ಪಾಪವನ್ನೂ ಕರ್ಮಪ್ರಸಕ್ತಿಯನ್ನೂ ಅಳಿಸುವ ಅರಿವು

ಪಾಪವನ್ನೂ ಕರ್ಮಪ್ರಸಕ್ತಿಯನ್ನೂ ಅಳಿಸುವ ಅರಿವು

‘‘ಯಾವ ಜ್ಞಾನ ಪಡೆಯುವುದರಿಂದ ಮೋಹವನ್ನು ನೀಗುವೆಯೋ ಹಾಗೂ ಎಲ್ಲವನ್ನೂ ನಿನ್ನೊಳಗೂ ನನ್ನೊಳಗೂ (ಪಿಂಡಾಡದೊಳಗೂ ಬ್ರಹ್ಮಾಂಡದೊಳಗೂ) ನೋಡಲು ಸಮರ್ಥನಾಗುವೆಯೋ ಅಂತಹ ಜ್ಞಾನವನ್ನು ಪಡೆದುಕೊ’’ ಎಂದು ಗೀತಾಚಾರ್ಯನು ಅರ್ಜುನನಿಗೆ ಬೋಧಿಸುತ್ತಿದ್ದನಷ್ಟೆ? ಮುಂದುವರಿಸುತ್ತಾನೆ¬; ‘‘ಒಂದು ವೇಳೆ ನೀನು ಎಲ್ಲ ಪಾಪಗಳಿಗಿಂತಲೂ ಹೆಚ್ಚಿನ ಪಾಪವನ್ನೇ ಮಾಡಿದ್ದರೂ, ಈ ಜ್ಞಾನವೆಂಬ ದೋಣಿಯನ್ನು ಹತ್ತಿದರೆ ಸಾಕು, ಪಾಪಸಮುದ್ರವನ್ನೇ ದಾಟಿಬಿಡುವೆ!’’ (ಭ.ಗೀ.: 4.36)

ಜ್ಞಾನವೆಂಬುದು ಸರ್ವಪಾಪಗಳನ್ನೂ (ಪಾಪ ಮಾಡುವ ಮನೋದೌರ್ಬಲ್ಯವನ್ನೂ) ನಾಶಗೈಯುತ್ತದೆ ಎಂದರ್ಥ. ಮನುಷ್ಯನು ಅಜ್ಞಾನವಶನಾಗಿ ಪಾಪಕರ್ಮದಲ್ಲಿ ತೊಡಗಿದ್ದರೂ, ಅರಿವೆಂಬ ಬೆಂಕಿಯ ಕಿಡಿ ಹೊತ್ತಿಕೊಂಡರೆ ಆ ಪಾಪತಾಪಗಳೆಲ್ಲ ಅಳಿದುಬಿಡುತ್ತವೆ. ರಾಮಕೃಷ್ಣರ ನಿದರ್ಶನ ಹೀಗಿದೆ; ‘‘ಸಾವಿರ ವರ್ಷಗಳಿಂದ ಕತ್ತಲೆಯಲ್ಲಿರುವ ಕೋಣೆಯನ್ನು ಬೆಳಗಲು ಎಷ್ಟು ಸಮಯ ಬೇಕು? ಕೋಣೆಯೊಳಗೆ ದೀಪ ಹಚ್ಚಿದರಾಯಿತು, ಒಂದೇ ಕ್ಷಣದಲ್ಲಿ ಕತ್ತಲೆ ಮಾಯವಾಗಿ ಬೆಳಕು ಚಿಮ್ಮುತ್ತದೆ! ಮನುಷ್ಯನಲ್ಲಿ ತುಂಬಿರುವ ಜನ್ಮಜನ್ಮಗಳ ಪಾಪದ ಕತ್ತಲೆಯೂ ಹಾಗೆಯೇ, ಜ್ಞಾನದ ಒಂದೇ ಕಿರಣದಿಂದಲೇ ಮಾಯವಾಗಿಬಿಡುತ್ತದೆ!’’

ಸೆಮೆಟಿಕ್ ಮತಗಳಲ್ಲಿ ‘ಪಾಪ’ವನ್ನು ‘ಆತ್ಯಂತಿಕ ಅಸ್ತಿತ್ವ (ಉಠಿಛ್ಟಿ್ಞ್ಝ ಉಡಜ್ಝಿ), ಆತ್ಯಂತಿಕ ಗುಣ, ಸೈತಾನ್ ಶಕ್ತಿ’ ಎಂದು ಬಿಂಬಿಸಲಾಗುತ್ತದೆ. ಅದರಿಂದಾಗಿ, ‘ಪಾಪವು ಅನಿವಾರ್ಯ, ಶಾಶ್ವತ’ ಎಂದು ಒಪ್ಪಿ, ಅಂಗೀಕರಿಸಿ, ಅನುಮತಿ ಕೊಟ್ಟಂತೆಯೂ ಆಯಿತೆನ್ನಿ! ಆದರೆ ಸನಾತನಧರ್ಮವು ಪಾಪವನ್ನು ‘ಕ್ಷಣಿಕ ದೌರ್ಬಲ್ಯ’ವೆಂದಷ್ಟೇ ಪರಿಗಣಿಸುತ್ತದೆ. ಪಾಪವೆನ್ನುವುದು ಆತ್ಯಂತಿಕ ಅಸ್ತಿತ್ವವೂ ಅಲ್ಲ, ಶಕ್ತಿಯೂ ಅಲ್ಲ. ಅದು ನಮ್ಮ ಅನಾದಿಯ ಸ್ವಭಾವವೂ ಅಲ್ಲ. ಅದೊಂದು ಕ್ಷಣಿಕ ದೌರ್ಬಲ್ಯವಷ್ಟೆ. ಅದು ನಮ್ಮೊಂದಿಗೆ ಶಾಶ್ವತವಾಗಿ ಉಳಿಯುವಂತಹದ್ದೂ ಅಲ್ಲ. ಸ್ವಾಮಿ ವಿವೇಕಾನಂದರು ಹೇಳುತ್ತಾರೆ; ‘‘ನಡೆಯುವುದು ನಮ್ಮ ಸ್ವಭಾವವೇ ಹೊರತು ಎಡವುವುದು ನಮ್ಮ ಸ್ವಭಾವವಲ್ಲ. ಅಕಸ್ಮಾತ್ ನಾವು ಎಡವಿದ್ದೇವೆಂದರೆ, ಎಚ್ಚರ ತಪ್ಪಿದ್ದೇವೆ ಅಥವಾ ದುರ್ಬಲವಾಗಿದ್ದೇವೆ ಎಂದಷ್ಟೇ ಅರ್ಥ, ಆ ದೌರ್ಬಲ್ಯವನ್ನು ಮೀರಬಹುದು, ಮೀರಬೇಕು’’. ನಮ್ಮನ್ನು ಎಚ್ಚರ ತಪ್ಪಿಸುವುದು ನಮ್ಮೊಳಗಿನ ಮನೋವಿಕಾರಗಳಾದ ಮೋಹ, ಕಾಮಾದಿಗಳು. ಅವುಗಳ ಪ್ರಭಾವಕ್ಕೆ ಸಿಲುಕಿಯೇ ಮನುಷ್ಯನು ಪಾಪವನ್ನು ಮಾಡುವುದು. ಜ್ಞಾನವು ಮೂಡಿದಾಗ ಇವು ಅಳಿದು ‘ಜಾಗೃತಿ’ ಮೂಡುತ್ತದೆ. ಜಾಗೃತಚೇತನನಲ್ಲಿ ಭೋಗಾಸಕ್ತಿಯಾಗಲಿ ತತ್ಸಬಂಧಿತ ಪಾಪಪ್ರವೃತ್ತಿಯಾಗಲಿ ಉಳಿದಿರಲಾರವು. ಬೆಳಕು ಮೂಡಿದಲ್ಲಿ ಕತ್ತಲೆ ಇರಲಾರದಷ್ಟೆ? ಜನ್ಮಜನ್ಮಾಂತರಗಳಲ್ಲಿ ಮಾಡಿದ ಪಾಪಸಂಸ್ಕಾರವೇ ನೀಗುತ್ತದೆ.

‘‘ಹಾಗಾದರೆ ಈಗಾಗಲೇ ಮಾಡಿರುವ ಪಾಪಕರ್ಮಗಳ ಪಾಪಫಲವೂ ತಪ್ಪಿಬಿಡುತ್ತದೆಯೇ?!’’ ಎಂದು ನಮ್ಮಲ್ಲಿ ಕುತೂಹಲ ಕೆರಳುವುದು ಸಹಜವೇ. ಬೇಕೋ ಬೇಡವೋ, ಮನುಷ್ಯನು ಪಾಪಪ್ರಾರಬ್ಧವನ್ನೂ ಪುಣ್ಯಸಂಚಯವನ್ನೂ ಅನುಭವಿಸಿಯೇ ತೀರಬೇಕು ಎನ್ನುತ್ತದೆ ಕರ್ಮಸಿದ್ಧಾಂತ. ಮನುಷ್ಯನು ಜ್ಞಾನಿಯೂ ಮುಕ್ತನೂ ಆದ ಮೇಲೂ, ದೇಹದಲ್ಲಿರುವವರೆಗೂ, ಜೀವನಾನುಭವಗಳನ್ನೂ, ಪಡೆದುತಂದ ಪಾಪಪುಣ್ಯಗಳ ಬುತ್ತಿಯನ್ನೂ ಸವಿಯಲೇಬೇಕಂತೆ! ‘ಪುಣ್ಯಬಲದಿಂದಲೂ ದೇವತಾರಾಧನದ ಸತ್ಪಲದಿಂದಲೂ, ಮಹಾತ್ಮರ ಆಶೀರ್ವಾದದಿಂದಲೂ ಹಾಗೂ ನಿರ್ಲಿಪ್ತಿಯಿಂದಲೂ ಅದರ ಪ್ರಮಾಣ (ನಮ್ಮ ಮೇಲಿನ ಅವುಗಳ ಪ್ರಭಾವ) ಸ್ವಲ್ಪ ತಗ್ಗೀತು’ ಎಂದು ಮಹಾತ್ಮರು ಹೇಳುತ್ತಾರೆ. ಮಾತೆ ಶಾರದಾದೇವಿಯವರು ಕೊಡುವ ನಿದರ್ಶನ ಮನೋಜ್ಞವಾಗಿದೆ; ‘‘ಕರ್ಮನದಿಯನ್ನು ದಾಟುವುದು ಯಾರಿಗೂ ತಪ್ಪದು. ಲೌಕಿಕರಿಗೂ ಭಕ್ತರಿಗೂ ಜ್ಞಾನಿಗಳಿಗೂ ಎಲ್ಲರೂ ದಾಟಲೇಬೇಕು. ಆದರೆ ನದಿಯಲ್ಲಿ ಇಳಿದು (ಅದನ್ನು ಅಂಟಿಸಿಕೊಂಡು) ಈಜಿ, ದಾಟುವವರು ಲೌಕಿಕರು. ಅವರಿಗೆ ಮೈ ಒದ್ದೆಯಾಗುವುದು, ಆಯಾಸವಾಗುವುದು ಹಾಗೂ ಅಪಾಯವೂ ತಪ್ಪಿದ್ದಲ್ಲ. ದೈವಕೃಪೆಯೆಂಬ ದೋಣಿಯನ್ನೇರಿ ನದಿಯನ್ನು ದಾಟುವವರು ಭಕ್ತರು. ಅವರು ಲೌಕಿಕರಿಗಿಂತ ಕಡಿಮೆ ಕಷ್ಟ-ಅಪಾಯಗಳನ್ನು ಅನುಭವಿಸುತ್ತಾರೆ. ಆದರೆ ಜ್ಞಾನಿಗಳಾದರೋ ಸೇತುವೆಯ ಮೇಲೆ ಹೋಗುವವರು! ದಾಟುವಾಗ ಅವರಿಗೆ ನದಿಯ ಸಂಪರ್ಕವೇ ಆಗದು! ನಿರ್ಲಿಪ್ತವಾಗಿರುತ್ತಾರೆ!’’ ಒಟ್ಟಿನಲ್ಲಿ, ಅಂತರಂಗದಲ್ಲಿ ಜ್ಞಾನವು ಮೂಡುತ್ತಲೇ ಪಾಪಪ್ರಸಕ್ತಿಯು ಅಳಿಯುತ್ತದೆ. ನಿರ್ಲಿಪ್ತಿ ಮೂಡುತ್ತದೆ. ಆ ಶಕ್ತಿಯಿಂದ ಮನುಷ್ಯನು ಜೀವನವನ್ನು ಗೆಲ್ಲುತ್ತಾನೆ ಎಂದು ತಾತ್ಪರ್ಯ. ಕೃಷ್ಣನು ಮುಂದುವರಿಸುತ್ತಾನೆ; ‘‘ಬೆಂಕಿಯು ಇಂಧನವನ್ನು ಸುಟ್ಟು ಭಸ್ಮಮಾಡುವಂತೆ, ಜ್ಞಾನವೆಂಬ ಅಗ್ನಿಯು ಕರ್ಮಗಳನ್ನೆಲ್ಲ ಸುಟ್ಟು ನಾಶಮಾಡಿಬಿಡುತ್ತದೆ’’ (ಭ.ಗೀ.: 4.37)

ಕರ್ತವ್ಯಾದಿ ಸ್ವಧರ್ಮವು ಎಲ್ಲರಿಗೂ ಅನಿವಾರ್ಯ. ಆದರೆ ನಮ್ಮೊಳಗಿನ ಭೋಗಸಂಕಲ್ಪದ ಬೀಜಗಳು ಸುಮ್ಮಸುಮ್ಮನೆ ಹಲವು ಕರ್ಮಗಳಪ್ರಸಕ್ತಿಯನ್ನು ಮೂಡಿಸುತ್ತವೆ. ಜ್ಞಾನವು ಮೂಡಿದಾಗ ವಿರತಿಯ ಭಾವ ಮೂಡಿ, ಈ ಭೋಗಸಂಕಲ್ಪಗಳನ್ನು ಅಳಿಸುತ್ತದೆ. ಹಾಗಾಗಿ ಹೊಸ ಹೊಸ ಕರ್ಮಗಳ ಗೀಳು ಬೆಳೆಯಲಾರದು. ಮನುಷ್ಯನು ಶಾಂತನೂ ದಾಂತನೂ ಕೃತಕೃತ್ಯನೂ (ಮಾಡಿಮುಗಿಸಿದವನೂ) ಆಗುತ್ತಾನೆ. ಇದನ್ನೇ ಕೃಷ್ಣನು ಕರ್ಮನಾಶ ಎನ್ನುತ್ತಿರುವುದು. ‘ಗುಡಾಣದ ತುಂಬ ಇರುವ ರಾಶಿರಾಶಿ ಹತ್ತಿಯನ್ನು ಒಂದೇ ಒಂದು ಬೆಂಕಿಯ ಕಿಡಿ ಸುಟ್ಟುಹಾಕುವಂತೆ, (ಭೋಗಸಂಕಲ್ಪಜನ್ಯ) ಕರ್ಮಗಳನ್ನು (ಕರ್ಮಚಾಪಲ್ಯವನ್ನು) ಜ್ಞಾನದ ಒಂದೇ ಕಿಡಿ ನೀಗಿಬಿಡುತ್ತದೆ’ ಎನ್ನುತ್ತಾರೆ ರಾಮಕೃಷ್ಣರು.

ಡಾ. ಆರತೀ ವಿ. ಬಿ.

ಕೃಪೆ: ವಿಜಯವಾಣಿ

Leave a Reply