ನಾಚು – ಕಾಡಿಗೆ – ಅಂಚು – ಬೆಂಕಿಪೊಟ್ಟಣ

ನಾಚು – ಕಾಡಿಗೆ – ಅಂಚು – ಬೆಂಕಿಪೊಟ್ಟಣ

“ನಾಚಿಗೆ ಆಗೋಲ್ವಾ ನಿನಗೆ?”
ಇದು
ನಾಚುವದು
ಅಂದರೆ ಏನು?
ಯಾಕೆ, ಹೇಗೆ?
ಎಲ್ಲಿ? ಯಾವಾಗ?
ಒಂದೂ ಗೊತ್ತಿಲ್ಲದಾಗಲೇ
ದಿನನಿತ್ಯ ನಾನೆದುರಿಸಿದ
ಪ್ರಶ್ನೆ…..
ಉತ್ತರ ತಪ್ಪಿದಾಗ ಗುರುಗಳು
ಕೆಲಸ ಬರದಿದ್ದಾಗ ಅಮ್ಮ, ಅಪ್ಪ
ಸಂದರ್ಭ ಸಿಕ್ಕಾಗಲೆಲ್ಲ ಉಳಿದವರು
ಕೇಳಿ ಕೇಳಿ ಕೊರಡಾಗಿಸಿದ್ದರು..
ನಾಚಿಕೆಯ ತಳಬುಡ ತಿಳಿಯದಿದ್ದರೂ
ಕಣ್ಣಂಚಿನಿಂದ ಇಳಿದ ಕಣ್ಣೀರು
ಕಾಡಿಗೆಯೊಂದಿಗೆ ಬೆರೆತು
ಇನ್ನಿಷ್ಟು ಮುಖ ಕಪ್ಪಾಗಿಸುತ್ತಿತ್ತು.
ಈಗ ಹಾಗೇನಿಲ್ಲ..

ನಾಚುವದು ಅಂದರೆ ಏನು
ಎಂಬುದರ ಜೊತೆಜೊತೆಗೆ
ಯಾವುದಕ್ಕೂ ನಾಚಬೇಕಿಲ್ಲ
ಎಂಬ ತಥ್ಯವನ್ನು ಕಣ್ಣೆದುರಿನ
ಸಮಾಜ ತಿಳಿಸಿಕೊಟ್ಟಿದೆ.

ಆ ಶಬ್ದಕ್ಕೇ ಬೆಂಕಿಪೊಟ್ಟಣದಿಂದ
ಕಡ್ಡಿಗೀರಿ ಬೂದಿಯನ್ನೂ
ಗಂಗೆಯಲ್ಲಿ ಹರಿಬಿಟ್ಟ ಮೇಲೆ
ನಾಚಿಕೆಯ ಹಂಗೇನು???

Leave a Reply