ಸರ್ವ ಜೀವರ ಹಿತದಲ್ಲಿ ರತರು

ಸರ್ವ ಜೀವರ ಹಿತದಲ್ಲಿ ರತರು
ಡಾ. ಆರತೀ ವಿ.ಬಿ.
‘ಕಲ್ಮಶವಿಲ್ಲದವರೂ, ಗೊಂದಲವಿಲ್ಲದವರೂ, ಯತಾತ್ಮರೂ ಬ್ರಹ್ಮನಿರ್ವಾಣ ಹೊಂದುತ್ತಾರೆ’ ಎಂದು ಕೃಷ್ಣನು ವಿವರಿಸುತ್ತಿದ್ದ. ಆ ಲಕ್ಷಣಗಳ ಸಾಲಿಗೆ ‘ಸರ್ವಭೂತಹಿತೇರತಾಃ’ ಎನ್ನುವುದನ್ನೂ ಸೇರಿಸುತ್ತಾನೆ. ಹಾಗೆಂದರೆ ‘ಎಲ್ಲ ಭೂತಗಳ (ಜೀವಿಗಳ) ಒಳಿತನ್ನೇ ಬಯಸುವವರು, ಒಳಿತನ್ನೇ ಸಾಧಿಸುವವರು’ ಎಂದರ್ಥ.
ಈ ಸೃಷ್ಟಿಯಲ್ಲಿ ಮನುಷ್ಯರೂ ಪಶುಪಕ್ಷಿಗಳೂ ವನಸ್ಪತಿಗಳೂ ತಿರ್ಯಕ್ ಜಂತುಗಳೂ ಎಲ್ಲರೂ ಇದ್ದಾರೆ, ಇರುತ್ತಾರೆ. ಹಾಗಾಗಿ ಸಹಬಾಳ್ವೆ ಅನಿವಾರ್ಯ. ಅವರವರ ಸುರಕ್ಷತೆಗೂ ವ್ಯವಹಾರಕ್ಕೂ ಅನುಕೂಲಕ್ಕೂ ಎಷ್ಟು ಬೇಕೋ ಅಷ್ಟರ ಮಟ್ಟಿಗೆ ಇವರೆಲ್ಲರ ಸಂಸರ್ಗವನ್ನು ಹಿತಮಿತದಲ್ಲಿ ಇಟ್ಟುಕೊಳ್ಳುವುದು ಕ್ಷೇಮ. ಆದರೆ ಮನುಷ್ಯನಿಗೆ ಬೇಕಾದ್ದಕ್ಕಿಂತ ಹೆಚ್ಚಿನದನ್ನು ಬಾಚಿಕೊಳ್ಳುವ ಲೋಭ! ಸುತ್ತಲ ಮನುಷ್ಯರನ್ನೂ ಪಶುಪಕ್ಷಿಗಳನ್ನೂ ವನಸ್ಪತಿಗಳನ್ನೂ ಅಗತ್ಯಕ್ಕಿಂತ ಹೆಚ್ಚಾಗಿ ಬಳಸಿ ಬಳಲಿಸಿ ಬಿಸುಟು ವಿಕೃತ ಸಂತೋಷಪಡುವ ಬುದ್ಧಿ! ಜಗತ್ತನ್ನು ಹಾಗೆ ‘ಸೂರೆಗೊಳ್ಳುವುದೇ ಸುಖ’ ಎಂಬ ಭ್ರಾಂತಿ! ಇಂತಹ ಪ್ರವೃತ್ತಿಯಿಂದಲೇ ಜಗತ್ತಿನಲ್ಲಿ ಯುದ್ಧ-ಪ್ರತಿಯುದ್ಧಗಳು ಹುಟ್ಟುವುದು. ‘ವಸ್ತು-ವ್ಯಕ್ತಿಗಳ ಉಪಭೋಗವೇ ಸುಖ’ ಎನ್ನುವ ಭ್ರಾಂತಿಯನ್ನು ಕಳಚಿಟ್ಟು, ತನ್ನೊಳಗೆ ಸುಖಿಸುವ ಯೋಗವನ್ನು ಸಿದ್ಧಿಸಿಕೊಂಡ ಬ್ರಹ್ಮನಿಷ್ಠನು ಹೀಗೆ ವರ್ತಿಸಲಾರ. ಆತ್ಯಂತಿಕ ಸುಖವನ್ನು ತನ್ನೊಳಗೆ ಕಂಡುಕೊಳ್ಳುತ್ತಾನೆ. ಇಹಜೀವನದಲ್ಲಿ ತನ್ನ ಧರ್ಮಕರ್ಮಗಳೇನು ಎನ್ನುವುದನ್ನು ಅರಿತು ದಕ್ಷತೆಯಿಂದ ಪಾಲಿಸುತ್ತಾನೆ. ಪ್ರತಿಫಲ ಬಯಸದೆ, ಸ್ತುತಿ-ನಿಂದೆಗಳಿಗೂ ತಲೆಕೆಡಿಸಿಕೊಳ್ಳದೆ, ತನ್ನಲ್ಲಿರುವ ವಿದ್ಯೆ, ಪ್ರತಿಭೆ, ಛಲ, ಬಲಗಳನ್ನೂ ಬಹುಜನಹಿತಾರ್ಥವಾಗಿ ಬಳಸುತ್ತಾನೆ. ಇಂಥ ವ್ಯಕ್ತಿ ಮಾಡುವ ಕಾರ್ಯಗಳೆಲ್ಲ ಪ್ರಭಾವಶಾಲಿಯೂ, ಲೋಕಕಲ್ಯಾಣಕಾರಕವೂ ಆಗಿರುತ್ತವೆ. ಅಂತರೀಕ್ಷಣೆಯ ಮೂಲಕ ತನ್ನೊಳಗಿನ ಸತ್ವಸಾಮರ್ಥ್ಯಗಳನ್ನು ಅಭಿವ್ಯಂಜಿಸುತ್ತಾನಲ್ಲದೆ ತನ್ನ ಸುತ್ತಲಿನವರಿಗೂ ಪ್ರೇರಣೆಯಿತ್ತು ಆತ್ಮೋದ್ಧಾರದತ್ತ ತೊಡಗಿಸುತ್ತಾನೆ. ಫಲಾಪೇಕ್ಷೆಯ ಗೊಡವೆ ಅವನಿಗಿರುವುದಿಲ್ಲವಾದ್ದರಿಂದ, ಮೃತ್ಯುವಿಗೂ ಅಂಜದವನಾದ್ದರಿಂದ ಎಂತಹ ದುಷ್ಟಶಕ್ತಿಯನ್ನಾದರೂ ಎದುರಿಸುವ ಬಲ ಅವನಲ್ಲಿರುತ್ತದೆ. ದುಷ್ಟದಮನಕ್ಕೂ ಶಿಷ್ಟರಕ್ಷಣೆಗೂ ಆತ ಸದಾ ಸಿದ್ಧನೂ ಸನ್ನದ್ಧನೂ ಆಗಿರುತ್ತಾನೆ. ಅವನಲ್ಲಿ ಸ್ವಾರ್ಥ ಹಾಗೂ ಲಾಭಾಲಾಭಗಳ ಲೆಕ್ಕಾಚಾರವಿರುವುದಿಲ್ಲವಾದ್ದರಿಂದ, ಎಲ್ಲೇ ಅನ್ಯಾಯ, ಅಧರ್ಮಗಳು ನಡೆದರೂ, ‘ನನಗೇಕೆ ಬೇಕು ಉಸಾಬರಿ?’ ಎಂದು ಸುಮ್ಮನೆ ಕೂಡದೆ, ಧರ್ಮರಕ್ಷಣೆಗಾಗಿ ಧಾವಿಸುತ್ತಾನೆ. ಸಜ್ಜನರಿಗೆ ಬೆಂಬಲವಾಗಿ ನಿಲ್ಲುತ್ತಾನೆ. ಕ್ಷಾತ್ರವನ್ನು ಮೆರೆಯುತ್ತಾನೆ, ಇತರರಲ್ಲೂ ಕ್ಷಾತ್ರವನ್ನು ಪ್ರಚೋದಿಸುತ್ತಾನೆ. ಆ ಬಳಿಕ ‘ತಾನೇನೂ ಮಾಡಿಲ್ಲವೋ’ ಎಂಬಂತೆ ಬ್ರಾಹ್ಮದ ಶಾಂತಿಯಲ್ಲಿ ಅಂತಮುಖನಾಗುತ್ತಾನೆ.
ಪುರಾಣಪ್ರಸಿದ್ಧ ರಾಜರ್ಷಿ ಜನಕ, ರಿಷಭದೇವಾದಿಗಳು, ಇತಿಹಾಸಪ್ರಸಿದ್ಧ ಚಾಣಕ್ಯ, ಲಲಿತಾದಿತ್ಯ, ವಿದ್ಯಾರಣ್ಯ, ವಿವೇಕಾನಂದ, ವಿಶ್ವೇಶ್ವರಯ್ಯ, ಸರ್ದಾರ್ ಪಟೇಲ್ ಮುಂತಾದವರೂ ಇದಕ್ಕೆ ಉದಾಹರಣೆ. ಇವರೆಲ್ಲ ಸರ್ವರ ಹಿತಕ್ಕಾಗಿ ಕಾರ್ಯವೆಸಗಿದವರು. ವೈಯಕ್ತಿಕ ಲಾಭಾಲಾಭಗಳ ವಿಷಯದಲ್ಲಿ ನಿರ್ಲಿಪ್ತರಾಗಿದ್ದವರು. ಇಂಥವರು ಸಾಧಿಸಿದ ಲೋಕಕಲ್ಯಾಣಕಾರ್ಯ ಅಮೋಘ. ಸಾಮಾನ್ಯರು ‘ಲೆಕ್ಕಾಚಾರ’ಗಳನ್ನಿಟ್ಟುಕೊಂಡು ಮಾಡುವ ಸಣ್ಣಪುಟ್ಟ ‘ಸಮಾಜಸೇವೆ’ಗಿಂತಲೂ ಈ ಮಹಾತ್ಮರ ಲೋಕಕಲ್ಯಾಣಕಾರ್ಯಗಳು ಸಹಸ್ರಪಾಲು ಪ್ರಭಾವಶಾಲಿಯಾಗಿರುತ್ತವೆ! ಇದೇ ಆತ್ಮನಿಷ್ಠೆಯ ಶಕ್ತಿ! ‘ಬ್ರಹ್ಮನಿರ್ವಾಣವು ನಮ್ಮನ್ನು ಜಗತ್ತಿನಿಂದ ವಿಮುಖಗೊಳಿಸುತ್ತದೆ’ ಎನ್ನುವ ಭೀತಿ ಅರ್ಥಹೀನ. ಜಗತ್ತಿನಲ್ಲಿರುತ್ತ, ಜಗದ್ಧಿತ ಸಾಧಿಸುತ್ತ, ಅಂಟದೆ ನಿರ್ಲಿಪ್ತವಾಗಿರುವ ಶಕ್ತಿಯನ್ನು ಆತ್ಮನಿಷ್ಠೆ ಮಾತ್ರ ಕೊಡಬಲ್ಲುದು. ಹಾಗಾಗಿ ‘ನೀನು ಬ್ರಹ್ಮನಿಷ್ಠನಾದ ಕ್ಷತ್ರಿಯನಾಗು. ಮಾಡುವ ಧರ್ಮರಕ್ಷಣೆಯನ್ನು ಅಪ್ರತಿಮ ಪರಾಕ್ರಮದಿಂದ ಮಾಡಲು ಸಾಧ್ಯವಾಗುತ್ತದೆ’ ಎನ್ನುತ್ತಿದ್ದಾನೆ ಕೃಷ್ಣ.
‘ಜಗತ್ತನ್ನೆಲ್ಲ ಸೂರೆಗೊಳ್ಳುವುದೊಂದೇ ಸುಖ’ ಎಂಬುದು ಅಪಾಯಕಾರಿಭಾವ. ಒಬ್ಬರು ಮತ್ತೊಬ್ಬರ ಧರ್ಮಕರ್ಮಗಳನ್ನೂ ಸಂಪತ್ತನ್ನೂ ಹಾಳುಗೆಡವುವಂತೆ ಮಾಡುವುದು ಅದೇ. ಮಧ್ಯಯುಗದಲ್ಲಿ ಕೆಲವು ಐರೋಪ್ಯ ಹಾಗೂ ಮಧ್ಯಪ್ರಾಚ್ಯಪ್ರಾಂತಗಳ ಪಂಗಡಗಳು ‘ಜಗತ್ತನ್ನೆಲ್ಲ ಗೆದ್ದು ಎಲ್ಲರ ಸಂಪತ್ತನ್ನೂ ಸೂರೆಗೊಳ್ಳುವ’ ದುರಾಕಾಂಕ್ಷೆಗೆ ಬಿದ್ದರು. ಪರಿಣಾಮ? ದೇಶವಿದೇಶಗಳೊಳಗೆ ಕುತಂತ್ರದಿಂದ ನುಸುಳಿ, ಮಿತಿಮೀರಿ ಲೂಟಿ, ಅನಾಚಾರ, ಅತ್ಯಾಚಾರ, ರಕ್ತಪಾತಗಳನ್ನು ನಡೆಸಿ, ಭೂಮಿ, ಸ್ತ್ರೀ, ಸಂಪತ್ತು, ಅಧಿಕಾರಗಳನ್ನು ಕಬಳಿಸಿದರು. ಇತರರ ಸ್ವಾಭಿಮಾನವನ್ನೂ ವಿಚಾರಸ್ವಾತಂತ್ರ್ಯವನ್ನೂ ಕೆಡವಲು, ದಾಸ್ಯದಲ್ಲಿರಿಸಿಕೊಳ್ಳಲು ‘ಉದ್ಧಾರ ಮಾಡುವ’ ನಾಟಕದ ‘ಮತಾಂತರ’ಗಳನ್ನೂ ಮಾಡುತ್ತ ಬಂದಿದ್ದಾರೆ. ತಮ್ಮ ‘ಶ್ರೇಷ್ಠತೆ’ಯನ್ನು ಹೇರಲು ಅನುಕೂಲಿಸುವಂತಹ ವಾಮಪಂಥ-ಚಿಂತನ, ‘ಶಿಕ್ಷಣ’ಮಾಧ್ಯಮ, ‘ಬೋಧನಾ’ಕೇಂದ್ರಗಳನ್ನು ನಡೆಸುತ್ತ ಬಂದಿದ್ದಾರೆ. ಇದರ ಪತಿಣಾಮವಾಗಿ ಅದೆಷ್ಟೊ ಮೂಲಜನಾಂಗಗಳೂ ಹಾಗೂ ಅವರ ಧರ್ಮ, ಸಂಸ್ಕ ೃ, ಕಲೆ, ಸಾಹಿತ್ಯಗಳೆಲ್ಲ ನಶಿಸಿಯೇ ಹೋದವು! ಮಿಕ್ಕವರಲ್ಲಿ ಮತ-ಪಂಥಗಳ ಹೆಸರಲ್ಲಿ ಗೊಂದಲ, ದ್ವೇಷ, ವಿಭಜನೆ, ಕಲಹಗಳು ಹೆಡೆಯಾಡಿ ಅಶಾಂತಿ ಎದ್ದಿದೆ. ಭಾವಾವೇಶದಲ್ಲಿ ಮಾತೃಧರ್ಮವನ್ನು ಬಿಟ್ಟುಹೋದವರ ಪೈಕಿ ಹಲವರು, ತಮ್ಮತನವನ್ನೂ ಬಿಡಲಾಗದೆ, ಹೊಸಮತದಲ್ಲೂ ಬೇರೂರಲಾಗದೆ ಅತಂತ್ರರಾದರು. ಆ ದ್ವಂದ್ವದ ಸ್ಥಿತಿಯಲ್ಲಿ ವಿದೇಶೀಯ-ವಿಧರ್ವಿುೕಯ ಶಕ್ತಿಗಳ ಕೈಗೊಂಬೆಗಳಾಗಿ ದೇಶದ್ರೋಹಕ್ಕೂ ಜಾರಿದರು.
ಒಟ್ಟಿನಲ್ಲಿ ಭೋಗವಾದವು ವ್ಯಕ್ತಿಗಳನ್ನೂ ಸಮಾಜವನ್ನೂ ಹೇಗೆ ಅನರ್ಥಪರಂಪರೆಗೆ ಸಿಲುಕಿಸುತ್ತದೆ ಎನ್ನುವುದಕ್ಕೆ ಈ ಜಾಗತಿಕ ಆಕ್ರಮಣಗಳೇ ನಿದರ್ಶನ. ‘ಭೋಗಕ್ಕೆ ಪ್ರಾರಂಭದಿಂದಲೇ ಮಿತಿ ಇಟ್ಟು, ಆತ್ಮನಿಷ್ಠಯತ್ತ ಗಮನ ಹರಿಯಿಸು’ ಎನ್ನುತ್ತಾನೆ ಕೃಷ್ಣ.
ಕೃಪೆ: ವಿಜಯವಾಣಿ

Leave a Reply