ನಾನಿದ್ದ ದೇಹದಾ
ಹುಟ್ಟು ಹಬ್ಬವು ಇಂದು
ನಡೆದಿಹುದು ಅವನಿಯಲಿ
ಬಹು ಹಿಂದಿನಿಂದು
ನವಮಿಯಲಿ ನೆನೆಯುವರು
ಶ್ರೀ ರಾಮನೆಂದು
ಅಷ್ಟಮಿಗೆ ನೆನೆಯುವರು
ಶ್ರೀ ಕೃಷ್ಣನೆಂದು
ಧರಿಸಿದ್ದ ಪಾತ್ರಗಳ
ಉತ್ಸವದ ಮೂರುತಿಗೆ
ವಿಧ ವಿಧದಲಂಕಾರ
ಮಾಡಿ ಸಂಭ್ರಮಿಸಿಹರು
ಎಲ್ಲ ಪಾತ್ರಗಳಲ್ಲು
ಸಮನಾಗೆ ಇದ್ದೆ
ದ್ವಂದ್ವದಾ ಕಂಗಳಲಿ
ಕಂಡು ಕನಲಿದರು
ಅಂದು ಇಂದೆಂದೆಂದು
ನಾ ಎಲ್ಲರೊಳಗೊಂದೇ
ಸರ್ವರಾಂತರ್ಯದಲು
ಸಂಚರಿಸುತಿರುವೆ
ರಾಮನನು ನೆನೆದರೂ
ರಾವಣನ ನೆರಳು
ಕೃಷ್ಣನೆಂದುಸುರಿದರೆ
ಕಂಸನಾ ಕರಿನೆರಳು
ಇಂತುನಡೆದಿಹುದೆನ್ನ
ಮಾಯೆ ಮರೆದಾಟವು
ಅರಿತವನ ಮನದಿಹುದು
ಸರ್ವ ಸಮ ಭಾವವು
You must log in to post a comment.