ವರ್ಣವ್ಯವಸ್ಥೆಯ ಮರುವಿಂಗಡಣೆಯಾಗಲಿ

ವರ್ಣವ್ಯವಸ್ಥೆಯ ಮರುವಿಂಗಡಣೆಯಾಗಲಿ

ಕುಲವೃತ್ತಿಯ ಸುರಕ್ಷೆ ಹಾಗೂ ಎಲ್ಲ ಸ್ಥಳೀಯ ವೃತ್ತಿಗಳಿಗೂ ಸೂಕ್ತ ಮಾರುಕಟ್ಟೆಗಳು ಇರುತ್ತಿದ್ದ ಭಾರತದ ಅರ್ಥವ್ಯವಸ್ಥೆಯನ್ನು ಹಂತಹಂತವಾಗಿ ಪರಾಧೀನಕ್ಕಿಳಿಸಲು ಬ್ರಿಟಿಷರು ಮಾಡಿದ ವ್ಯವಸ್ಥಿತ ಕುಯತ್ನಗಳ ಬಗ್ಗೆ ನೋಡುತ್ತಿದ್ದೆವು. ಚಾತುರ್ವರ್ಣ್ಯ  ಚರ್ಚೆಯಲ್ಲಿ ಆ ಬ್ರಿಟಿಷರನ್ನೇಕೆ ತರಬೇಕು? ಏಕೆಂದರೆ ತನ್ನದೇ ಆಂತರಿಕ ಬದಲಾವಣೆಗಳ ಮೂಲಕ ವಿಕಾಸವಾಗುತ್ತ ಬೆಳೆದ ಭಾರತದ ಸಮೃದ್ಧ ಅರ್ಥವ್ಯವಸ್ಥೆಯಲ್ಲಿ ಹುಳಿ ಹಿಂಡಿ, ದಿಕ್ಕುತಪ್ಪಿಸಿದವರು ಅವರೇ! ಅವರ ಕುತಂತ್ರಗಳನ್ನು ವಿಶ್ಲೇಷಿಸುವ ಸಾಮರ್ಥ್ಯವನ್ನೂ ಕುಂಠಿತವಾಗಿಸಲು, ಶಿಕ್ಷಣಮಾಧ್ಯಮಗಳನ್ನು ವಶಪಡಿಸಿಕೊಂಡದ್ದೂ ಮತಾಂತರದ ಜಾಲ ಬೀಸಿ, ನಮ್ಮ ವಿಚಾರಸ್ವಾತಂತ್ರ್ಯನ್ನೂ ಕುಂದಿಸಿದ್ದು ಸುಳ್ಳಲ್ಲ. ಚಾತುರ್ವರ್ಣ್ಯದ ಸ್ವರೂಪೋದ್ದೇಶಗಳನ್ನೂ, ಅದರ ಅಪಾರ್ಥದ ಹುಟ್ಟು-ಬೆಳವಣಿಗೆಗಳನ್ನೂ ನಾವು ಸತ್ಯದ ಬೆಳಕಲ್ಲಿ ವಿಶ್ಲೇಷಿಸಬೇಕಾದರೆ, ಆಂತರಿಕ ಹಾಗೂ ಪರಕೀಯ ಹಸ್ತಕ್ಷೇಪಗಳೆರಡರ ಪ್ರಭಾವಗಳನ್ನೂ ಗಮನಿಸುವುದು ಅನಿವಾರ್ಯ.

ಬ್ರಿಟಿಷರು ಬಿತ್ತಿ ಬೆಳೆಸಿದ ಶಿಕ್ಷಣವ್ಯವಸ್ಥೆಯನ್ನೇ ಹಿಡಿದು ಸಾಗುತ್ತಿರುವ ನಮ್ಮ ಇಂದಿನ ಸಮಾಜದಲ್ಲಿ, ಶತಮಾನಗಳ ಕಾಲದ ಅದೆಷ್ಟೋ ಸಮೃದ್ಧ ಕುಲವೃತ್ತಿಗಳು ಅನಾಥವಾಗುತ್ತ ಬಂದಿವೆ, ಹಲವು ಅಳಿದೇಹೋಗಿವೆ. ಇನ್ನು ಸ್ವಕುಲವೃತ್ತಿಯ ಅಥವಾ ಅಭಿರುಚಿಯ ವೃತ್ತಿಗೆ ವಿಪುಲಾವಕಾಶಗಳೂ ಅನುಕೂಲವೂ ಲಾಭವೂ ಆಸಕ್ತಿಯೂ ಅನುಭವವೂ ಇದ್ದರೂ, ಡಿಗ್ರಿ ಕೊಡಿಸುವ ಉದ್ಯೋಗದಲ್ಲಿ ಅದೇನೋ ‘ಹೆಚ್ಚುಗಾರಿಕೆ’ಯಿದೆ ಎಂಬ ಮನೋದೌರ್ಬಲ್ಯ ಬೆಳೆದಿದೆ. ಸಂಬಳ-ಅವಕಾಶ-ಅನುಕೂಲ, ಕೌಶಲಾಭಿವೃದ್ಧಿಗೆ ಆಸ್ಪದ ಕಡಿಮೆಯಿದ್ದರೂ ಪರವಾಗಿಲ್ಲ, ಅಂಗಲಾಚಿ ಬೇಡಿಕೊಂಡಾದರೂ ಸರಿ, ಅಡ್ಡ ದಾರಿ ಹಿಡಿದಾದರೂ ಸರಿ, ‘ಡಿಗ್ರಿ ಮತ್ತು ಅದರ ಬಲದಿಂದ ಉದ್ಯೋಗ – ಇದಿಷ್ಟಿದ್ದರೇನೇ ಬದುಕಿಗೆ ಅರ್ಥ’ ಎನ್ನುವ ಮೂಢನಂಬಿಕೆ ಬಲಿತುನಿಂತಿದೆ! ಒಂದುವೇಳೆ ಕಿರಿಯರು ಸ್ವಾಭಿರುಚಿ ಕೌಶಲಗಳನ್ನೇ ನೆಚ್ಚಿ ನಡೆಯಹೊರಟರೂ ಪೋಷಕರಿಗದೇನೋ ಕಳವಳ! ‘ಮೊದಲು ಒಂದು ಡಿಗ್ರಿ ಪಡೆದುಕೊ! ಆಮೇಲೆ, ಬೇರೆಲ್ಲ’ ಎಂದು ‘ಬುದ್ಧಿ’ ಹೇಳುತ್ತಾರೆ! ‘ಡಿಗ್ರಿ ಇದ್ದಲ್ಲಿ ಸೋಲೇ ಇಲ್ಲ, ಡಿಗ್ರಿ ಇಲ್ಲದಿದ್ದಲ್ಲಿ ಗೆಲುವು ಅನಿಶ್ಚಿತ’ ಎಂಬ ಭ್ರಾಂತಿ ಬಲವಾಗಿದೆ. ಡಿಗ್ರಿ ಇದ್ದರೇನೇ ಜನರು ಹೆಣ್ಣು ಕೊಡುವುದು ಎಂಬಂತಾಗಿದೆ! ಅಂತೂ, ಎಲ್ಲರನ್ನೂ ಸ್ವವೃತ್ತಿಗಳಿಂದ ಬಿಡಿಸಿ ‘ಉದ್ಧರಿಸ’ಹೊರಟ ಆಂಗ್ಲಮಾದರಿಯ ಇಂದಿನ ಶಿಕ್ಷಣವ್ಯವಸ್ಥೆಯಲ್ಲಿ ‘ಯೋಗ್ಯತಾಪತ್ರ’ವೇ ಮುಖ್ಯವೇ ಹೊರತು ‘ಯೋಗ್ಯತೆ’ ಅಲ್ಲವೇ ಅಲ್ಲ! ಹೀಗಾಗಿ ಯೋಗ್ಯತಾಪತ್ರವನ್ನು ಹಿಂಬಾಗಿಲಿಂದಲೂ ಮೇಜಿನಡಿಯಿಂದಲೂ ಕೊಂಡುಕೊಳ್ಳುವವರೂ ಹೆಚ್ಚುತ್ತಿದ್ದಾರೆ! ಯೋಗ್ಯತೆಯನ್ನು ಬೆಳೆಸಿಕೊಳ್ಳದೇ ಯೋಗ್ಯತಾಪತ್ರವನ್ನು ಗಳಿಸಿರುವ ವೈದ್ಯ- ಇಂಜಿನಿಯರ್-ಶಿಕ್ಷಕರುಗಳು ಹೆಚ್ಚುತ್ತಿರುವ ಸಮಾಜದಲ್ಲಿ, ಗುಣಮಟ್ಟಗಳು ಕುಸಿಯುತ್ತಿರುವುದರಲ್ಲಿ, ಭ್ರಷ್ಟಾಚಾರ ಹೆಚ್ಚುತ್ತಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ! ಡಿಗ್ರಿ-ಉದ್ಯೋಗ ಪಡೆದವರಾದರೂ ಸುಖಿಗಳೆ? ‘ಉದ್ಯೋಗದಲ್ಲಿ ತೃಪ್ತಿ’ ಇಲ್ಲವೆಂದು ಗೊಣಗಾಡುವವರೇ ಹೆಚ್ಚು!

ಎಲ್ಲರೂ ‘ಡಿಗ್ರಿ’ವಂತರಾಗತೊಡಗಿ, ‘ಡಿಗ್ರಿ’ಗೆ ಬೆಲೆ ಕುಸಿದು, ‘ಡಿಗ್ರಿ’ವಂತ ನಿರುದ್ಯೋಗಿಗಳು ಹೆಚ್ಚಿದರು. ಸ್ನಾತಕೋತ್ತರ ಪದವಿಯತ್ತ ಎಲ್ಲರೂ ನುಗ್ಗಲು, ಅದಕ್ಕೂ ಬೆಲೆ ಕುಸಿಯುತ್ತ ಬಂದು, ‘ಸ್ನಾತಕೋತ್ತರ ಪದವೀಧರ ನಿರುದ್ಯೋಗಿ’ಗಳ ಸಂಖ್ಯೆಯೂ ಹೆಚ್ಚಿದೆ! ಬರಬರುತ್ತ ಪಿಎಚ್​ಡಿ ಪದವಿಗಾಗಿ ಓಟ ಹೆಚ್ಚಿದೆ. ಅದನ್ನು ಸಾಧಿಸುವವರೊಂದಿಗೆ ‘ಕೊಂಡುಕೊಳ್ಳುವವರೂ’ ಹೆಚ್ಚುತ್ತಿದ್ದು ಅದಕ್ಕೂ ಬೆಲೆ ಕುಸಿಯಲಾರಂಭಿಸಿರುವುದು ಸುಳ್ಳಲ್ಲ! ಈ ಮಧ್ಯೆ ನೆಪಮಾತ್ರಕ್ಕಾಗಿ ಡಿಗ್ರಿ ಪಡೆದು, ಬಳಿಕ ಕುಲವೃತ್ತಿ-ಪ್ರವೃತ್ತಿಗಳನ್ನೇ ಹಿಡಿದು ನಡೆಯುವ ಕೆಲವು ಜಾಣರು ಗೆದ್ದುಕೊಳ್ಳುತ್ತಿದ್ದಾರೆ! ನಿಜ ಹೇಳಬೇಕೆಂದರೆ, ಡಿಗ್ರಿ ಇರಲಿ ಬಿಡಲಿ, ಸ್ವವೃತ್ತಿ-ಪ್ರವೃತ್ತಿಗಳನ್ನು ಹಿಡಿದವರು, ತಮ್ಮ ಸೋಲು-ಗೆಲುವುಗಳನ್ನು ತಾವೇ ಎದುರಿಸುವವರೂ, ಆಳಾಗಿಯೂ ಅರಸನಾಗಿಯೂ ಎಲ್ಲ ಸ್ತರದ ಕೆಲಸಕಾರ್ಯಗಳನ್ನು ಸಮಾನ ಗೌರವದಿಂದ ಮಾಡಬಲ್ಲವರೂ ಆದ ಇಂಥವರೇ ಸಮಾಜದಲ್ಲಿ ಧನ-ಕೀರ್ತಿಗಳನ್ನೂ ಸುಖ-ಸಂತೃಪ್ತಿಗಳನ್ನೂ ಪಡೆಯುತ್ತಿರುವುದು! ಗೊತ್ತಿದ್ದೋ ಗೊತ್ತಿಲ್ಲದೆಯೋ ಇವರು ವರ್ಣವ್ಯವಸ್ಥೆಯ ಮೂಲೋದ್ದೇಶವನ್ನು ತಮ್ಮೊಳಗೆ ಸಾಕ್ಷಾತ್ಕರಿಸಿಕೊಂಡು ಆಚರಿಸುತ್ತಿರುವವರೇ ಆಗಿದ್ದಾರೆ!

ಭರವಸೆಯ ಬೆಳವಣಿಗೆಯೇನೆಂದರೆ, ಕೌಶಲಹೀನ ಡಿಗ್ರಿವಂತರ ಅವಸ್ಥೆಯ ಸೂಕ್ಷಾ್ಮವಲೋಕನದಿಂದ ಎಚ್ಚೆತ್ತ ಹಲವು ಎಳೆಯರು ಇಂದು ಪೂರ್ವಜರ ಕುಲವೃತ್ತಿಗಳ ಬಗ್ಗೆ ಜಿಜ್ಞಾಸೆ-ಸಂಶೋಧನೆ-ಅಭ್ಯಾಸಗಳನ್ನು ಕೈಗೊಳ್ಳಲಾರಂಭಿಸುತ್ತಿರುವುದೂ, ಸ್ವಂತ ಅಭಿರುಚಿಯ ವೃತ್ತಿಯನ್ನೇ ಹಿಡಿಯುತ್ತಿರುವುದೂ ಕಾಣಬರಲಾರಂಭಿಸಿದೆ! ಹೀಗೆ ದಶಕಗಳ ಕಾಲ ದಾರಿ ತಪ್ಪಿಹೋಗಿ, ಕೈಸುಟ್ಟುಕೊಂಡು ಎಚ್ಚೆತ್ತವರು, ಇದೀಗ ಮರಳಿ ಸ್ವವೃತ್ತಿ-ಪ್ರವೃತ್ತಿಗಳ ನೆಲೆಗೇ ಹಿಂದಿರುಗುತ್ತಿರುವುದು ನಿಧಾನವಾಗಿಯಾದರೂ ನಿಶ್ಚಿತವಾಗಿ ಆಗುತ್ತಿದೆ. ಸ್ವಾಮಿ ವಿವೇಕಾನಂದರ ದಾರ್ಶನಿಕ ನುಡಿಗಳು ನೆನಪಾಗುತ್ತವೆ; ‘ವರ್ಣವಿಭಾಗಗಳನ್ನು ಅಳಿಸಲಾಗದು, ಅದು ಮರುವಿಂಗಡನೆ ಆಗುತ್ತಿರಬೇಕು ಅಷ್ಟೆ¬… ಸಮಾಜವೇ ಆಗಾಗ ತನ್ನನ್ನು ತಾನೇ ವಿಂಗಡಿಸಿಕೊಳ್ಳುತ್ತದೆ¬… ವರ್ಣವ್ಯವಸ್ಥೆಯು ನಾಗರಿಕತೆಯ ಬೆಳವಣಿಗೆಗೆ ಮೆಟ್ಟಿಲು; ಎಲ್ಲರನ್ನೂ ಅವರವರ ಜ್ಞಾನ ಹಾಗೂ ಸಂಸ್ಕೃತಿಗಳಿಗೆ ಅನುಗುಣವಾಗಿ ಅದು ಬೆಳೆಸುತ್ತದೆ¬… ವರ್ಣವ್ಯವಸ್ಥೆಯು ನಾಶವಾಗುತ್ತದೆಂದು ಇಚ್ಛಿಸುವುದು ಅರ್ಥಹೀನ. ಹಳೆಯದನ್ನು ವಿಕಾಸಗೊಳಿಸುವುದೇ ನವೀನ ಉಪಾಯ.’

ಡಾ. ಆರತೀ ವಿ. ಬಿ.

ಕೃಪೆ: ವಿಜಯವಾಣಿ

 

Leave a Reply