ಇಚ್ಛೆ

ಇಚ್ಛೆ

ಸೃಷ್ಟಿ ಕರ್ತ ಪರಮಾತ್ಮನಿಚ್ಛೆ
ಭುವಿಗಿಳಿದ ಮನುಜನಿಚ್ಛೆ
ನಾನಂದುಕೊಂಡಂತೆ ಇರುವ ದರ್ಬಾರು ನನ್ನಿಚ್ಛೆ
ಸೃಷ್ಟಿಗೆ ಅಧಿಪತಿಯು ತಾನು ಇದು ದೇವರಿಚ್ಛೆ
ಸದಾ ನಗುಬೀರಿ ಸಿಹಿಯೊಂದೇ ಸಾಕೆನ್ನುವುದು ನನ್ನಿಚ್ಛೆ
ಬೇವು ಬೇಕು ವಜ್ರದಂತ ದೇಹಕ್ಕೆ ಇದು ದೇವರಿಚ್ಛೆ
ದೇಹ ಹೂವಸ್ಪರ್ಷದಿಂದ ಹಿತವನುಭವಿಸುವುದು ನನ್ನಿಚ್ಛೆ
ದೇಹದಂಡನೆಯಾಗಬೇಕು ಮನುಜನಾಗಲು ಇದು ದೇವರಿಚ್ಛೆ
ತಂಪಾದ ನವಿರಾದ ಗಾಳಿಯೊಂದೆ ನನ್ನಿಚ್ಛೆ
ಚಂಡಮಾರುತ, ಭೂಕಂಪ, ಬಿರುಗಾಳಿಯ ಪಾಠ ಅನುಭವಕೆ ದೇವರಿಚ್ಛೆ
ನಾನತ್ತಾಗ ಜಗವಳಬೇಕು ಇದು ನನ್ನಿಚ್ಛೆ
ನೀನತ್ತಾಗ ಜಗ ನಗುವುದೇ ದೇವರಿಚ್ಛೆ
ಕಷ್ಟ, ನಷ್ಟ, ದುಃಖಗಳಿಗೆ ಹಲವರನು ಹೊಣೆಮಾಡುವುದು ನನ್ನಿಚ್ಛೆ
ತಂತಮ್ಮ ಕರ್ಮಗಳಿಗೆ ಹೊಣೆಗಾರರು ನೀವೇ ಇದು ದೇವರಿಚ್ಛೆ
ಶಿರದ ಮೇಲ ಗಂಟ ಭಾರ ಹಂಚುವುದು ನನ್ನಿಚ್ಛೆ
ನಿನ್ನ ಗಂಟಭಾರ ಇತರರಿಗೆ ಸಲ್ಲದು ಇದು ದೇವರಿಚ್ಛೆ
ಪರರ ಕೊಳೆಯ ತೆಗೆವುದೊಂದೇ ಸಾಕು ಎನಗೆ ನನ್ನಿಚ್ಛೆ
ಸಲ್ಲದಿನ್ನು ಪರರಚಿಂತೆ ಮೊದಲು ತೆಗೆಯೇ ನಿನ್ನ ಕೊಳೆಯ ಇದು ದೇವರಿಚ್ಛೆ
ಕಡೆಗೂ ಮೆಚ್ಚಿದೆ ಓ ದೇವರೇ
ಈಜು ತಿಳಿಯದೆ ದಡ ಸೇರುವ
ಭ್ರಮೆಯಲಿ ಮುಳುಗಡೆ ಖಂಡಿತ
ಅನಂತಸಾಗರದಲಿ ಈಜ ಕಲಿಸಿ
ಅಬ್ಬರದಲೆಗಳೊಟ್ಟಿಗೆ ಕದನ ನಡೆಸಿ
ಹಾದಿ ತೋರುವ ಪರಮಾತ್ಮನೇ
ನಿನ್ನಿಚ್ಛೆಯೇ ನನ್ನಿಚ್ಛೆ
-ಉಮಾ ಭಾತಖಂಡೆ

Leave a Reply