ಕನ್ನಡಿ ಚೂರು!
ಮತ್ತೆ ಮತ್ತೆ ಬಂದೇ ಬಂತು ನೂತನ ವರ್ಷ
ನವ ಚೇತನ, ನವ ಉತ್ಸಾಹ ತಂತು ನವ ಹರುಷ
ಕಳೆದ ಕಹಿ ನೆನಪುಗಳು ಮರುಕಳಿಸಿ ಮೂಡುತಿವೆ
ಕನ್ನಡಿ ಚೂರುಗಳಲ್ಲಿ ನೂರು ಸಾವಿರ ತುಂಡುಗಳಾಗಿ
ಹೊತ್ತ ಕನಸುಗಳೆಲ್ಲ ಬರಿ ಹುಸಿಯಾಗಿ
ಒಂದೊಂದು ತುಣುಕುಗಳು ವ್ಯಂಗ್ಯ ನರ್ತನದಲಿ
ಮುಳುಗಿ ಅಣಕಿಸುತಿದೆಯೊಂದು, ದುಃಖಿಸುತಿದೆಯೊಂದು
ಗಹಗಹಿಸಿ ನಗುತಿದೆ ಇನ್ನೊಂದು ಚೂರು ಚೂರುಗಳಾಗಿ
ಅವರಂತೆ ಇವರಂತೆ ಹಾಗೆ ಹೀಗೆ ಎಂಬೆಲ್ಲ ಕಲ್ಪನೆಗಳ
ಕತ್ತು ಹಿಸುಕಿ, ನೀ ಸನಿಹ ಇರಬೇಕಿನಿಸಿದ ಪ್ರತಿ ಘಳಿಗೆಯಲೂ
ನೀನಿರದೇ ಕನಸುಗಳೆಲ್ಲ ಮಾಸಿ ಮಂಜಿನಂತೆ ಕರಗಿವೆ
ಸಾವಿರ ಬಿಂಬಗಳಗಿ ಮತ್ತೆ ಮತ್ತೆ ಕೊಲ್ಲುತಿದೆ
ಬಯಕೆಗಳೆಲ್ಲ ಬಿರುಗಾಳಿಗೆ ಸಿಲುಕಿ ತೂರಿತೂರಿ
ಬಾನ ಚುಂಬಿಸಿ ಧಕ್ಕನೆ ಭುವಿಗಪ್ಪಳಿಸಿ ಬಯಕೆಯೆಂಬ
ಕನ್ನಡಿ ಸಿಗದ ಚೂರುಗಳಾಗಿ ಆಕಾರ ನೀಡಲಾಗದೆ ಮತ್ತೆ
ಜೋಡಿಸಲಾಗದೆ ಮಾಸಿ ಹೋದ ಅಕ್ಷರಗಳಂತೆ ಅರ್ಥವಾಗದಾಗಿದೆ
ಎದೆ ತುಂಬಿ ಹೊತ್ತು ತಂದ ಉತ್ಸಾಹಕೆ ಕೊಳ್ಳಿ ಇಟ್ಟಂತಾಗಿ
ಜ್ವಾಲಾಮುಖಿಯಾಗಿ ಸ್ಪೋಟವಾಗುತ್ತಿದೆ, ಹುಸಿನಗು, ಹುಸಿ ಮಾತು
ಹುಸಿಯಾದ ಅಂದಚಂದ ಬೆಡಗುಬಿನ್ನಾಣ ಸೋಗುಗಳೆಲ್ಲ ಸಾಕು ಸಾಕಾಗಿದೆ
ಜೀವನವು ಇಂದು ನಾಳೆ ಮುಂದೆ ಬರುವ ದಿನಗಳ ಕಾದು ಕಾದು ಕಂಗೆಟ್ಟಿದೆ
ಬದುಕು ಬಯಸಿದಂತೆ ಇರದು, ಇರುವುದನ್ನು ಬಯಸಿ
ಬದುಕಬೇಕು ಶುಭ್ರ ಕನ್ನಡಿಯೊಂದು ಚೂರಾದ ಕನ್ನಡಿ
ಪ್ರತಿಬಿಂಬಗಳ ಕಂಡು ಹಿಯಾಳಿಸಿ ನಗುತಿದೆ ನನಗಾಗಿಯೂ
ನಿನಗಾಗಿಯೂ ಇರದೆ ತನಗಾಗಿ ಇರು ಎಂದು ನವ ಚೇತನ ತುಂಬುತಿದೆ.
Nice