ಎಲ್ಲವೂ ಯಜ್ಞದಲ್ಲೇ ಪ್ರತಿಷ್ಠಿತ

ಎಲ್ಲವೂ ಯಜ್ಞದಲ್ಲೇ ಪ್ರತಿಷ್ಠಿತ

ಅನ್ನಾದ್ಭವಂತಿ ಭೂತಾನಿ ಪರ್ಜನ್ಯಾದನ್ನಸಂಭವಃ |
ಯಜ್ಞಾದ್ಭವತಿ ಪರ್ಜನ್ಯೋ ಯಜ್ಞಃ ಕರ್ಮಸಮುದ್ಭವಃ ||
ಕರ್ಮ ಬ್ರಹ್ಮೋದ್ಭವಂ ವಿದ್ಧಿ ಬ್ರಹ್ಮಾಕ್ಷರಸಮುದ್ಭವಂ |
ತಸ್ಮಾತ್ ಸರ್ವಗತಂ ಬ್ರಹ್ಮ ನಿತ್ಯಂ ಯಜ್ಞೇ ಪ್ರತಿಷ್ಠಿತಮ್ ||
(ಭ.ಗೀ.: 3.14-15)
‘ಜೀವಿಗಳು ಅನ್ನ(ಆಹಾರ)ದಿಂದಾಗಿ ಹುಟ್ಟುತ್ತವೆ/ಬಾಳುತ್ತವೆ. ಅನ್ನವು ಉತ್ಪತ್ತಿಯಾಗುವುದು ಮಳೆಯಿಂದ. ಮಳೆಯು ಯಜ್ಞದಿಂದಾಗಿ (ಪ್ರಚೋದಿತವಾಗಿ) ಉಂಟಾಗುತ್ತದೆ, ಯಜ್ಞವು ಸಿದ್ಧಿಸುವುದು (ಶಾಸ್ತ್ರವಿಹಿತ) ಕರ್ಮ ಮಾಡುವುದರ ಮೂಲಕ. ಆ (ವಿಹಿತ) ಕರ್ಮಗಳ (ನಿರ್ದೇಶ) ಇರುವುದು ವೇದದಲ್ಲಿ. ವೇದ ಹುಟ್ಟಿರುವುದು ಅಕ್ಷರದಲ್ಲಿ (ಓಂಕಾರದಲ್ಲಿ/ಕ್ಷರವಿಲ್ಲದ ಬ್ರಹ್ಮದಲ್ಲಿ). ಹೀಗೆ ಸರ್ವಗತ ಬ್ರಹ್ಮವು ನಿತ್ಯವಾದ ಯಜ್ಞದಲ್ಲಿ ಪ್ರತಿಷ್ಠಿತವಾಗಿದೆ.’
ಜೀವಿಗಳ ಹುಟ್ಟು ಹಾಗೂ ಬಾಳುವಿಕೆಗೆ ಅತ್ಯಗತ್ಯವಾದದ್ದು ಮಳೆ. ಮಳೆಯಿಂದಲೇ ವನಸ್ಪತಿಗಳು ನಳನಳಿಸುವುದು, ಎಲ್ಲರಿಗೂ ಆಹಾರ ಸಿಕ್ಕುವುದು. ಮಳೆಯಾಗಬೇಕಾದರೆ ಕೃಷಿ, ಪರಿಸರ-ಸಂರಕ್ಷಣೆ, ಅದಕ್ಕೆ ಪೂರಕವಾದ ಪಶುಪಾಲನೆ ಮುಂತಾದವೂ ನಡೆಯಬೇಕು. ಚೆನ್ನಾಗಿ ಮಳೆ-ಬೆಳೆಗಳಾಗಲಿ ಎಂಬ ಆಶಯದಿಂದ, ದೇವತೆಗಳ ಶಕ್ತಿ ವರ್ಧಿಸುವಂತಹ (ಅವರ ಅನುಗ್ರಹದಿಂದ ನಿಸರ್ಗವನ್ನು ಸತ್ವಯುತಗೊಳಿಸುವಂಥ) ವಿಧಿಯುಕ್ತ ಹವನಕರ್ಮಗಳನ್ನು ಮಾಡಲಾಗುತ್ತದೆ. ಈ ಕರ್ಮಗಳನ್ನು ಹೇಗೆ, ಎಲ್ಲಿ, ಯಾವ ಮಂತ್ರತಂತ್ರಗಳಿಂದ ಯಾವ ದ್ರವ್ಯಗಳನ್ನು ಬಳಸಿ ಮಾಡಬೇಕು ಎಂಬುದನ್ನೆಲ್ಲ ನಿರ್ದೇಶಿಸುವುದು ‘ಬ್ರಹ್ಮ’ ಅರ್ಥಾತ್ ವೇದ. ವೇದವು ತತ್ವಚರ್ಚೆಯನ್ನಷ್ಟೇ ಮಾಡುವುದಿಲ್ಲ. ಲೌಕಿಕ ಪ್ರಯೋಜನಗಳನ್ನು ಕೊಡಿಸುವ, ಮಳೆಬೆಳೆಗಳನ್ನು ವರ್ಧಿಸುವ ಮಂತ್ರತಂತ್ರಗಳ ಕರ್ಮಕಾಂಡವನ್ನೂ ನೀಡಿದೆ. ಸ್ತುತಿಗಳನ್ನೂ ಉಪಾಸನಾ-ಪದ್ಧತಿಗಳನ್ನೂ ಕಲಿಸಿದೆ. ಅವರವರು ಮಾಡಬೇಕಾದ ಕರ್ತವ್ಯಗಳನ್ನೂ ನಿರ್ದೇಶಿಸಿದೆ.
‘ಕರ್ಮ’ ಎಂಬ ಶಬ್ದದಲ್ಲಿ ದೇವತಾನುಗ್ರಹಕ್ಕಾಗಿ ಮಾಡುವ ವೈಯಕ್ತಿಕ, ಸಾಮೂಹಿಕ ಉಪಾಸನಾ ಕರ್ಮಗಳೂ, ಮಳೆಬೆಳೆಗಳನ್ನು ವರ್ಧಿಸಲೆಂದು ಆಚರಿಸುವ ಪರ್ಜನ್ಯಹೋಮಾದಿ ಲೋಕಹಿತ ಕರ್ಮಗಳೂ, ವೃತ್ತಿಕರ್ಮಗಳೂ, ನಿತ್ಯ-ನೈಮಿತ್ತಿಕ ಕರ್ಮಗಳೂ, ದೇವ-ಪಿತೃ-ಮನುಷ್ಯ-ಋಷಿ ಹಾಗೂ ಎಲ್ಲ ಜೀವಿಗಳಿಗೆ ಸಲ್ಲಿಸುವ ‘ಪಂಚ-ಮಹಾಯಜ್ಞ’ಗಳೂ ಸೇರಿವೆ. ನದಿ-ಕೆರೆ-ಬಾವಿಗಳ ನೀರಿನಲ್ಲಿ ಪರಿಸರಸ್ನೇಹಿ-ದ್ರವ್ಯಗಳನ್ನು ಬಳಸುವುದು, ಗಿಡಮರಗಳನ್ನು ಬೆಳೆಸುವುದು, ಮನೆಮನೆಯಲ್ಲೂ ತುಳಸೀ, ಊರೂರಿನಲ್ಲೂ ಪಂಚವಟಿಯನ್ನು ಬೆಳೆಸುವುದು, ತನ್ಮೂಲಕ ಪರಿಸರದ ಸ್ವಾಸ್ಥ್ಯನ್ನು ಕಾಪಾಡುವುದು, ಋತು ಮಾಸ ನಕ್ಷತ್ರಗಳಿಗೆ ಅನುಗುಣವಾಗಿ ವ್ರತಗಳನ್ನೂ ಉತ್ಸವಗಳನ್ನೂ ಆಚರಿಸಿ ನಿಸರ್ಗದೊಂದಿಗೂ ದೇವತಾಶಕ್ತಿಗಳೊಂದಿಗೂ ಸಹಮಾನವರೊಂದಿಗೂ ಅವಿನಾಭಾವವನ್ನು ಬೆಳೆಸಿಕೊಂಡು ಬದುಕುವುದು, ನಾಡುನುಡಿಗಳಿಗೆ ನಿಷ್ಠವಾಗಿದ್ದು ಸೇವೆ ಸಲ್ಲಿಸುವುದು, ರಾಜಶಾಸನ-ನೀತಿ-ನಿಯಮಗಳನ್ನೂ ಸಾಮಾಜಿಕ ಶಿಷ್ಟಾಚಾರಗಳನ್ನೂ ವಿಧೇಯತೆಯಿಂದ ಪಾಲಿಸುವುದು – ಇತ್ಯಾದಿಗಳೂ ವಿಹಿತಕರ್ಮಗಳೆನ್ನುವ ‘ಯಜ್ಞ’ಗಳೇ. ಇವುಗಳ ಪೈಕಿ, ದೇವತಾನುಗ್ರಹದಿಂದ ಮಳೆಬೆಳೆಗಳನ್ನು ವರ್ಧಿಸುವ ಹೋಮಹವನಗಳು ರೂಢಿಯಲ್ಲಿ ‘ಯಜ್ಞಕರ್ಮ’ಗಳೆಂಬ ಹೆಸರಿನಿಂದ ಹೆಚ್ಚು ಪ್ರಖ್ಯಾತ. ನಿರ್ದಿಷ್ಟ ದ್ರವ್ಯ-ಧಾನ್ಯ-ರಸ-ಮೂಲಿಕೆಗಳನ್ನೂ ತುಪ್ಪವನ್ನೂ ಬಳಸಿ ಹವನಾದಿ ಕರ್ಮಗಳನ್ನು ಮಾಡಿದಾಗ, ಅಲ್ಲಿನ ಪಾವಕವೂ ಸ್ವಾಸ್ಥ್ಯರ್ಧಕವೂ ಆದ ಧೂಮಾಗ್ನಿಯು ವಾತಾವರಣದ ಮೇಲೂ, ಸುತ್ತಲ ವನಸ್ಪತಿಗಳ ಮೇಲೂ ಯಜಮಾನನ ಹಾಗೂ ಅಲ್ಲಿರುವ ಎಲ್ಲ ಜೀವಿಗಳ ಮೇಲೂ ಸತ್ಪ್ರಭಾವ ಬೀರುತ್ತದೆಂದು ಶ್ರದ್ಧೆ. ಅದಕ್ಕಾಗಿ ಕ್ರಿಮಿನಾಶಕ-ರೋಗನಾಶಕಗಳಾದಂತಹ ಗೋಮಯಾದಿ ದ್ರವ್ಯಗಳನ್ನೂ, ಆರೋಗ್ಯವರ್ಧಕವಾದ ವಸ್ತುಗಳನ್ನೇ ಬಳಸಲಾಗುತ್ತದೆ. ಹೀಗೆ ನಿಸರ್ಗಕ್ಕೂ, ಯಜಮಾನನಿಗೂ, ಸಹಮಾನವರಿಗೂ ಪಶು-ಪಕ್ಷಿಗಳಿಗೂ ಮಂಗಳವನ್ನುಂಟುಮಾಡುವ ವೇದೋಕ್ತ ಕರ್ಮವು ದೇವತಾನುಗ್ರಹವನ್ನೂ ಮಳೆಬೆಳೆಗಳನ್ನೂ ತರುತ್ತದಲ್ಲದೆ, ಭಾಗವಹಿಸುವವರೆಲ್ಲರಲ್ಲೂ ಸ್ನೇಹಭಾವವನ್ನೂ, ತೃಪ್ತಿ-ಸಂತೋಷಗಳನ್ನೂ ಮೂಡಿಸುತ್ತದೆ.
‘‘ನಾನು! ನನ್ನಿಷ್ಟ!’’ ಎಂದು ಸ್ವೇಚ್ಛಾಚಾರಿಯಾಗಿ ಬದುಕದೆ, ದೇಶ-ಕಾಲ-ಪಾತ್ರವನ್ನರಿತು ಔಚಿತ್ಯದಿಂದ ಆಯಾ ಕರ್ಮಗಳನ್ನು ಆಚರಿಸಬೇಕು ಎನ್ನುವುದು ವೇದದ ನಿರ್ದೇಶ. ಹೀಗೆ ವಿಹಿತ ಕರ್ಮಗಳನ್ನಾಚರಿಸುತ್ತ, ಫಲವನ್ನು ಸಹಮಾನವರೊಂದಿಗೆ ಹಂಚಿಕೊಳ್ಳುತ್ತ, ದೇವತಾರ್ಪಣಭಾವದಲ್ಲಿ ಬಾಳುತ್ತ, ಅಂತರಾತ್ಮದ ಆನಂದದ ನೆಲೆಗೆ ಸೇರಿಕೊಳ್ಳುವುದೇ ಕರ್ಮಕಾಂಡವೆಂಬ ‘ಯಜ್ಞ’ರೂಪದ ಆತ್ಯಂತಿಕ ಉದ್ದೇಶ. ಇಂಥ ವ್ಯಷ್ಟಿ-ಸಮಷ್ಟಿ ಹಿತಸಾಧಕವಾದ ವಿಹಿತ ಕರ್ಮಗಳು ಇರುವುದು ‘ವೇದ’ದಲ್ಲಿ ಎಂದು ಶ್ರೀಕೃಷ್ಣನು ಸೂಚಿಸುತ್ತಿದ್ದಾನೆ. ಈ ವೇದಕ್ಕೆ ಆಧಾರವಾದದ್ದು ‘ಅಕ್ಷರ’. ಅಕ್ಷರ ಎಂದರೆ ‘ಅವಿನಾಶಿ’ ಎಂದರ್ಥ. ಅವಿನಾಶಿಯಾದದ್ದು ‘ಪರತತ್ವ’ ಒಂದೇ. ಅದರ ವಾಚಕವೇ ‘ಪ್ರಣವ’ / ‘ಓಂ’ (ತಸ್ಯ ವಾಚಕಃ ಪ್ರಣವಃ). ಈ ಓಂಕಾರವು ಕ್ಷರವಿಲ್ಲದ ಅನಾದಿಯಾದ ‘ನಾದಬ್ರಹ್ಮ’ವಾದ್ದರಿಂದ ಅದಕ್ಕೂ ‘ಅಕ್ಷರ’ ಎಂದೇ ಹೆಸರು. ಮೂರ್ತಪ್ರಪಂಚದ ಎಲ್ಲವೂ ಲಯ ಹೊಂದುತ್ತದೆ. ಇದರ ಹಿಂದಿನ ಸರ್ವನಿಯಾಮಕ ಶಕ್ತಿ ಹಾಗೂ ನಿಶ್ಚಲತತ್ವವೇ ಪರಬ್ರಹ್ಮ. ‘ಅದೆಷ್ಟೇ ಗ್ರಹ-ನಕ್ಷತ್ರಗಳು ಹುಟ್ಟಿ-ಅಳಿಯುತ್ತಿದ್ದರೂ, ಬಿರುಗಾಳಿ-ವಾಸನೆಗಳು ಬೀಸಿಹೋಗುತ್ತಿದ್ದರೂ, ಎಲ್ಲಕ್ಕೂ ಆಶ್ರಯವಿತ್ತೂ ತಾನು ಮಾತ್ರ ನಿರ್ವಿಕಾರವೂ ನಿರ್ಲೆಪವೂ ಆಗಿ ಇರುವ ಅಂತರಿಕ್ಷವೆಂಬ ‘‘ಅಸ್ತಿತ್ವ’’ದಂತೆಯೇ ಪರಬ್ರಹ್ಮವು’ ಎನ್ನುವುದನ್ನು ಹಿಂದೆ ರ್ಚಚಿಸಿದ್ದೆವು. ಆ ಪರತತ್ವವು ‘ಆಹತ’ವಾಗದೆ (ಪ್ರಯತ್ನದಿಂದ ಹೊಮ್ಮಿಸಲಾಗದೆ) ತಾನೇ ತಾನಾಗಿ ನಿರಂತರವೂ ಇರುವಂತಹ ‘ಅನಾಹತ’ವೆನಿಸುವ ನಾದಬ್ರಹ್ಮಸ್ವರೂಪ, ಓಂಕಾರ.
ಎಲ್ಲೆಡೆ ವ್ಯಾಪಿಸಿರುವ ಬ್ರಹ್ಮವು ‘ಸರ್ವಗತ’. ಅದು ಮೂರ್ತ ಪ್ರಪಂಚವನ್ನು ನಿರ್ವಿುಸಿದ್ದೂ, ಪಾಲಿಸುತ್ತಿರುವುದೂ ‘ಯಜ್ಞ’ದ ಮೂಲಕ. ಹಾಗಾಗಿ ಈ ಮೂರ್ತ ಪ್ರಪಂಚದಲ್ಲಿರುವ ಎಲ್ಲ ಚರಾಚರಗಳ ಅಸ್ತಿತ್ವಕ್ಕೂ ‘ಯಜ್ಞ’ವೇ ಆಧಾರ ಎಂಬುದು ತಾತ್ಪರ್ಯ.

ಡಾ. ಆರತೀ ವಿ. ಬಿ.

ಕೃಪೆ : ವಿಜಯವಾಣಿ

Leave a Reply