ಎಲ್ಲ ಕುಲಗಳಲ್ಲೂ ಮಹಾಸ್ತ್ರೀಪುರುಷರು

ಎಲ್ಲ ಕುಲಗಳಲ್ಲೂ ಮಹಾಸ್ತ್ರೀಪುರುಷರು

ವರ್ಣವ್ಯವಸ್ಥೆಯ ಆಶ್ರಯದಲ್ಲಿ ಎಲ್ಲ ಕುಲವೃತ್ತಿಯವರೂ ಲೌಕಿಕವಾಗಿಯೂ ಪಾರಮಾರ್ಥಿಕವಾಗಿಯೂ ವಿಕಾಸವಾಗುತ್ತಲೇ ಇದ್ದರು ಎನ್ನುವುದಕ್ಕೆ ಉದಾಹರಣೆಗಳನ್ನು ನೋಡುತ್ತಿದ್ದೆವು. 15ನೇ ಶತಮಾನದಲ್ಲಿ ಪ್ರಯಾಗದಲ್ಲಿದ್ದ ಬ್ರಾಹ್ಮಣ ಸಂತ ರಾಮಾನಂದರ ಶಿಷ್ಯರಲ್ಲಿ ‘ಪಿಪ’ ಎಂಬ ಹೆಸರಿನ ರಾಜಕುಮಾರ, ಮುಸಲ್ಮಾನನಾದ ಕಬೀರ, ಚಪ್ಪಲಿ ಹೊಲಿಯುವ ರಾಯದಾಸ, ಕ್ಷೌರಿಕನಾದ ಸೇಬ, ಜಾಟ್ ಕುಲದ ಧನ್ನ, ವ್ಯಾಧನಾದ ಸಧನ, ಅಕ್ಕಸಾಲಿಗನಾದ ನರಹರಿಯೂ ಇದ್ದರು. ರಾಯದಾಸ ಮುಂದೆ ರಜಪೂತ ರಾಣಿ ಮೀರಾಬಾಯಿಗೆ ಮಂತ್ರದೀಕ್ಷೆಯನ್ನಿತ್ತ ಗುರು. ದಾದು ದಯಾಲ್, ಮಲೂಕದಾಸ್, ಸುಂದರದಾಸ, ಧರಣಿದಾಸ ಮುಂತಾದವರು ಬೇರೆಬೇರೆ ವೃತ್ತಿಗಳಿಂದ ಅಧ್ಯಾತ್ಮದೆತ್ತರಕ್ಕೇರಿದವರು. ಬಂಗಾಳದ ಸಂತ ಕುಬೇರ್ ಸರ್ಕಾರ್ ಗೊಲ್ಲನಾಗಿದ್ದ, ಸಂತ ನಿಸರ್ಗದತ್ತ ಮಹಾರಾಜರು ಕುನ್ಬೀ ಕುಲದವರು (ಉಳುವವರು). ಕಾಯಸ್ಥಕುಲದ ನರೇಂದ್ರನಿಗೆ ದೀಕ್ಷೆಯಿತ್ತ ‘ಸ್ವಾಮಿ ವಿವೇಕಾನಂದ’ರನ್ನಾಗಿ ಮಾಡಿದ ಗುರುವು ಬ್ರಾಹ್ಮಣ ಕುಲದ ರಾಮಕೃಷ್ಣ ಪರಮಹಂಸರು. ಸಂತ ತ್ಯಾಗರಾಜರು ಒಮ್ಮೆ ಮಾರನ್ ಎಂಬ ಮೀನುಗಾರನ ಅಮೋಘ ಗಾನ ಪ್ರತಿಭೆಗೆ ಮೆಚ್ಚಿ ಆನಂದಪರವಶರಾಗಿ ‘ಎಂದರೋ ಮಹಾನುಭಾವುಲು ಅಂದರಿಕೀ ವಂದನಮುಲು’ ಎಂಬ ಅಮರ ಕೃತಿಯನ್ನೇ ರಚಿಸಿದರು ಎನ್ನಲಾಗುತ್ತದೆ. ಸಂಗೀತ-ನೃತ್ಯ- ರಂಗಭೂಮಿ-ಕಲೆಗಳನ್ನು ಉಳಿಸಿ ಬೆಳೆಸಿ ತಂದವರಲ್ಲಿ ಅಗ್ರಮಾನ್ಯರು ದೇವದಾಸಿಯರ ವಂಶದವರೇ.

ಕೋಲ್ಕತದಲ್ಲಿ ಬಾವುಲರ ಕುಟುಂಬದಲ್ಲಿ ಜನಿಸಿದ ಆನಂದಮಯೀ ಮಾ, ಅಸಾಧಾರಣ ಆಧ್ಯಾತ್ಮಿಕ ಉನ್ನತಿಯನ್ನು ಪಡೆದ ಸಂತಸ್ತ್ರೀ. ಮನೆಯಾಳಾಗಿದ್ದ ಬಿಹಾರದ ರಕ್ತುರಾಮ, ರಾಮಕೃಷ್ಣ ಪರಮಹಂಸರ ಮಾರ್ಗದರ್ಶನದಲ್ಲಿ ಅರಳಿದ ಮಹಾನ್ ಸಂತ ಅದ್ಭುತಾನಂದರು. ಇವರು ಕಠಿಣತಮ ಸಾಧನೆಗಳ ಮೂಲಕ ನಿದ್ರೆಯನ್ನೇ ಸಂಪೂರ್ಣವಾಗಿ ಗೆದ್ದವರು! ಇವರ ಲೋಕೋತ್ತರ ಗುಣಗಳನ್ನು ಕಂಡು ಇವರಿಗೆ ಅದ್ಭುತಾನಂದ ಎಂಬ ಹೆಸರನ್ನಿಟ್ಟವರು ಸಾಕ್ಷಾತ್ ಸ್ವಾಮಿ ವಿವೇಕಾನಂದರು! ಆಂಧ್ರದ ನೇಯ್ಗೆಯವರ ವಂಶದಲ್ಲಿ ಹುಟ್ಟಿದವರು ಶಿವಬಾಲಯೋಗಿಯಾಗಿ ಅರಳಿದ ಪ್ರಸಿದ್ಧ ಸಂತ.

ದಾಸವರೇಣ್ಯ ಪುರಂದರದಾಸರು ವೃತ್ತಿಯಲ್ಲಿ ವಜ್ರದ ವ್ಯಾಪಾರಿಯಾಗಿದ್ದವರು. ಕುರುಬ ಕುಲದಲ್ಲಿ ಹುಟ್ಟಿ ಅಪ್ರತಿಮ ನಾಯಕತ್ವ, ಕ್ಷಾತ್ರತೇಜಸ್ಸುಗಳನ್ನು ಮೆರೆದು ಆ ಬಳಿಕ ವಿರಕ್ತಿಯನ್ನು ಹೊಂದಿ ದಾಸಶ್ರೇಷ್ಠರಾದವರು ಕನಕದಾಸರು. ಶೂನ್ಯಸಿಂಹಾಸನವನ್ನಲಂಕರಿಸಿದ ಅದ್ವಿತೀಯ ಯೋಗಿ ಅಲ್ಲಮಪ್ರಭುಗಳು ದೇಗುಲದಲ್ಲಿ ಮದ್ದಲೆ ನುಡಿಸುವ ವೃತ್ತಿಯಲ್ಲಿದ್ದವರು. ಬ್ರಾಹ್ಮಣನಾಗಿ ಹುಟ್ಟಿಯೂ, ಸ್ಮೃತಿ-ಕರ್ಮಗಳನ್ನು ಒಪ್ಪದೆ, ಪ್ರಾಚೀನ ಶೈವಾಗಮಕ್ಕೆ ವಿನೂತನ ಆಯಾಮವನ್ನು ಕೊಟ್ಟು, ‘ವೀರಶೈವ-ಲಿಂಗಾಯತ’ ಪಥವನ್ನು ಜನಪ್ರಿಯಗೊಳಿಸಿದವರು ಮಹಾತ್ಮ ಬಸವೇಶ್ವರರು. ಆ ಕಾಲದಲ್ಲಿ ಅವರನ್ನು ಅನುಸರಿಸಿದವರಲ್ಲಿ, ಬ್ರಾಹ್ಮಣರೂ ಸೇರಿದಂತೆ ಎಲ್ಲ ವರ್ಣದವರೂ ಇದ್ದರು. ಅಧ್ಯಾತ್ಮ, ಕಾಯಕ ಹಾಗೂ ಶೌರ್ಯಗಳ ಅಪೂರ್ವ ಸಮರಸ-ಮೂರ್ತಿ ಶರಣ ಮಡಿವಾಳ ಮಾಚಿದೇವರು ಅಗಸರು. ದಿಟ್ಟತನ ಹಾಗೂ ಭಕ್ತಿಗಳಿಗೆ ಹೆಸರಾದ ಮಹಾದೇವಿ ಅಕ್ಕ ವರ್ತಕರ ವಂಶದ ಹೆಣ್ಣು. ಶಿವಶರಣರ ಪೈಕಿ ಆಯ್ದಕ್ಕಿಮಾರಯ್ಯ ಅಕ್ಕಿ ಆಯುತ್ತಿದ್ದವ; ಅಪ್ಪಣ್ಣ ಹಾಗೂ ಹಡಪದ ರೇಚಣ್ಣರು ವೃತ್ತಿಯಲ್ಲಿ ಕ್ಷೌರಿಕರು; ಬಚ್ಚಿ ರಾಜಯ್ಯ ಮರಗೆಲಸದಾತ; ಚೌಡಯ್ಯ ಅಂಬಿಗ; ಗುಂಡಯ್ಯ ಕುಂಬಾರ, ಕೇತಯ್ಯ ಬುಟ್ಟಿ ನೇಯುವಾತ, ಕೋಟಯ್ಯ ಬೆತ್ತದ ಕೆಲಸ ಮಾಡುವಾತ, ನೂಲಿಯ ಚಂಡಯ್ಯ ಹಗ್ಗ ನೇಯುವಾತ, ರಾಮಣ್ಣ ಗೋವಳ, ಕಿನ್ನರಿ ಬಾಮಯ್ಯ ಸಂಗೀತಗಾರರ ಕುಲದಾತ, ಮಹಾಸಿದ್ಧರಾದ ರೇವಣ ಸಿದ್ದೇಶ್ವರರು ಕುರುಬರು, ದೇವರ ದಾಸಿಮಯ್ಯನಿಗೆ ಹಲವು ಬ್ರಾಹ್ಮಣ ಶಿಷ್ಯರಿದ್ದರು, ಕೋಲಾರಿನ ಘಟ್ಟಹಳ್ಳಿಯ ಯೋಗಿ ಅಂಜನಪ್ಪ ಸ್ವಾಮಿ ಕೂಲಿಯಾಳಾಗಿದ್ದರು¬. ಹೀಗೇ ಹೇಳುತ್ತ ಹೋದರೆ ಭಾರತದ ಜಿಲ್ಲೆಜಿಲ್ಲೆಯಲ್ಲೂ ಕುಲಕುಲದಲ್ಲೂ ಯುಗಯುಗದಲ್ಲೂ ಲೌಕಿಕವಾಗಿಯೂ ಪಾರಮಾರ್ಥಿಕವಾಗಿಯೂ ಉನ್ನತಿಯನ್ನು ಹೊಂದಿದ ಮಹಾನ್ ಸ್ತ್ರೀಪುರುಷರ ಪಟ್ಟಿ ಮುಗಿಯುವುದೇ ಇಲ್ಲ!

ಒಟ್ಟಿನಲ್ಲಿ, ಭಾರತದಲ್ಲಿ ಎಲ್ಲ ಕಾಲದಲ್ಲೂ ಎಲ್ಲ ಕುಲಕಸುಬುಗಳ ಸ್ತ್ರೀಪುರುಷರು ತಮ್ಮ ಸತ್ವ-ಸಾಮರ್ಥ್ಯಪ್ರತಿಭೆಗಳನ್ನು ಮೆರೆದು ಮಹಿಮೆಗೇರುತ್ತ ಬಂದಿದ್ದಾರೆ. ದಾಖಲೆಗಳೂ ಸಿಗುತ್ತವೆ. ದೇಶಭಾಷೆಗಳಲ್ಲಿ ವೀರಗಾಥೆಗಳಲ್ಲಿ ಶಾಸನಪತ್ರಾದಿಗಳಲ್ಲಿ ದಾಖಲಾದ ಈ ಕಥನಗಳನ್ನು ಶೈಕ್ಷಣಿಕ ಪಠ್ಯದಿಂದ ಸಂಪೂರ್ಣ ದೂರವಿಟ್ಟು, ಬೇಕೆಂದೇ ಮರೆಮಾಚಿ, ಕೇವಲ ಕಣ್ಣೀರು-ಕಲಹ-ವೈಮನಸ್ಯಗಳ ಪ್ರಸಂಗಗಳನ್ನು ಅಲ್ಲಿಲ್ಲಿಂದ ಹೆಕ್ಕಿ ತೋರಿ, ಅದನ್ನೇ ವೈಭವೀಕರಿಸಿ, ‘ಜಾತಿ’ ಎಂ ಬ ಪರಿಕಲ್ಪನೆಯನ್ನು ಪದೇ ಪದೆ ಜನಮಾನಸದ ಮೇಲೆ ಹೇರುವ ಕುತಂತ್ರ ನಡೆದಿದೆ. ಈ ಕುತಂತ್ರದಿಂದ ಸಮಾಜವನ್ನು ಒಡೆದು ಮತ ಗಿಟ್ಟಿಸಿಕೊಳ್ಳಲು ರಾಜಕಾರಣಿಗಳಿಗೆ ಅನುಕೂಲವಾದರೆ, ಮಾತೃಧರ್ಮದಿಂದ ಜನರನ್ನು ಬೇರ್ಪಡಿಸಿ ಮತಾಂತರಿಸಲು ವಿಧರ್ವಿುಗಳಿಗೆ ಜಾಲವಾಗಿ ಒದಗಿದೆ! ನಾವಾದರೋ, ಇಷ್ಟೆಲ್ಲ ಉದಾಹರಣೆಗಳಿದ್ದರೂ, ವರ್ಣವನ್ನು ‘ಜಾತಿ’ಯೆಂದೇ ಭ್ರಮಿಸುತ್ತ ಗೊಂದಲದಲ್ಲೇ ಮುಂದುವರಿಯುತ್ತಿದ್ದೇವೆ! ಕಣ್ದೆರೆದು ನೋಡಿದರೆ ಇಂತಹ ಉದಾಹರಣೆಗಳು ಹೇರಳವಾಗಿ ಸಿಗುತ್ತವೆ. ಆದರೆ ಸತ್ಯವನ್ನು ಎದುರಿಸಲು ಧೈರ್ಯ ಸಾಲದವರು ಅಥವಾ ಇಷ್ಟವಿಲ್ಲದವರು ಅಥವಾ ಜಾತಿಯ ಹೆಸರಲ್ಲಿ ರೋಷದಿಂದ ಬೇಯುತ್ತಲೇ ಇರಬಯಸುವ ಕಲಹಪ್ರಿಯರು ಅಥವಾ ಧರ್ಮವಿರೋಧಿಗಳ ಆಚಜ್ಞಿಡಿಚಠಜಜ್ಞಿಜಗೆ ಒಳಪಟ್ಟವರು, ಸತ್ಯವನ್ನು ನೋಡಲು ಒಪ್ಪದೇ ಕಣ್ಮುಚ್ಚಿಕೊಂಡೇ ಇರಲಿಚ್ಛಿಸಿದರೆ ಮಾಡುವುದೇನು?

ಡಾ. ಆರತೀ ವಿ. ಬಿ.

ಕೃಪೆ: ವಿಜಯವಾಣಿ

Leave a Reply