ಕುಮಾರವ್ಯಾಸ ಹಾಗೂ ಭಗವದ್ಗೀತೆ  ಭಾಗ -೩

ಕುಮಾರವ್ಯಾಸ ಹಾಗೂ ಭಗವದ್ಗೀತೆ  ಭಾಗ -೩

ಇದೆ ನಿರಂಜನತತ್ವ ಸಾಮ್ರಾ
ಜ್ಯದ ಸಘಾಟಿಕೆ ನಾವು ಕಡು ಮೂ
ರ್ಖದಲಿ ಮೈಮರೆದೆವು ಶರೀರದ ಬಂಧುಕೃತ್ಯದಲಿ
ಯದುಗಳನ್ವಯದಾತ ನಮಗೊ
ಳ್ಳಿದನು ಸೋದರಭಾವನೆಂದೇ
ಮದಮುಖದಿ ಕಡುಗೇಡ ಕೆಟ್ಟೆನು ಶಿವಶಿವಾಯೆಂದ
ಅರ್ಜುನನಿಗೆ ಯುದ್ಧ ಮಾಡುವ ಉತ್ಸಾಹವೇ ಇಲ್ಲದಾದಾಗ ಅವನಿಗೆ ಶ್ರೀಕೃಷ್ಣನು. ‘ನಿನ್ನ ಎದುರಿಗೆ ಇರುವ ಸೈನ್ಯ ಸತ್ತಂತಾಗಿದೆ. ಇಂಥ ಕಾರ್ಯವನ್ನು ಮಾಡುವವನು ನೀನಲ್ಲ. ಭಗವಂತನು ಆ ಕಾರ್ಯ ಮಾಡುತ್ತಾನೆ. ಅವನು ಈಗಾಗಲೇ ಈ ಸೈನ್ಯವನ್ನು ಕೊಂದುಬಿಟ್ಟಿದ್ದಾನೆ. ನೀನು ನಿಮಿತ್ತ ಮಾತ್ರನು ಎಂದು ಮೊದಲಾಗಿ ಭಗವದ್ಗೀತೆಯನ್ನೇ ಅರ್ಜುನನಿಗೆ ಉಪದೇಶಿಸುತ್ತಾನೆ. ಕೊನೆಗೆ ಅರ್ಜುನನಿಗೆ ದಿವ್ಯ ನೇತ್ರವನ್ನು ಕೊಟ್ಟು ವಿಶ್ವರೂಪವನ್ನು ತೋರಿಸುತ್ತಾನೆ. ಇದರಿಂದ ಚೈತನ್ಯ ಪಡೆದ ಅರ್ಜುನನು ಯುದ್ಧಕ್ಕೆ ಅಣಿಯಾಗುವನು. ಹೀಗೆ ಈ ಗೀತೋಪದೇಶ ಪರ್ವವು ಪರಿಸಮಾಪ್ತಿಗೊಳ್ಳುತ್ತದೆ. ಅರ್ಜುನನ ಮೋಹವು ಅಳಿಯುತ್ತದೆ. ಸ್ಮೃತಿಯುಂಟಾಗುತ್ತದೆ.
ಈ ಕಾವ್ಯದ ಮಹಿಮೆನ್ನು ಹೇಳುವಾಗಲೇ ನಮ್ಮ ನಾರಣಪ್ಪನು :
ಹರಿಯ ಬಸುರೊಳಗಖಿಲ ಲೋಕದ
ವಿರಡವಡಗಿಹವೋಲು ಭಾರತ
ಶರಧಿಯೊಳಗಡಗಿಹವನೇಕ ಪುರಾಣ ಶಾಸ್ತ್ರಗಳು ||
ಪರಮ ಭಕ್ತಿಯಲೀ ಕೃತಿಯನವ
ಧರಿಸಿ ಕೇಳ್ದಾನರರ ದುರಿತಾಂ
ಕುರದ ಬೇರಿನ ಬೇಗೆಯೆಂದರುಹಿದನು ಮುನಿನಾಥ || ೧೮ ||
ವಿಷ್ಣುವಿನ ಉದರದಲ್ಲಿ ಎಲ್ಲಾ ಹದಿನಾಲ್ಕು ಲೋಕಗಳ, ವಿರಾಟ ತತ್ತ್ವವು  (ಅನಂತ ಬ್ರಹ್ಮಾಂಡದ ಮೂಲ ತತ್ತ್ವವು) ಅಡಗಿರುವಂತೆ, ಭಾರತವೆಂಬ ಸಮುದ್ರದಲ್ಲಿ ಅನೇಕ ಪುರಾಣ ಶಾಸ್ತ್ರಗಳು ಸೇರಿಕೊಂಡಿರುವುವು. ಪರಮ ಭಕ್ತಿಯಿಂದ ಈ ಕೃತಿಯನ್ನು ಮನಸ್ಸಿಟ್ಟು ಕೇಳಿದ ಆ ಜನರ, ಪಾಪಗಳ ಮೊಳಕೆಯ ಬೇರು ಬೆಂಕಿಯಿOದ ಸುಡುವುದು ಎಂದು ಮುನಿ ವೈಶಂಪಾಯನನು ಹೇಳಿದನು.
ಕಾವ್ಯದ ಹಿರಿಮೆಯನ್ನು,
ಅರಸುಗಳಿಗಿದು ವೀರ ದ್ವಿಜರಿಗೆ
ಪರಮ ವೇದದ ಸಾರ ಯೋಗೀ
ಶ್ವರರ ತತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ ||
ವಿರಹಿಗಳ ಶೃಂಗಾರ ವಿದ್ಯಾ
ಪರಿಣತರಲಂಕಾರ ಕಾವ್ಯಕೆ
ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ || ೧೯ ||
ಈ ಕಾವ್ಯವು ಅರಸರಿಗೆ ಮತ್ತು ಕ್ಷತ್ರಿಯರಿಗೆ ವೀರಗುಣವನ್ನು ಕೊಡುವುದು, ಬ್ರಾಹ್ಮಣರಿಗೆ ವೇದದ ಸಾರವನ್ನು ತಿಳಿಸುವುದು, ಯೋಗಿಗಳಿಗೆ ತತ್ತ್ವ ವಿಚಾರವನ್ನು ಕೊಡುವುದು, ಮಂತ್ರಿಗಳಿಗೆ ಬುದ್ಧಿಶಕ್ತಿಯನ್ನು ಕೊಡುವುದು, ವಿರಹಿಗಳಿಗೆ ಶೃಂಗಾರರಸ ನೀಡಿ ಶಾಂತಗೊಳಿಸುವುದು, ಪಂಡಿತರಿಗೆ ನಾನಾ ಬಗೆಯ ಅಲಂಕಾರದ ಕಾವ್ಯವಾಗಿದೆ, ಇದು ಕಾವ್ಯಕ್ಕೇ ಗುರು – ಹಾಗೆ ಇರುವಂತೆ, ಕುಮಾರವ್ಯಾಸನು ಭಾರತವನ್ನು ರಚಿಸಿದನು.

ಕೃಷ್ಣನು ಕುಮಾರವ್ಯಾಸ ಭಾರತದ ಮೊದಲ ನಾಲ್ಕು ಪರ್ವಗಳಲ್ಲಿ ಅಲ್ಲಲ್ಲಿ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಕಾಣಿಸಿಕೊಳ್ಳುತ್ತಾನೆ; ಆನಂತರ ಉದ್ಯೋಗ ಪರ್ವದಿಂದ ಹಿಡಿದು ಕೊನೆಯವರೆಗೆ ಭಾರತವನ್ನೆಲ್ಲ ಆಕ್ರಮಸಿಬಿಡುತ್ತಾನೆ. ಪಾಂಡವರು ಕಷ್ಟದಲ್ಲಿ ಸಿಲುಕಿಕೊಂಡು ನಲುಗುತ್ತಿರುವಾಗ, ಸಹಾಯಕ್ಕಾಗಿ ಬೇಡಿಕೊಂಡಾಗ ಮತ್ತು ಸಂದಿಗ್ಧ ಸಮಯಗಳಲ್ಲೆಲ್ಲ ಕೃಷ್ಣ ನೆರವಿಗೆ ಬರುತ್ತಾನೆ. ಯುದ್ಧ ನಡೆಯುವಾಗಲಂತೂ ಕೃಷ್ಣ ತಾನೇ ತಾನಾಗಿರುತ್ತಾನೆ; ಪಾಂಡವರನ್ನು ಗೆಲವಿನತ್ತ ನಡೆಸಲು ಏನೇನು ತಂತ್ರೋಪಾಯಗಳು ಬೇಕೋ ಎಲ್ಲವನ್ನೂ ಒದಗಿಸುತ್ತಾನೆ. ಯಾವ ಸನ್ನಿವೇಶದಲ್ಲಿ ಏನು ಮಾಡಬೇಕೆಂದು ಪಾಂಡವರ ಪರವಾಗಿ ಯೋಚಿಸುವವನೂ ಅವನೇ, ಹಾಗೆ ಆಗುವಂತೆ ಮಾಡುವವನೂ ಅವನೇ. ಅವನ ಪ್ರಕಾರ ತನ್ನ ಕಾವ್ಯ ಮಾಡುವುದು ವೇದಸಮ್ಮಿತ ಉಪದೇಶ. ತನ್ನ ಕಾವ್ಯಜಲದ ಪಾವನತೆಗೆ ಕಾರಣವಾದ ಕೃಷ್ಣ ತುಳಸಿಯೇ ಎಲ್ಲೆಲ್ಲೂ ವಿಜೃಂಭಿಸವುದು. ತನ್ನದು ‘ಕೃಷ್ಣಕಥೆ’ ಎಂದೇ ಹೇಳಿಕೊಳ್ಳುತ್ತಾನೆ. ಈ ರೀತಿಯಲ್ಲಿ ನಮ್ಮ ನಾರಣಪ್ಪನದು ಎಲ್ಲಿ ನೋಡಿದರೂ ಕೃಷ್ಣಸ್ತುತಿಯೇ.

 

Leave a Reply