ಕರ್ಮಯೋಗದ ಮೂಲಕವೇ ದೃಢವಾದ ಶಾಂತಿ

ಕರ್ಮಯೋಗದ ಮೂಲಕವೇ ದೃಢವಾದ ಶಾಂತಿ

‘ಸಂನ್ಯಾಸವೂ ಕರ್ಮಯೋಗವೂ ಬೇರೆಬೇರೆಯಲ್ಲ. ಕರ್ಮಯೋಗವೇ ನಮ್ಮನ್ನು ಕ್ರಮೇಣ ತ್ಯಾಗಕ್ಕೊಯ್ಯುತ್ತದೆ. ಅಕಾಲದಲ್ಲಿ ಮಾಡಿವ ಅವಸರದ ಕರ್ಮತ್ಯಾಗದಿಂದ ಪ್ರಯೋಜನವಿಲ್ಲ’ ಎನ್ನುವುದನ್ನು ಕೃಷ್ಣನು ವಿವರಿಸುತ್ತಿದ್ದನು. ‘ಕರ್ಮಯೋಗಿಯೊಬ್ಬನೇ ಕರ್ಮತ್ಯಾಗಕ್ಕೆ ಅರ್ಹನು’ ಎನ್ನುವುದನ್ನು ಸ್ಪಷ್ಟೀಕರಿಸುತ್ತ ಹೀಗೆ ಹೇಳುತ್ತಾನೆ;

(ನಿರ್ಲಿಪ್ತ ಕರ್ಮದ ಮೂಲಕ) ಯೋಗದಲ್ಲಿ ನೆಲೆಗೊಂಡವನು, ಶುದ್ಧಾತ್ಮನೂ, ಇಂದ್ರಿಯಗಳನ್ನು ಗೆದ್ದು ತನಗೆ ತಾನೇ ಒಡೆಯನಾದವನು, ನಾನು-ಪರರು ಎಂಬ ಭೇದಗಳ ಉಪಾಧಿಯಿಂದ ಕಳಚಿಕೊಂಡು ವಿಶ್ವಾತ್ಮಭಾವವನ್ನು ಪಡೆದಿರುವವನು (ಕರ್ಮವನ್ನು) ಮಾಡಿಯೂ ಅದರಿಂದ ಲಿಪ್ತನಾಗುವುದಿಲ್ಲ. (ಭ.ಗೀ.: 5.7)

ಭೋಗಾಸೆಯೇ ‘ಅಶುದ್ಧಿ’. ಅದು ಮತಿಮನಗಳಲ್ಲಿ ಮೋಹದ ದುರ್ವಾಸನೆಯನ್ನು ಮೂಡಿಸುತ್ತದೆ. ಅದನ್ನು ತೊಳೆದುಹಾಕುವವನೇ ಶುದ್ಧಾತ್ಮ. ಮನಸ್ಸಾದರೋ ಮತ್ತೆ ಮತ್ತೆ ಭೋಗಗಳತ್ತ ಹರಿಯುವುದು ಅನಿಯಂತ್ರಿತ ಇಂದ್ರಿಯಗಳ ಮೂಲಕ. ಇಂದ್ರಿಯಗಳನ್ನು ನಿಯಂತ್ರಿಸಿ ಗೆದ್ದವನು ಮನಸ್ಸನ್ನೂ ಗೆಲ್ಲುತ್ತಾನೆ. ಅವನೇ ‘ವಿಜಿತಾತ್ಮಾ, ಜಿತೇಂದ್ರಿಯ’. ಇನ್ನು, ಗಂಡು-ಹೆಣ್ಣು, ಬಡವ-ಬಲ್ಲಿದ, ಕುಲ-ಮತ-ಪಂಗಡ ಅಥವಾ ಬೇಕು-ಬೇಡ, ಇಷ್ಟ-ಇಷ್ಟವಿಲ್ಲ ಮುಂತಾದ ಹಲವು ಮಾಪನಗಳನ್ನು ಇಟ್ಟುಕೊಂಡೇ ಜಗತ್ತನ್ನು ನೋಡುವ ಬುದ್ಧಿ ನಮ್ಮಲ್ಲಿರುತ್ತದೆ. ಈ ‘ದ್ವಂದ್ವ’ಭಾವವನ್ನು ಗೆದ್ದು, ‘ತನ್ನಲ್ಲೂ ಪರರಲ್ಲೂ ಸಕಲ ಚರಾಚರಗಳಲ್ಲೂ ಒಬ್ಬನೇ ಪರಮಾತ್ಮ ವ್ಯಾಪಿಸಿದ್ದಾನೆ’ ಎನ್ನುವ ದರ್ಶನವನ್ನು ಬೆಳೆದಾಗ ಪಕ್ವತೆಯುಂತಾಗುತ್ತದೆ, ಆಗ ಮನುಷ್ಯನು ಯೋಗಕ್ಕೇರುತ್ತಾನೆ.

‘ಭಗವಂತನನ್ನು ಸರ್ವವ್ಯಾಪಿ, ಸರ್ವರ ಹೃದಯಸ್ಥನು’ ಎಂದೆಲ್ಲ ಪಠಿಸುತ್ತೇವೆ. ವಿಪರ್ಯಾಸ ಎಂದರೆ ವಾಸ್ತವಿಕ ಬದುಕಿನಲ್ಲಿ ನಾವು ಎಲ್ಲರಲ್ಲೂ ಎಲ್ಲದರಲ್ಲೂ ಪರಮಾತ್ಮನನ್ನೇ ನೋಡುವ ಭಾವವನ್ನು ಬೆಳೆಸಿಕೊಂಡಿಲ್ಲ! ನಾವು ಉದಾರವಾಗಿದ್ದರೂ, ಇತರರ ಭೇದಬುದ್ಧಿಯು ನಮ್ಮಲ್ಲೂ ಭೇದಬುದ್ಧಿಯನ್ನು ಪ್ರಚೋದಿಸಿಬಿಡುತ್ತದೆ! ಇದು ಮನುಷ್ಯಸಹಜ ಪ್ರಕ್ರಿಯೆ. ಅಷ್ಟೇ ಅಲ್ಲ, ಭೇದಬುದ್ಧಿಯನ್ನು ಜನಾಂಗಗಳ ಮೇಲೆಯೇ ವ್ಯವಸ್ಥಿತವಾಗಿ ಆರೋಪಿಸಿ ಹಾಳುಗೆಡವುವವರೂ ಇದ್ದಾರೆ! ಸಹಸ್ರಮಾನಗಳಿಂದಲೂ ಹಲವು ಧಾರ್ವಿುಕ-ಸಾಂಸ್ಕೃಕ-ವೃತ್ತಿಪರ ವೈವಿಧ್ಯಗಳ ನಡುವೆಯೂ ಸಮರಸದಿಂದ ಬದುಕಿದ ಭಾರತೀಯ ಸಮಾಜವನ್ನು, ಆಕ್ರಮಣಗಳ ಕಾಲಾನಂತರದಿಂದ ಇಲ್ಲಿಯವರೆಗೂ, ‘ಜಾತಿಭೇದ’ವೆಂಬ ವಿಪರೀತ ವಿಶ್ಲೇಷಣೆಗಳ ಮೂಲಕ ಕುಟಿಲತನದಿಂದ ಒಡೆದು ಬೀಳಿಸಲಾಗುತ್ತಿದೆ.

ಪ್ರಧಾನವಾಗಿ ಅಂದು ಬ್ರಿಟಿಷರು, ಹಾಗೂ ಇಂದು ಅವರ ಕುತಂತ್ರವನ್ನು ಕಲಿತು ಮುಂದುವರಿಸುತ್ತ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಮತಾಂತರಕಾರಕರೂ, ವಾಮಪಂಥೀಯರೂ, ಸ್ವಾರ್ಥಿ ರಾಜಕಾರಣಿಗಳೂ ಭೇದ ಹುಟ್ಟಿಸುವ ಇಂಥ ದುಷ್ಟಶಕ್ತಿಗಳು ಎನ್ನಬಹುದು. ಭೇದವೆಂಬ ಮನೋವಿಕಾರ ಬೆಳೆದರೆ ಮನುಷ್ಯನು ತನ್ನೊಳಗೂ ಹೊರಗೂ ಶಾಂತಿಯಿಲ್ಲದವನಾಗುತ್ತಾನೆ. ಇಂಥ ಮನಃಸ್ಥಿತಿಯಲ್ಲಿ ಯೋಗಕ್ಕೇರುವುದಾದರೂ ಹೇಗೆ? ಮನುಷ್ಯನು ಅದೆಷ್ಟೇ ಆಸ್ತಿಕನಾದರೂ, ಭಗವಂತನ ಸರ್ವವ್ಯಾಪಕತ್ವವನ್ನು ಜಗತ್ತಿನಲ್ಲೂ ಗುರುತಿಸಲಾಗದಿದ್ದಲ್ಲಿ, ಅವನ ಧಾರ್ವಿುಕತೆ ಅಪಕ್ವವೆಂದೇ ಅರ್ಥ. ‘ತನ್ನಲ್ಲೂ ಪರರಲ್ಲೂ ಸಕಲ ಚರಾಚರದಲ್ಲೂ ಏಕಮೇವಾದ್ವಿತೀಯ ಭಗವಚ್ಚೆ ೖತನ್ಯ ಕಾಣುವ ‘‘ಸರ್ವಾತ್ಮಭಾವವಿರುವವನು’’ ಮಾತ್ರವೇ ನಿರ್ಲಿಪ್ತಭಾವದಿಂದ ಕರ್ಮವನ್ನಾಚರಿಸಿ ಯೋಗಕ್ಕೇರಬಲ್ಲ’ ಎನ್ನುವುದು ತಾತ್ಪರ್ಯ.

ಸರ್ವಾತ್ಮಭಾವವಿರುವವನಲ್ಲಿ ‘ನಾನು-ನನ್ನದು’ ಎನ್ನುವುದು ಕರಗಿಹೋಗುತ್ತದೆ. ಈ ಸ್ಥಿತಿಯಲ್ಲಿ ಅವನ ಇಚ್ಛಾ-ಸಂಕಲ್ಪಗಳೆಲ್ಲ ಭಗವದಿಚ್ಛೆಯಲ್ಲಿ ಲೀನವಾಗಿರುತ್ತವೆ. ಹಾಗಾಗಿ ಆತನಲ್ಲಿ ‘ತಾನು ಮಾಡುತ್ತೇನೆ’ ಎಂಬ ಮಮಕಾರವೇ ಇರುವುದಿಲ್ಲ. ಕೃಷ್ಣನು ಹೇಳುತ್ತಾನೆ, ‘ನಾನೇನೂ ಮಾಡುತ್ತಿಲ್ಲ’ ಎಂಬ (ನಿರ್ಲಿಪ್ತಿ ಭಾವವನ್ನು ಪಡೆದಿರುವ) ತತ್ವವಿತ್ ಆದ ವ್ಯಕ್ತಿಯು ಮಾತ್ರವೇ ನೋಡುವ, ಕೇಳುವ, ರ್ಸ³ಸುವ, ಆಘ್ರಾಣಿಸುವ, ತಿನ್ನುವ, ಓಡಾಡುವ, ಸ್ವಪ್ನಿಸುವ, ಉಸಿರಾಡುವ, ಮಾತನಾಡುವ, ಹಿಡಿಯುವ, ಬಿಡುವ, ಕಣ್ಮುಚ್ಚುವ, ಕಣ್ದೆರೆಯುವ ಎಲ್ಲ ಭೌತಿಕ ಪ್ರಕ್ರಿಯೆಗಳನ್ನು ‘ಇಂದ್ರಿಯಗಳ ಮೂಲಕ ತಮ್ಮ ಪಾಡಿಗೆ (ಭಗವದಿಚ್ಛೆಯಂತೆ) ನಡೆಯುವಂತಹವು’ ಎಂಬುದನ್ನು ಅರಿತುಕೊಂಡಿರುತ್ತಾನೆ. (ಭ.ಗೀ.: 5.) ‘ತಾನು-ತನ್ನದು’ (ಎಂಬ ಲೇಪವನ್ನು) ಬೆಳೆಸಿಕೊಳ್ಳದೇ, ಪ್ರಜ್ಞೆಯನ್ನು ಬ್ರಹ್ಮದಲ್ಲಿರಿಸಿ, ಕರ್ಮಗಳನ್ನು ನಿರ್ಮಮ ಭಾವದಿಂದ ಮಾಡುತ್ತಾನೆ. ಅಂತಹವನು ‘ತಾವರೆಯ ಎಲೆಯ ಮೇಲೆ ಜಲಬಿಂದುವಿನಂತೆ? ಕರ್ಮಗಳಲ್ಲಿದ್ದೂ ಪಾಪಲಿಪ್ತನಾಗದೇ ಉಳಿಯುತ್ತಾನೆ’ (ಭ.ಗೀ.: 5.) ಎನ್ನುತ್ತಾನೆ ಕೃಷ್ಣ.

‘ಪದ್ಮಪತ್ರಮಿವಾಂಭಸಾ’ – ಎಂತಹ ಸೊಗಸಾದ ಉಪಮಾನ! ತಾವರೆಯ ಎಲೆಯು ನೀರಲ್ಲೇ ಇದ್ದರೂ, ಅದರ ಮೇಲೆಲ್ಲ ಜಲದ ಬಿಂದುಗಳು ಬಿದ್ದು ಹೊರಳಿದರೂ, ಅದಾವುವೂ ಅದಕ್ಕೆ ಒಂದಿಷ್ಟೂ ಅಂಟವು! ಅಂತೆಯೇ ಕರ್ಮಗಳಲ್ಲಿ ವ್ಯಸ್ತವಾಗಿದ್ದರೂ, ಮಮಕಾರದ ಲೇಪವಿಲ್ಲದೇ ಇರುತ್ತಾನಂತೆ ಕರ್ಮಯೋಗಿ!

ಹೀಗೆ ‘ಯುಕ್ತನು’ (ಕರ್ಮಯೋಗಿಯು), ಕೇವಲ ಆತ್ಮಶುದ್ಧಿಗಾಗಿ, ದೇಹ-ಮನ-ಬುದ್ಧಿ-ಇಂದ್ರಿಯಗಳ ಮೂಲಕ ನಿಃಸ್ಪ ೃಭಾವದಿಂದ ಕರ್ಮವನ್ನು ಮಾಡುತ್ತಾನೆ, ‘ನೈಷ್ಟಿಕೀ-ಶಾಂತಿ’ಯನ್ನು ಪಡೆಯುತ್ತಾನೆ. (ಭ.ಗೀ.: 5.) ‘ನಿಷ್ಠ’ ಎಂದರೆ ‘ಚೆನ್ನಾಗಿ ನೆಲೆಯೂರುವುದು, ದೃಢ’ ಎಂದರ್ಥ. ‘ನೈಷ್ಠಿಕೀ-ಶಾಂತಿ’ ಎಂದರೆ ತಾತ್ಕಾಲಿಕ ನೆಮ್ಮದಿಯ ಭಾವವಲ್ಲ, ‘ದೃಢವಾದ, ಆತ್ಯಂತಿಕವಾದ ಶಾಂತಿ’ ಎಂದರ್ಥ. ಅಂದರೆ, ‘ಬಾಹ್ಯಾಂತರಗಳಲ್ಲಿ ಪರಮ ಶಾಂತಿಯು ಅವನ ಸ್ವಭಾವವಾಗಿಬಿಡುತ್ತದೆ, ಮತ್ತೆ ಯಾವ ವಿಕಾರಕ್ಕೂ ಆಸ್ಪದವೇ ಇರದು’ ಎಂದರ್ಥ.

ಡಾ. ಆರತೀ ವಿ. ಬಿ.

ಕೃಪೆ: ವಿಜಯವಾಣಿ

Leave a Reply