ಕುಮಾರವ್ಯಾಸ ಹಾಗೂ ಭಗವದ್ಗೀತೆ  ಭಾಗ-೨ 

ಕುಮಾರವ್ಯಾಸ ಹಾಗೂ ಭಗವದ್ಗೀತೆ  ಭಾಗ-೨

ವಿದುರನು ಧೃತರಾಷ್ಟ್ರನಿಗೆ ಹೇಳಿದ ನೀತಿಯಲ್ಲಿ ತಂದೆಯಾದವನೊಬ್ಬ ಮಗನನ್ನು ಬೆಳೆಸಬೇಕಾದ ಕ್ರಮ ಏನು ಎಂಬ ಅಂಶಗಳು ಕೂಡ ಅಡಕವಾಗಿವೆ. ಅದರ ಜೊತೆಗೇ ರಾಜನಾದವನು ಮಗನನ್ನು ಒಳ್ಳೆಯ ಕ್ರಮದಲ್ಲಿ ಬೆಳೆಸುವುದು ಎಷ್ಟು ಮುಖ್ಯ ಎಂಬುದನ್ನು ಸೂಚಿಸುತ್ತಾನೆ. ಸರಿಯಾದ ‘ಲಾಲನೆ’ ತಪ್ಪಿದಲ್ಲಿ ಮಕ್ಕಳು ಕೆಡುತ್ತಾರೆ ಎಂಬುದು ವಿದುರನ ವಿಚಾರ. ತನ್ನ ನೀತಿಯಲ್ಲಿ ಯಾರು ಯಾವುದರಿಂದ ಕೆಡುತ್ತಾರೆ ಎಂಬುದನ್ನು ಕುಮಾರವ್ಯಾಸನ ವಿದುರ ಹೇಳುವುದು ಹೀಗೆ-
ಯತಿ ಕೆಡುಗು ದುಸ್ಸಂಗದಲಿ ಭೂ
ಪತಿ ಕೆಡುಗು ದುರ್ಮಂತ್ರಿಯಲಿ ವರ
ಸುತ ಕೆಡುಗು ಲಾಲನೆಗಳಲಿ ಕೃಷಿ ಕೆಡುಗುಪೇಕ್ಷೆಯಲಿ
ಮತಿ ಕೆಡುಗು ಮಧು ಪಾನದಲಿ ಸ
ದ್ಗತಿ ಕೆಡುಗು ದುಶ್ಚರಿತದಲಿ ನಿಜ
ಸತಿ ಕೆಡುಗು ದುರ್ವ್ಯಸನದಲಿ ಭೂಪಾಲ ಕೇಳೆಂದ.
ಮುನಿಯು ಕೆಟ್ಟವರ ಸಂಗದಲ್ಲಿ ಕೆಟ್ಟರೆ, ರಾಜನು ಕೆಟ್ಟ ಮಂತ್ರಿಯ ಸಹವಾಸದಲ್ಲಿ ಕೆಡುತ್ತಾನೆ. ಮಗನು ಪಾಲಕರ ಲಾಲನೆಯಲ್ಲಿ ಲೋಪವಾದರೆ ಕೆಡುತ್ತಾನೆ. ಕೃಷಿಯು ಉಪೇಕ್ಷೆ ಮಾಡುವುದರಿಂದಾಗಿ ಕೆಟ್ಟರೆ, ಸುರಾಪಾನದಿಂದ ಬುದ್ಧಿ ನಷ್ಟವಾಗುತ್ತದೆ. ಕೆಟ್ಟ ಚಾರಿತ್ರ್ಯೆದಿಂದಾಗಿ ಸದ್ಗತಿಯು ನಷ್ಟವಾಗುತ್ತದೆ. ಸತಿಯು ಕೆಟ್ಟ ಚಟಗಳಿಂದಾಗಿ ಕೆಡುತ್ತಾಳೆ ಎಂದು ಹೇಳುತ್ತಾನೆ. ಇದೆಲ್ಲವೂ ದುರ್ಯೋಧನನ ಲಾಲನೆಯಲ್ಲಿಯ ಹಾಗೂ ಅವನ ಸುತ್ತ ಇರುವಂಥ ಕುಜನರ ಉಪದೇಶದ ದೋಷ ಎಂದು ವಿದುರನು ಅಪರೋಕ್ಷವಾಗಿ ಹೇಳುತ್ತಾನೆ.
ವಿದುರ ನೀತಿಯ ಇನ್ನೊಂದು ಮಗ್ಗುಲನ್ನು ನೋಡಿರಿ..
ವರುಷವೈದರೊಳರಸೆನಿಸಿ ದಶ
ವರುಷ ದಾಸತ್ವವನು ಭಾವಿಸಿ
ವರುಷ ಹದಿನಾರರಲಿ ಪುತ್ರನ ಮಿತ್ರನೆಂದೆನಿಸಿ
ಪರಿವಿಡಿಗಳಲಿ ನಡೆಸಿ ಮದ ಮ
ತ್ಸರವ ಮಾಣಿಸಿ ನೆರೆದ ಮಕ್ಕಳ
ನರ ಮೃಗವ ಮಾಡುವರೆ ಭೂಮಿ ಪಾಲ ಕೇಳೆಂದ
ಐದು ವರುಷಗಳು ತುಂಬುವ ವರೆಗೆ ಮಕ್ಕಳು ರಾಜರು. ಮುಂದಿನ ಹತ್ತು ವರುಷಗಳ ವರೆಗೆ ಮಕ್ಕಳು ಹೇಳಿದ ಹಾಗೆ ಕೇಳಬೇಕು. ಹದಿನಾರನೇ ವರುಷದಲ್ಲಿ ಪುತ್ರನನ್ನು ಮಿತ್ರ ಎಂದು ಪರಿಗಣಿಸಬೇಕು. ಇಲ್ಲಿ ‘ಪರಿವಿಡಿ’ ಎಂದರೆ ಕ್ರಮ, ರೀತಿ ಎಂದರ್ಥ. ಮದ ಹಾಗೂ ಮತ್ಸರಗಳನ್ನು ಹೋಗಲಾಡಿಸಿ, ಮಕ್ಕಳನ್ನು ಉತ್ತಮರನ್ನಾಗಿ ಬೆಳೆಸಬೇಕು ಎಂಬುದು ಇದರ ತಾತ್ವರ್ಯ.
ಒಂದರಿOದೆರಡಹುದನರಿ ಮೂ
ರಂದವನು ತಿಳಿ ನಾಲ್ಕರಲಿ ಮನ
ಗುಂದದಿರೈದರಲಿ ವರ್ಜಿಪುದಾರೇಳರಲಿ |
ಒಂದಿಸದಿರೆOಟನು ವಿಚಾರಿಸಿ
ಮುಂದುವರಿದೊOಭತ್ತರಲಿ ಮನ
ಗುಂದಿಸದೀರೈದರಲಿ ಭೂಪಾಲ ಕೇಳೆಂದ||
ಮೂಲಚೈತನ್ಯವು ಒಂದು. ಅದರಿಂದ ಪರಮಾತ್ಮ, ಜೀವಾತ್ಮ ಹೀಗೆ ಎರಡರಿಂದ ಮಾನವ ಸೃಷ್ಟಿ. ಈ ಜಗದಲ್ಲಿ ಸತ್ವ, ರಜ ಹಾಗೂ ತಮ ಎಂಬ ಮೂರು ಗುಣಗಳು ಕಾರಣ. ಧರ್ಮ, ಅರ್ಥ, ಕಾಮ, ಮೋಕ್ಷವೆಂಬವುಗಳನ್ನು ಮನದಲ್ಲಿ ಸಾಧಿಸಬೇಕು. ಪಂಚೇOದ್ರಿಯಗಳಾದ ಕಣ್ಣು, ಕಿವಿ, ಮೂಗು, ಬಾಯಿ, ಚರ್ಮ ಇವುಗಳಿಗೆ ವಶನಾಗದಿರು. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಎಂಬ ಅರಿಷಡ್ವರ್ಗಗಳನ್ನೂ, ಸಪ್ತ ವ್ಯಸನಗಳಾದ ಸ್ತ್ರೀ, ಅಕ್ಷ, ಮೃಗಯಾ, ಪಾನ, ವಾಕ್ಪೌರುಷ, ಅರ್ಥದೂಷಣೆ, ದಂಡಪೌರುಷ ಇವುಗಳಿಂದ ದೂರವಿರು. ಅಷ್ಟಾಂಗಯೋಗಗಳಾದ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿಗಳನ್ನು ವಿಚಾರಿಸಿ ಮುಂದುವರಿದು ನವವಿಧ ಭಕ್ತಿಗಳಾದ ಶ್ರವಣ, ಸ್ಮರಣ, ಕೀರ್ತನ, ವಂದನ, ಅರ್ಚನ, ಪಾದ ಸೇವನ, ಸಖ್ಯ, ದಾಸ್ಯ, ಆತ್ಮನಿವೇದನೆ ಇವುಗಳಲ್ಲಿ ಮುಂದುವರೆ. ಇವುಗಳ ಜೊತೆಗೆ ಕ್ಷಮೆ, ಮಾರ್ದವತೆ, ಆರ್ಜವ, ಶೌಚ, ಸತ್ಯ, ಸಂಯಮ, ತಪಸ್ಸು, ತ್ಯಾಗ, ಪರದ್ರವ್ಯದಲ್ಲಿ ಅನಪೇಕ್ಷೆ, ಬ್ರಹ್ಮಚರ್ಯೆ ಈ ಹತ್ತು ಸಾಮಾನ್ಯ ಧರ್ಮಗಳನ್ನು ಅನುಸರಿಸು ರಾಜನೇ ಎಂದೂ ಹೇಳಿದನು.
ಇದು ವಿದುರನ ನೀತಿಯಾದರೆ ಇನ್ನು ನಮ್ಮ ನಾರಣಪ್ಪನ ಕಾವ್ಯದಲ್ಲಿಯ ಭಗವದ್ಗೀತೆಯ ಗೀತಾಚಾರ್ಯನ ನೀತಿಯನ್ನು ನೋಡೋಣವೇ?
ಇಂಥದೇ ಇನ್ನೊಂದು ಸಂದರ್ಭ ಭಗವದ್ಗೀತೆಯ ಉಪದೇಶ.  ಥೇಟು ಒಬ್ಬ ಪರೀಕ್ಷೆಗೆ ಹೊರಟ ವಿದ್ಯಾರ್ಥಿಯು ಪೆನ್ನು, ಪುಸ್ತಕಗಳನ್ನು ಕೆಳಗಿರಿಸಿ, ಇನ್ನು ನನ್ನಿಂದ ಓದಲಾಗದು. ಪರೀಕ್ಷೆಗೆ ಬರೆಯಲಾಗದು ಎಂದು ಹೇಳುವಂತೆಯೇ ಅರ್ಜುನನು ಯುದ್ಧರಂಗದಲ್ಲಿ ಎದುರಾಳಿಗಳನ್ನು ನೋಡುತ್ತಲೇ ಶಸ್ತçಗಳನ್ನು ಕೆಳಗಿಳಿಸಿ ಯುದ್ಧ ಮಾಡುವುದು ತನ್ನಿಂದ ಅಸಾಧ್ಯ ಎಂದು ಕುಳಿತುಬಿಡುತ್ತಾನೆ. ಆಗ ಶ್ರೀಕೃಷ್ಣನು ಉಪದೇಶ ಮಾಡುತ್ತಾನೆ. ಇದೇ ಭಗವದ್ಗೀತೆಯ ಉಪದೇಶ. ಇವೆರಡೂ ಉಪದೇಶಗಳಲ್ಲಿ ಪುರುಷಾರ್ಥಗಳು, ಆಶ್ರಮ ಧರ್ಮ, ರಾಜ ನೀತಿ, ರಾಜ ಧರ್ಮ ಮುಂತಾದ ತತ್ವಗಳನ್ನು ಸಿದ್ಧಾಂತಗಳನ್ನು ವಿವರಣೆ ಇದೆ.
ಯುದ್ಧಭೂಮಿಯಲ್ಲಿ ಅರ್ಜುನನೆದುರಿಗೆ ಇರುವುದು ಎರಡೇ ಆಯ್ಕೆ. ಹಿಂಸೆ ಮತ್ತು ಧರ್ಮ. ಅಹಿಂಸೆಯನ್ನು ಬೆಂಬಲಿಸಿದರೆ ಅಧರ್ಮಕ್ಕೆ ಜಯವಾಗುತ್ತದೆ. ಜೊತೆಗೆ ಯುದ್ಧ ಕ್ಷತ್ರಿಯ ಧರ್ಮವೂ ಕೂಡ. ಧರ್ಮವನ್ನು ಸಂರಕ್ಷಿಸಬೇಕೆOದರೆ ಹಿಂಸೆಯನ್ನು ಬೆಂಬಲಿಸಬೇಕಾಗುತ್ತದೆ. ಎಂಥ ನೈತಿಕ ಸಂದಿಗ್ಧತೆಯಿದು!
ದೃಷ್ಟ್ವೇಮಂ ಸ್ವಜನಂ ಕೃಷ್ಣ ಯುಯುತ್ಸುಂ ಸಮುಪಸ್ಥಿತಮ್
ಸೀದಂತಿ ಮಮ ಗಾತ್ರಾಣಿ ಮುಖಂ ಚ ಪರಿಶುಷ್ಯತಿ
-ಯುದ್ಧಾಭಿಲಾಷೆಯಿಂದ ನಿಂತಿರುವ ಈ ತನ್ನ ಸ್ವಜನರನ್ನು ನೋಡಿ ನನ್ನ ಅವಯವಗಳು ಕುಂದುತ್ತಿವೆ. ಮತ್ತು ಬಾಯಿ ಒಣಗುತ್ತಿದೆ.
ಮೆಟ್ಟಿ ನೋಡಿದನಹಿತ ರಾಯರ
ಥಟ್ಟುಗಳ ತೆರಳಿಕೆಯನುತ್ಸಹ
ಗೆಟ್ಟು ಫಲುಗುಣ ಸೆಡೆದು ಮನದಲಿ ನೊಂದು ತಲೆ..
ಕೆಟ್ಟ ಕಾಯದ ಸುಖಕಳುಪಿ ಒಡ
ಹುಟ್ಟಿದರ ಕೈಯಾರೆ ಕೊಂದರೆ
ಮುಟ್ಟದೇ ಕಡುಪಾಪ ಘನಪರಿತಾಪ ತನಗೆಂದ
ಇಲ್ಲಿ ಅರ್ಜುನನು ತನ್ನೆದುರು ನಿಂತ ಶತೃಗಳ ಸೈನ್ಯವನ್ನು ನೋಡಿ, ಮನಸ್ಸಿನಲ್ಲಿಯೇ ನೋಯುತ್ತಾನೆ. ಈ ದೇಹದ ಸುಖಕ್ಕಾಗಿ ತಾನು ಈ ತನ್ನ ಸೋದರರನ್ನು ಕೊಂದರೆ ತನಗೆ ಪಾಪವು ತಟ್ಟದಿರುತ್ತದೆಯೇ ಎಂದುಕೊಳ್ಳುತ್ತಾನೆ.
ನಿಮಿತ್ತಾನಿ ಚ ಪಶ್ಯಾಮಿ ವಿಪರೀತಾನಿ ಕೇಶವ
ನ ಚ ಶ್ರೇಯೋನುಪಶ್ಯಾಮಿ ಹತ್ವಾ ಸ್ವಜನಮಾಹವೇ
ನ ಕಾಂಕ್ಷೇ ವಿಜಯಂ ಕೃಷ್ಣ ನ ಚ ರಾಜ್ಯಂ ಸುಖಾನಿ ಚ
ಕಿಂ ನೋ ರಾಜ್ಯೇನ ಗೋವಿಂದ ಕಿಂ ಭೋಗೈರ್ಜೀವಿತೇನ ವಾ
ನನ್ನ ಸ್ವಜನರನ್ನು ಈ ಯುದ್ಧದಲ್ಲಿ ಕೊಂದು ರಾಜ್ಯವನ್ನೂ ಸುಖವನ್ನೂ ಅಪೇಕ್ಷಿಸುವುದಿಲ್ಲ. ವಿಜಯವನ್ನೂ ಪೇಕ್ಷಿಸುವುದಿಲ್ಲ ಎನ್ನುತ್ತಾನೆ.
ಕೆಲಬರೊಡಹುಟ್ಟಿದರು ಗುರುಗಳು
ಕೆಲರು ಕೆಲಬರು ಮಾವ ಮೈದುನ
ನಳಿಯ ಮಗ ಹಿರಿಯಯ್ಯ ಮುತ್ತಯ ಮೊಮ್ಮನೆನಿಸುವರು
ಕಳದೊಳಿನಿಬರ ಕೊಂದು ಶಿವ ಶಿವ
ಕೆಲವು ದಿವಸದ ಸಿರಿಗೆ ಸೋಲಿದು
ಮುಳುಗುವೆನೆ ಭವಸಿಂಧುವಿನೊಳಾನೆನುತ ಮನಮುರಿದ
ಇಲ್ಲಿ ತನ್ನ ಒಡಹುಟ್ಟಿದವರಿದ್ದಾರೆ, ಮಾವ, ಮೈದುನ, ಅಳಿಯ, ಮಗ, ಹಿರಿಯ ತಾತ, ಮುತ್ತಾತರಿದ್ದಾರೆ. ಯುದ್ಧದಲ್ಲಿ ಇವರೆಲ್ಲರನ್ನೂ ಕೊಂದು ಈ ಅಸ್ಥಿರವಾದ ಸಿರಿಗೆ ಮನಸೋತರೆ ನಾನು ಪಾಪದ ಸಮುದ್ರದಲ್ಲಿ ಮುಳುಗಲಾರೆನೇ ಎಂದು ಮನದಲ್ಲಿ ನೊಂದ. ಭಗವದ್ಗೀತೆಯಲ್ಲಿ ಇದೇ ಪ್ರಸಂಗವು ಹೀಗೆ ವರ್ಣಿತವಾಗಿದೆ:
ಆಚಾರ್ಯಾಃ ಪಿತರಃ ಪುತ್ರಾಸ್ತಥೈವ ಚ ಪಿತಾಮಹಾಃ
ಮಾತುಲಾಃ ಶ್ವಶುರಾಃ ಪೌತ್ರಾಃ ಶ್ಯಾಲಾಃ ಸಂಬOಧಿನಸ್ತಥಾ
ಪಾಪಮೇವಾಶ್ರಯೇದಸ್ಮಾನ್ಹತ್ವೈತಾನಾತತಾಯಿನಃ
ಸ್ವಜನಂ ಹಿ ಕಥಂ ಹತ್ವಾ ಸುಖಿನಃ ಸ್ಯಾಮ ಮಾಧವ
ತಸ್ಮಾನ್ನಾರ್ಹಾ ವಯಂ ಹಂತುO ಧಾರ್ತರಾಷ್ಟ್ರಾನ್ಸ್ವಬಾಂಧವಾನ್
ಈ ಸಾಮ್ರಾಜ್ಯ, ಸಂಪತ್ತು ಎಲ್ಲವೂ ಭ್ರಾಂತಿ ಎನ್ನುತ್ತಾನೆ. ಈ ದೇಹವನ್ನು ಧರಿಸಿಬಂದವರಿಗೆ ರೋಗವೋ, ಅಥವಾ ಇನ್ನಾವ ತೆರದಿಂದಲೋ  ಮರಣ ಕಟ್ಟಿಟ್ಟದ್ದು. ಅಂಥ ಈ ದೇಹವನ್ನು ನಂಬಿ ಬಂಧುಗಳೊOದಿಗೆ ವೈರತ್ವವನ್ನು ಮಾಡಿ ನರಕಕ್ಕೆ ಹೋಗುವುದೇ? ಎಂದು ಹೇಳಿ ರಥದಲ್ಲಿ ಬಿಲ್ಲನ್ನು ಇಳಿಸಿದ್ದನು.
ಆಗ ಶ್ರೀಕೃಷ್ಣನು
ಆರನೈ ನೀ ಕೊಲುವೆ ನಿನ್ನಿಂ
ದಾರು ಸಾವರು ದೇಹವೇನೋ ನಿಜ
ಧೀರನಾತ್ಮನ ಕೊಲುವೆಯೋ ದಿಟ ನಿನ್ನ ಬಗೆಯೇನು
ಚಾರುದೇಹಕೆ ಭೂತನಿಕರಕೆ
ವೈರವಿಲ್ಲುಳಿದಂತೆ ವಿಗತವಿ
ಕಾರನಚಲನಗಮ್ಯನದ್ವಯನಾತ್ಮ ನೋಡೆಂದ
ನೀನು ಯಾರನ್ನು ಕೊಲ್ಲುವೆ, ನಿನ್ನಿಂದ ಯಾರು ಸಾಯಲಿರುವರು ಎಂದು ಕೇಳುತ್ತಾನೆ.
ಯಃ ಏನಂ ವೇತ್ತಿ ಹಂತಾರO ಯಶ್ಚಃ ನಂ ಮನ್ಯತೇ ಹತಂ
ಉಭೌ ತೌನ ವಿಜಾನೀತೋ ನಾಯಂ ಹಂತಿ ನ ಹನ್ಯತೇ
ಆತ್ಮನು ಕೊಲ್ಲುವವನೆಂದು ಯಾರು ತಿಳಿಯುತ್ತಾರೋ, ಮತ್ತು ಈತನು ಕೊಲ್ಲಲ್ಪಟ್ಟವನೆಂದು ಯಾವನು ಭಾವಿಸುತ್ತಾನೋ ಆ ಇಬ್ಬರೂ ಅರಿಯರು. ಈ ಆತ್ಮನು ಕೊಲ್ಲಲ್ಪಡುವುದೂ ಇಲ್ಲ, ಕೊಲ್ಲುವುದೂ ಇಲ್ಲ.. ಎಂದು ಶ್ರೀಕೃಷ್ಣನು ಹೇಳುವದೂ ಇದೇ ಅರ್ಥದಲ್ಲಿಯೇ.
ತನುವಳಿದ ಬಳಿಕಿನಲಿ ತನು ಶಂ
ಸಂಜನಿಸುಗೆOಬುದು ಭವವ ಬಳಸುವ
ತನುವಿನಲಿ ಕೌಮಾರಯೌವನವಾರ್ಧಿಂಗಳಲಿ
ತನು ವಿಕಾರಿಸುವುದು ಸುರ‍್ಮದ
ವಿನುತದುಷ್ಕೃತವೆನಿಪ ಹುಸಿ ಕ
ಲ್ಪನೆ ಶರೀರಕ್ಕಲ್ಲದಾತ್ಮಂಗಿಲ್ಲಕೇಳೆOದ
ಈ ದೇಹವು ಅಳಿದ ಮೇಲೆ ಆತ್ಮಕ್ಕೆ ಇವ್ಯಾವುದೇ ಅಳಿವು ಉಳಿವಿನ ಪ್ರಶ್ನೆಗಳು ಇಲ್ಲವೆಂದು ಹೇಳುತ್ತಾನೆ. ಈ ದೇಹವು ಅಳಿಯುವುದೂ ಅಲ್ಲ, ಹುಟ್ಟುವುದೂ ಇಲ್ಲ. ಈ ದೇಹವು ಕಳಚಿದರೆ ಕಳಚುವುದು, ಇದನ್ನೇ ಗೀತೆಯಲ್ಲಿ
ವಾಸಾಂಸಿ ಜೀರ್ಣಾನಿ ಯಥಾ ವಿಹಾಯ
ನವಾನಿ ಗೃಹ್ಣಾತಿ ನರೋಪರಾಣಿ
ತಥಾ ಶರೀರಾಣಿ ವಿಹಾಯ ಜೀರ್ಣಾ
ನ್ಯನ್ಯಾನಿ ಸಂಯಾತಿ ನವಾನಿ ದೇಹೀ
ಎಂದರೆ ಮನುಷ್ಯನು ಹಳೆಯ ಬಟ್ಟೆಗಳನ್ನು ಬಿಟ್ಟು ಹೊಸ ಬಟ್ಟೆಗಳನ್ನು ತೊಡುವಂತೆ ದೇಹವನ್ನು ಹೊಂದಿರುವ ಆತ್ಮನು ನಶಿಸಿಹೋದ ಶರೀರವನ್ನು ಬಿಟ್ಟು ಹೊಸ ಶರೀರವನ್ನು ಹೊಂದುತ್ತಾನೆ ಎಂದು ಹೇಳಲಾಗಿದೆ.
ನಂತರ ಶ್ರೀಹರಿಯು ತನ್ನ ವಿಶ್ವ ರೂಪವನ್ನು ತೋರಿ ಅರ್ಜುನನ ಸಂದೇಹಗಳನ್ನೆಲ್ಲ ನಿವಾರಿಸುತ್ತಾನೆ.

ಮುಂದುವರೆಯುತ್ತದೆ……

Leave a Reply