ಸತ್ಸಂಗದಲ್ಲಿದ್ದು ಜ್ಞಾನ ಪಡೆದುಕೊ

ಸತ್ಸಂಗದಲ್ಲಿದ್ದು ಜ್ಞಾನ ಪಡೆದುಕೊ

‘ಅಧ್ಯಯನ, ಯಾಜನ. ದೇವತಾಪೂಜನ. ಕರ್ತವ್ಯಕರ್ಮ, ಯಜ್ಞಶೇಷವನ್ನು ಉಣ್ಣುವುದು (ಪರಿಣಾಮವಾಗಿ ಏನು ಸಿಕ್ಕರೆ ಅದನ್ನೇ ಮಹಾಪ್ರಸಾದವೆಂದು ಸ್ವೀಕರಿಸುವುದು), ಧ್ಯಾನ. ಮುಂತಾದ ಹಲವು ವಿಧಗಳಲ್ಲಿ ಕರ್ಮಯೋಗವನ್ನಾಚರಿಸುವ ವಿವರಗಳು ವೇದದಿಂದಲೇ ಬಂದಿವೆ, ಅದನ್ನು ಅರಿತು ಆಚರಿಸಬಲ್ಲವನು ಮುಕ್ತನಾಗುತ್ತಾನೆ’ ಎನ್ನುವ ವಿಷಯವನ್ನು ಶ್ರೀಕೃಷ್ಣನು ವಿವರಿಸುತ್ತಿದ್ದನು. ಮುಂದುವರಿಸುತ್ತ ಹೇಳುತ್ತಾನೆ;

‘‘ಕೇವಲ ದ್ರವ್ಯಗಳನ್ನು ಬಳಸಿ ಮಾಡುವ ಯಜ್ಞಕ್ಕಿಂತ, ಜ್ಞಾನಯಜ್ಞವು ಹೆಚ್ಚು ಶ್ರೇಯಸ್ಕರ, ಎಲ್ಲ ಕರ್ಮಗಳೂ ಕೊನೆಗೆ ಜ್ಞಾನದಲ್ಲೇ ಪರಿಸಮಾಪ್ತಿಯಾವುದು’’ ಎಂದು. (ಭ.ಗೀ.: 4.33)

‘ದ್ರವ್ಯಯಜ್ಞ’ ಎಂದರೆ ಭೌತಿಕವಸ್ತುಗಳನ್ನು ಬಳಸಿ ಮಾಡುವ ಪೂಜೆ, ಯಜನ, ತಂತ್ರಾದಿ ಬಾಹ್ಯಕರ್ಮಗಳು. ಅವು ಪ್ರಶಸ್ತವೂ ಶುಭಪ್ರದವೂ ಹೌದು. ಆದರೂ ದ್ರವ್ಯಯಜ್ಞಕರ್ಮಗಳು ಕೇವಲ ‘ಕರ್ಮ’ಗಳಾಗಿಯೇ ನಿಲ್ಲದೆ ಜ್ಞಾನದತ್ತ ನಮ್ಮನ್ನು ಸಾಗಿಸಬೇಕು. ಇಲ್ಲದಿದ್ದಲಿ ಅವುಗಳು ನಮ್ಮನ್ನು ಫಲದಾಸೆ, ಮಮಕಾರ, ಹಾಗೂ ಸುಖದುಃಖಗಳಿಗೆ ಬಂಧಿಸುವ ‘ಭೋಗ-ಕರ್ಮ’ಗಳೇ ಆಗಿಬಿಡುತ್ತವೆ.

ಶ್ರೀಕೃಷ್ಣನು ಹೇಳುತ್ತಿದ್ದಾನೆ; ‘ಎಲ್ಲ ಕರ್ವಚರಣೆಗಳು ನಮ್ಮನ್ನು ಜ್ಞಾನದಲ್ಲೇ ಪರಿಸಮಾಪ್ತಿಯಾಗುವುದು’ (4.33). ಜೀವನದಲ್ಲಿ ಕರ್ಮಗಳನ್ನು ಮಾಡುವುದು ತಪ್ಪದು. ಕರ್ಮವು ತಾನಾಗಿಯೇ ಫಲಾಫಲಗಳನ್ನು ಕೊಡುತ್ತ ಹೋಗುತ್ತದೆ. ಅದು ನಮ್ಮ ನಿಯಂತ್ರಣದಲ್ಲಿಲ್ಲ. ಹಾಗೆ ಬರುವ ಕರ್ಮಫಲಗಳು ನಮಗೆ ಸುಖದುಃಖಾದಿ ಅನುಭವಗಳನ್ನು ಕೊಡುತ್ತವೆ. ಸುಖದುಃಖಗಳೂ ನಮಗೆ ಅನಿವಾರ್ಯ. ನಮ್ಮ ಮನೋಬುದ್ಧಿಗಳು ಪ್ರೌಢವಾಗಿದ್ದರೆ, ಈ ಅನುಭವಗಳನ್ನು ಸಮಭಾವದಿಂದ ಅಂಗೀಕರಿಸಿ ಜೀರ್ಣಿಸಿಕೊಂಡು ಮುಂದುವರಿಯುವ ಶಕ್ತಿ ನಮಗಿರುತ್ತದೆ. ಇಲ್ಲದಿದ್ದರೆ ಈ ನಿರಂತರ ಏಳುಬೀಳುಗಳಿಗೆ ನಾವೂ ಹಿಗ್ಗುತ್ತ ಕುಗ್ಗುತ್ತ ದೇಹ-ಮನಸ್ಸುಗಳನ್ನು ಆಯಾಸಕ್ಕೆ ಒಳಪಡಿಸುತ್ತೇವೆ. ಬುದ್ಧಿಯು ಸ್ಥೈರ್ಯಧೈರ್ಯಗಳನ್ನು ಕಳೆದುಕೊಳ್ಳುತ್ತದೆ, ನಾವು ಧರ್ವಧರ್ಮಗಳ ವಿಷಯದಲ್ಲಿ ಭ್ರಾಂತರಾಗುತ್ತೇವೆ.

ಶ್ರೀಕೃಷ್ಣನು ಪ್ರಾರಂಭದಲ್ಲೇ ಹೇಳಿದ್ದನ್ನು ಸ್ಮರಿಸಬೇಕು; ‘ಆಗಮಾಪಾಯಿನೋ ನಿತ್ಯಾಂಶ್ತಾಂತಿತಿಕ್ಷಸ್ವ ಭಾರತ’ (ಇವು ಬಂದು ಹೋಗುವಂತಹವು, ಅವಗಳನ್ನು ಸಹಿಸು). ಕರ್ಮಗಳೂ ಅನಿವಾರ್ಯ, ಕರ್ಮಫಲಗಳೂ ಅನಿಶ್ಚಿತ. ಹೀಗಾಗಿ, ಕರ್ತವ್ಯಕರ್ಮಗಳನ್ನು ಬಿಡದೆ ಮಾಡುತ್ತ, ಫಲಾಫಲಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇರುವುದೊಂದೇ ನಮಗಿರುವ ದಾರಿ. ಆದರೆ ಈ ಸತ್ಯ ನಮಗೆ ಅರಿವಿಗೆ ಬರುವುದು ಯಾವಾಗ? ಕರ್ಮಗಳನ್ನು ಮಾಡಿ ಮಾಡಿ, ಫಲಾಫಲಗಳನ್ನು ಅನುಭವಿಸಿ ಅನುಭವಿಸಿ ಬೆಂಡಾದ ಮೇಲೆಯೇ! ಹೀಗೆ ಕರ್ಮವು ಕಾಲಾಂತರದಲ್ಲಿ ಹಲವು ಪಾಠಗಳನ್ನು ಕಲಿಸುತ್ತ ನಮ್ಮನ್ನು ಕ್ರಮೇಣ ‘ಜ್ಞಾನ’ಕ್ಕೇ ಒಯ್ಯುವುದು ಖಚಿತ! ಫಲದ ವಿಷಯದಲ್ಲಿ ನಿರ್ಲಿಪ್ತಿಯನ್ನು ಅಭ್ಯಸಿಸಿದರೆ, ಆ ಅರಿವು ಬೇಗನೆ ಬರುತ್ತದೆ. ಇಲ್ಲದಿದ್ದರೆ ಜನ-ಧನದ ಸಂಗದಲ್ಲಿ ತೊಡಗುತ್ತ, ನಕ್ಕು ನಲಿದು ಬಳಲಿ ಬೆಂದು ಜನ್ಮಾಂತರದಲ್ಲಿ ಕಲಿಯುತ್ತೇವೆ! ಹಾಗಾಗಿ ‘ಕರ್ಮವು ಜ್ಞಾನದಲ್ಲೇ ಪರಿಸಮಾಪ್ತಿಯಾಗುವುದು’ ಎನ್ನುತ್ತಿದ್ದಾನೆ ಕೃಷ್ಣ.

ಈ ಜೀವನದಲ್ಲಿನ ಅನುಭವಗಳನ್ನು ಜೀರ್ಣಿಸಿಕೊಂಡು ವಿವೇಕವನ್ನು ಸಂಪಾದಿಸಿ, ನಿರ್ಲಿಪ್ತಿಯ ಎತ್ತರದಲ್ಲಿ ನಿಂತ ಜ್ಞಾನಿಗಳ ಸಹವಾಸ ನಮಗೆ ಈ ವಿಷಯದಲ್ಲಿ ಸಹಾಯಕ ಎನ್ನುತ್ತಿದ್ದಾನೆ ಕೃಷ್ಣ; ‘‘ತತ್ವದರ್ಶಿಗಳಾದ ಜ್ಞಾನಿಗಳ ಬಳಿ ಸಾರು. ಅವರಿಗೆ ನಮಸ್ಕರಿಸು. ಅವರನ್ನು ಸೇವೆಗೈಯು. ಪ್ರಶ್ನೆ-ಪರಿಪ್ರಶ್ನೆಗಳನ್ನು ಮಾಡು. ಅವರು ನಿನಗೆ ಜ್ಞಾನವನ್ನು ಉಪದೇಶಿಸುತ್ತಾರೆ.’’ (4.34)

ಜ್ಞಾನಿಗಳು ತಮ್ಮ ಪಾಡಿಗೆ ನಿರಾಡಂಬರವಾಗಿ ಎಲ್ಲೋ ಇರುತ್ತಾರೆ. ನಿಜವಾದ ಜ್ಞಾನಿಗಳು ತಮ್ಮ ‘ಇರುವಿಕೆ’ಯನ್ನು ‘ವಿಭೂತಿ’ಗಳನ್ನೂ ಜಗತ್ತಿಗೆ ಜಾಹೀರಾತು ಮಾಡಿ ಜನರನ್ನು ಆಕರ್ಷಿಸಲು ನೋಡುವುದಿಲ್ಲ! (ಜನರನ್ನು ಆಕರ್ಷಿಸಿ ಕೀರ್ತಿಧನಗಳನ್ನು ಪಡೆಯುವ ಹುಚ್ಚು ಅಳಿದ ಮೇಲೆಯೇ ಮನುಷ್ಯನು ‘ಜ್ಞಾನಿ’ಯಾಗುವುದಷ್ಟೆ?) ಕೀರ್ತಿಧನಾದಿಗಳು ತಾವಾಗಿ ಬಂದರೂ ಅದರ ಬಗ್ಗೆ ಇವರು ನಿರ್ವಿಕಾರವಾಗಿಯೇ ಉಳಿಯುತ್ತಾರೆ. ಬಾಹ್ಯಾಡಂಬರವನ್ನಷ್ಟೇ ನೋಡಿ, ಮನಸೋಲುವವರು ‘ಮಾರ್ಕೆಟೆಡ್ ಗುರುಗಳ’ ವಶಕ್ಕೆ ಬಿದ್ದು ದಾರಿ ತಪ್ಪುವುದು ಖಂಡಿತ. ಹಾಗಾಗಿ ಸಾಧಕರು ಇಂತಹವರನ್ನು ತಾವಾಗಿ ಹುಡುಕಬೇಕು. ಇವರ ಜೀವನ-ವಿಚಾರಗಳ ಸತ್ಯಾಸತ್ಯತೆಗಳನ್ನು ಪ್ರಮಾಣಿಸಿ ನೋಡಿ, ಸ್ವೀಕರಿಸಬೇಕು. ಮಹಾಗುರುಗಳನ್ನು ಗುರುತಿಸಲು ನಮ್ಮಲ್ಲೂ ಸಂಸ್ಕಾರ ಹಾಗೂ ಸೂಕ್ಷ್ಮಮತಿ ಬೇಕಾಗುತ್ತದೆ. ದೂರದ ಅಡವಿಯಲ್ಲಿ ಅರಳುವ ಕಮಲವನ್ನು ಹುಡುಕಿಕೊಂಡು ಹೋಗಿ ಮಕರಂದವನ್ನು ಹೀರುವ ದುಂಬಿಯಂತೆ, ಸಡಗರವಿಲ್ಲದೆ ಜೀವಿಸುವ ಜ್ಞಾನಿಗಳನ್ನು ನಾವಾಗಿಯೇ ಹುಡುಕಿಕೊಂಡು ಬಳಿಸಾರಬೇಕು. ‘ವಿನಮ್ರಭಾವದಿಂದ ನಮಸ್ಕರಿಸಬೇಕು, ಒಂದಷ್ಟು ಸೇವೆಯನ್ನೂ ಮಾಡಬೇಕು’ ಎನ್ನುತ್ತಾನೆ ಕೃಷ್ಣ! ನಮ್ಮ ಜಿಜ್ಞಾಸೆಯು ‘ಬಾಯಿ ಮಾತಿಗೇ’ ನಿಲ್ಲದೆ, ಜ್ಞಾನವಿಚಾರಕ್ಕೆ ‘ತೆರೆದುಕೊಳ್ಳಲು’ ಇಂತಹ ವಿನಮ್ರಭಾವ ಸಹಾಯಕ. ಜ್ಞಾನಿಗಳೊಡನೆ ಪ್ರಶ್ನೆ-ಪರಿಪ್ರಶ್ನೆಗಳ ಮೂಲಕ ಮುಕ್ತಮನದಿಂದ ರ್ಚಚಿಸಿದಾಗ ಧರ್ಮಸಂದೇಹಗಳ ಮೋಡಗಳು ಚದುರಿ ಸ್ಪಷ್ಟತೆ ಮೂಡುತ್ತದೆ. ಹೀಗೆ ಜ್ಞಾನಿಗಳ ಸತ್ಸಂಗದಿಂದ ನಮ್ಮ ಮತಿಮನಗಳ ಕಲ್ಮಶ ಕುಗ್ಗುತ್ತದೆ, ಆಂತರಿಕಪ್ರಜ್ಞೆ ಗಟ್ಟಿಯಾಗುತ್ತದೆ ಎನ್ನುವುದು ತಾತ್ಪರ್ಯ. ಇದನ್ನೇ ಸತ್ಸಂಗ ಎನ್ನುವುದು. ಸಜ್ಜನರ ಸಂಗದಲ್ಲಿರುವುದರಿಂದ ಅದೆಷ್ಟೊ ಸತ್ಸಂಸ್ಕಾರವು, ಸದ್ವಿಚಾರಗಳೂ ಅಪ್ರಯತ್ನವಾಗಿಯೇ ನಮ್ಮಲ್ಲಿ ಚಿಗುರಿಕೊಳ್ಳುತ್ತವೆ. ಹಾಗಾಗಿ ಸದಾ ಸತ್ಸಂಗತಿಯಲ್ಲಿರುವುದು ಮನೋನ್ನತಿಗೆ ಹೆದ್ದಾರಿ ಎನ್ನುವುದು ಗೀತಾಚಾರ್ಯನ ಮತ.

ಡಾ. ಆರತೀ ವಿ. ಬಿ.

ಕೃಪೆ: ವಿಜಯವಾಣಿ

Leave a Reply