ ಯುದ್ಧವನ್ನು ನಿವಾರಿಸುವುದರಿಂದ ಅಂತಿಮವಾಗಿ ಉಂಟಾಗುವುದು ವ್ಯಕ್ತಿತ್ವದ ಮೆಟ ಮಾರ್ಫಸಿಸ್, ಅಹಿಂಸಾತ್ಮಕ ಮನಃಸ್ಥಿತಿಯ ವ್ಯಕ್ತಿತ್ವ; ಇದೇ ಪರಮ ಶಾಂತಿ, ನಿತ್ಯ ಸತ್ಯ ಎಂದು ಭಗವದ್ಗೀತೆ ವಿವರಿಸುತ್ತದೆ.
ಅಮರತ್ವ–
ಅ) ಮುಖ್ಯ ಪ್ರಶ್ನೆಗಳು–
ಪಾಂಡವರು ಕೌರವರು ರಾಜ್ಯದ ಮೇಲಿನ ತಮ್ಮ ಹಕ್ಕುದಾರಿಕೆಯನ್ನು ಯುದ್ಧದಲ್ಲಿ ಉಂಟಾಗುವ ಸೋಲು ಗೆಲುವುಗಳ ಮೂಲಕ ನಿರ್ಧರಿಸಲು ಮುಂದಾಗಿದ್ದಾರೆ. ರಣರಂಗದಲ್ಲಿ ಪಾಂಡವರು ಕೌರವರು ತಂತಮ್ಮ ಸೈನ್ಯದ ಸಮೇತ ಪರಸ್ಪರ ಮುಖಾಮುಖಿಯಾಗಿದ್ದಾರೆ. ಅರ್ಜುನನಿಗೆ ತನ್ನ ಎದುರಾಳಿಗಳ ಬಲಾಬಲಗಳನ್ನು ನೇರವಾಗಿ ತಿಳಿಯುವ ಕುತೂಹಲ, ಉತ್ಸುಕತೆ. ಎರಡು ಸೈನ್ಯಗಳ ಮಧ್ಯೆ ರಥದಲ್ಲಿ ನಿಂತು ಕೌರವರನ್ನು ಅವರ ಜೊತೆಯಲ್ಲಿ ಇರುವವರನ್ನೂ ಒಬ್ಬೊಬ್ಬರನ್ನಾಗಿ ನೋಡುತ್ತಾ ಇದ್ದಾನೆ.
ಅವನಿಗೆ ಈಗ ಯಾರೂ ಶತ್ರುವಾಗಿಯೂ ಕಾಣುತ್ತಿಲ್ಲ, ಎದುರಾಳಿಯಾಗಿಯೂ ಕಾಣುತ್ತಿಲ್ಲ. ಬದಲಿಗೆ ಮನುಷ್ಯ ಮಾತ್ರದವರು ಹೊಂದುವ ರಕ್ತಸಂಬಂಧಿಗಳಾಗಿ, ಕುಲಬಾಂಧವರಾಗಿ, ಸ್ನೇಹಿತರು, ಪ್ರಿಯಜನರೇ ಮೊದಲಾದವರಾಗಿ ಕಾಣುತ್ತಿದ್ದಾರೆ. ಹೀಗೆ ಕಾಣುತ್ತಿದ್ದಾಗ ಅವನಿಗೆ ಯುದ್ಧದ ಅಡ್ಡ ಪರಿಣಾಮ ಎಂದು ಪ್ರಮುಖವಾಗಿ ತೋರಿದ್ದು ಸಾವು ಮತ್ತು ವೈಯಕ್ತಿಕ ಹಾಗೂ ಸಾಮುದಾಯಿಕ ಜೀವನದಲ್ಲಿ ಸಾವಿನ ಕಾರಣದಿಂದಾಗಿ ಉಂಟಾಗುವ ಘೋರ ಅವ್ಯವಸ್ಥೆ. ಅವನನ್ನು ಕಾಡಿದ ಎರಡು ಮುಖ್ಯ ಪ್ರಶ್ನೆಗಳು – ಎದುರಿಗೆ ಇರುವವರನ್ನು ಕೊಂದು ತಾನು ಸಾಧಿಸುವುದೇನು? ಅವರನ್ನು ಕೊಂದು ತಾನು ಬದುಕಿ ಉಳಿಯುವ ಅಗತ್ಯವೇನು?
ಕುರುಕ್ಷೇತ್ರದ ರಣರಂಗದಲ್ಲಿ ಅರ್ಜುನನಿಗೆ ಕಾಣುತ್ತಿರುವುದು ದುರ್ಯೋಧನನನ್ನೂ ಒಳಗೊಂಡಂತೆ ಎಲ್ಲಾ ಸೋದರರೂ ಮತ್ತು ಭೀಷ್ಮ, ದ್ರೋಣರನ್ನೂ ಒಳಗೊಂಡಂತೆ ಎಲ್ಲಾ ಆಚಾರ್ಯರೂ ಹಾಗೂ ಎಲ್ಲಾ ರೀತಿಯ ಬಂಧು – ಬಾಂಧವರೂ ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಯುದ್ಧಕ್ಕೆ ನಿಂತಿರುವುದು. ಇವರನ್ನೆಲ್ಲಾ ಎದುರಿಸಲು ನಿಂತಿದ್ದ ಅರ್ಜುನನಲ್ಲಿ ಸಾವಿಗೆ ಸಂಬಂಧಿಸಿದಂತೆ ವಾಸ್ತವಿಕವಾಗಿ ಮತ್ತು ಸಹಜವಾಗಿ ಇರುವ ಆತಂಕ, ಕಳವಳ, ಗಾಬರಿ, ಜಿಗುಪ್ಸೆ, ಭಯ, ದಿಗ್ಭ್ರಮೆ ಇತ್ಯಾದಿಗಳು ಬಗೆ ಬಗೆಯಾದ ಪ್ರಶ್ನಾವಳಿಗಳನ್ನು ಹುಟ್ಟಿಸಿವೆ.
ಈ ಹಿನ್ನೆಲೆಯಲ್ಲಿ ಭಗವದ್ಗೀತೆ ವ್ಯಕ್ತಿ ನೇರವಾಗಿ ಯುದ್ಧದಂತಹ ಸಂದರ್ಭದಲ್ಲಿ ಸಾವಿಗೆ ಮುಖಾಮುಖಿ ಆಗುವುದರ ಆಗುಹೋಗುಗಳನ್ನು ಪರಿಶೀಲಿಸುತ್ತದೆ, ವ್ಯಕ್ತಿಯ ಬದುಕು ಹೇಗೆ ಅಮರ ಆಗಬಲ್ಲುದು ಎಂಬುದನ್ನು ವಿವರಿಸುತ್ತದೆ. ಅಮರವಾಗುವ ಬದುಕಿನ ಚಿತ್ರವನ್ನು ಕಣ್ಮುಂದೆ ನಿಲ್ಲಿಸುತ್ತದೆ.
ಆ) ನಿರಪೇಕ್ಷ ಕ್ರಿಯಾಶೀಲ ವಾಸ್ತವಿಕತೆ–
ಸಾವಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ಭಗವದ್ಗೀತೆಯು ವಾಸ್ತವಿಕತೆಯು ವೈಯಕ್ತಿಕ ಮತ್ತು ಸಾರ್ವತ್ರಿಕ ಗುಣ, ಸ್ವರೂಪ, ಸ್ವಭಾವಗಳೆರಡನ್ನೂ ಹೊಂದಿರುವುದನ್ನು ಗಮನಿಸುತ್ತದೆ. ಅವೆರೆಡರ ನಡುವಿನ ಸಂಬಂಧವನ್ನು ಪರಿಶೀಲಿಸುತ್ತದೆ. ವೈಯಕ್ತಿಕತೆಯ ಮುಖ್ಯ ಲಕ್ಷಣವು ಕರ್ತೃತ್ವವಾದರೆ ಸಾರ್ವತ್ರಿಕತೆಯ ಮುಖ್ಯ ಲಕ್ಷಣವು ಜಟಿಲತೆ, ನಿನ್ನೆ ಇಂದು ನಾಳೆಗಳನ್ನು ಒಳಗೊಳ್ಳುವ ಜಾಲರೂಪಿ ವ್ಯವಸ್ಥೆ ಎನ್ನುತ್ತದೆ. ವೈಯಕ್ತಿಕ ವಿಚಾರ ಭಾವನೆ ಕ್ರಿಯೆಗಳು ಲಾಭ ನಷ್ಟ, ಸುಖ ದುಃಖ ಇತ್ಯಾದಿ ವ್ಯಾವಹಾರಿಕ, ದೈಹಿಕ, ಮಾನಸಿಕ ನಿಲುವುಗಳ ತಕ್ಕಡಿಯಲ್ಲಿ ತೂಗುವಂತಹವು. ಸಾರ್ವತ್ರಿಕತೆಯಾದರೋ ಸಾಕ್ಷಿಪ್ರಜ್ಞೆ, ಕರ್ತವ್ಯಪರತೆ, ನಿರಪೇಕ್ಷತೆಗಳನ್ನು ಒಳಗೊಳ್ಳುವಂತಹುದು. ಹೀಗೆ ವೈಯಕ್ತಿಕತೆ ಮತ್ತು ಸಾರ್ವತ್ರಿಕತೆಗಳ ನಡುವೆ ಅಂತರ ಇದ್ದರೂ ವಾಸ್ತವಿಕತೆಯ ವೈಯಕ್ತಿಕ ಮತ್ತು ಸಾರ್ವತ್ರಿಕ ಮುಖಗಳೆರಡಕ್ಕೂ ಸಾಮಾನ್ಯವಾದ ಅಂಶವಿದೆ. ಅದೇ ಚಲನಶೀಲತೆ. ಒಟ್ಟಾರೆ ವಾಸ್ತವಿಕತೆಯ ನಿಯಮಬದ್ಧತೆಯಲ್ಲಿ ಅಡಕಗೊಳ್ಳುವ ಚಲನಶೀಲತೆಯು ಕಾರಣಾತ್ಮಕ ಪ್ರಕ್ರಿಯೆ ಮತ್ತು ವೈವಿಧ್ಯತೆಗಳೆರಡನ್ನೂ ಒಳಗೊಳ್ಳುವುದರಿಂದ ಸಾರ್ವತ್ರಿಕತೆಯನ್ನು ವೈಯಕ್ತಿಕತೆಯಿಂದ ಪ್ರತ್ಯೇಕಿಸಲು ಬರುವುದಿಲ್ಲ ಎಂದೆನ್ನುತ್ತದೆ ಭಗವದ್ಗೀತೆ.
ನಿರಂತರವಾದ ಕ್ರಿಯಾಶೀಲತೆಯುಳ್ಳ ಅಥವಾ ಸದಾ ಮುಂದುವರೆಯುತ್ತಾ ಇರುವ ವಾಸ್ತವಿಕತೆಯು ನಿರಪೇಕ್ಷವಾದದ್ದು, ಸಾಕ್ಷಿ–ಪ್ರಜ್ಞೆಯುಳ್ಳದ್ದು, ಈ ಕ್ರಿಯಾಶೀಲತೆ ಅಥವಾ ಮುಂದುವರಿಯುವಿಕೆಯಲ್ಲಿ ಇಂದು ಎಂಬುದು ನಿನ್ನೆಯದು ಆಗುತ್ತದೆ, ನಾಳೆ ಎಂಬುದು ಇಂದಿನದು ಆಗಿಬಿಡುತ್ತದೆ. ಹೀಗಾಗಿ ನಾವು ಹಿಂದೆ ಇರಲಿಲ್ಲ, ಮುಂದೆ ಇರುವುದಿಲ್ಲ ಎಂದೆನ್ನಲೂ ಆಗುವುದಿಲ್ಲ. ಅಸ್ತಿತ್ವರಹಿತತೆ ಎಂಬರ್ಥದಲ್ಲಿ ಸಾವು ಇದೆ ಎನ್ನಲೂ ಆಗುವುದಿಲ್ಲ. ವ್ಯಕ್ತಿಯ ಹಾಗೂ ಎಲ್ಲ ಜೀವ ಅಜೀವಗಳ ಪ್ರತಿಯೊಂದು ಕ್ರಿಯೆಯೂ ವಾಸ್ತವಿಕತೆಯ ಸ್ವರೂಪದಲ್ಲಿ ದಾಖಲಾಗುವಂತಹುದೇ ಆಗಿರುತ್ತದೆ. ಈ ಅರ್ಥದಲ್ಲೂ ಸಾವು ಎಂಬುದು ಇಲ್ಲವೇ ಇಲ್ಲ. ಇರುವುದು ಕೇವಲ ನಿರಂತರವಾಗಿ ನಡೆಯುವ ಕ್ರಿಯೆ ಅಥವಾ ಕರ್ಮ ಎಂದು ಭಗವದ್ಗೀತೆಯು ಸಾವನ್ನು ಅರ್ಥ ಮಾಡಿಕೊಳ್ಳಬೇಕಾದ ರೀತಿಯನ್ನು ವಿವರಿಸುತ್ತದೆ.
ಇ) ಸಾಯುವ, ಸಾಯಿಸುವ ಸಂದರ್ಭ–
ಸಾಯುವ ಮತ್ತು ಸಾಯಿಸುವ ಸಂದರ್ಭಗಳೆರೆಡರಲ್ಲೂ ಕರ್ತೃತ್ವವು ಪ್ರಧಾನ. ವಾಸ್ತವಿಕತೆಯು ಬೃಹತ್ಜಾಲವಾಗಿರುವುದರಿಂದ ಯಾವನಾದರೊಬ್ಬ ತನ್ನನ್ನು ಪ್ರತ್ಯೇಕವಾಗಿ ಕರ್ತೃ ಎಂದು ಪ್ರತಿಷ್ಠಾಪಿಸಿಕೊಂಡರೆ ಅದಕ್ಕೆ ಯಾವ ಅರ್ಥವೂ ಇರುವುದಿಲ್ಲ. ಹಾಗೆ ಪ್ರತಿಷ್ಠಾಪಿಸಿಕೊಳ್ಳುವುದು ತಿಳುವಳಿಕೆಯ ಮಿತಿ ಅಥವಾ ತಪ್ಪುಗ್ರಹಿಕೆ ಅಷ್ಟೆ. ಕರ್ತೃತ್ವದ ಕಲ್ಪನೆಯನ್ನು ಬದಿಗಿರಿಸಿದರೆ ನಾನು ಸಾಯುವವನು ಅಥವಾ ಸಾಯಿಸುವವನು ಎಂಬುದೂ ಬದಿಗೆ ಸರಿಯುತ್ತದೆ ಎನ್ನುತ್ತದೆ ಗೀತೆ.
ಸಾಯುವ ಮತ್ತು ಸಾಯಿಸುವ ಸಂದರ್ಭಗಳೆರೆಡರಲ್ಲೂ ಪ್ರಧಾನವಾಗುವ ಇನ್ನೊಂದು ಅಂಶವು ವೈಯಕ್ತಿಕ ಅಥವಾ ಪ್ರತ್ಯೇಕವಾದ ಅಸ್ತಿತ್ವ. ವಾಸ್ತವಿಕತೆಯು ವೈಯಕ್ತಿಕ ಅಥವಾ ಪ್ರತ್ಯೇಕವಾದ ಅಸ್ತಿತ್ವವುಳ್ಳ ಜೀವ ಅಜೀವಗಳ ಅಪಾರ ವೈವಿಧ್ಯತೆಗಳನ್ನು ನಿನ್ನೆ ಇಂದು ನಾಳೆಗಳಲ್ಲಿ ಮತ್ತು ಕಾರ್ಯಕಾರಣ ಬದ್ಧತೆಯಲ್ಲಿ ಪರಸ್ಪರ ಬೆಸೆದಿರುವ ಸಂಕೀರ್ಣಜಾಲ. ವಾಸ್ತವಿಕತೆಯು ಒಳಗೊಳ್ಳುವ ಪ್ರಕ್ರಿಯೆಗಳು ಚಲನಶೀಲವಾಗಿರುವುದರಿಂದ ಶ್ರೇಣ್ಯಾತ್ಮಕವಾಗಿ ಕಾರ್ಯ ಕಾರಣಗಳು ವಿಪರ್ಯಯಗೊಳ್ಳುತ್ತವೆ. ಹೀಗಿರುವಾಗ ಯಾವುದು ಯಾವುದಕ್ಕೆ ಕರ್ತೃ ಎಂಬುದನ್ನಾಗಲೀ, ಯಾವುದರಿಂದ ಯಾವುದು ಅತ್ಯಾವಶ್ಯಕವಾಗಿ, ಅನಿವಾರ್ಯವಾಗಿ ಉಂಟಾಯಿತು ಎಂಬುದನ್ನಾಗಲೀ, ಯಾವುದು ಯಾವುದರಿಂದ ಭಿನ್ನ, ಯಾವುದಕ್ಕಿಂತ ವಿಶಿಷ್ಟ ಎಂಬುದನ್ನಾಗಲೀ ಹೇಗೆ ಹೇಳಲು ಸಾಧ್ಯ? ಕತೃತ್ವವನ್ನೇ ನಿರ್ಧರಿಸಲು ಸಾಧ್ಯವಿಲ್ಲದಿದ್ದಾಗ ಸಾಯುವವನು ಯಾರು, ಸಾಯಿಸುವವನು ಯಾರು? ಎಂದು ಗೀತೆ ಪ್ರಶ್ನಿಸುತ್ತದೆ.
ಈ) ಸಾವು ಪ್ರಾಕೃತಿಕ ನಿಯಮ–
ಸಾರ್ವತ್ರಿಕತೆಯಿಂದ ಸ್ವತಂತ್ರವಾದ ಯಾರ ಅಥವಾ ಯಾವುದರ ವೈಯಕ್ತಿಕತೆ, ಪ್ರತ್ಯೇಕತೆಯನ್ನೂ ಪ್ರತ್ಯೇಕವಾಗಿ ಪ್ರಸ್ತಾಪಿಸಲು ಆಗುವುದಿಲ್ಲ. ಆದ್ದರಿಂದ ವೈಯಕ್ತಿಕತೆ ಅಥವಾ ಪ್ರತ್ಯೇಕತೆಯ ಪರಿಕಲ್ಪನೆಯನ್ನೇ ಬದಿಗಿಡಬೇಕು ಎನ್ನುತ್ತದೆ ಭಗವದ್ಗೀತೆ. ಹೀಗೆ ಬದಿಗಿರಿಸಿದ ಮಾತ್ರಕ್ಕೆ ಸಾವು ಎಂಬುದು ಇರುವುದಿಲ್ಲವೆ ಎಂಬ ಪ್ರಶ್ನೆಗೆ ಸಾವು ಇದ್ದೇ ಇರುತ್ತದೆ; ಅದು ಪ್ರಕೃತಿ ನಿಯಮ. ನಾವು ತಿಳಿದ ಹಾಗೆ ಈ ನಿಯಮವು ಮನುಷ್ಯರಿಗೆ ಮಾತ್ರ ಅನ್ವಯ ಆಗಿರುವಂತಹುದು ಆಗಿರದೆ ಜೀವ ಅಜೀವ ವರ್ಗಗಳೆರಡಕ್ಕೂ ಅನ್ವಯವಾಗುವಂತಹುದು. ಇದನ್ನು ತಿಳಿದಾಗ ನಾನು ಮಾತ್ರ ಸಾಯುವವನು ಎಂಬ ಆತಂಕ, ಗಾಬರಿ ಇತ್ಯಾದಿಗಳಿಗೆ ಜಾಗವೇ ಇರುವುದಿಲ್ಲ. ಹಾಗೆಯೇ ನಾನು ಸಾಯಿಸುವವನು ಎಂಬ ಪ್ರತಿಷ್ಠೆ, ಅಹಂಕಾರ ಮುಂತಾದವುಗಳ ವಿಜೃಂಭಣೆ, ಅಟಾಟೋಪ, ಅಬ್ಬರ, ಕೂಗಾಟ, ಸೆಣಸಾಟಗಳಿಗೂ ಜಾಗ ಇರುವುದಿಲ್ಲ. ಬದಲಿಗೆ ಸಾವು ಸಹಜ ಸಂಗತಿ ಆಗಿಬಿಡುತ್ತದೆ; ಪ್ರತ್ಯೇಕ ಮಹತ್ವ ಕೊಡುವ ಸಂಗತಿಯಾಗುವುದೇ ಇಲ್ಲ ಎಂದು ಭಗವದ್ಗೀತೆಯು ಉತ್ತರಿಸುತ್ತದೆ.
ಉ) ಸಾವು ಮೌಲ್ಯರಹಿತವೇ?
ಹಾಗಾದರೆ ಸಾವಿಗೆ ಬೆಲೆಯೇ ಇಲ್ಲವೆ? ದೇಶದ ರಕ್ಷಣೆಗೆಂದೋ, ಕಳ್ಳಕಾಕರನ್ನು ಹಣಿಯಲು ಎಂದೋ, ನೀರು ಬೆಂಕಿ ಅಥವಾ ಇನ್ನಾವುದೇ ನೈಸರ್ಗಿಕ ಆಪತ್ತಿಗೆ ಸಿಲುಕಿದವರನ್ನು ಕಾಪಾಡಲು ಎಂದೋ, ಪರಂಪರೆ ಧರ್ಮ ಆದರ್ಶ ಇತ್ಯಾದಿಗಳ ಉಳಿವಿಗಾಗಿ, ಬೆಳವಣಿಗೆಗಾಗಿ ಎಂದೋ ಸಾಯುವುದು ಧೀರೋದಾತ್ತವಾದದ್ದು ಅಲ್ಲವೆ? ಅದೇ ರೀತಿ ಸೂಕ್ತ ಆಧಾರ, ಕಾರಣವೇ ಇಲ್ಲದೆ ಒಬ್ಬ ಇನ್ನೊಬ್ಬನ\ರ ಕೊಲೆ ಮಾಡುವುದನ್ನು ತಡೆಯುವುದಕ್ಕಾಗಿ ಸಾಯುವುದು ಯೋಗ್ಯವಾದದ್ದು ಅಲ್ಲವೆ? ಇದ್ದಷ್ಟು ದಿನವೂ ಈ ವ್ಯಕ್ತಿ ತುಂಬು ಬದುಕನ್ನು ನಡೆಸಲಿ ಎಂದು ಸುತ್ತಲಿನವರು ಆಶಿಸುವಂತೆ ಬದುಕಿದವನ ಸಾವು ಮೌಲ್ಯಯುತವಾದದ್ದು ಅಲ್ಲವೆ? ಈ ಪ್ರಶ್ನೆಗಳನ್ನೂ ಭಗವದ್ಗೀತೆಯು ಪರಿಶೀಲಿಸುತ್ತದೆ.
ಉದಾತ್ತ ಸಾವಿನ ಪರಿಕಲ್ಪನೆಯು ಒಬ್ಬನ ನಡೆವಳಿಕೆಯನ್ನು ವ್ಯಾವಹಾರಿಕ ಲಾಭ ನಷ್ಟ, ಸುಖ ದುಃಖಗಳ ಅಳತೆಗೋಲುಗಳ ವಿಮರ್ಶೆಗೆ ಒಳಪಡಿಸುವುದನ್ನು ಒಳಗೊಳ್ಳುತ್ತದೆ; ಉದಾತ್ತ ಸಾವು ಒಬ್ಬನದು ಎನ್ನುವಾಗ ಸತ್ತವನು ತನ್ನ ವ್ಯಾವಹಾರಿಕ ಲಾಭ, ವೈಯಕ್ತಿಕ ಸುಖಗಳನ್ನು ಭಾವಿಸಲಿಲ್ಲ ಎಂಬ ಮೌಲ್ಯನಿರ್ಣಯವನ್ನು ಒಳಗೊಳ್ಳುತ್ತದೆ. ಆದರೆ ವಾಸ್ತವಿಕತೆಯು ಇಂಥ ಮೌಲ್ಯಮಾಪನಕ್ಕೆ ಒಳಗಾಗುವಂತಹುದು ಅಲ್ಲ. ವಾಸ್ತವಿಕತೆಯು ಒಳಗೊಳ್ಳುವ ಪ್ರತಿಯೊಂದು ಜೀವ ಅಜೀವವು ತಂತಮ್ಮ ಗುಣ ಸ್ವಭಾವಗಳಿಗನುಗುಣವಾಗಿ ವರ್ತಿಸುತ್ತದೆ; ಅಲ್ಲಿ ಉದಾತ್ತವಾದದ್ದು ಅಥವಾ ಉದಾತ್ತವಲ್ಲದ್ದು ಎಂಬ ಸಾವಿನ ಪರಿಕಲ್ಪನೆಗೆ ಅರ್ಥವೇ ಇರುವುದಿಲ್ಲ ಎಂದೆನ್ನುತ್ತದೆ ಗೀತೆ.
ಊ) ಪೀಡಕ ಬದುಕಲು ಅರ್ಹನೆ?
ಹಾಗಾದರೆ ಸ್ವಾರ್ಥಿಗಳಾಗಿ, ಹಿಂಸಾಚಾರಿಗಳಾಗಿ, ದುರಾಶಾ ಪೀಡಿತರಾಗಿ, ಸರ್ವಾಧಿಕಾರಿಯೋ ಮತ್ತೇನೋ ಅಂತಹುದೇ ಪೀಡಕರಾಗಿ ಬದುಕುವುದರಲ್ಲಿ ಯಾವ ದೋಷವೂ ಇಲ್ಲವೆ? ಆ ರೀತಿಯ ವ್ಯಕ್ತಿತ್ವವನ್ನು ಬುದ್ಧಿಪೂರ್ವಕವಾಗಿ ತಿರಸ್ಕರಿಸಬೇಕಾಗಿಲ್ಲವೆ? ಎಂಬ ಪ್ರಶ್ನೆಗಳಿಗೆ ಅಫರ್ಮಿಟಿವ್ ಆಗಿಯೇ ಗೀತೆ ಉತ್ತರಿಸುತ್ತದೆ. ಆದರೆ ಕರ್ತೃತ್ವವನ್ನು, ವ್ಯಕ್ತಿ ವಿಶಿಷ್ಟತೆಯನ್ನು, ಅಹಂಕಾರ ಸ್ವಪ್ರತಿಷ್ಠೆ ಎನ್ನುವುದನ್ನು ಮುಂದುಮಾಡಿ ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಂಡರೆ ಅದು ಶರತ್ತುಬದ್ಧ ಉತ್ತರ ಆಗಿರುತ್ತದೆ, ಯಾರನ್ನೋ ಬಲಿಪಶು ಮಾಡುವ ಹುನ್ನಾರದಂತಹುದು ಏನೋ ಒಂದು ಇರುತ್ತದೆ. ಇಂಥ ಉತ್ತರ ಸಹಜವಾಗಿ ಅರ್ಥಪೂರ್ಣವಾದದ್ದೇನೂ ಆಗಿರುವುದಿಲ್ಲ; ಆ ಉತ್ತರದೊಂದಿಗೆ ಇರುವ ನಾನು ಸಾಯಿಸುವವನು, ನೀನು ಸಾಯುವವನು ಎಂಬ ನಿರ್ಣಯವೂ ಅರ್ಥಪೂರ್ಣವಾದದ್ದು ಆಗಿರುವುದಿಲ್ಲ ಎಂದು ಗೀತೆಯು ಸ್ಪಷ್ಟವಾಗಿ ಸಾರುತ್ತದೆ.
ಎ) ಸಾವು ಇರುವಿಕೆಯ ರೂಪಾಂತರ–
ಹಾಗಾದರೆ ಅನುಭವಕ್ಕೆ ಬರುವ ಸಾವು ಎಂಬುದು ಏನು ಎಂಬ ಪ್ರಶ್ನೆಗೆ ಇರುವಿಕೆಯ ರೂಪಾಂತರ ಎಂದು ಗೀತೆ ಉತ್ತರಿಸುತ್ತದೆ. ಅನುಭವಾತ್ಮಕವಾದ ಬದುಕು, ಸಾವುಗಳೆರಡೂ ನಿರ್ದಿಷ್ಟವಾದದ್ದು. ಬದುಕು ಎಂಬುದು ಏನು ಎಂದರೆ ನಿರ್ದಿಷ್ಟ ಅವಧಿಯಲ್ಲಿ ಇರುವಿಕೆಯ ರೂಪವೊಂದು ಕಾಣಿಸಿಕೊಳ್ಳುವುದು ಮತ್ತು ಸಾವು ಎಂದರೆ ಆ ಇರುವಿಕೆಯ ರೀತಿಯು ಕೊನೆಗೊಳ್ಳುವುದು. ಇದೇ ಜನನ, ಮರಣ; ಈ ಅರ್ಥದಲ್ಲಿ ಹುಟ್ಟುವುದಕ್ಕೆ ಮುಂಚೆ ನಾವು ಏನಾಗಿದ್ದೆವೋ ನಮಗೆ ಗೊತ್ತಿಲ್ಲ. ಹಾಗೆಯೇ ಸತ್ತನಂತರ ಏನಾಗುತ್ತೇವೆಯೋ ಅದೂ ಗೊತ್ತಿಲ್ಲ. ಗೊತ್ತಿರುವುದು ಹುಟ್ಟು ಸಾವುಗಳ ನಡುವಿನ ಅವಧಿಯಲ್ಲಿ ನಾವು ನಿರಂತರವಾಗಿ ಮಾಡುವ ಕ್ರಿಯೆ, ಕರ್ಮ; ಆ ಕ್ರಿಯೆ, ಕರ್ಮಕ್ಕೆ ಅನುಗುಣವಾಗಿ ಫಲ ಇದೆ ಎಂಬುದು. ನಮಗೆ ನಾವೇ ದೈಹಿಕ ಮಾನಸಿಕ ತಡೆಗೋಡೆಗಳನ್ನು ನಿರ್ಮಿಸಿಕೊಳ್ಳದಿರುವ ಹಾಗೆ ನಮ್ಮ ಕರ್ಮ ಮತ್ತು ಕರ್ಮದ ಉದ್ದೇಶ ಇದ್ದರೆ ಹುಟ್ಟು ಸಾವುಗಳ ನಡುವಿನ ಅವಧಿಯಲ್ಲಿ ನಾವು ನಮ್ಮನ್ನು ತೊಡಗಿಸಿಕೊಂಡ ರೀತಿಯ (ಕರ್ಮದ) ಫಲವು ಉಚಿತ ಕರ್ಮ, ಕ್ರಿಯೆಗಳೇ ಆಗಿರುತ್ತವೆ; ಅವು ಸಾವಿನ ಬಗೆಗಿನ ನಿರ್ಲಿಪ್ತತೆಯ ಸೂಚಕವೇ ಆಗಿರುತ್ತವೆ.
ಏ) ಸಾವು, ಬದುಕು ಅಧೃವ ವಿರೋಧಿಗಳು–
ನಿರ್ದಿಷ್ಟ ಕಾಲದ ಅವಧಿಯಲ್ಲಿಯ ನಿರ್ದಿಷ್ಟ ರೂಪದಲ್ಲಿಯ ಅಸ್ತಿತ್ವಕ್ಕೆ ಸಾವು ಅನಿವಾರ್ಯ, ಸಹಜ. ಅನುಭವಕ್ಕೆ ಬರುವ ಈ ಸಾವು ನಿರ್ದಿಷ್ಟರೂಪ ಕೊನೆಗೊಳ್ಳವುದಕ್ಕೆ ಮಾತ್ರ ಸಂಬಂಧಿಸಿದುದು. ಸಾವು ಬದುಕಿನ ಎಲ್ಲಾ ಅರ್ಥವಂತಿಕೆಗಳಿಗೆ ಮುಕ್ತಾಯ ಹಾಡುವಂತಹುದು ಅಲ್ಲ. ಅದು ಬದುಕಿಗೆ ಧೃವವಿರೋಧಿಯೂ ಅಲ್ಲ. ಅಂತಿಮವಾಗಿ ಸಾವು ಎಂಬುದು ಇಲ್ಲವೇ ಇಲ್ಲ. ಇರುವುದು ಬದುಕೇ. ಬದುಕುವುದರಲ್ಲಿ ಪ್ರತಿಯೊಬ್ಬನ ಪ್ರತಿಯೊಂದು ಕ್ರಿಯೆಯೂ ದಾಖಲಾಗುತ್ತದೆ. ಹೀಗೆ ದಾಖಲಾದದ್ದ್ದು ಒಟ್ಟಾರೆ ವಾಸ್ತವಿಕತೆಯ ಮೇಲೆ ತನ್ನ ಮುದ್ರೆಯನ್ನು ಒತ್ತುತ್ತದೆ. ಹೀಗೆ ಒತ್ತಿದ ಮುದ್ರೆಯು ಯಾಂತ್ರಿಕ ನಿಯಮಗಳು ಕಾರ್ಯಪ್ರವೃತ್ತ ಆಗುವ ರೀತಿಯನ್ನು ನಿರ್ಧರಿಸುತ್ತದೆ ಎಂದೆನ್ನುತ್ತದೆ ಭಗವದ್ಗೀತೆ.
ಐ) ಕಾರ್ಯಪ್ರವೃತ್ತ ಸಮಚಿತ್ತ–
ಸಾವು ಘಟಿಸುತ್ತದೆಯಲ್ಲ ಎಂದು ಚಿಂತಾಕ್ರಾಂತರಾಗುವುದರ ಬದಲಿಗೆ ಪ್ರತಿಯೊಬ್ಬನೂ ತಾನು ತನ್ನ ಸಂದರ್ಭದಲ್ಲಿ ಅತ್ಯಾವಶ್ಯಕವಾಗಿ ಮಾಡಬೇಕಾದದ್ದು ಏನು ಎಂಬುದನ್ನು ವಿವೇಚಿಸಬೇಕು. ಅಂಥ ವಿವೇಚನೆಗೆ ಬೇಕಾದದ್ದು ತಾನೇನು ಮಾಡಬಲ್ಲೆ ಎಂಬ ತಿಳುವಳಿಕೆ ಮತ್ತು ಆ ತಿಳುವಳಿಕೆಯ ಕ್ಷೇತ್ರದ ಬಗೆಗಿನ ಸಾಧ್ಯವಾದಷ್ಟೂ ವಿಸ್ತಾರವಾದ, ಸೂಕ್ಷ್ಮವಾದ, ವೈವಿಧ್ಯಮಯವಾದ ತಿಳುವಳಿಕೆ; ಹಾಗೂ ವಿಷಯವು ತಾನು ತಿಳಿದುದಕ್ಕಿಂತ ಹೆಚ್ಚು ವಿಸ್ತಾರ, ಸೂಕ್ಷ್ಮ, ವಿವಿಧ ಆಗಿರಬಹುದು ಎಂಬ ಜಾಗೃತಿ ಮತ್ತು ಸಮಚಿತ್ತತೆ ಎನ್ನುತ್ತದೆ ಗೀತೆ.
Leave a Reply