ಕಿವಿಯಾದಳು ಹುಡುಗಿ

ನನ್ನ ಮಡದಿಯ ಕಿವಿಯು
ಎನಗಾಗಿ ತೆರೆದಿಹುದು
ಉಸುರುವೆನು ನಾ
ಎಲ್ಲ ಉದ್ವೇಗವನ್ನು
ಹೋಗಲೀ ಬಿಡು ಎಂಬ
ಒಮ್ಮಾತಿನಲ್ಲೇ
ಕಳೆದಿಡುವಳವಳೆಲ್ಲ
ಬೇಗುದಿಯನು

ಭುಜತಟ್ಟಿ ಕರಪಿಡಿದು
ರಪ್ಪೆಯಲುಗಿನಲೇ
ಬೇಸರವ ಹೊರಗೆಳೆದು
ಗುಡಿಸಿಡುವಳು
ಹೇಗೆ ಹೇಳಲಿ, ಅವಳ
ಸ್ನೇಹದಾ ಮಾತುಗಳು
ಉರಿವ ಮಾನಸವನ್ನು
ತಣ್ಣಗಾಗಿಪುದು

ಎಲ್ಲ ಗಂಡಾಳುಗಳ
ಪತ್ನಿಯರು ಇಂತಿರಲಿ
ಕಿಚ್ಚೊತ್ತಿ ಇರುವುದು
ಸಗ್ಗದಾ ಚಾವಣಿಯು

Leave a Reply