ಪರಮಾತ್ಮನಾದ ನನ್ನನ್ನರಿತು ಶಾಂತನಾಗು

ಪರಮಾತ್ಮನಾದ ನನ್ನನ್ನರಿತು ಶಾಂತನಾಗು
ಡಾ. ಆರತೀ ವಿ. ಬಿ.
‘ಮುಕ್ತಿ’ ಎನ್ನುವುದು ಭಾವಾತಿರೇಕದ ಯತ್ನಕ್ಕೆ ಸಿದ್ಧಿಸುವ ‘ಫಲ’ವಲ್ಲ. ಜೀವಿಯ ಸರ್ವತೋಮುಖ ವಿಕಾಸ ಶುದ್ಧಿ ಪಕ್ವತೆ ಸೇರಿ ಅವನನ್ನು ಸರ್ವತಂತ್ರ ಸ್ವತಂತ್ರಸ್ಥಿತಿಗೆ ಏರಿಸುತ್ತವೆ. ಅದು ಮುಕ್ತಿ. ಕೃಷ್ಣನು ಹಿಂದಿನ ಶ್ಲೋಕದಲ್ಲಿ ಇದನ್ನೇ ಸೂಚಿಸಿದ್ದ. ಕಾಮಾದಿಗಳನ್ನು ಗೆದ್ದು, ಇಂದ್ರಿಯ – ಮನೋ – ಬುದ್ಧಿಗಳನ್ನೂ ಸಂಯಮಿಸಿ, ಪ್ರಾಣಗಳನ್ನು ಸ್ಥಿರಗೊಳಿಸಿ, ನಾಸಾಗ್ರದಲ್ಲಿ ದೃಷ್ಟಿಯನ್ನು ಕೀಲಿಸಿ, ನಿಶ್ಚಲಧ್ಯಾನದಲ್ಲಿ ಮುಳುಗಿ, ಆತ್ಮದಲ್ಲಿ ನೆನೆಗೊಳ್ಳುವವನು ‘ಮುಕ್ತ’ ಎಂದಿದ್ದ.
ಮುಂದೆ ಹೇಳುತ್ತಾನೆ; ‘ಎಲ್ಲ ಯಜ್ಞ-ತಪಸ್ಸುಗಳ ಭೋಕ್ತಾರನೂ (ಸ್ವೀಕರಿಸುವವನು), ಸರ್ವಲೋಕಗಳ ಈಶ್ವರನೂ, ಎಲ್ಲ ಜೀವಿಗಳ ಮಿತ್ರನೂ (ಎಲ್ಲರ ಶ್ರೇಯಸ್ಸನ್ನೇ ಸಾಧಿಸುವವನೂ) ಆದ ನನ್ನನ್ನು ತಿಳಿದವರಾಗಿ ಶಾಂತಿಯನ್ನು ಪಡೆಯುತ್ತಾರೆ.’ (ಭ.ಗೀ.: 5.29)
ಮುಕ್ತನು ಮಾತ್ರವೇ ನಿತ್ಯಮುಕ್ತ ಭಗವಂತನ ನೈಜ ನೆಲೆಯನ್ನು ಊಹಿಸಬಲ್ಲ. ‘ನಾನು ಕರ್ತಾ’, ‘ಭೋಕ್ತಾ’ ಎಂಬ ಅಹಂ-ಮಮಭಾವಗಳಲ್ಲೇ ಬೇರೂರಿರುವ, ಮೂರ್ತಪ್ರಪಂಚದ ಪರಿಧಿಯೊಳಗೇ ಆಲೋಚಿಸುವ ಮತಿಮನಂಗಳಿಗೆ ದೇವರ ವಿಶ್ವರೂಪವನ್ನು ಊಹಿಸುವುದೂ ಅಸಾಧ್ಯ. ಮೂರ್ತಪ್ರಪಂಚಕ್ಕೆ ಕಟ್ಟಿಹಾಕುವ ಕಾಮಾದಿಗಳ ಆವರಣಗಳು ಕಳಚಿಬಿದ್ದಾಗ ಮನುಷ್ಯನು ತನ್ನ ಒಳಗಿನ ಹಾಗೂ ಹೊರಗಿನ ಜಗತ್ತುಗಳನ್ನು ಸ್ಪಷ್ಟವಾಗಿ ನೋಡಬಲ್ಲ. ಅದರಲ್ಲೆಲ್ಲ ಓತಪ್ರೋತವಾಗಿ ತುಂಬಿರುವ ಭಗವತ್ ಚೈತನ್ಯವನ್ನು ಗುರುತಿಸಬಲ್ಲ, ದಿವ್ಯಲೀಲೆಯನ್ನು ಆಸ್ವಾದಿಸಬಲ್ಲ.
ತನ್ನೊಳಗೂ ಸುತ್ತಲ ಚರಾಚರಗಳೆಲ್ಲದರಲ್ಲೂ ಏಕಮೇವಾದ್ವಿತೀಯ ಪರತತ್ವವೇ ವ್ಯಾಪಿಸಿರುವುದು ಅರ್ಥವಾಗುತ್ತದೆ. ‘ಎಲ್ಲ ಲೋಕಗಳ ಈಶ್ವರನೂ, ಎಲ್ಲ ಧರ್ಮಕರ್ಮಗಳ ಪ್ರೇರಕನೂ ಕಾರಕನೂ ಆದವನು ಪರಮಾತ್ಮನೇ’ ಎನ್ನುವುದೂ ಅರ್ಥವಾಗುತ್ತದೆ. ಮಾಡುವ ಧರ್ಮಕರ್ಮಗಳನ್ನು ಸ್ವೀಕರಿಸಿ ಹರಸುವವನೂ ಅವನೇ ಎಂದು ಬೋಧೆಯಾಗುತ್ತದೆ. ಆಸಕ್ತರಿಗೆ ಭೋಗವನ್ನೂ, ವಿರಕ್ತರಿಗೆ ಯೋಗವನ್ನೂ ಅವರವರ ಧರ್ಮಕರ್ವನುಸಾರ ಹಂಚುವ ಈಶ್ವರನೂ ಆತನೆ ಎನ್ನುವುದು ಅರ್ಥವಾಗುತ್ತದೆ. ಆ ಭಗವಂತನ ಅನಂತ ನಾಮರೂಪಗಳನ್ನೂ ಸತ್ವಸಾಮರ್ಥ್ಯಗಳನ್ನೂ, ಊಹಾತೀತ ಲೀಲಾವಿಲಾಸಗಳನ್ನೂ ನೋಡಿ, ಅದ್ಭುತರಸದ ಅನುಭವವಾಗಿ ಆತ ‘ಭಕ್ತ’ನಾಗುತ್ತಾನೆ. ಭಕ್ತಿ ಎಂದರೆ ‘ಶರಣಾಗತಿ’. ಭೂಮವಾದದ್ದನ್ನು ಕಂಡಾಗ ‘ನಾನು’ ಎನ್ನುವುದು ಕರಗಿ ಭಕ್ತಿ ಉಂಟಾಗುವುದು. ಉದಾಹರಣೆಗೆ; ಹಿಮಾಲಯ ಪರ್ವತವನ್ನು ದಿಟ್ಟಿಸಿದಾಗ, ವಿಶಾಲ ಸಾಗರವನ್ನೋ, ಆಗಸವನ್ನೋ ದಿಟ್ಟಿಸಿದಾಗ, ಚಣಕಾಲ ನಮ್ಮನ್ನು ನಾವೇ ಮರೆತು, ಆ ಅನಂತತೆಯಲ್ಲಿ ಕರಗಿಹೋಗುತ್ತೇವೆ. ಭಕ್ತಿಯಲ್ಲೂ ಹಾಗೆ. ಅನಂತಸ್ವರೂಪಿಯನ್ನು ಧ್ಯಾನಿಸಿದಾಗ ಅಹಮಿಕೆ ಕುಗ್ಗಿ, ಭಕ್ತಿ ಒಡಮೂಡುತ್ತದೆ. ಇದೇ ನೈಜ ‘ಭಕ್ತಿ’. ಇದು ಸಿದ್ಧಿಸುವವರೆಗೂ ಮಾಡುವ ಭಕ್ತಿಯೆಲ್ಲವೂ ಈ ಭಕ್ತಿಯನ್ನು ಪಡೆಯುವ ಸಲುವಾಗಿ ಮಾಡುವ ತಯಾರಿ ಅಷ್ಟೆ! ಇಂತಹ ಸ್ಥಿತಿಗೇರಿದವನು ನಿಜವಾದ ಮುಕ್ತನು ಎನ್ನುತ್ತಿದ್ದಾನೆ ಕೃಷ್ಣ. ಮುಕ್ತಿಯೆನ್ನುವುದು ಪಕ್ವತೆಯಿಂದ ಸಿದ್ಧಿಸುವ ಸಹಜ ವಿಕಾಸದ ಪಾರಮ್ಯ. ವಸ್ತುಪ್ರಪಂಚದ ಯಾರಿಗೇ ಆದರೂ ಯಾವುದಕ್ಕೇ ಆದರೂ ಅಂಟಿಕೊಳ್ಳದಂತೆ ಇರಬಲ್ಲವನೇ ನಿಜವಾದ ಯೋಗಿ. ಆತನೇ ಸುಖಿ, ಶಾಂತ.
ಭಗವಂತನ ದಿವ್ಯಲೀಲೆಯನ್ನು ಕಾಣುವವನ ದೃಷ್ಟಿಗೆ ಸುಖದುಃಖಗಳೂ ಭಗವಲ್ಲೀಲೆಗಳೇ ಸರಿ. ಹಾಗಾಗಿ ಅವುಗಳ ಬಗ್ಗೆ ಭಯ-ಕುತೂಹಲ-ಮೋಹ-ತುಡಿತ ಮುಂತಾದವುಗಳಾವುವೂ ಉಳಿದಿರುವುದಿಲ್ಲ. ಕಾಮಾದಿ ಕಲ್ಮಶರಹಿತವಾದ ಅಂತಹವನ ಶುದ್ಧಾಂತರ್ಯದಲ್ಲಿ ಅಂತರಾತ್ಮನ ಬೆಳಕನ್ನು ತಾನೇ ತಾನಾಗಿ ಹೊರಚೆಲ್ಲುತ್ತದೆ. ಆತನ ನಡೆನುಡಿಗಳಲ್ಲಿ ‘ತನ್ನದೇನೂ ಉಳಿದಿರದೆ, ಭಗವದಿಚ್ಛೆಯೊಂದೇ ಕೆಲಸ ಮಾಡುತ್ತಿರುತ್ತದೆ. ಮಾಡುವ, ಮಾಡಿಸುವ ಶಕ್ತಿಗಳು ಮಾಡಲಾಗುವ ಕರ್ಮವೂ ಅದರ ಫಲವೂ ಎಲ್ಲವೂ’ ಭಗವಂತನ ಲೀಲೆಗೆ ‘ಅಧೀನ’ ಎನ್ನುವುದು ಅರ್ಥವಾಗುತ್ತದೆ. ‘ನಾನು-ನನ್ನದು-ನನಗೆ’ ಎಂಬ ತುಡಿತಗಳೆಲ್ಲ ಅಳಿದು, ಅಪಾರ ಶಾಂತಿ ನೆಲೆಸುತ್ತದೆ. ತಾಯ ಮಡಿಲಲ್ಲಿ ಕುಳಿತು ನಗುವ ವಿಶ್ರಾಂತ ಹಸುಳೆಯಂತೆ ಆತ ಭಗವಂತನಲ್ಲಿ ಶರಣಾಗಿ ಮಗುವಿನಂತಿರುತ್ತಾನೆ. ಕಾರ್ಯರಂಗಕ್ಕಿಳಿದಾಗ ಸಿಂಹಪರಾಕ್ರಮ, ಕಳಚಿಕೊಂಡು ವಿಶ್ರಾಂತವಾದಾಗ ಅಷ್ಟೇ ನಿರ್ಲಿಪ್ತಿ! ಯಾವುದನ್ನು ಹಿಡಿದು ದಕ್ಷತೆಯಿಂದ ಕಾರ್ಯಸಾಧನೆಗೈಯ್ಯಬಲ್ಲರೋ, ಕಾರ್ಯವೆಲ್ಲ ಮುಗಿದಾಗ, ಅದನ್ನೆಲ್ಲ ಬಿಟ್ಟು ಅಂತಮುಖವಾಗುವುದೋ ಇವರಿಗೆ ಗೊತ್ತಿರುತ್ತದೆ.
ತನ್ನನ್ನು ‘ದೇವಕೀಸುತ’ ಎಂದಷ್ಟೇ ಭ್ರಮಿಸದೆ, ಭಗವಂತನ ರೂಪವೆಂದು ತಿಳಿದವನು ಮುಕ್ತ ಎಂದೂ ಸೂಚಿಸುತ್ತಿದ್ದಾನೆ ಕೃಷ್ಣ. ನಿಜ, ಕಣ್ಣಮುಂದೆಯೇ ದೇವರಿದ್ದರೂ ಗುರುತಿಸಲಾಗದ ಸ್ಥಿತಿ ನಮ್ಮದು. ರಾಮಕೃಷ್ಣರು ತಮ್ಮ ಮುಖದ ಮುಂದೆ ಬಟ್ಟೆಯನ್ನು ಹಿಡಿದು ನಿದರ್ಶಿಸುತ್ತಾರೆ; ‘ನೋಡಿ, ನಾನು ನಿಮ್ಮ ಮುಂದೆಯೇ ಇದ್ದರೂ ನನ್ನ ಮುಖ ಕಾಣುತ್ತಿಲ್ಲ! ಮಾಯೆಯೆಂಬ ಈ ಬಟ್ಟೆ ಅಡ್ಡ ಇರುವುದರಿಂದ ಹಾಗೆ!’ ಎಂದು. ಮಾಯೆ ನಿರ್ವಿುಸಿರುವ ಆವರಣಗಳಿಂದಾಚೆ ಎದ್ದು ಬಂದಾಗ ಮುಕ್ತಿ. ಆಗ, ನಾವು ಯಾರೆಂದು ಅರ್ಥವಾಗುತ್ತದಲ್ಲದೆ, ಪರಿಪರಿಯ ರೂಪದಲ್ಲಿ ಜಗತ್ತಿನಲ್ಲಿ ಮೈದಾಳಿ ಲೀಲೆಯಾಡುವ ಭಗವಂತನ ವಿಭೂತಿಯನ್ನೂ ಗುರುತಿಸುವ ಸಾಮರ್ಥ್ಯ ಪಡೆಯುತ್ತೇವೆ. ಕೃಷ್ಣನ ಈಶ್ವರೀಯ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಇಂತಹ ಯೋಗ್ಯತೆ ಬೇಕು. ಆದರೆ, ಇಲ್ಲಿ ಕೃಷ್ಣನು ತನ್ನ ಭಗವತ್ಸ್ವರೂಪದ ಬಗ್ಗೆ ವಾಚ್ಯವಾಗಿ ಹೇಳಿರುವುದು, ಅವನ ಅಹೇತುಕ ಕೃಪೆಗೆ ಸಾಕ್ಷಿಯಾಗಿದೆ.

Leave a Reply