ನನ್ನೂರ ಬಾವಿ ಕಟ್ಟೆ!

ನನ್ನೂರ ಬಾವಿ ಕಟ್ಟೆ!
ಟೊಂಕಕೆ ಬಿಂದಿಗೆ ಹಿಡಿದು ಬಾವಿಕಟ್ಟೆಗೆ ನೀ ಬರುವಾಗ
ನಾ ನಿನ ಹಿಂದಿಂದೆ ಬೆನ್ನು ಬಿದ್ದಾಗ
ಹೊರಳಿ ನೀ ಸಿಟ್ಟಿನ ಮಾರಿಲಿ ನೋಡಿದ್ದು
ಆಹಾ! ಎಂಥ ಚೆಂದ ಓ ಗೆಳತಿ

ಹೊಳೆ ದಂಡೇಲಿ ಬಟ್ಟೆ ತೊಳೆವಾಗ
ನಾ ಗಿಡದ ಮರೆಯಲ್ಲಿ ನಿಂತು ನೋಡುವಾಗ
ನಿನ ಕೆನ್ನೆ ಉಬ್ಬಿ ಕಣ್ಣು ಕಮಲದಂತೆ ಅರಳಿ
ತಾವರೆ ಆದೆಯಲ್ಲಾ ಗೆಳತಿ! ಆಹಾ ಎಂಥ ಚೆಂದ!

ಮಾವಿನ ತೋಪಲ್ಲಿ ಕಲ್ಲೊಗೆದು ಕಾಯಿ ಬೀಳಿಸುವಾಗ
ಮರವೇರಿ ನಾ ಕಾಯಿ ಕೈಗೆ ಕೊಟ್ಟಾಗ
ಬೆಪ್ಪಾಗಿ ನಿಂತ ನಿನ್ನ ಮುಖ ಕೆಂಪಾಗಿ
ಸಿಹಿ ಸೇಬು ನಿನ ಮುಖ ಎಂಥ ಅಂದ ಗೆಳತಿ!

ಮಳೆ ರೊಯ್ಯನೆ ಬೀಳುತಿರಲು
ಮೆಲ್ಲ ಮೆಲ್ಲ ಹೆಜ್ಜೆ ನೀನಿಡುತಿರಲು
ದಾರಿ ತೋರಲು ಬಂದ ನಾ ಜಾರಿ ಬಿದ್ದಾಗ
ನೀ ಕಿಲಕಿಲನೆ ನಕ್ಕಾಗ ಸ್ವರ್ಗ ಧರೆಗಿಳಿದಂತಾಯ್ತು ಗೆಳತಿ!

ನಿನಗಾಗಿ ವರವೊಂದು ಮನೆಗೆ ಬಂದಾಗ
ನಿರುತ್ಸಾಹಿ ನೀನಾದಾಗ ನಾನೇ ವರವೆಂದು ತಿಳಿದು
ನೀ ನಕ್ಕು ಸಮ್ಮತಿಸಿದಾಗ ನನ್ನ ಮನೆಯ ಸಿರಿಲಕ್ಷ್ಮೀಯಂತೆ
ಹೊಸಿಲೊಳಗೂ, ಮನದೊಳಗೂ ಬಂದೆ ಗೆಳತಿ ಎಂಥ ಚೆಂದದ ಗೆಳತಿ!

 – ಉಮಾ ಭಾತಖಂಡೆ.

Leave a Reply