ಶುರುವಾಯ್ತು ಮಾಸಾರಂಭಕೆ ಮುಂಗಾರು
ಪೂರ್ತಿಬಿಟ್ಟಿರಲಿಲ್ಲ ಇನ್ನೂ ಹಿಂಗಾರು
ಜಡಿಯಾಗಿ ಹಿಡಿದದ್ದು ಜಡ್ಡಾಗುವ ತನಕ ಬಿಡಲಿಲ್ಲ
ಛಿ.ಛೀ.ಛೀ …ಸೀನಿಸೀನಿ ನೆಗಡಿ ನಿಲ್ಲಲಿಲ್ಲ
ದಿನವಿಡೀ ಕಿವಿಯಲ್ಲಿ ಗುಂಯ್ ಗುಟ್ಟಿತು ಜಿಟಿಜಿಟಿ ಸದ್ದು
ಇರಗೊಡದು ನಿಲಗೊಡದು ಹೊರಹೆಜ್ಜೆ ಇಡಗೊಡದು
ಸಪ್ತದಿವೂ ಕಾರ್ಮೋಡ ಕವಿದಿರಲು
ಬೇಸರವೂ ನೇಸರನ ಕಾಣದಿರಲು
ಆಫೀಸು ಕೆಲಸವೆಂಬಂತೆ ಸರಿಸಮಯಕೆ ಶುರುವಾಗಿ
ಮನೆಕಾಣುವ ಸಮಯದಿ ಧಬಧಬನೆ ಸುರಿವುದು ಯಾಕಾಗಿ?
ಬಟ್ಟೆಬರೆ ಒಣಗದೇ ಹಸಿಹಸಿ ತೊಡಬೇಕು
ಭಾಸ್ಕರನೇ ಬಾ ಎಂದು ಕ್ಷಣಕ್ಷಣಕೂ ಪ್ರಾರ್ಥಿಸಬೇಕು
ಹೇಗೆ ವರ್ಣಿಸಲಿ ಮಳೆರಾಯನ ಕಸರತ್ತು
ರಸ್ತೆಗಳಗುಂಟ ತೆಗ್ಗುದಿಣ್ಣೆಗಳ ಬೇಶಿಸ್ತು
ಜಾರಿಬಿದ್ದವರೆಷ್ಟೋ ಮುಳುಗಿದವರೆಷ್ಟೋಲೆಕ್ಕವಿಲ್ಲ
ಆದರೆ ಮಳೆಯಣ್ಣನಿಗೆ ಮಾತ್ರ ಸುಸ್ತಾಗಲಿಲ್ಲ
– ಉಮಾಭಾತಖಂಡೆ.
You must log in to post a comment.