ನಾನಿರುವೆ ನಿನ್ನೊಡನೆ
ಹೊತ್ತು ತಂದಿದ್ದ ಹಲವು ಕನಸುಗಳು
ಹುದುಗಿಸಿ ಅನಂತ ಪ್ರೀತಿಯ ಅಂತರಾಳದೊಳು
ಕಣ್ಣಾಲಿಯಲಿ ಕಟ್ಟಿದ್ದ ನೂರು ಕಲ್ಪನೆಗಳು
ಆಡಂಬರಗಳಿವು ಕ್ಷಣಿಕದಾಗಿತ್ತು
ಜೀವನ ನೌಕೆಯ ತಿರುವು ಬದಲಾಗಿತ್ತು
ವಿಧಿ ಆಟ ಬೇರೆ ಆಗಿತ್ತು
ಕಾಲ ಪರೀಕ್ಷೆಗಳ ನೆಸಗಿತ್ತು
ಕದಡಿದ ಹೃದಯ ಕಂಡೆ
ಆಮಿಷದ ಬಂಡೆಯಲಿ ಬಿರುಕು ಕಂಡೆ
ಬಿಳಿ ಮೋಡ ಸರಿದು ಕಷ್ಟ ಕಾರ್ಮೋಡ ಕಂಡೆ
ಧರೆಗಿಳಿದ ಜಲಧಾರೆಯಿಂದ
ಮನವಿಂದು ಶುಭ್ರವಾಗಿರಲು
ಸಂತಸದಿ ನೀನಿಂದು ಬಂದೆ ಗೆಳೆಯ
ಹಿಡಿದು ಕೈಯಲ್ಲಿ ಹೂವಿನುಡುಗೊರೆಯ
ಅಪೇಕ್ಷೆಗಳೆಲ್ಲ ಮಗ್ಗುಲಾಗಿವೆ ಇಂದು
ಕೂದಲಿಗೆ ನೆರೆ ಬಂದಿದೆ (ಬಂದು)
ರಸ ತೆಗೆದ ಸಿಪ್ಪೆ ನಾನಾಗಿಹೆನೆಂದು
ನಯನದಲಿ ಮಂಜು ಕವಿದಿರೆ
ನೀ ತಂದ ಹೂವೆನಗೆ ಹಾವಂತೆ ಕಂಡಿರೆ
ವಜ್ರದ ಮೂಗುತಿಯಿಂದೆನ್ನ ಉಸಿರುಕಟ್ಟಿರೆ
ಜರತಾರಿ ಸೀರೆ ಸರಪಳಿಯಾಗಿರೆ
ಮುತ್ತಿನುಂಗುರು ಮುಳ್ಳಾಗಿರೆ
ಕಾಲ್ಗೆಜ್ಜೆ ಬಂಧನದ ಬೇಡಿಯಾಗಿರೆ
ನಾನೊಲ್ಲೆ ನಾನೊಲ್ಲೆ ನಿನ್ನುಡುಗೊರೆಯ
ಒಲುಮೆಯಲಿ ಸದಾ ನಿನ್ನೊಡನಿರುವೆ ಗೆಳೆಯ
You must log in to post a comment.