ಸರ್ವರಲ್ಲೂ ಸಮಭಾವದಿಂದ ಗೆಲುವು

ಸರ್ವರಲ್ಲೂ ಸಮಭಾವದಿಂದ ಗೆಲುವು
ಡಾ. ಆರತೀ ವಿ. ಬಿ.
‘ಯೋಗಿಯು, ತನ್ನ ವಿಷಯದಲ್ಲಿ ಸುಹೃನ್ ಮಿತ್ರರಾಗಿರುವವರಲ್ಲೂ, ಉದಾಸೀನ ತೋರುವವರಲ್ಲೂ, ಮಧ್ಯಸ್ಥರಾಗಿರುವವರಲ್ಲೂ, ತನ್ನನ್ನು ದ್ವೇಷಿಸುವವರಲ್ಲೂ, ಬಂಧುಗಳಲ್ಲೂ, ಸಜ್ಜನರಲ್ಲೂ, ಪಾಪಿಗಳಲ್ಲೂ ಸಮ0ಭಾವದಿಂದಿರುತ್ತಾನೆ ಎನ್ನುವುದೇ ವಿಶೇಷ.’ (ಭ.ಗೀ.: 6.9)
‘ದುಷ್ಟರನ್ನೂ ಭ್ರಷ್ಟರನ್ನೂ ಆತಂಕವಾದಿಗಳನ್ನೂ ಶತ್ರುಗಳನ್ನೂ ಸಹಿಸಬೇಕು, ಕ್ಷಮಿಸಬೇಕು, ಬಿಟ್ಟುಬಿಡಬೇಕು’ ಎನ್ನುತ್ತಿದ್ದಾನೆಯೆ ಕೃಷ್ಣ? ಗೊಂದಲ ಬೇಡ! ಅಧರ್ಮವನ್ನೂ ದೌಷ್ಟ್ಯನ್ನೂ ಸರ್ವಥಾ ದಮನ ಮಾಡಲೇಬೇಕು ಎನ್ನುವ ನೀತಿಯೊಂದಿಗೇ ಕೃಷ್ಣನು ಗೀತೋಪದೇಶವನ್ನು ಪ್ರಾರಂಭಿಸಿದ್ದು. ಆದರೂ ದುಷ್ಟರ ವಿಷಯದಲ್ಲಿ ನಮ್ಮ ಅಂತರಂಗವು ಹೇಗೆ ಸ್ಪಂದಿಸಬೇಕು ಎನ್ನುವುದನ್ನು ಇಲ್ಲಿ ಸೂಚಿಸುತ್ತಿದ್ದಾನೆ. ಜಗತ್ತಿನಲ್ಲಿ ಬಂಧುಮಿತ್ರರಿರುವಂತೆ ದ್ವೇಷಿಸುವವರೂ ಪ್ರತಿಕೂಲಿಸುವವರೂ ಇದ್ದೇ ಇರುತ್ತಾರೆ. ಇದನ್ನು ಮೊದಲೇ ತಿಳಿದು ಭಾವ-ಬುದ್ಬುದಗಳನ್ನು ಬೆಳೆಸಿಕೊಳ್ಳದೆ, ಶಾಂತಭಾವದಿಂದ ಅಂಗೀಕರಿಸುವುದು ವಿವೇಕ. ಅನುಕೂಲಿಸಿದರೆಂದು ಅಪ್ಪಿಕೊಳ್ಳುವುದು, ಪ್ರತಿಕೂಲಿಸಿದವರನ್ನು ದ್ವೇಷಿಸುವುದು, ಕೈಕೊಟ್ಟರೆಂದು ಬಿಡುವುದು, ಹೊಗಳಿದರೆಂದು ನೆಚ್ಚುವುದು – ಇವೆಲ್ಲ ಅಪಕ್ವಮತಿಯ ಲಕ್ಷಣ. ಹೀಗೆ ಜಗತ್ತಿನಲ್ಲಿ ಬಿಡುವುದು, ಹಿಡಿಯುವುದು, ಅಳಲುವುದು, ಹಗೆ ಸಾಧಿಸುವುದು – ಇತ್ಯಾದಿಗಳನ್ನು ಮಾಡುತ್ತ ಹೋದರೆ ಕೊನೆಮೊದಲೇ ಇರದು! ಈ ಪ್ರಯತ್ನದಲ್ಲಿ ನಷ್ಟವಾಗುವುದು ನಮ್ಮ ಆಯುಸ್ಸು, ಸಮಯ, ವಿತ್ತ ಮತ್ತು ನೆಮ್ಮದಿಗಳೇ ಹೊರತು ಜಗಜನರ ವರ್ತನೆ ಬದಲಾಗುವುದಿಲ್ಲ. ಜ್ಞಾನಿಯು ‘ಎಲ್ಲರೂ ತನಗನುಕೂಲಿಸಬೇಕು’ ಎಂದು ಹುಚ್ಚುಹಟ ಹಿಡಿಯುವುದಿಲ್ಲ. ಧರ್ವನುಸಾರ ಶಿಷ್ಟರಕ್ಷಣೆ-ದುಷ್ಟಶಿಕ್ಷಣಗಳಲ್ಲಿ ತೊಡಗುತ್ತಾನಾದರೂ, ಯಾರ ಮೇಲೂ ವೈಯಕ್ತಿಕ ಮೋಹವನ್ನಾಗಲಿ ದ್ವೇಷವನ್ನಾಗಲಿ ಇಟ್ಟುಕೊಳ್ಳುವುದಿಲ್ಲ. ಅಗತ್ಯ ಬಂದಾಗ ತನ್ನವರು-ಪರರು ಎನ್ನದೇ ಕಠಿಣಶಿಕ್ಷೆಯನ್ನೂ ವಿಧಿಸುತ್ತಾನೆ. ಆ ಬಳಿಕ ನಿಂದಾ-ಸ್ತುತಿ ಲಾಭ-ನಷ್ಟಗಳಿಗೆ ತಲೆಕೆಡಿಸಿಕೊಳ್ಳದೆ ಅಂತರಂಗದಲ್ಲಿ ಶಾಂತಿಸಂತೋಷಗಳಲ್ಲಿ ನೆಲೆನಿಲ್ಲುತ್ತಾನೆ.
ಶ್ರೀರಾಮನು ರಾವಣನನ್ನು ಕೊಲ್ಲಬೇಕಾಯಿತು. ಆದರೆ ರಾವಣ ಸತ್ತುಬೀಳುತ್ತಲೇ ರಾಮನು ಶಸ್ತಾಸ್ತ್ರ ಬದಿಗಿಟ್ಟು, ಆತನ ರಾಜೋಚಿತ ಅಂತ್ಯಕರ್ಮಗಳಿಗೆ ಆದೇಶ ನೀಡುತ್ತಾನೆ. ‘ರಾವಣನಂತಹ ದುಷ್ಟನಿಗೆ ಅಷ್ಟೆಲ್ಲ ಗೌರವ ತೋರಬೇಕೆ?’ ಎನ್ನುವ ಭಾವ ಲಕ್ಷ್ಮಣನದು. ರಾಮನು ವಿವರಿಸುತ್ತಾನೆ; ‘ವೈರಿಯ ಸಾವಿನೊಂದಿಗೆ ವೈರವೂ ಸಾಯಬೇಕು’ ಎಂದು! ತನಗೆ ಅಪರಾಧವನ್ನೆಸಗಿದ ರಾವಣನ ವಿಷಯದಲ್ಲೂ, ರಾಮನ ಹೃದಯದಲ್ಲಿ ದ್ವೇಷಲೇಶವೂ ಉಳಿಯಲಿಲ್ಲವಲ್ಲ. ಅದೇ ಯೋಗಿಯ ಅಂತರಂಗದ ಲಕ್ಷಣ!
‘ಯೋಗಿಯು ಮಧ್ಯಸ್ಥಿಕೆ ವಹಿಸುವವರಲ್ಲೂ (ತನ್ನ ಮತ್ತು ತನಗಾಗದವರ ವಿಷಯದಲ್ಲೂ ಮಧ್ಯಸ್ಥಿಕೆ ವಹಿಸುವವರ ವಿಷಯದಲ್ಲಿಯೂ) ಸಮಭಾವದಿಂದಿರುತ್ತಾನೆ. ಸಜ್ಜನರಲ್ಲೂ ಪಾಪಿಗಳಲ್ಲೂ ತನ್ನನ್ನು ಪ್ರೀತಿಸುವವರಲ್ಲೂ ಬಂಧುಗಳಲ್ಲೂ ಪಾಪಿಗಳಲ್ಲೂ ದ್ವೇಷಿಸುವವರಲ್ಲೂ ಸಮಾನಭಾವದಿಂದಿರುತ್ತಾನೆ ಯೋಗಿ’ ಎಂದು ಲಕ್ಷಿಸುತ್ತಾನೆ ಕೃಷ್ಣ. ತನ್ನಲ್ಲೇ ಪ್ರಾಣವನ್ನಿಟ್ಟಿದ್ದ ಪಾಂಡವ-ಉದ್ಧವಾದಿಗಳಲ್ಲೂ, ತನ್ನನ್ನು ದ್ವೇಷಿಸುತ್ತಿದ್ದ ಜರಾಸಂಧ-ಶಿಶುಪಾಲರಲ್ಲೂ ಸಮಪ್ರೀತಿಯನ್ನು ತೋರಿದವನು ಕೃಷ್ಣ. ಆದರೂ ಧರ್ವಧರ್ಮಗಳ ಪ್ರಶ್ನೆ ಬಂದಾಗ, ಧರ್ಮಪಕ್ಷಕ್ಕೇ ಬೆಂಬಲವಿತ್ತ ದೃಢಮನಸ್ಸು ಕೃಷ್ಣನದು. ಧರ್ವತ್ಮನಾದರೂ, ಶಿಷ್ಯಮೋಹದಲ್ಲಿ ಸಿಲುಕಿದ್ದ ಬಲರಾಮನಲ್ಲಿ ಕೌರವರನ್ನು ವಿರೋಧಿಸಿ ಧರ್ಮಪಕ್ಷವಾದ ಪಾಂಡವಪಕ್ಷದಲ್ಲಿ ನಿಲ್ಲುವ ಧೈರ್ಯ ಬರಲಿಲ್ಲ!
ನಾಟ್ಯಶಾಸ್ತ್ರದಲ್ಲಿ ರೌದ್ರರಸವನ್ನೂ ವೀರರಸವನ್ನೂ ಬೇರೆ ಬೇರೆಯಾಗಿ ಉಲ್ಲೇಖಿಸಿರುವುದು ಗಮನೀಯ. ಮೇಲ್ನೋಟಕ್ಕೆ ವೀರದಲ್ಲೂ ರೌದ್ರದಲ್ಲೂ ಶತ್ರುದಮನದ ಭಾವವಿದೆ. ಆದರೆ ಕ್ರೋಧದಿಂದ ಹುಟ್ಟುವುದು ರೌದ್ರರಸವಾದರೆ ಉತ್ಸಾಹದಲ್ಲಿ ಹುಟ್ಟುವುದು ವೀರರಸ. ರೌದ್ರರಸಾಭಿವ್ಯಕ್ತಿಯಲ್ಲಿ ಶೌರ್ಯದೊಡನೆ ಕೋಪ-ಹಗೆ-ದ್ವೇಷಗಳ ಆರ್ಭಟವಿರುತ್ತದೆ. ವೀರರಸಾಭಿವ್ಯಕ್ತಿಯಲ್ಲಿ ಶೌರ್ಯದೊಡನೆ ಧರ್ಮನಿಶ್ಚಯ-ದೃಢಮನಸ್ಸು-ಶಾಂತಿಭಾವ ಇರುತ್ತದೆ.
ರಾಮ-ರಾವಣರ ಯುದ್ಧದಲ್ಲಿ ರಾವಣನದು ರೌದ್ರರಸವಾದರೆ ರಾಮನದು ವೀರರಸ! ತಪ್ಪು ತನ್ನದಾದರೂ ರಾವಣನಿಗೆ ರಾಮನ ಬಗ್ಗೆ ನಿಷ್ಕಾರಣ ದ್ವೇಷ-ರೋಷಗಳು! ವೈಯಕ್ತಿಕ ಕಾಮಪೂರ್ತಿಗಾಗಿ ರಾಜ್ಯವನ್ನೇ ಯುದ್ಧದ ಅಪತ್ತಿಗೆ ಸಿಲುಕಿಸಿದ ಆವೇಶ-ಹಠ-ಮೂರ್ಖತನ! ಆದರೆ ಕಷ್ಟನಷ್ಟಗಳಿಗೆ ಸಿಲುಕಿದವನಾದರೂ ರಾಮನು ಶಾಂತನಾಗಿದ್ದ. ಪತ್ನಿಯ ರಕ್ಷಣೆಗಾಗಿಯೂ ದುಷ್ಟಶಿಕ್ಷಣಕ್ಕಾಗಿಯೂ ರಾವಣನನ್ನು ಕೊಂದನೇ ಹೊರತು ರಾವಣನಲ್ಲಿ ಮತ್ತಾವ ಬಗೆಯ ವೈಯಕ್ತಿಕ ಹಗೆಯನ್ನೂ ಇಟ್ಟುಕೊಳ್ಳಲಿಲ್ಲ. ಯುದ್ಧಕ್ಕೆ ನಿಂತ ರಾವಣನು ಆತಂಕ-ಆವೇಶ-ರೋಷಗಳಲ್ಲಿ ಕುದಿಯುತ್ತಿದ್ದ. ದುಡುಕುತನದ ನಿರ್ಧಾರಗಳಿಂದಾಗಿ ತನ್ನವರನ್ನು ಕಳೆದುಕೊಂಡ. ಹಂತಹಂತದಲ್ಲೂ ಸೋಲನ್ನು ಕಾಣುತ್ತ ಮನದಲೇ ಬಳಲಿದ. ಆದರೆ ರಾಮ? ಯುದ್ಧಕ್ಕೆ ನಿಂತಾಗಲೂ ಶಾಂತಮನಸ್ಸು, ನಿಶ್ಚಲಮತಿ, ಸ್ಪಷ್ಟ ಯುದ್ಧನೀತಿ, ಚತುರ ಕಾರ್ಯನಿರ್ವಹಣೆ, ದಕ್ಷನಾಯಕತ್ವ, ಧೈರ್ಯ-ಸ್ಥೈರ್ಯ-ಶೌರ್ಯಗಳ ಭವ್ಯಾಭಿವ್ಯಕ್ತಿ! ರಾಮನ ಅಂತರಂಗದ ಈ ಸತ್ವವು ಅವನನ್ನು ಗೆಲ್ಲುವ ಮುನ್ನವೇ ‘ಗೆಲ್ಲಿಸಿ’ಬಿಟ್ಟಿತ್ತು! ಅತ್ತ, ರಾವಣನ ಪ್ರಕ್ಷುಬ್ಧ ಅಂತರಂಗವು ಅವನನ್ನು ಸಾಯುವ ಮುನ್ನವೇ ‘ಸಾಯಿಸಿ’ಬಿಟ್ಟಿತ್ತು!
‘ಶಾಂತ-ಶಕ್ತ ರಾಮನಂತಾಗು, ಜೀವನವನ್ನು ಗೆಲ್ಲು, ಆವೇಶದ ರಾವಣನಂತಾಗಿ ಸೋತು ಸುಣ್ಣವಾಗಬೇಡ’ ಎನ್ನುವ ರಾಮಾಯಣದ ನೀತಿಯನ್ನೇ ಶ್ರೀಕೃಷ್ಣನು ನಮಗೆ ಇಲ್ಲಿ ಮತ್ತೆ ಬೋಧಿಸುತ್ತಿದ್ದಾನೆ!
(ಲೇಖಕರು ಸಂಶೋಧಕರು, ಸಂಸ್ಕೃತಿ ಚಿಂತಕರು)

Leave a Reply