ಆತ್ಮಸ್ಥೈರ್ಯ: ಮುದ್ದು ಪುಟ್ಟ ಹಕ್ಕಿ

ಆತ್ಮಸ್ಥೈರ್ಯ
ಮುದ್ದು ಪುಟ್ಟ ಹಕ್ಕಿ

ಬಾನಲಿ ಹಾರುವ ಪುಟ್ಟಹಕ್ಕಿ
ತಿನ್ನುತ ಕಾಳನು ಹೆಕ್ಕಿ ಹೆಕ್ಕಿ
ಆನಂದದ ನಂದನ ವನದಲ್ಲಿ
ಪ್ರೇಮದ ಮೆತ್ತನೆ ಸುಪ್ಪತ್ತಿಗೆಯಲ್ಲಿ
ತಾಯ್ತಂದೆಯರ ಜೊತೆಗೂಡಿ
ಸಂತಸದಿ ಕೂಡಾಡಿ ಕುಣಿದಾಡಿ

ಉಂಡುಟ್ಟು ನಲಿದು
ಬಳಗದೊಡಗೂಡಿ ಬೆಳೆದು
ಪ್ರೀತಿಯ ಕಡಲಲ್ಲಿ ಈಜಿ
ಎಲ್ಲರದೂ ಎಲ್ಲಿಲ್ಲದ ಕಾಳಜಿ
ನಕ್ಕಿ ನಲಿಸುವ ಗುಣದ
ಪ್ರಾಯದ ಹಕ್ಕಿ
ಮೆಚ್ಚುಗೆಯು ಹರಿದಿರೆ ಉಕ್ಕಿ

ರೆಕ್ಕೆ ಬಲಿತು ಗೂಡ ಅಗಲುವ ಸಮಯ
ಬಂತೊಂದು ಗಂಡ್ಹಕ್ಕಿ ಹೊಸ ಗೆಳೆಯ
ದೂರದಿ ನೋಡಲು ಮರುಳಾದ ಬಿಳಿವರ್ಣ
ಸುರಸುಂದರಾಂಗ ಸುಗುಣ ಜಾಣ
ಹತ್ತು ಸುಳ್ಳಿನ ನಂಟು
ಬಿತ್ತು ಪುಟ್ಹಕ್ಕಿಗೆ ಗಂಟು

ಬಯಲಾಯ್ತು ಅಲ್ಪಕಾಲಕೆ ಜಾಣನ ಕಾಜಾಣತನ
ತಿಳಿಯಿತೆಲ್ಲ ಗಂಡ್ಹಕ್ಕಿಯ ಸಣ್ಣತನ
ನೆನೆನೆನೆದು ಪುಟ್ಹಕ್ಕಿ ಸೊರಗಿತ್ತು
ತಾಯ ಒಡಲಿನ ಪ್ರೀತಿಯ ಗತ್ತು
ನೋವಿದರದು ಮನದಾಳದ ಯಾರಿಗೆ ಗೊತ್ತು?

ಮನದೊಳಗೆ ತಂದು ಬಲವು
ಸಂತೈಸಿ, ಪ್ರೀತಿಸಿ ತಂದು ಒಲವು
ಪುಟ್ಹಕ್ಕಿಗೆ ಮರಿಹಕ್ಕಿಗಳೆರಡು ಹುಟ್ಟಿ
ಹೃದಯದಾ ಒಡಲಲ್ಲಿ ಹೊಸ ಕನಸು ಕಟ್ಟಿ
ನಂಬುಗೆಯಲಿ ಮತ್ತೆ ಮತ್ತೆ ಚಲಿಸಿ
ನಿತ್ಯವೂ ದೈವವನು ಪ್ರಾರ್ಥಿಸಿ.

ಎಂಥಾ ವಿಪರ್ಯಾಸ!
ಮರುಕಳಿಸೆ ನಂಬುಗೆ ದ್ರೋಹ
ಪುಟ್ಹಕ್ಕಿ ತೊರೆದಿರೆ ಗಂಡ್ಹಕ್ಕಿಯ ಮೋಹ
ಹುಡುಕಿ ಹಲವು ಹಾದಿ ಆಗಿರೆ ಪುಟ್ಹಕ್ಕಿ ಘಾಸಿ
ಗಳಿಗೆ ಗಳಿಗೆಗೂ ದೇಹಕೂ ಆಯಾಸ ಸೂಸಿ

ಸವಿಸುವುದೆಂತು ಈ ಜೀವನ
ಮನಕಿದೋ ಗೊಂದಲಗಳ ತಾನನ
ತಿಳಿದು ಮರಿಗಳಿಗಾಗಿರುವುದೀ ಜೀವನ
ಆಹಾ! ದೈವ ರೂಪದ ಬಳಗ
ತುಂಬಿ ಸಲಹೆಗಳ ಮನದೊಳಗ
ಪುಟ್ಹಕ್ಕಿ ಹಾರಿ ಹಾರಿ
ಮೂಡಣದಲಿ ಹೊಸ ಗೂಡ ಸೇರಿ

ಕನಸಿನ ಹೊಸ ಗೂಡಿನ ನನಸಿನಲಿ
ಸಂತಸದ ಮೆಟ್ಟಿಲ ಕಟ್ಟುತಲಿ
ಕಳೆ ಬಂತು ಹೊಸ ಜೀವನಕೆ
ಸಾಗಿತು ಹರುಷದ ನೌಕೆ
ಆದರ್ಶವಾಯ್ತು ಪುಟ್ಹಕ್ಕಿ ಆತ್ಮಸ್ಥೈರ್ಯಕೆ.

Leave a Reply