ಮಳೆ ಬಂತು. ಆದರೆ!

ಮಳೆ ಬಂತು. ಆದರೆ!
ಮಳೆ ಬಂತು ಸಂತಸ ತಂತು
ಕೆರೆಕೊಳ್ಳ, ನದಿಬಳ್ಳ ತುಂಬಿ ಬಂತು
ನೇಗಿಲ ಯೋಗಿ ನಸುನಗುತ ಆಗಸವ ನೋಡಿದ
ಹದವಾದ ನೆಲಕೆ ಬೀಜ ಬಿತ್ತನೆ ಮಾಡಿದ

ಮಳೆ ಬಂತು ಮಳೆ ಬಂತು ಮತ್ತೆ ಮತ್ತೆ
ತಂಪೆರಗಿ ಜೌಗುಗಟ್ಟಿ ನೆಗಡಿಯಾಯ್ತು ಧರೆಗೆ
ಹಸನಾದ ಗುಡ್ಡ ಬೆಟ್ಟಗಳೆಲ್ಲಕುಸಿಯಲು ಮೊದಲಾಯ್ತು
ಅಲ್ಲಲ್ಲಿ ನೀರು ತುಂಬಿ ಊರಿಗೂರೇ ಮುಳುಗಿ ತೇಲ್ತು

ಬೆಳೆದಿದ್ದೆಲ್ಲ ನೀರುಪಾಲಾಯ್ತು
ತಿನ್ನುವನ್ನಕೆ ಬರಗಾಲ ಬಂತು
ಜೀವಜಂತುಗಳ ಪ್ರಾಣಕ್ಕೆ ಕುತ್ತು ತಂತು
ಬಾನೇ ಹರಿದು ಬಿದ್ದಂಗಾತು

ಕುಸಿದಿಹ ಮಣ್ಣಲಿ ಅಗೆದೇ ಅಗೆದರು
ರಾಸಿರಾಸಿ ಹೆಣಗಳ ತೆಗೆದೇ ತೆಗೆದರು
ನೀರಲಿ ತೇಲೇ ತೇಲಿತು ಜೀವರಾಶಿ
ಹಸಿವಲಿ ಕಂಗಾಲಾದವು ಪಶು ಪಕ್ಷಿ

ಮಾನವೀಯತೆಯ ಪರೀಕ್ಷೆ ಮನುಜನಿಗೆ
ಕೊಟ್ಟರು ದಾನ ಧರ್ಮ ಸಂತ್ರಸ್ಥರಿಗೆ
ಆಹಾರ ಬಂತು ಟ್ರಕ್ಗಳಲ್ಲಿ
ಹಣವದು ಬಂತು ಬ್ಯಾಂಕ್ಗಳಲ್ಲಿ

ದೈವವು ಪರೀಕ್ಷೆಯ ನೀಡುವ ಎಮಗೆ
ಕೈಗಳನೆರಡು ನೀಡಿಹ ನಮಗೆ
ಒಂದೆಮಗಾದರೆ,ಮತ್ತೋಂದು ಪರರಿಗೆ
ಧರ್ಮದಿ ಮಾಡು ಸೇವೆ ಎಲ್ಲರಿಗೆ.
 – ಉಮಾ ಭಾತಖಂಡೆ.

Leave a Reply