ಜ್ಞಾನವೂ ವಿಜ್ಞಾನವೂ ಇರುವವನು ಯೋಗಿ

ಜ್ಞಾನವೂ ವಿಜ್ಞಾನವೂ ಇರುವವನು ಯೋಗಿ
ಡಾ. ಆರತೀ ವಿ. ಬಿ.
‘ಶೀತೋಷ್ಣ ಸುಖದುಃಖಗಳಲ್ಲಿಯೂ ಮಾನಾಪಮಾನಾದಿಗಳ (ಅನುಭವದಲ್ಲಿ) ಜಿತಾತ್ಮನೂ ಪ್ರಶಾಂತಾತ್ಮನೂ ಆಗಿರುವವನಲ್ಲಿ ಪರಮಾತ್ಮನು ಸಮಾಹಿತನಾಗಿರುತ್ತಾನೆ.’ (ಭ.ಗೀ.: 6.7)
ಶೀತೋಷ್ಣಾದಿಗಳು ದೇಹಕ್ಕಾಗುವ ಅನುಭವಗಳು. ಮಾನಾಪಮಾನಗಳು ಮನಸ್ಸಿನಲ್ಲಿ ಸುಖದುಃಖಗಳನ್ನು ಪ್ರಚೋದಿಸುವಂತಹವುಗಳು. ಈ ದೇಹ-ಮನಸ್ಸುಗಳ ಅನುಭವಗಳನ್ನೇ ಸರ್ವಸ್ವವೆಂದು ಭ್ರಮಿಸಿ ಅಲ್ಲೇ ಕಳೆದುಹೋಗುತ್ತೇವೆ ನಾವು. ಹಾಗಾಗಿ ಜೀವನದ ಉನ್ನತಾರ್ಥಗಳತ್ತ ಗಮನವನ್ನೇ ಹರಿಯಿಸಲಾಗುವುದಿಲ್ಲ! ಆದರೆ ಈ ದೇಹಮನಗಳ ಅನುಭವಗಳ ಮಿತಿಯಿಂದಾಚೆಗೇರುವವನೇ ‘ಜಿತೇಂದ್ರಿಯ’ (ಅರ್ಥಾತ್ ಮನಸೀಂದ್ರಿಯಗಳನ್ನು ನಿಯಂತ್ರಿಸಬಲ್ಲವನು). ಜಿತೇಂದ್ರಿಯನು ‘ಪ್ರಶಾಂತಾತ್ಮ’ನಾಗುತ್ತಾನೆ. ಇಂತಹವನ ಅಂತರಂಗದಲ್ಲಿ ಮಾತ್ರವೇ ನಿತ್ಯ-ಶುದ್ಧ-ಆನಂದಸ್ವರೂಪನಾದ ಪರಮಾತ್ಮನು ಸಮಾಹಿತನಾಗುವುದು (ಅನುಭವಕ್ಕೆ ಬರುವುದು) ಎಂದು ತಾತ್ಪರ್ಯ.
ಯೋಗಿಯ ಮತ್ತಷ್ಟು ಲಕ್ಷಣಗಳನ್ನು ಹೇಳುತ್ತಾನೆ ಕೃಷ್ಣ: ‘ಜ್ಞಾನ-ವಿಜ್ಞಾನ-ತೃಪ್ತಾತ್ಮನೂ ಕೂತಸ್ಥನೂ ಜಿತೇಂದ್ರಿಯನೂ ಲೋಷ್ಠ-ಅಶ್ಮ-ಕಾಂಚನಗಳ ವಿಷಯದಲ್ಲಿ ಸಮಭಾವದಿಂದಿರುವವನೂ ಯುಕ್ತನೂ ಆದವನೇ ‘‘ಯೋಗಿ’’ ಎನಿಸುತ್ತಾನೆ.’ (ಭ.ಗೀ.: 6.8)
ಜ್ಞಾನ-ವಿಜ್ಞಾನ = ಜ್ಞಾನ ಎಂದರೆ ಅರಿವು. ವಿಜ್ಞಾನ ಎಂದರೆ ‘ವಿಶೇಷ’ವಾದ ಜ್ಞಾನ (ವಿಶೇಷಂ ಜ್ಞಾನಂ). ಜೀವನದ ಹೊರವಿವರಗಳನ್ನಷ್ಟೇ ನೋಡುತ್ತ ನಿಲ್ಲದೆ, ಅಂತರ್ದೃಷ್ಟಿ-ಅನುಭವಗಳಿಂದ ಉನ್ನತ ಸತ್ಯಗಳನ್ನು ವಿವೇಚಿಸುವ, ಅದನ್ನು ಧರ್ಮವರಿತು ಪ್ರಯೋಗಕ್ಕಿಳಿಸಬಲ್ಲ ವಿವೇಕವೇ ‘ವಿಜ್ಞಾನ’.
ಇಲೆಕ್ಟ್ರಿಕ್ ಬಲ್ಬ್ ನೋಡಿ, ಇದು ‘ಇಲೆಕ್ಟ್ರಿಕ್ ಬಲ್ಬ್’ ಎಂದು ಗುರುತಿಸುವುದು, ಸ್ವಿಚ್ ಹಾಕಿ ಬೆಳಗಿಸುವುದು ಸಾಮಾನ್ಯ ‘ಜ್ಞಾನ’. ಆದರೆ ಆ ಇಲೆಕ್ಟ್ರಿಕ್ ಬಲ್ಬ್ ನ್ನು ‘ಯಾವ ವಸ್ತುಗಳಿಂದ, ಯಾವ ಬಗೆಯಲ್ಲಿ ತಯಾರಿಸಲಾಗಿದೆ, ಅದರಲ್ಲಿ ಹರಿದಾಡುವ ವಿದ್ಯುಚ್ಛಕ್ತಿಯ ಪ್ರಮಾಣವೆಷ್ಟಿರಬೇಕು, ಅದರೊಳಗಿನ ತಂತ್ರಜ್ಞಾನವೇನು?’ ಇತ್ಯಾದಿಗಳನ್ನೆಲ್ಲ ಅರಿಯಬಲ್ಲ, ಅರಿತು ಪ್ರಯೋಗಿಸಬಲ್ಲ ವಿವೇಕವೇ ‘ವಿಜ್ಞಾನ’.
ಜೀವನದ ವಿಷಯದಲ್ಲೂ ಅಷ್ಟೆ. ನಮ್ಮ ಹುಟ್ಟು, ಕುಲಕಸುಬು, ಗಳಿಕೆ, ಬಂಧುಮಿತ್ರರು, ನೋವು-ನಲಿವು ಮುಂತಾದ ವಿವರಗಳ ಕಡೆಗಷ್ಟೇ ಗಮನ ಹರಿಯಿಸುವುದು ಸಾಮಾನ್ಯ ‘ಜ್ಞಾನ’. ಅದರಿಂದ ವ್ಯವಹಾರವೇನೋ ನಡೆದುಕೊಂಡುಹೋಗುತ್ತದೆ. ಆದರೆ ‘ಜೀವನದ ಈ ಎಲ್ಲ ವಿವರಗಳ ಹಿಂದೆ ಕಾಣದ ಕೈಯಿದೆ, ಅದು ಮಹತ್ತಮವಾದ ಧರ್ಮದ ನಿರ್ದೇಶವನ್ನು ಹೊರಡಿಸುತ್ತಿದೆ. ತದನುಸಾರವಾಗಿ ಜೀವನದಲ್ಲಿ ಎಲ್ಲ ಜೀವಿಗಳೂ ಹಂತಹಂತವಾಗಿ ಅವರವರ ವೇಗದಲ್ಲಿ ಪಕ್ವರಾಗುತ್ತ ಅರಳುತ್ತಿದ್ದಾರೆ, ಮುಕ್ತಿಯತ್ತ ಪಯಣಿಸುತ್ತಿದ್ದಾರೆ’ ಎನ್ನುವ ಒಳಸತ್ಯಗಳನ್ನು ಅರಿಯುವುದು ‘ವಿಜ್ಞಾನ’! ವಿಜ್ಞಾನದೃಷ್ಟಿ ಬೆಳೆದಾಗ ಸಮಷ್ಟಿಭಾವ ಬಲಿಯುತ್ತದೆ. ನಮ್ಮ ಗೊಂದಲ-ಕಸಿವಿಸಿಗಳು ಕಳೆಯುತ್ತವೆ. ತತ್ವಾನುಸಂಧಾನದ ವಿಷಯದಲ್ಲೂ ಅಷ್ಟೆ! ಗುರು-ದೈವ-ಮತ-ಸಿದ್ಧಾಂತ ಗಳನ್ನು ಹಿಡಿದು ಸಾಧನೆಗೈಯುವುದು ಪ್ರಾಥಮಿಕ ಮೆಟ್ಟಿಲು ಹೌದಾದರೂ, ‘ನನ್ನ ಮತ-ಮಠ-ಸಿದ್ಧಾಂತ-ಸಾಧನಾಪಥ ಗಳೇ ಶ್ರೇಷ್ಠ’ ಎಂಬ ಹಠಕ್ಕಿಳಿಯುವುದು ನಮ್ಮ ವಿಜ್ಞಾನದ ಅಭಾವವನ್ನು ತೋರಿಸುತ್ತದೆ. ಪ್ರತಿ ಕ್ಷಣವೂ ಅಸಂಖ್ಯ ಲೋಕಗಳನ್ನೂ ಜೀವರನ್ನೂ ಸೃಜಿಸುವ, ಎಲ್ಲದರಲ್ಲೂ ಹೊಕ್ಕು ಊಹಾತೀತ ನಾಮ-ರೂಪ-ಲೀಲೆಗಳನ್ನು ನಟಿಸುವ ದಿವ್ಯರಸಿಕನಾದ ಪರಮಾತ್ಮನನ್ನು ನಾವು ‘ವಾದ’ದಲ್ಲಿ ಕಟ್ಟಿ ‘ಇದಮಿತ್ಥಂ’ ಎಂದು ಸೀಮಿತಗೊಳಿಸುವುದು ನಮ್ಮ ‘ವಿಜ್ಞಾನದ ಅಭಾವ’ವನ್ನು ತೋರಿಸುತ್ತದೆ! ಸರ್ವವ್ಯಾಪಿ ಭಗವಂತನು ಅಭಿವ್ಯಕ್ತಿಸುವ ಅದ್ಭುತರಸವನ್ನು ಆಸ್ವಾದಿಸುವ ರಾಸಿಕ್ಯವು ಮೂಡಿದಾಗ, ನಮ್ಮ ಅಹಮಿಕೆ ಭಕ್ತಿಯಿಂದ ಕರಗಿದಾಗ, ನಮ್ಮಲ್ಲಿ ‘ವಿಜ್ಞಾನ’ ಮೂಡುತ್ತದೆ!
ಚಿತ್ ಅಥವಾ ಅರಿವು ಮನುಷ್ಯನ ಸ್ವರೂಪವೂ ಸ್ವಭಾವವೂ ಆಗಿದೆ. ಆದರೆ ಆ ಸಹಜ ಜ್ಞಾನಾಭಿವ್ಯಕ್ತಿಯನ್ನು ಮೋಹವು ತಡೆದು, ಏಕದೇಶೀಯವಾಗಿ ಬೆಳೆಯುವಂತೆ ಮಾಡುತ್ತದೆ. ಹಾಗಾಗಿ ಆತ ‘ವಿಜ್ಞಾನಿ’ಯಾಗದೇ ಉಳಿದುಬಿಡುತ್ತಾನೆ! ಭೌತಿಕವಿವರಗಳನ್ನಷ್ಟೇ ಗಮನಿಸುವ ಲೌಕಿಕವಿಜ್ಞಾನದಲ್ಲೋ (ಸೈನ್ಸ್), ಬೌದ್ಧಿಕವಿವೇಚನೆಯನ್ನಷ್ಟೇ ಅವಲಂಬಿಸುವ ತರ್ಕದಲ್ಲೋ, ಭಾವನಾತ್ಮಕ ಗ್ರಹಿಕೆಯನ್ನಷ್ಟೇ ಅವಲಂಬಿಸುವ ಭಾವನೆಗಳನ್ನೋ ಹಿಡಿದು ಅಲ್ಲಲ್ಲೇ ನಿಂತುಬಿಡುತ್ತಾನೆ. ಅದರಾಚೆಗಿನ ಅನುಭವಕ್ಕೇರುವುದನ್ನು ಮರೆಯುತ್ತಾನೆ. ‘ಅದರಾಚೆಗೆ ಏನೂ ಇಲ್ಲ’ವೆಂದೂ ಭ್ರಮಿಸುವುದುಂಟು! ಪರತತ್ವವನ್ನೂ ಅಷ್ಟೆ! ಕೇವಲ ತರ್ಕದಿಂದಲೋ, ಭೌತಿಕ ಮಾಪನಗಳಿಂದಲೋ, ಭಾವನಾಬಲದಿಂದ ಗ್ರಹಿಸುವ ಯತ್ನಗಳಲ್ಲಿ ಉಳಿಯುವವರೇ ಹೆಚ್ಚಿನವರು. ಅಲ್ಲಲ್ಲೇ ಆಸ್ತಿಕ್ಯವನ್ನೋ ನಾಸ್ತಿಕ್ಯವನ್ನೋ ಕಟ್ಟಿಕೊಳ್ಳುತ್ತ ನಿಲ್ಲುತ್ತಾರೆಯೇ ಹೊರತು, ಸ್ವಾನುಭವದತ್ತ ಗಮನಹರಿಯಿಸುವುದಿಲ್ಲ. ‘ವಿಜ್ಞಾನ’ಕ್ಕೇರುವುದಿಲ್ಲ. ‘ಮನುಷ್ಯಾಣಾಂ ಸಹಸ್ರೇಷು¬¬ ಕಶ್ಚಿನ್ಮಾಂ ವೇತ್ತಿ ತತ್ವತಃ’ ಎನ್ನುವುದನ್ನು ಕೃಷ್ಣನೇ ಹೇಳಿದ್ದನ್ನು ನೆನಪಿಸಿಕೊಳ್ಳಬಹುದು. ತತ್ವನ್ವೇಷಣೆಯು ಸೀಮಾಂತರಗಳನ್ನು ದಾಟುತ್ತ ವಿಸ್ತರಿಸಬೇಕು. ಆಗ ಮಾತ್ರ ಜ್ಞಾನವು ‘ವಿಜ್ಞಾನ’ದಲ್ಲಿ ಪರ್ಯವಸಾನವಾಗುತ್ತದೆ. ಆಗ ಮಾತ್ರ ಮನುಷ್ಯನು ‘ಜ್ಞಾನ-ವಿಜ್ಞಾನ-ತೃಪ್ತಾತ್ಮಾ’ ಆಗುತ್ತಾನೆ!
ಸಸಿಯನ್ನು ಕುರಿಗಳು ಮೇಯದಿರಲೆಂದು ಬೇಲಿಯನ್ನು ಕಟ್ಟುವುದುಂಟು. ಆದರೆ ಸಸಿಯು ಬೇಲಿಯಲ್ಲೇ ಉಳಿದರೆ ಹೆಮ್ಮರವಾಗಲಾರದು. ಅಂತೆಯೇ, ಜ್ಞಾನವು ಅತ್ಯಗತ್ಯವಾದರೂ ಅದು ಏಕದೇಶೀಯವಾಗಿ ಉಳಿಯದೆ ವಿಸ್ತರಿಸಿ ಅನುಭವಕ್ಕೊಯ್ದು ‘ವಿಜ್ಞಾನ’ವಾಗಬೇಕು. ಆಗ ಮಾತ್ರವೇ ಪರಿಪೂರ್ಣತೆ, ತೃಪ್ತಿ. ಹಾಗಾಗಿಯೇ ಕೃಷ್ಣನು ಯೋಗಿಯನ್ನು ‘ಜ್ಞಾನ-ವಿಜ್ಞಾನ-ತೃಪ್ತಾತ್ಮಾ’ ಎಂದು ಲಕ್ಷಣೀಕರಿಸಿದ್ದಾನೆ.

Leave a Reply