ಕಿನ್ನರಲೋಕದಲ್ಲಿ ಬಂದ್!
ಕವನ
ಪುಟ್ಟಾ ಓಡೀ ಓಡೀ ಬಂದು ಹೇಳಿದ:
“ಸಂಜೆ ನಾಕಕ್ಕೆ ಬರ್ತಾಳಂತೆ ಕಿನ್ನರ
ಕನ್ನೆ ಬಾನಿಂದೀ ಭೂಲೋಕಕ್ಕೆ”!
ಸರಿ ಸರಿ ಗಾಜಿನ ಟೇಬಲ್ ಮೇಲೆ
ಹೊಳೆಯುವ ಪ್ಲಾಸ್ಟಿಕ್ ಪ್ಲೇಟು!
ಸೇವಗೆ ಪಾಯಸ! ನುಚ್ಚಿನ ಕಡುಬಿಗೆ
ಹುರುಳೀ ಹಪ್ಳದ ಹ್ಯಾಟು!
ಬೆಳ್ಳೀಬಟ್ಟಲ ಹಾಲಿನ ಖೀರು!
ದೊನ್ನೆಯ ತುಂಬ ಉಪ್ಪಿಟ್ಟು
ಅಜ್ಜಿ ಮಾಡಿದಳು ಗಡಿಬಿಡಿಯಿಂದ
ರಾಗಿಮುದ್ದೆ ಹುರಳೀಕಟ್ಟು!
ಅಮ್ಮನೋ ಚಕ ಚಕ ಸೌತೆಯ ಕೊಚ್ಚಿ
ಕೊಟ್ಟಳು ತುಪ್ಪದ ಒಗ್ಗರಣೆ!
ಪಪ್ಪನು ಪಪ್ಪಡ್ ಕರಿದನು! ಆಂಟಿ
ಮಾಡೇಬಿಟ್ಟಳು ಸೀಕರಣೆ!
ಪುಟ್ಟನು ಓಡಿದ ತೋಟಕೆ ಬೇಗ
ಕಿನ್ನರಿಯನು ಕರೆ ತರಲಿಕ್ಕೆ!
ಸಪ್ಪೆ ಮೋರೆಯಲ್ಲೊಬ್ಬನೆ ಬಂದ!
ಏನಾಯಿತು ಹಾಗಿರಲಿಕ್ಕೆ?
‘ಕಿನ್ನರ ಲೋಕದಲೀದಿನ ಬಂದ್!
ಬಸ್ಸೇ ಇಲ್ಲ ಬರಲಿಕ್ಕೆ!
ಆಕೆಯ ಹೆಸರಲಿ ನಾವೇ ಉಣ್ಣುವ!
ಎಲ್ಲರು ಏಳಿ ಊಟಕ್ಕೆ!”
You must log in to post a comment.